(ಇದು ಹೊಸಬರಹದಲ್ಲಿದ್ದು, ಮಹಾಪ್ರಾಣಗಳನ್ನು ಬಿಟ್ಟು ಬರೆಯಲಾಗಿದೆ)
ಇದು ಉಕ್ರೇನಲ್ಲಿ ವೈದ್ಯಕೀಯ ಶಿಕ್ಶಣಕ್ಕೆಂದು ಹೋಗಿದ್ದ, ಈಗ ರಶ್ಯಾ ನಡೆಸಿರುವ ಉಕ್ರೇನ ದಾಳಿಯ ನಡೆವೆ ಸಿಲುಕಿದ ಸುಮಾರು ಹದಿನೆಂಟು ಸಾವಿರ ಬಾರತೀಯ ವಿದ್ಯಾರ್ತಿಗಳ ಕತೆ; ರಶ್ಯಾ ದಾಳಿಯ ಹಿನ್ನೆಲೆಯಲ್ಲಿ ಈ ವಿದ್ಯಾರ್ತಿಗಳನ್ನ ಉಕ್ರೇನಿಂದ ಸುರಕ್ಶಿತವಾಗಿ ಕರೆತರುವಲ್ಲಿ ಒಕ್ಕೂಟ ಸರ್ಕಾರ ಎಶ್ಟು ಬದ್ದತೆಯಿಂದ ಕೆಲಸ ಮಾಡಿತು ಎನ್ನುವುದರ ಕತೆ; ಬಾರತೀಯ ವಿದ್ಯಾರ್ತಿಗಳು ಮೆಡಿಕಲ್ ಓದಲಿಕ್ಕೆ ಉಕ್ರೇನಿಗೆ (ರಶ್ಯಾ, ಚೀನಾ, ಪಿಲಿಪೀನ್ಸ್ ಇತ್ಯಾದಿ) ಹೋಗುವಂತೆ ಮಾಡುತ್ತಿರುವ ನಮ್ಮ ಶಿಕ್ಶಣ ವ್ಯವಸ್ತೆಯ ಕತೆ.
ನಾವೆಲ್ಲಾ ಗಮನಿಸುತ್ತಿರುವಂತೆ ವಿಶ್ವದ ಎಲ್ಲಾ ದೇಶಗಳು ರಶ್ಯಾ ಉಕ್ರೇನ್ ಯುದ್ದದಿಂದ ತಮ್ಮ ಮೇಲಾಗುವ ಆರ್ತಿಕ ಪರಿಣಾಮದ ಬಗ್ಗೆ ಚರ್ಚಿಸುತ್ತಾ ಇವೆ. ಆದ್ರೆ ನಾವು ನೋಡಿ, ಅಲ್ಲಿ ಓದುತ್ತಿರೋ ಬಾರತೀಯ ವಿದ್ಯಾರ್ತಿಗಳ ಸುತ್ತ ಹೆಚ್ಚೆಚ್ಚು ಮಾತಾಡ್ತಾ ಇದೀವಿ. ಆ ವಿದ್ಯಾರ್ತಿಗಳಿಗೆ ಒದಗಿರುವ ಕಶ್ಟಗಳ ಬಗ್ಗೆ ಸಹಾನುಭೂತಿಯಿಂದಲೇ, ಅದಕ್ಕೂ ವಿಶಾಲವಾದ ಶಿಕ್ಶಣ ವ್ಯವಸ್ತೆಯ ಬಗ್ಗೆ ಮಾತನಾದುತ್ತಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ! ಏಕೆಂದರೆ, ನಮ್ಮ ದೇಶದ ಶಿಕ್ಶಣ ವ್ಯವಸ್ತೆಯ ಮುಕ್ಯ ಕೊರತೆಗಳ ಬಗ್ಗೆ ಗಂಬೀರವಾಗಿ ಅವಲೋಕಿಸಿ ಅರ್ತ ಮಾಡಿಕೊಳ್ಳೋಕೆ ಇಲ್ಲಿ ಸಾದ್ಯ. ವಿದ್ಯಾರ್ತಿಗಳು ಸುರಕ್ಶಿತವಾಗಿ ಹಿಂದಿರುಗಬೇಕು ಮತ್ತು ಉಕ್ರೇನಿನಲ್ಲಿ ಶಾಂತಿ ನೆಲಸಬೇಕೆಂಬ ಪ್ರಾತಮಿಕ ಸಂಗಂತಿಗಳೊಂದಿಗೇ ನಾವು ಇಂದು ಶಿಕ್ಶಣ ವ್ಯವಸ್ತೆ ಬಗೆಗೂ ಮಾತನಾಡಬೇಕಿದೆ.
