ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಗೆ ಮನ್ನಣೆ ನೀಡಿದ್ದ ರಾಜ್ಯಗಳು ಇತ್ತೀಚೆಗೆ, ಸಿಬಿಐ ಬಗೆಗೆ ತಮ್ಮ ನಿಲುವನ್ನು ಬದಲಿಸಿಕೊಂಡಿವೆ. ಹೀಗಾಗಿ, ಸಿಬಿಐಗೆ ನೀಡಿದ್ದ ಮನ್ನಣೆಯನ್ನು ಕೆಲವು ರಾಜ್ಯಗಳು ಹಿಂಪಡೆದುಕೊಂಡಿವೆ. ಇದೀಗ, ಆ ರಾಜ್ಯಗಳ ಪಟ್ಟಿಗೆ ಮೇಘಾಲಯವೂ ಸೇರಿಕೊಂಡಿದೆ.
ಸಿಬಿಐಗೆ ಕಾರ್ಯಾಚರಣೆಗೆ ನೀಡಿದ್ದ ಒಪ್ಪಿಗೆಯನ್ನು ರಾಜ್ಯಗಳು ಹಿಂಪಡೆದುಕೊಂಡರೆ, ಅಂತಹ ರಾಜ್ಯಗಳಲ್ಲಿ ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಲು ಸಾಧ್ಯವಿಲ್ಲ. ಸಿಬಿಐ ತನಿಖೆ ನಡೆಸಲು ಅನುಮತಿಯೂ ಇರುವುದಿಲ್ಲ.
ಸಿಬಿಐ ತನ್ನ ತನಿಖೆಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅದು ಕೇಂದ್ರ ಸರ್ಕಾರದ ಕೈಯಲ್ಲಿದ್ದು, ಬಿಜೆಪಿಯ ಕೈಗೊಂಬೆಯಾಗಿದೆ ಎಂದು ಆರೋಪಿಸಿರುವ ವಿವಿಧ ರಾಜ್ಯಗಳ ಸರ್ಕಾರಗಳು ಸಿಬಿಐಗೆ ನೀಡಿದ್ದ ಮನ್ನಣೆಯನ್ನು ವಾಪಸ್ ಪಡೆದುಕೊಂಡಿವೆ.
2015ರಲ್ಲಿ ಮಿಜೋರಾಂ ರಾಜ್ಯವು ಮೊದಲ ಬಾರಿಗೆ ಸಿಬಿಐಗೆ ನೀಡಿದ್ದ ಮನ್ನಣೆಯನ್ನು ವಾಪಸ್ ಪಡೆದುಕೊಂಡಿತು. ಆಗ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ನೇತೃತ್ವದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ನಂತರ, 2018ರಲ್ಲಿ ರಾಜ್ಯದಲ್ಲಿ ಬಿಜೆಪಿ ಮಿತ್ರಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷವು ಅಧಿಕಾರಕ್ಕೆ ಬಂದಿತು. ಆದರೂ, ಅದು ಸಿಬಿಐಗೆ ಮನ್ನಣೆಯನ್ನು ಮತ್ತೆ ನೀಡಲಿಲ್ಲ.
ಇದನ್ನೂ ಓದಿರಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ: ಆರೋಪಿಯ ಗಲ್ಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ
ಬಳಿಕ ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್ಗಢ ಮತ್ತು ಕೇರಳ ರಾಜ್ಯಗಳು ಸಿಬಿಐಗೆ ನೀಡಿದ್ದ ಮನ್ನಣೆಯನ್ನು ವಾಪಸ್ ಪಡೆದುಕೊಂಡವು. ಇದೀಗ, ಮೇಘಾಲಯವೂ ತನ್ನ ಒಪ್ಪಿಗೆಯನ್ನು ಹಿಂಪಡೆದುಕೊಂಡಿದೆ.
ವಿಶೇಷವೆಂದರೆ, ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವೇ ಆಗಿರುವ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮೇಘಾಲಯದಲ್ಲಿ ಅಧಿಕಾರದಲ್ಲಿದೆ. ಆದರೂ, ರಾಜ್ಯವು ಈ ನಿರ್ಧಾರ ಕೈಗೊಂಡಿದೆ.
ಸಿಬಿಐಗೆ ನೀಡಿದ್ದ ಮನ್ನಣೆಯನ್ನು ಹಿಂತೆಗೆದುಕೊಂಡ ರಾಜ್ಯಗಳ ಪೈಕಿ, ಮಿಜೋರಾಂ ಹೊರತುಪಡಿಸಿ ಉಳಿದ ಎಲ್ಲಾ ರಾಜ್ಯಗಳಲ್ಲಿ ಎನ್‌ಡಿಎ ಕೂಟದ ವಿರೋಧ ಪಕ್ಷಗಳು ಆಳ್ವಿಯಲ್ಲಿವೆ.
