ಆಪ್ ಅಭೂತಪೂರ್ವ ಗೆಲುವಿಗೆ ಕಾರಣಗಳು
ಪಂಜಾಬ್‌ನ ಎರಡು ಮುಖ್ಯ ಸಾಂಪ್ರದಾಯಿಕ ಪಕ್ಷಗಳಾದ ಶಿರೋಮಣಿ ಅಕಾಲಿ ದಳ ಮತ್ತು ಕಾಂಗ್ರೆಸ್‌ನ ಎರಡು ದಶಕಗಳ ಭ್ರಷ್ಟ ಆಡಳಿತದಿಂದ ಪಂಜಾಬ್ ಜನತೆ ರೋಸಿಹೋಗಿದ್ದರು. ಭ್ರಷ್ಟರನ್ನು ರಕ್ಷಿಸುವುದಕ್ಕಾಗಿಯೇ ಇವರು ಆಡಳಿತದಲ್ಲಿದ್ದಾರೆ ಎಂಬ ಭಾವನೆ ಜನರಲ್ಲಿ ಮಡುಗಟ್ಟಿತ್ತು. ಇನ್ನು ಬಿಜೆಪಿ ಇಲ್ಲಿ ಲೆಕ್ಕಕ್ಕಿಲ್ಲದ ಪಕ್ಷ. ಅಷ್ಟು ಮಾತ್ರವಲ್ಲದೆ ಈ ಎಲ್ಲಾ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ನಿರತರಾಗಿದ್ದವು. ಹಾಗಾಗಿ ಇದು ಗೇಮ್ ಚೇಂಜರ್ ಫಲಿತಾಂಶ ಅಲ್ಲ. ಬದಲಿಗೆ ಹತಾಶ ಜನರ ಆಯ್ಕೆ ಆಮ್ ಆದ್ಮಿ ಪಕ್ಷವಾಗಿದೆ.
2007 ಮತ್ತು 2012ರಲ್ಲಿ ಅಕಾಲಿ ದಳ ಅಧಿಕಾರ ನಡೆಸಿ ರಾಜ್ಯವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿತ್ತು. ಅಲ್ಲದೆ ’ಧರ್ಮ ಗ್ರಂಥಗಳನ್ನು ಅಪವಿತ್ರಗೊಳಿಸುವ’ ಪ್ರಕರಣಗಳು ಹೆಚ್ಚಾಗಿದ್ದವು. ಹಾಗಾಗಿ 2017ರಲ್ಲಿ ಆಪ್ ಗೆಲ್ಲುತ್ತದೆ ಎಂದು ಹಲವು ಎಕ್ಸಿಟ್ ಪೋಲ್‌ಗಳು ನುಡಿದಿದ್ದವು. ಆದರೆ ಜನ ಕಾಂಗ್ರೆಸ್‌ಗೆ ಅವಕಾಶ ನೀಡಿದರು. ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೆ ಜನರ ನಿರೀಕ್ಷೆಗೆ ವಿರುದ್ಧವಾಗಿ ಅಮರಿಂದರ್ ಸಿಂಗ್ ಹೇಳಿದ್ದು “ರಾಜ್ಯದ ಖಜಾನೆ ಖಾಲಿಯಾಗಿದೆ, ನಾವೇನು ಮಾಡೋಣ” ಎಂದು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಖಜಾನೆ ಲೂಟಿಯಾಗುತ್ತಿದ್ದುದು ಕಾಂಗ್ರೆಸ್ ಮಂತ್ರಿಗಳಿಂದ ಎಂಬುದು ಜನಾಭಿಪ್ರಾಯವಾಗಿತ್ತು.