ಈಗ ಉಕ್ರೇನ್‌ನಲ್ಲಿ ಕಲಿಯುತ್ತಿದ್ದ ಬಾರತೀಯ ವಿದ್ಯಾರ್ತಿಗಳ ಸುರಕ್ಶಿತ ಸ್ತಳಾಂತರದ ಸುತ್ತ ನಡೆದ ಕೆಲವು ವಿದ್ಯಮಾನಗಳನ್ನ ನೋಡ್ತಾ ಅಂತಿಮವಾಗಿ ನಮ್ಮ ಶಿಕ್ಶಣ ವ್ಯವಸ್ತೆಯ ಸ್ತಿತಿ ಅರ್ತ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.
- ಉಕ್ರೇನ್‌ನಲ್ಲಿ ಸುಮಾರು ಹದಿನೆಂಟು ಸಾವಿರ ಬಾರತೀಯ ವಿದ್ಯಾರ್ತಿಗಳು ಮೆಡಿಕಲ್ ಓದ್ತಾ ಇದ್ರು.
- ರಶ್ಯಾ ಉಕ್ರೇನ್ ಮೇಲೆ ದಾಳಿ ಶುರು ಮಾಡಿದಾಗ ಸಹಜವಾಗಿ ಈ ವಿದ್ಯಾರ್ತಿಗಳು ಸುರಕ್ಶಿತವಾಗಿ ಅಲ್ಲಿಂದ ಹೊರಟು ನಮ್ಮ ದೇಶವನ್ನು ಸೇರುವುದು ಮುಕ್ಯ ಪ್ರಶ್ನೆಯಾಯ್ತು.
- ವಿದ್ಯಾರ್ತಿಗಳು ಯಾವುದೇ ಕಾರಣಕ್ಕಾದರೂ ಉಕ್ರೇನಿಗೆ ಓದಲಿಕ್ಕೆ ಹೋಗಿದ್ರೂ, ಈ ಪರಿಸ್ತಿತಿಯಲ್ಲಿ ಅವರನ್ನ ಸುರಕ್ಶಿತವಾಗಿ ಕರೆತರುವುದು ಒಕ್ಕೂಟ ಸರಕಾರದ ಆದ್ಯ ಕರ್ತವ್ಯವಾಗಿತ್ತು.
- ಆದರೆ, ಒಕ್ಕೂಟ ಸರ್ಕಾರ ಈ ವಿಶಯದಲ್ಲಿ ಯಾವ ಕ್ರಮಗಳನ್ನು ಕೈಗೊಂಡಿತು ಎಂಬುದರ ಬಗ್ಗೆ ಪಾರದರ್ಶಕವಾದ ವಿವರವನ್ನು ಕೊಟ್ಟ ಹಾಗೆಯೇ ಕಾಣುತ್ತಿಲ್ಲ.
- ಹಾಗಾಗಿ, ಒಕ್ಕೂಟ ಸರ್ಕಾರದಿಂದ ಅಲ್ಲಲ್ಲಿ, ಆಗಾಗ ಹೊರಟ ಹೇಳಿಕೆಗಳಿಂದ ನಾವು ಒಂದು ಚಿತ್ರಣ ಪಡೆಯುವ ಪ್ರಯತ್ನ ಮಾಡಬಹುದು.
- ಮೊದಲಿಗೆ ಸರ್ಕಾರ ಅಲ್ಲಿರುವ ವಿದ್ಯಾರ್ತಿಗಳಿಗೆ ಅಲ್ಲಿಂದ ಹೊರಟು ಬರುವಂತೆ ಸೂಚನೆ ಕೊಡುತ್ತದೆ.
- ಆದರೆ, ಕಾಸಗಿ ವಿಮಾನ ಸಂಸ್ತೆಗಳು (ಏರ್ ಇಂಡಿಯಾ ಕೂಡ ಈಗ ಟಾಟಾ ಮಾಲೀಕತ್ವದಲ್ಲಿದೆ) ಅಲ್ಲಿಂದ ಪ್ರಯಾಣಿಕರನ್ನು ಕರೆತರಲು ಮಾಮೂಲಿಗಿಂತ ಹೆಚ್ಚಿನ ದರ ವಿದಿಸಿದ್ದರಿಂದ ಬಹುತೇಕ ವಿದ್ಯಾರ್ತಿಗಳಿಗೆ ಅಲ್ಲಿಂದ ಹೊರಟುಬರಲು ಸಾದ್ಯವಾಗದಾಯ್ತು.