“ಈ ನಿರ್ಧಾರವನ್ನು ಬಹಳ ಹಿಂದೆಯೇ ಮಾಡಲಾಗಿತ್ತು. ನನಗೆ ದಿನಾಂಕ ನೆನಪಿಲ್ಲ. ಆದ್ದರಿಂದ, ಈ ವಿಚಾರದಲ್ಲಿ ಆಶ್ಚರ್ಯ ಪಡುವಂತಹದ್ದು ಏನು ಇಲ್ಲ. ಬಹಳಷ್ಟು ರಾಜ್ಯಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ. ಅದೇ ರೀತಿಯಲ್ಲಿ ನಾವು ನಿರ್ಧರಿಸಿದ್ದೇವೆ. ತನಿಖೆಗಾಗಿ ರಾಜ್ಯಕ್ಕೆ ಬರುವವರು, ರಾಜ್ಯದ ಅನುಮತಿ ಪಡೆಯಬೇಕು. ಇದು ಸಾಮಾನ್ಯ ವಿಷಯ” ಎಂದು ಸಿಎಂ ಕಾನ್ರಾಡ್ ಸಂಗ್ಮಾ ಹೇಳಿದ್ದಾರೆ.
ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಸಹೋದರ ಜೇಮ್ಸ್ ಪಿ.ಕೆ.ಸಂಗ್ಮಾ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಮೇಘಾಲಯ ಸರ್ಕಾರ ಸಿಬಿಐಗೆ ನೀಡಿದ್ದ ಮನ್ನಣೆಯನ್ನು ವಾಪಸ್ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ದೇಶದ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳ ಮನೆಗಳಿಗೆ ವಿದ್ಯುತ್ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದ, ಸೌಭಾಗ್ಯ ಯೋಜನೆಯನ್ನು ಮೇಘಾಲಯದಲ್ಲಿ ಅನುಷ್ಠಾನಗೊಳಿಸುವಾಗ ನಡೆದ ಭಾರೀ ಭ್ರಷ್ಟಾಚಾರದಲ್ಲಿ ಜೇಮ್ಸ್ ಭಾಗಿಯಾಗಿದ್ದಾರೆ; ಅಕ್ರಮ ಗಣಿಗಾರಿಕೆ ಮತ್ತು ಕಲ್ಲಿದ್ದಲು ಸಾಗಣೆಗೆ ಸಿಂಡಿಕೇಟ್ಗಳಿಗೆ ಅವಕಾಶ ನೀಡುವ ಮೂಲಕ ಲೂಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಆರೋಪದ ಹಿನ್ನೆಲೆಯಲ್ಲಿ ಜೇಮ್ಸ್ ಸಂಗ್ಮಾ ಅವರನ್ನು ಗೃಹ ಖಾತೆಯಿಂದ ಕೈಬಿಡಲಾಗಿತ್ತು.
ನವೆಂಬರ್ 2018 ರಲ್ಲಿ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸಿಬಿಐಗೆ ನೀಡಿದ್ದ ಮನ್ನಣೆಯನ್ನು ಹಿಂತೆಗೆದುಕೊಂಡಿತು. ನಂತರ ಅದೇ ವರ್ಷ, ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವೂ ಕೂಡ ತನ್ನ ಒಪ್ಪಿಗೆಯನ್ನು ಹಿಂಪಡೆದುಕೊಂಡಿತು.
“ಬಿಜೆಪಿ ತನ್ನ ಸ್ವಂತ ರಾಜಕೀಯ ಹಿತಾಸಕ್ತಿ ಮತ್ತು ಸೇಡು ತೀರಿಸಿಕೊಳ್ಳಲು ಸಿಬಿಐ ಹಾಗೂ ಇತರ ಏಜೆನ್ಸಿಗಳನ್ನು ಬಳಸಿಕೊಳ್ಳುತ್ತಿದೆ” ಎಂದು ಚಂದ್ರಬಾಬು ನಾಯ್ಡು ಮತ್ತು ಬ್ಯಾನರ್ಜಿ ಹೇಳಿದ್ದರು.
ಆದರೆ, 2019ರಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಆಂಧ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಸಿಬಿಐಗೆ ಮನ್ನಣೆಯನ್ನು ಮತ್ತೆ ನೀಡಿದರು.
ಛತ್ತೀಸ್ಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕಾಂಗ್ರೆಸ್ ಸರ್ಕಾರವು ಜನವರಿ 2019ರಲ್ಲಿ ಸಿಬಿಐಗಿದ್ದ ಸಮ್ಮತಿಯನ್ನು ಹಿಂತೆಗೆದುಕೊಂಡಿತು. 2020ರಲ್ಲಿ ಪಂಜಾಬ್, ಮಹಾರಾಷ್ಟ್ರ, ರಾಜಸ್ಥಾನ, ಕೇರಳ ಮತ್ತು ಜಾರ್ಖಂಡ್ ರಾಜ್ಯಗಳು ತಮ್ಮ ಸಮ್ಮತಿಯನ್ನು ಪಡೆದುಕೊಂಡವು.
ಇದನ್ನೂ ಓದಿರಿ: ದೆಹಲಿಯಲ್ಲಿ ಮದ್ಯ ಮಾರಾಟ ದ್ವಿಗುಣ: ರಿಯಾಯಿತಿ ಹಿಂಪಡೆದ ದೆಹಲಿ ಸರ್ಕಾರ!