ಅಮರಿಂದರ್ ಸಿಂಗ್ ಅವರ ಹಿಂದಿನ ಆಡಳಿತದಲ್ಲಿ ಮಂತ್ರಿಯಾಗಿದ್ದ ರಾಣಾ ಗುರ್ಜಿತ್ ಸಿಂಗ್ ಬಹುಕೋಟಿ ಗಣಿಗಾರಿಕೆ ಹಗರಣದ ಆರೋಪ ಹೊತ್ತಿದ್ದರು. ಹಾಗಾಗಿ 2018ರಲ್ಲಿ ಅವರು ಸಂಪುಟಕ್ಕೆ ರಾಜೀನಾಮೆ ನೀಡಬೇಕಾಯಿತು. ಆದರೆ 2021ರಲ್ಲಿ ಚರಣ್‌ಜಿತ್ ಸಿಂಗ್ ಚನ್ನಿ ನೇತೃತ್ವದ ಹೊಸ ರಾಜ್ಯ ಸಚಿವಸಂಪುಟಕ್ಕೆ ಅವರನ್ನು ವಾಪಸ್ ಕರೆತರಲಾಯಿತು. ಅದೇ ರೀತಿ ಸಾಧು ಸಿಂಗ್ ಧರಂಸೋತ್ ಕೂಡ 2020ರಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಹಗರಣದಲ್ಲಿ 64 ಕೋಟಿ ರೂ ಕಬಳಿಸಿದ್ದಾರೆ ಎಂಬ ಆರೋಪ ಎದುರಿಸಿದ್ದರು. ಕೊನೆಗೆ ಮುಂದಿನ ಚುನಾವಣೆಗೆ 3-4 ತಿಂಗಳು ಇದೆ ಎನ್ನುವಾಗ ಸಿಎಂ ಬದಲಾವಣೆ ಮಾಡಿ ಅಭಿಪ್ರಾಯ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿತು ಕಾಂಗ್ರೆಸ್. ಆದರೆ ಜನಕ್ಕೆ ಸಾಕುಸಾಕಾಗಿತ್ತು. ಹಾಗಾಗಿ ಹೊಸ ಪಕ್ಷ ಆಪ್‌ಗೆ ಒಂದು ಅವಕಾಶ ನೀಡಿದ್ದಾರೆ.
ಆಪ್‌ನಿಂದ ಈ ಬಾರಿ ಜಯಗಳಿಸಿರುವ 92 ಜನರಲ್ಲಿ 82 ಜನರು ಹೊಸ ಮುಖಗಳು ಎನ್ನಲಾಗುತ್ತಿದೆ. ಇದು ಹಳೆಯ ಪಕ್ಷಗಳಿಂದ ಪಂಜಾಬ್ ಜನ ಹತಾಶಗೊಂಡಿರುವ ಪರಿಯನ್ನು ವಿವರಿಸುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿಯೇ ಪಂಜಾಬ್‌ನಲ್ಲಿ ಆಪ್‌ನಿಂದ 4 ಎಂಪಿಗಳು ಆಯ್ಕೆಯಾಗಿದ್ದರು. 2017ರಲ್ಲಿ 23.70% ಮತಗಳೊಂದಿಗೆ ಆಪ್ 20 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಈಗ ಜನತೆ ಪೂರ್ಣ ರಾಜ್ಯವನ್ನು ಆಪ್‌ಗೆ ಕೊಟ್ಟಿದೆ. ಪಂಜಾಬ್ ಜನ ಆಪ್‌ಗೆ ಹೃದಯ ತೆರೆದಿದ್ದಾರೆ. ಆಪ್ ಅದನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಬಹಳ ಮುಖ್ಯವಾಗಿದೆ.
ಫಲ ಕೊಟ್ಟ ಭಗವಂತ್ ಮಾನ್ ಸಿಎಂ ಫೇಸ್
2017ರ ಚುನಾವಣೆಯಲ್ಲಿ ಆಪ್‌ಗೆ ಹಿನ್ನಡೆಯಾಗಲು ಸಮರ್ಥ ಸಿಎಂ ಫೇಸ್ ಇಲ್ಲದಿರುವುದೂ ಒಂದು ಪ್ರಮುಖ
ಕಾರಣವಾಗಿತ್ತು. ಆ ಕೊರತೆಯನ್ನು ಈ ಬಾರಿ ಭಗವಂತ್ ಮಾನ್‌ರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಬಗೆಹರಿಸಲಾಯಿತು. ಹಳೆಯ ಆಡಳಿತದಿಂದ ಬೇಸತ್ತ ಜನ ಕೊನೆ ಪಕ್ಷ ಹೊಸ ಪಂಜಾಬಿ ಸಿಎಂ ಆಗುವುದನ್ನು ಸ್ವಾಗತಿಸಿದರು.