- ಇಂತಾ ಪರಿಸ್ತಿತಿಯಲ್ಲಿ ಪೂರ್ತಿ ವೆಚ್ಚ ತಾನೇ ಬರಿಸುವುದು ಸರ್ಕಾರದ ಜವಾಬ್ದಾರಿಯಾಗಿತ್ತು. ಅದನ್ನು ಆರಂಬದಲ್ಲೇ ಗೋಶಿಸಬೇಕಿತ್ತು.
- ನಂತರ ಪರಿಸ್ತಿತಿ ಕೈಮೀರಿದಾಗ ವಿದ್ಯಾರ್ತಿಗಳಿಗೆ ತಾವೇ ರೊಮೇನಿಯ, ಪೋಲೆಂಡ್ ಮತ್ತು ಇತರ ದೇಶಗಳ ಬಾರ್ಡರ್‌ಗಳಿಗೆ ತಲುಪಿಕೊಳ್ಳುವಂತೆ ಸೂಚಿಸಲಾಗಿದೆ.
- 500 ಕಿಮೀಗಿಂತ ಹೆಚ್ಚು ದೂರ (ರಶ್ಯಾ ಶೆಲ್ಲಿಂಗ್ ನಡುವೆ ಪ್ರಾಣ ಒತ್ತೆಯಿಟ್ಟು) ಕ್ರಮಿಸಿ ಬಾರ್ಡರ್‌ಗೆ ತಲುಪುವ ಕಶ್ಟ. ಸಹಜವಾಗಿ ವಿದ್ಯಾರ್ತಿಗಳಲ್ಲಿ ಸರ್ಕಾರದ ಬಗ್ಗೆ ಸಿಟ್ಟು ಬೇಸರ ತರಿಸಿದೆ.
- ಈ ನಡುವೆ ಒಕ್ಕೂಟ ಸರ್ಕಾರದ ಚೇಲಾ ಮೀಡಿಯಾಗಳು, ಸರ್ಕಾರ ವಿದ್ಯಾರ್ತಿಗಳನ್ನು ಸುರಕ್ಶಿತವಾಗಿ ಕರೆತರಲಿಕ್ಕೆ ಸಿಕ್ಕಾಪಟ್ಟೆ ಪ್ರಾಮಾಣಿಕ ಪ್ರಯತ್ನ ಮಾಡ್ತಾ ಇದೆ ಅಂತ ಹೇಳ್ತಾ ಇದ್ದದ್ದು ವಿದ್ಯಾರ್ತಿಗಳನ್ನ ಮತ್ತಶ್ಟು ಕೆರಳಿಸಿತು. ಇದೇ ಕಾರಣಕ್ಕೆ ಹಲವು ವಿದ್ಯಾರ್ತಿಗಳು ಆ ಮೀಡಿಯಾದವರ ಎದುರೇ ಅವರು ಹೇಳ್ತಿರುವುದು ಸುಳ್ಳು ಅಂದರು.
- ಇಶ್ಟಲ್ಲದೆ, ರೊಮೇನಿಯ, ಹಂಗೇರಿ, ಪೋಲೆಂಡ್ ಬಾರ್ಡರ್‌ಗಳನ್ನ ಕಶ್ಟಪಟ್ಟು ತಲುಪಿದ ಮೇಲೂ, ಸಮರ್ಪಕ ವ್ಯವಸ್ತೆ ಮಾಡದ ಒಕ್ಕೂಟ ಸರ್ಕಾರದ ಮೇಲೆ ವಿದ್ಯಾರ್ತಿಗಳಿಗೆ ಸಹಜವಾಗಿಯೇ ಬೇಸರ, ಸಿಟ್ಟು ಇನ್ನೂ ಹೆಚ್ಚಾಯ್ತು. ಇದಕ್ಕೆ ಪೂರಕವಾಗಿ ಒಕ್ಕೂಟ ಸರ್ಕಾರ ಈ ಬಾರ್ಡರ್ ದೇಶಗಳನ್ನ ತಲುಪಿದ ವಿದ್ಯಾರ್ತಿಗಳ ಸುರಕ್ಶತೆಗಾಗಿ ತಾನು ಮಾಡಿದ ಕೆಲಸಕ್ಕಿಂತ ಹೆಚ್ಚಾಗಿ ಪಬ್ಲಿಸಿಟಿ ತೆಗೆದುಕೊಳ್ಳುವುದಕ್ಕೆ ಪ್ರಯತ್ನ ಪಟ್ಟಿದ್ದನ್ನು ಹಲವು ವಿಡಿಯೋಗಳಲ್ಲಿ ನಾವು ನೋಡಬಹುದು.

