ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಇಬ್ಬರು ಆದಿವಾಸಿ ಬಾಲಕಿಯರಿಗೆ ಯುವಕರ ಗುಂಪೊಂದು ಸಾಮೂಹಿಕವಾಗಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದಲ್ಲಿ 15 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಘಟನೆಯ ವಿಡಿಯೋ ಶನಿವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದರು.
“ಘಟನೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಇದು ಸೂಕ್ಷ್ಮ ವಿಷಯವಾದ್ದರಿಂದ, ಸುಮೊಟೊ ಪ್ರಕರಣ ದಾಖಲಿಸಿ ತನಿಖೆ ಮಾಡಲು ಪ್ರಾರಂಭಿಸಿದ್ದೇವೆ. ಈಗಾಗಲೆ 15 ಜನರನ್ನು ಬಂಧಿಸಿದ್ದೇವೆ” ಎಂದು ಅಲಿರಾಜಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸಿಂಗ್ ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಯುವಕರ ಗುಂಪು ಕಿರುಕುಳ ನೀಡುತ್ತಿರುವುದು ದಾಖಲಾಗಿತ್ತು. ವಾಹನದ ಮರೆಯಲ್ಲಿದ್ದ ಯುವತಿಗೆ ಕಿರುಕುಳ ನೀಡುತ್ತಿರುವುದು ಒಂದೆಡೆಯಾದರೆ, ಮತ್ತೊಬ್ಬ ಬಾಲಕಿಯನ್ನು ನಡುಬೀದಿಯಲ್ಲಿ ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಜೊತೆಗೆ ಮತ್ತೊಂದು ಗುಂಪಿನ ಆರೋಪಿಗಳು ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿ: ಆದಿವಾಸಿ ಬಾಲಕಿಯರಿಗೆ ಸಾರ್ವಜನಿಕವಾಗಿ ಸಾಮೂಹಿಕ ಲೈಂಗಿಕ ಕಿರುಕುಳ; ವಿಡಿಯೊ ವೈರಲ್
ಸ್ಥಳೀಯ ವಾರ್ಷಿಕ ಜಾತ್ರೆ ‘ಭಗೋರಿಯಾ ಮೇಳ’ದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಘಟನೆ ಮಾರ್ಚ್ 11 ರಂದು ಸಂಭವಿಸಿದ್ದು, ವಿಡಿಯೊ ವೈರಲ್ ಆದ ನಂತರವೇ ಅವರಿಗೆ ಘಟನೆಯ ಬಗ್ಗೆ ತಿಳಿದು ಬಂದಿತ್ತು.
“ವೀಡಿಯೊ ವೈರಲ್ ಆದ ನಂತರ ನಾವು ಸ್ವಯಂ ಪ್ರೇರಿತ ಕ್ರಮ ಕೈಗೊಂಡಿದ್ದೇವೆ. ಸಂತ್ರಸ್ತರು ದೂರು ನೀಡಲು ಮುಂದೆ ಬಂದಿಲ್ಲ. ವೀಡಿಯೋ ಆಧಾರದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗಳನ್ನು ಗುರುತಿಸಿದ್ದೇವೆ” ಎಂದು ಎಸ್ಪಿ ಹೇಳಿದ್ದರು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಎ) (ಹೆಣ್ಣಿನ ಘನತೆಯ ಮೇಲೆ ಹಲ್ಲೆ) ಮತ್ತು 34 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾತ್ರೆ ನಡೆಯುವ ಜಾಗಗಳಲ್ಲಿ ಹೆಚ್ಚಿನ ಸಿಸಿಟಿವಿಗಳ ಅಳವಡಿಕೆ, ಪೊಲೀಸ್ ಬಂದೋಬಸ್ತ್ ಹೆಚ್ಚಿಸುವುದು ಸೇರಿದಂತೆ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಾದ ಝಬುವಾ, ಧಾರ್, ಅಲಿರಾಜಪುರ, ಬರ್ವಾನಿ ಮತ್ತು ಪಶ್ಚಿಮ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಒಂದು ವಾರದ ಅವಧಿಯ ಭಗೋರಿಯಾ ಜಾತ್ರೆಯನ್ನು ಆಚರಿಸಲಾಗುತ್ತದೆ. ಇದು ಆದಿವಾಸಿಗಳ ದೊಡ್ಡ ಹಬ್ಬವೆಂದು ಪರಿಗಣಿಸಲ್ಪಟ್ಟಿದೆ. ಪ್ರತಿ ವರ್ಷ ಗಂಗಾ ಮಹಾದೇವನ ದೇವಸ್ಥಾನದಲ್ಲಿ ಜಾತ್ರೆಯನ್ನು ಆಯೋಜಿಸುವುದರೊಂದಿಗೆ ಹಬ್ಬ ಪ್ರಾರಂಭವಾಗುತ್ತದೆ. ಅಲಿರಾಜಪುರದ ವಾಲ್ಪುರ್‌ನ ಭಗೋರಿಯಾ ಹಬ್ಬ ಬಹಳ ಜನಪ್ರಿಯವಾಗಿದೆ.
ಇದನ್ನೂ ಓದಿ: 9 ಮಕ್ಕಳು ಸೇರಿದಂತೆ 20 ಆದಿವಾಸಿಗಳನ್ನು ಬಂಧಿತ ಕಾರ್ಮಿಕರಾಗಿ ರಾಜ್ಯಕ್ಕೆ ಕರೆತರಲಾಗಿದೆ: ವರದಿ


