ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ ಪ್ಲೇಆಫ್ ಪಂದ್ಯದಲ್ಲಿ ಗುಜರಾತ್ ಗೈಂಟ್ಸ್ ವಿರುದ್ಧ ಭರ್ಜರಿ ಜಯಗಳಿಸಿದ ಬೆಂಗಳೂರು ಬುಲ್ಸ್ ಇಂದು ರಾತ್ರಿ 8.30 ಕ್ಕೆ ನಡೆಯುವ ಎರಡನೇ ಸೆಮಿಫೈನಲ್ ನಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ. ಕೊನೆಯ ಎರಡು ಪಂದ್ಯಗಳಲ್ಲಿ ಅದ್ವಿತಿಯ ಪ್ರದರ್ಶನ ನೀಡಿರುವ ಬೆಂಗಳೂರು ಇಂದು ಗೆದ್ದಲ್ಲಿ ಫೈನಲ್‌ಗೆ ಪ್ರವೇಶ ಪಡೆಯಲಿದೆ.
ಇಂದು ರಾತ್ರಿ 7.30ಕ್ಕೆ ಆರಂಭವಾಗುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಯು.ಪಿ ಯೋಧ ತಂಡವು ಪಟ್ನಾ ಪೈರೇಟ್ಸ್ ವಿರುದ್ದ ಸೆಣಸಲಿದೆ. ಇಲ್ಲಿ ಗೆದ್ದವರು ಫೈನಲ್ ಪ್ರವೇಶಿಸಲಿದ್ದಾರೆ.
ಲೀಗ್ ಹಂತದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರಿಂದ ಪಟ್ನಾ ಪೈರೇಟ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಿವೆ.
ಬೆಂಗಳೂರು ಬುಲ್ಸ್ ತಂಡ ಇದುವರೆಗಿನ ಎಂಟು ಆವೃತ್ತಿಗಳಲ್ಲಿ ಐದು ಬಾರಿ ಸೆಮಿಫೈನಲ್ ಪ್ರವೇಶಿಸಿ. ಆರನೇ ಆವೃತ್ತಿಯಲ್ಲಿ ಮಾತ್ರ ಫೈನಲ್ ಪ್ರವೇಶಿಸಿ ಗೆದ್ದು ಚಾಂಪಿಯನ್ ಆಗಿತ್ತು. ಕಳೆದ 7 ನೇ ಆವೃತ್ತಿಯಲ್ಲಿಯೂ ಸಹ ಬೆಂಗಳುರು ಬುಲ್ಸ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಯು.ಪಿ ಯೋಧ ಮಣಿಸಿ ಸೆಮಿಫೈನಲ್ ತಲುಪಿತ್ತು.ಆದರೆ ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಸೋಲನೊಪ್ಪಿತ್ತು. ಈ ಬಾರಿ ಸೇಡು ತೀರಿಸಿಕೊಳ್ಳಲು ಬೆಂಗಳೂರಿಗೆ ಉತ್ತಮ ಅವಕಾಶವಿದೆ.
ಬೆಂಗಳೂರು ಬುಲ್ಸ್ ತಂಡ ಪವನ್ ಕುಮಾರ್ ಶೆಹ್ರಾವತ್ ನೇತೃತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಪವನ್ 286 ರೈಡಿಂಗ್ ಅಂಕಗಳೊಂದಿಗೆ ಒಟ್ಟು 302 ಅಂಕ ಗಳಿಸಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅವರಿಗೆ ಭರತ್ ಮತ್ತು ಚಂದ್ರನ್ ರಂಜಿತ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಇನ್ನು ಡೆಫೆಂಡಿಂಗ್ ವಿಭಾಗದಲ್ಲಿಯೂ ಅಮನ್, ಸೌರಭ್ ನಂದಲ್ ಮತ್ತು ಮಹೀಂದ್ರ ಕುಮಾರ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ದೆಹಲಿ ತಂಡದ ಪ್ರಮುಖ ರೈಡರ್ ನವೀನ್ ಕುಮಾರ್ ಗಾಯದಿಂದ ಬಳಲುತ್ತಿರುವುದು ಆ ತಂಡಕ್ಕೆ ತಲೆನೋವಾಗಿದೆ. ಅಲ್ಲದೆ ಲೀಗ್ ಹಂತದಲ್ಲಿ ಬೆಂಗಳೂರು-ಡೆಲ್ಲಿ ಮುಖಾಮುಖಿಯಲ್ಲಿ ಬೆಂಗಳೂರು ಮೊದಲ ಪಂದ್ಯವನ್ನು 39 ಪಾಯಿಂಟ್‌ಗಳ ಬೃಹತ್ ಅಂತರದಲ್ಲಿ ಗೆದ್ದಿತ್ತು. ಎರಡನೇ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಹಾಗಾಗಿ ಇಂದು ಬೆಂಗಳೂರು ಬುಲ್ಸ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಈ ಆವೃತ್ತಿಯ 23 ಪಂದ್ಯಗಳಲ್ಲಿ ಪವನ್ 17 ಬಾರಿ 10ಕ್ಕಿಂತ ಹೆಚ್ಚು ರೈಡಿಂಗ್ ಅಂಕಗಳಿಸಿ ಮಿಂಚಿದ್ದಾರೆ. ಅವರಿಂದ ಮತ್ತೊಂದು ಸೂಪರ್ ಟೆನ್ ಬರಲಿದೆಯೆ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ.
ಪ್ರೊ ಕಬಡ್ಡಿ ಇತಿಹಾಸ
2014ರಲ್ಲಿ ಪ್ರೊ ಕಬಡ್ಡಿ ಲೀಗ್ ಆರಂಭವಾಗಿದೆ. ಮೊದಲ ಆವೃತ್ತಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್ ಆಗಿದ್ದರು. ಎರಡನೇ ಬಾರಿ ಯು ಮುಂಬಾ ಕಪ್ ಎತ್ತಿ ಹಿಡಿದಿತ್ತು. 3, 4, 5 ನೇ ಆವೃತ್ತಿಗಳಲ್ಲಿ ಪಟ್ನಾ ಪೈರೇಟ್ಸ್ ಸತತವಾಗಿ ಚಾಂಪಿಯನ್ ಆಗಿತ್ತು. 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಪಟ್ಟಕ್ಕೇರಿತ್ತು. ಕಳೆದ 7ನೇ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಜಯಗಳಿಸಿ ಚಾಂಪಿಯನ್ ಆಗಿತ್ತು.
2019ರ 7ನೇ ಆವೃತ್ತಿಯಲ್ಲಿ ಇದೇ ರೀತಿಯ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಯು.ಪಿ ಯೋಧ ವಿರುದ್ಧ ಟೈ ಬ್ರೇಕರ್‌ನಲ್ಲಿ ರೋಚಕ 3 ಪಾಯಿಂಟ್‌ಗಳ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮಿಯಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಎಡವಿತ್ತು. ಇಂದು ಏನಾಗಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ; ಪ್ರೊ ಕಬಡ್ಡಿ: ಗುಜರಾತ್ ಗೈಂಟ್ಸ್ ಮಣಿಸಿ ಸೆಮಿಫೈನಲ್ ತಲುಪಿದ ಬೆಂಗಳೂರು ಬುಲ್ಸ್