- ಇದೆಲ್ಲದರಿಂದಾಗಿ ಹಲವು ವಿದ್ಯಾರ್ತಿಗಳು ನೇರವಾಗಿ ಒಕ್ಕೂಟ ಸರ್ಕಾರದ ವಿರುದ್ದ ತಮ್ಮ ಅಸಮಾದಾನವನ್ನು ಹೊರಹಾಕಿದರು.
- ಯಾವಾಗ ವಿದ್ಯಾರ್ತಿಗಳು ಒಕ್ಕೂಟ ಸರ್ಕಾರದ ಅಸಮರ್ತತೆ ಮತ್ತು ಬೇಜವಾಬ್ದಾರಿತನದ ವಿರುದ್ದ ಮಾತನಾಡಿದರೋ ಆಗ ಇಲ್ಲಿಯ ಹಲವು ಸರ್ಕಾರದ ಚೇಲಾ ಮೀಡಿಯಾಗಳು ಮತ್ತು ಐಟಿ ಸೆಲ್ಲುಗಳು ಈ ವಿದ್ಯಾರ್ತಿಗಳು ಉಕ್ರೇನಿಗೆ ಶಿಕ್ಶಣಕ್ಕೆ ಹೋಗಿದ್ದೇ ಅಪರಾದ ಅಂತ ಅಪಪ್ರಚಾರ ಮಾಡಲಿಕ್ಕೆ ಶುರುಮಾಡಿದವು.
- ರಶ್ಯಾ ಶೆಲ್ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಕರ್ನಾಟಕ ಮೂಲದ ವಿದ್ಯಾರ್ತಿ ಕೂಡ ಈ ಮಿಡಿಯಾ ದಾಳಿಗೆ ಒಳಗಾಗಬೇಕಾಯಿತು.
- ಉಕ್ರೇನಿಗೆ ಹೋಗಿರುವ ವಿದ್ಯಾರ್ತಿಗಳೆಲ್ಲ ಬಾರತದಲ್ಲಿ ನೀಟ್ ಪರೀಕ್ಶೆ ಪಾಸು ಮಾಡುವ ಪ್ರತಿಬೆಯಿಲ್ಲದವರು. ನೀಟ್ ಪಾಸು ಮಾಡಲಾಗದೆ ಅಲ್ಲಿಗೆ ಓದಲು ಹೋಗಿದ್ದಾರೆ. ಆದ್ದರಿಂದ ತಪ್ಪು ಅವರದೇ. ತಪ್ಪು ಅವರದ್ದಾಗಿದ್ದು, ಈಗ ಸರ್ಕಾರವನ್ನು ದೂರುವುದು ಸರಿಯಲ್ಲ ಎಂಬ ವಾದಗಳು ಹಲವು ಮೀಡಿಯಾಗಳಲ್ಲಿ ಮತ್ತು ಅದಿಕಾರಸ್ತರ ಬಾಯಲ್ಲಿ ಮೊಳಗಿದವು.
- ಕಡೆಗೆ ಉಕ್ರೇನಲ್ಲಿ ತೀರಿಹೋದ ನವೀನ್ ಪೋಶಕರಿಂದ “ನಮ್ಮ ಮಗನಿಗೆ ಇಲ್ಲಿ ಮೆಡಿಕಲ್ ಸೀಟು ಸಿಗದಿರಲು ಮೀಸಲಾತಿ ಕಾರಣ” ಎಂದೂ ಹೇಳಿಸಲಾಯಿತು. (ಅತವಾ ಅವರು ಹಾಗೆ ನಂಬಿಯೂ ಇರಬಹುದು)
- ಕಡೆಗೆ ಈ ಎಲ್ಲಾ ಗಟನೆಗಳು ಬಾರತದಲ್ಲಿ ನೀಟ್ ಪರೀಕ್ಶೆಯ ಅವಶ್ಯಕತೆ, ಮುಕ್ಯವಾಗಿ ಮೆಡಿಕಲ್ ಓದಿನಲ್ಲಿ ಹಣದ ಪಾತ್ರ ಮುಂತಾದ ಮುಕ್ಯ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿತು.
