ಎರಡು ಪ್ರತ್ಯೇಕ ವಿಚಾರಣೆಗಳ ಸಂದರ್ಭದಲ್ಲಿ, ಸರ್ಕಾರಗಳ ‘ಮುಚ್ಚಿದ ಕವರ್ ನ್ಯಾಯಶಾಸ್ತ್ರ’ದ ಕ್ರಮವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಟೀಕಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಈ ಕ್ರಮದಂತೆ ಸರ್ಕಾರಗಳು ಮತ್ತು ಅದರ ಏಜೆನ್ಸಿಗಳು ಮೊಹರು ಮಾಡಿದ ಲಕೋಟೆಗಳಲ್ಲಿ ದಾಖಲೆಗಳನ್ನು ನ್ಯಾಯಾಧೀಶರಿಗೆ ಸಲ್ಲಿಸುತ್ತವೆ. ಈ ದಾಖಲೆಗಳಲ್ಲಿ ಇರುವ ವಿಷಯಗಳನ್ನು ಎದುರು ವಾದಿಸುತ್ತಿರುವ ಪಕ್ಷದವರೊಂದಿಗೆ ಹಂಚಿಕೊಳ್ಳುವುದಿಲ್ಲ.
ದಿ ಹಿಂದೂ ಪ್ರಕಾರ, ಪ್ರಕರಣವು ಹೆಚ್ಚು ಸೂಕ್ಷ್ಮವಾಗಿದ್ದು, ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆಧಾರದ ಮೇಲೆ ನಡೆಯನ್ನು ಅನುಸರಿಸಲಾಗುತ್ತದೆ.
ಇದನ್ನೂ ಓದಿ: ಕೈಕೋಳದಲ್ಲಿ ಉಮರ್ ಖಾಲಿದ್‌ರನ್ನು ನ್ಯಾಯಾಲಯಕ್ಕೆ ಕರೆತಂದ ಪೊಲೀಸರು: ನೋಟಿಸ್ ನೀಡಿದ ಕೋರ್ಟ್
ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಬಿಹಾರ ಸರ್ಕಾರದ ವಿರುದ್ಧ ವ್ಯಕ್ತಿಯೊಬ್ಬರು ಸಲ್ಲಿಸಿದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ನಡೆಸುವಾಗ, ಮುಚ್ಚಿದ ಕವರ್‌ನಲ್ಲಿ ದಾಖಲೆಗಳನ್ನು ಸ್ವೀಕರಿಸಲು ನಿರಾಕರಿಸಿದರು.
“ಯಾವುದೇ ಸೀಲ್ಡ್ ಕವರ್‌ಗಳನ್ನು ನೀಡಬೇಡಿ, ಅದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ, ನನಗೆ ಯಾವುದೇ ಸೀಲ್ಡ್ ಕವರ್ ಬೇಡ” ಎಂದು ನ್ಯಾಯಮೂರ್ತಿ ರಮಣ ಹೇಳಿದ್ದಾರೆ ಎಂದು ಲೈಲಾ ವೆಬ್‌ಸೈಟ್ ವರದಿ ಮಾಡಿದೆ.
ಮಲಯಾಳಂ ನ್ಯೂಸ್ ಚಾನೆಲ್ ಮೀಡಿಯಾ ಒನ್ ಟಿವಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ವಿಚಾರಣೆಯ ಸಮಯದಲ್ಲಿ ‘ಮುಚ್ಚಿದ ಕವರ್’ ಅನ್ನು ಅವಲಂಬಿಸುವುದು ಸರಿಯೆ ಎಂಬುವುದನ್ನು ಪರಿಶೀಲಿಸುವುದಾಗಿ ಹೇಳಿದೆ.
‘ಸೀಲ್ಡ್ ಕವರ್ ನ್ಯಾಯಶಾಸ್ತ್ರವನ್ನು ನಾನು ತುಂಬಾ ವಿರೋಧಿಸುತ್ತೇನೆ’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
ಇದನ್ನೂ ಓದಿ: ನ್ಯಾಯಾಲಯಗಳ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಚಿತ್ರ ಇರಿಸುವಂತೆ ಹೈಕೋರ್ಟ್ ಆದೇಶ
ಮೀಡಿಯಾ ಒನ್ ಪ್ರಕರಣದಲ್ಲಿ, ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿ ಕೇರಳ ಹೈಕೋರ್ಟ್ ಮಾರ್ಚ್ 2 ರಂದು ಸುದ್ದಿ ವಾಹಿನಿಯ ಮೇಲಿನ ಒಕ್ಕೂಟ ಸರ್ಕಾರದ ನಿಷೇಧವನ್ನು ಎತ್ತಿ ಹಿಡಿದಿತ್ತು. ಒಕ್ಕೂಟ ಸರ್ಕಾರ ನೀಡಿರುವ ಕೆಲವು ಗೌಪ್ಯ ಕಡತಗಳು ಚಾನೆಲ್ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದರು.
ಇದರ ನಂತರ ಚಾನೆಲ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಮೀಡಿಯಾ ಒನ್ ಟಿವಿಯ ಪರವಾನಗಿಯನ್ನು ನವೀಕರಿಸಲು ನಿರಾಕರಿಸಿದ ಫೈಲ್‌ಗಳನ್ನು ಪ್ರಸ್ತುತಪಡಿಸುವಂತೆ ಒಕ್ಕೂಟ ಸರ್ಕಾರಕ್ಕೆ ನಿರ್ದೇಶನ ನೀಡಿತು. ಕಡತಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ನಿಷೇಧಕ್ಕೆ ತಡೆಯಾಜ್ಞೆ ನೀಡಿದೆ.
ಒಕ್ಕೂಟ ಸರ್ಕಾರವು ತಮ್ಮ ನಿರ್ಧಾರವನ್ನು ರಕ್ಷಿಸಿಕೊಳ್ಳುವ ಕಾರಣಗಳನ್ನು ಚಾನೆಲ್‌ಗೆ ಬಹಿರಂಗಪಡಿಸಬೇಕು ಎಂದು ನ್ಯಾಯಾಲಯವು ಸರ್ಕಾರಕ್ಕೆ ತಿಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. “ಫೈಲ್‌ಗಳನ್ನು ಬಹಿರಂಗಪಡಿಸುವಲ್ಲಿ ತೊಂದರೆ ಏನಿದೆ?” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ವಕೀಲ ನ್ಯಾಯಾಲಯಕ್ಕೆ ಶರಣು