ಈ ಎಲ್ಲಾ ಹಿನ್ನೆಲೆಯಲ್ಲಿ ಈಗ ನಾವು ಮುಕ್ಯವಾಗಿ ಬಾರತದ ಮೆಡಿಕಲ್ ಎಜುಕೇಶನ್ ವ್ಯವಸ್ತೆ ಬಗ್ಗೆ ಅರ್ತ ಮಾಡಿಕೊಳ್ಳಬೇಕಿದೆ.
- ಮೆಡಿಕಲ್‌ಗೆ ಪ್ರವೇಶ ಪಡೀಬೇಕಾದ್ರೆ ನೀಟ್ ಪರೀಕ್ಶೆಲಿ ಒಳ್ಳೆ ಅಂಕ ಪಡೀಬೇಕು.
- ನೀಟ್ ಪರೀಕ್ಶೆಲಿ ಒಳ್ಳೆ ಅಂಕ ಪಡೀಬೇಕಾದ್ರೆ ಅದಕ್ಕೆ ಉತ್ತಮ ತರಬೇತಿ ಬೇಕು.
- ಆ ಉತ್ತಮ ತರಬೇತಿಗಾಗಿ ಪಿಯುಸಿ ಹಂತದ ಎರಡು ವರ್ಶಗಳಲ್ಲಿ ಕನಿಶ್ಟ ಅಂದರೂ ಎರಡರಿಂದ ಮೂರು ಲಕ್ಶ ಕರ್ಚು ಮಾಡಬೇಕು.
- ಸರಾಸರಿ ವಾರ್ಶಿಕ ಕುಟುಂಬದ ಆದಾಯವೇ 2.5 ಲಕ್ಶ (ಗ್ರಾಮಾಂತರ ಕುಟುಂಬ ಒಂದು ಲಕ್ಶ) ಇರುವ ಈ ದೇಶದಲ್ಲಿ ಅಶ್ಟು ಹಣ ಕರ್ಚು ಮಾಡಿ ಒಳ್ಳೆಯ ನೀಟ್ ತರಬೇತಿ ಪಡೆಯಲು ಹೇಗೆ ಸಾದ್ಯ?
- ಇನ್ನು ತಾಲೂಕು ಕೇಂದ್ರಗಳಿರಲಿ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿಯೇ ಒಳ್ಳೆಯ ನೀಟ್ ತರಬೇತಿ ಕೊಡುವ ವ್ಯವಸ್ತೆ ಇಲ್ಲ. (ಹಣ ಕೊಡುವ ಶಕ್ತಿಯಿದ್ದವರಿಗೂ).
- ಹೀಗಾಗಿ ಬಹುತೇಕ ಬಡವರು ಮತ್ತು ಗ್ರಾಮಾಂತರದ ವಿದ್ಯಾರ್ತಿಗಳು ಪ್ರತಿಬೆಯಿದ್ದರೂ ನೀಟ್ ತರಬೇತಿಯಿಂದ ವಂಚಿತರಾಗಿ ಮೆಡಿಕಲ್ ಸೇರಲು ವಿಪಲರಾಗುತ್ತಾರೆ.
- ಕಡೆಗೆ ನೀಟ್ ಪರೀಕ್ಶೆಯ ನಂತರ ನಡೆಯುವ ಪ್ರವೇಶ ಪ್ರಕ್ರಿಯೆಯಲ್ಲೂ ಹಣವಿದ್ದವರಿಗೇ ಪ್ರಾಶಸ್ತ್ಯ ಸಿಗುತ್ತಿದೆ.
ನೀಟ್ ಪರೀಕ್ಶೆಯ ಒಟ್ಟು 720 ಅಂಕಗಳಲ್ಲಿ ಕನಿಶ್ಟ 138 ಅಂಕ (2021ರ ಕಟ್ ಆಫ್) ತೆಗೆದವರು ಮೆಡಿಕಲ್ ಪ್ರವೇಶದ ಪ್ರಕ್ರಿಯೆಯಲ್ಲಿ ಬಾಗವಹಿಸಲು ಅರ್ಹರಾಗುತ್ತಾರೆ. ಇದರಲ್ಲಿ 600ಕ್ಕಿಂತ (ಸಾಮಾನ್ಯ ವರ್ಗದ ಲೆಕ್ಕದಲ್ಲಿ) ಹೆಚ್ಚು ಅಂಕ ತೆಗೆದವರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಕಾಸಗಿ ಕಾಲೇಜುಗಳಲ್ಲಿ ಕಡಿಮೆ ಶುಲ್ಕದ ಸರ್ಕಾರಿ (ವಾರ್ಶಿಕ 1.5 ಲಕ್ಶ) ಸೀಟು ಪಡೆಯುತ್ತಾರೆ. 450ರಿಂದ 600 ಅಂಕ ಪಡೆದವರು ಕಾಸಗಿ ಕಾಲೇಜುಗಳ ಹೆಚ್ಚಿನ ಶುಲ್ಕದ (8ರಿಂದ 10 ಲಕ್ಶ) ಸೀಟು ಪಡೆಯುತ್ತಾರೆ. 450ಕ್ಕಿಂತ ಕಡಿಮೆ ಅಂಕ ಪಡೆದವರು ಮೇಲಿನೆರಡೂ ರೀತಿಯ ಸೀಟು ಪಡೆಯಲು ಸಾದ್ಯವಾಗುವುದಿಲ್ಲ.
ಆದರೆ, ಕೇವಲ 138 ಅಂಕ ಪಡೆದವರೂ ಕೂಡ ಕಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಲಕ್ಶಾಂತರ ಡೊನೇಶನ್ (ವಾರ್ಶಿಕ 20ರಿಂದ 40 ಲಕ್ಶ ಮತ್ತು ಐದು ವರ್ಶಕ್ಕೆ ಒಂದರಿಂದ ಎರಡು ಕೋಟಿ) ಕೊಟ್ಟು ಸೀಟು ಪಡೆಯುತ್ತಾರೆ.
8) ಅಂದರೆ, ಮೆರಿಟ್ ಇಲ್ಲದಿದ್ದರೂ ಹಣವುಳ್ಳವರಿಗೆ (ಅದೂ ಬಾರೀ ಹಣವಿದ್ದವರಿಗೆ ಮಾತ್ರ) ಮೆಡಿಕಲ್ ಸೀಟ್ ಸಿಗುವ ವ್ಯವಸ್ತೆಯನ್ನು ಈ ನೀಟ್ ಪರೀಕ್ಶೆ ಮತ್ತಶ್ಟು ಸುಗಮಗೊಳಿಸಿದೆ. ಮೆರಿಟ್ ಇದ್ದವರಿಗೂ (550 ಅಂಕ ಕೂಡ ಒಳ್ಳೆಯ ಅಂಕವೇ) ಈ ವ್ಯವಸ್ತೆಯಲ್ಲಿ ಮೆಡಿಕಲ್ ಓದಲು ಅವಕಾಶವಿಲ್ಲ.
9) ಇಲ್ಲಿ ವರ್ಶಕ್ಕೆ 35-40 ಲಕ್ಶ (ಐದು ವರ್ಶಕ್ಕೆ ಒಂದೂವರೆಯಿಂದ ಎರಡು ಕೋಟಿ) ಕೊಡುವ ಬದಲು ಉಕ್ರೇನಲ್ಲಿ 35ರಿಂದ 40 ಲಕ್ಶಕ್ಕೆ (ವಾಸ್ತವ್ಯ ಮತ್ತು ಊಟವೂ ಸೇರಿ) ಇಡೀ ಎಂಬಿಬಿಎಸ್ ಕೋರ್ಸನ್ನೇ ಮುಗಿಸಿ ಬರುವ ಅವಕಾಶವಿರುವಾಗ ನಮ್ಮ ವಿದ್ಯಾರ್ತಿಗಳು ಉಕ್ರೇನಿಗೆ ಕಲಿಯಲು ಹೋದರೆ ವಿದ್ಯಾರ್ತಿಗಳದ್ದು ತಪ್ಪು ಅಂತ ಹೇಗೆ ಹೇಳುವುದು?
10) ಇಲ್ಲಿ ನೀಟ್ ಪರೀಕ್ಶೆ ತಂದು ಗ್ರಾಮೀಣ, ಆಯಾ ರಾಜ್ಯ ಬಾಶಾ ಮಾದ್ಯಮದ ಮತ್ತು ಬಡವರ ಮಕ್ಕಳಿಗೆ ಮೆಡಿಕಲ್ ಓದುವ ಅವಕಾಶ ಇಲ್ಲದ ಹಾಗೆ ಮಾಡಿರುವಾಗ ನಮ್ಮ ಮಕ್ಕಳು ಕಡಿಮೆಕರ್ಚಲ್ಲಿ (ಅದನ್ನೂ ಸಾಲಸೋಲ ಮಾಡಿಯೇ) ರಶ್ಯಾಗೋ, ಉಕ್ರೇನಿಗೋ ಅತವಾ ಚೈನಾಗೋ ಹೋಗಿ ಮೆಡಿಕಲ್ ಓದಿದರೆ ಅವರದೇನು ತಪ್ಪಿದೆ?
ಒಟ್ಟಿನಲ್ಲಿ, ಉಕ್ರೇನಿನಿಂದ ನಮ್ಮ ಮಕ್ಕಳನ್ನು ಸರಿಯಾದ ಸಮಯದಲ್ಲಿ ಸುರಕ್ಶಿತವಾಗಿ ಕರೆತರಲಾಗದ ಸರ್ಕಾರದ ವೈಪಲ್ಯ ಮುಚ್ಚಿಕೊಳ್ಳಲಿಕ್ಕೆ ಉಕ್ರೇನಿಗೆ ಹೋದ ವಿದ್ಯಾರ್ತಿಗಳದ್ದೇ ತಪ್ಪು ಎಂಬಂತೆ ಬಿಂಬಿಸಲು ಚೇಲಾ ಮೀಡಿಯಾಗಳಿಂದ ಪ್ರಯತ್ನಿಸಿತು. ಆದರೆ, ಈ ವೈಪಲ್ಯ ಮುಚ್ಚಿಕೊಳ್ಳಲು ಹೋಗಿ ನಮ್ಮ ಅರ್ಹ ಮಕ್ಕಳಿಗೆ ಉಚಿತವಾಗಿ ಅತವಾ ಕೈಗೆಟಕುವ ಫೀಸಿನಲ್ಲಿ ಉನ್ನತ ಶಿಕ್ಶಣ ಕೊಡಲಾಗದೇ ಇರುವ ಸರ್ಕಾರದ ವೈಪಲ್ಯ ಮತ್ತೆ ಚರ್ಚೆಗೆ ಬರುವಂತಾಯಿತು.
ಉಕ್ರೇನಿನಲ್ಲಿರುವ ಮಕ್ಕಳ ಪರಿಸ್ತಿತಿಗೆ ಪ್ರತಿಕ್ರಿಯಸಲೇಬೇಕಾಗಿ ಬಂದಾಗ ಮಾನ್ಯ ಪ್ರದಾನಿಯವರು ಈ ಸಮಸ್ಯೆಗೆ ಪರಿಹಾರವಾಗಿ ಇನ್ನೂ ಹೆಚ್ಚು ಕಾಸಗಿ ವೈದ್ಯಕೀಯ ಕಾಲೇಜುಗಳನ್ನ ಸ್ತಾಪಿಸುವಂತೆ ಕರೆಕೊಟ್ಟ ಕೆಲಸವೂ ಆಯಿತು. ಆದರೆ, ಇವತ್ತು ಒಂದು ಮೆಡಿಕಲ್ ಕಾಲೇಜು ಸ್ತಾಪಿಸಲು 300ರಿಂದ 400 ಕೋಟಿ ಬೇಕಿರುವಾಗ ಯಾವ ಕಾಸಗಿ ಮೆಡಿಕಲ್ ಕಾಲೇಜಿಗೆ ತಾನೇ ಕಡಿಮೆ ಫೀಸಿಗೆ ಪ್ರವೇಶ ಕೊಡಲು ಸಾದ್ಯ?
ಹಾಗಾಗಿ, ಮತ್ತಶ್ಟು ಕಾಸಗಿ ಮೆಡಿಕಲ್ ಕಾಲೇಜುಗಳ ಸ್ತಾಪನೆ ಈ ಸಮಸ್ಯೆಯನ್ನು ಇನ್ನೂ ಬಿಗಡಾಯಿಸಲಿದೆಯೇ ಹೊರತು ಪರಿಹಾರ ಕೊಡುವುದಿಲ್ಲ.
ಇವೆಲ್ಲದರ ಹಿನ್ನೆಲೆಯಲ್ಲಿ ಒಟ್ಟಾರೆಯಾಗಿ, ಉಕ್ರೇನ್ ವಿದ್ಯಾರ್ತಿಗಳ ಸುರಕ್ಶಿತ ಸ್ತಳಾಂತರದ ವಿಶಯದಿಂದ ತಿಳಿದ ಕೆಲ ಮುಕ್ಯ ಅಂಶಗಳು.
- 1990ರಲ್ಲಿ ಕುವೈತ್ ಮತ್ತು 2011ರ ಲಿಬಿಯಾ ಯುದ್ದಗಳ ಸಮಯದಲ್ಲಿ ನಮ್ಮ ಹಿಂದಿನ ಸರ್ಕಾರಗಳು ಸಾವಿರಾರು ಜನರನ್ನು ಸುರಕ್ಶಿತವಾಗಿ (ಪ್ರಚಾರ ಪಡೆಯದೇ) ಕರೆತಂದ ಮಾದರಿಗಳಿದ್ದಾಗ್ಯೂ ಈಗಿನ ಸರ್ಕಾರ ಉಕ್ರೇನ್ ವಿಶಯದಲ್ಲಿ ವಿಪಲವಾಗಿದ್ದು. (ಪ್ರಚಾರ ಮಾತ್ರ ಬರ್ಜರಿ ಪಡೆದದ್ದು).
- ಸರ್ಕಾರದ ವೈಪಲ್ಯಕ್ಕೆ ಬೇಸರ ವ್ಯಕ್ತಪಡಿಸಿದ ವಿದ್ಯಾರ್ತಿಗಳನ್ನೂ ಬಿಡದೆ ನಮ್ಮ ಮಾದ್ಯಮಗಳು ದೇಶದ್ರೋಹಿಗಳೆಂಬಂತೆ ಬಿಂಬಿಸಿ ತಾವು ಅದಿಕಾರಸ್ತರ ಪರವೇ ಹೊರತು ದೇಶದ ಪರವಲ್ಲ ಅಂತ ತೋರಿಸಿದ್ದು.
3. ನಮ್ಮ ದೇಶದಲ್ಲಿ ನೀಟ್ ಪರೀಕ್ಶೆ ಮತ್ತು ಕಾಸಗೀಕರಣ ಬಡ ಮತ್ತು ಗ್ರಾಮೀಣ ಪ್ರತಿಬಾವಂತರನ್ನು ಮೆಡಿಕಲ್ ಶಿಕ್ಶಣದಿಂದ ಹೊರಗಿಟ್ಟಿದೆ ಎನ್ನುವುದು.
ಕಡೆಯದಾಗಿ, ನಮ್ಮ ದೇಶದ ಮಕ್ಕಳಿಗೆ ಒಳ್ಳೆಯ ಶಿಕ್ಶಣ ಉಚಿತವಾಗಿ ಸಿಗಬೇಕೆಂದರೆ ಶಿಕ್ಶಣದ ರಾಶ್ಟ್ರೀಕರಣವೇ ಸರಿಯಾದ ದಾರಿ ಎಂಬ ವಿಶಯ ಈ ಚರ್ಚೆಯಿಂದಾಗಿ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗೂ, ಇದನ್ನು ಇನ್ನೂ ಆಳವಾಗಿ ಚರ್ಚಿಸಿ ಮುಂದುವರಿಸಬೇಕಿದೆ.

ಡಾ. ಬಿ.ಸಿ. ಬಸವರಾಜು
ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜು ಹಾಡುಗಾರರೂ, ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ
ಇದನ್ನೂ ಓದಿ: ಉಕ್ರೇನ್- ರಷ್ಯಾ ಯುದ್ಧ: ಭಾರತೀಯ ವಿದ್ಯಾರ್ಥಿಯ ಮೇಲೆ ಗುಂಡಿನ ದಾಳಿ



ವಿದ್ಯಾರ್ಥಿ.ಕಥೆ.ವ್ಯಥೆ..ಸಾಧನೆಹೀಗೆ ಅಲ್ಪಪ್ರಾಣ ಮಹಾಪ್ರಾಣಗಳ ಬಳಕೆಯನ್ನು ಸರಿಪಡಿಸಲು ವಿನಂತಿ