31.9% ದಷ್ಟು ದಲಿತರಿರುವ 34 ಮೀಸಲಾತಿ ಕ್ಷೇತ್ರಗಳಿರುವ ಪಂಜಾಬ್‌ನಲ್ಲಿ 28 ಸ್ಥಾನಗಳನ್ನು ಆಪ್ ತನ್ನ ಬುಟ್ಟಿಗೆ ಹಾಕಿಕೊಂಡಿದೆ. 5 ಕಡೆ ಮಾತ್ರ ಕಾಂಗ್ರೆಸ್ ಗೆಲ್ಲಲು ಸಾಧ್ಯವಾದರೆ ಅಕಾಲಿ ದಳ ಒಂದು ಕಡೆ ಜಯ ಸಾಧಿಸಿದೆ.
ಆಪ್ ಮುಂದಿರುವ ಸವಾಲುಗಳು
ಆಪ್ ಮುಂದಿನ ಬಹುಮುಖ್ಯ ಸವಾಲು ಏನೆಂದರೆ ಭಗವಂತ್ ಮಾನ್ ಮುಕ್ತವಾಗಿ ಕೆಲಸ ಮಾಡಲು ಕೇಜ್ರಿವಾಲ್ ಸಂಪೂರ್ಣ ಅವಕಾಶ ನೀಡಬೇಕು. ಕೇಜ್ರಿವಾಲ್ ಯಾವುದೇ ಕಾರಣಕ್ಕೂ ಪಂಜಾಬ್ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ದೆಹಲಿ ಪಂಜಾಬ್ ನಡುವೆ 500 ವರ್ಷಗಳ ಸಂಘರ್ಷವಿದೆ. ದೆಹಲಿ ಜನ ನಮ್ಮನ್ನು ಅರ್ಥ ಮಾಡಿಕೊಂಡಿಲ್ಲ ಎಂಬ ಭಾವನೆ ಪಂಜಾಬಿಗಳಲ್ಲಿದೆ. ಆಪ್ ಹೈಕಮಾಂಡ್ ಅದನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದಿನ ಪಕ್ಷಗಳು ಮಾಡಿದ ತಪ್ಪನ್ನು ಪುನರಾವರ್ತನೆ ಮಾಡಬಾರದು. ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ, ಹಲವು ಸಮಸ್ಯೆಗಳ ಆಗರವಾಗಿರುವ ಪಂಜಾಬ್‌ಅನ್ನು ಸುಧಾರಿಸಲು ಬಿಡಬೇಕೆ ಹೊರತು ಮತ್ತಷ್ಟು ಗಾಯ ಮಾಡಬಾರದು.
ಮರಳು, ಡ್ರಗ್, ಲಿಕ್ಕರ್, ಸಂಚಾರಿ ಮಾಫಿಯ ರಾಜ್ಯದಲ್ಲಿದೆ. ’ಧಾರ್ಮಿಕ ಅಪವಿತ್ರತೆ’ ವಿವಾದಗಳು ರಾಜ್ಯದಲ್ಲಿವೆ. ಇದನ್ನು ಆಪ್ ಅಡ್ರೆಸ್ ಮಾಡಬೇಕು. ಜೊತೆಗೆ ಅಭಿವೃದ್ಧಿ ಕೆಲಸಗಳಿಗೆ, ಜನ ಕಲ್ಯಾಣಗಳಿಗೆ ಹಣ ಕೂಡಿಡಬೇಕಾಗಿದೆ. ಈ ಹಿಂದೆ ದೆಹಲಿಯಲ್ಲಿ ಪ್ರಮುಖ ಸಮಸ್ಯೆಗಳು ಎದುರಾದಾಗ ಅರವಿಂದ್ ಕೇಜ್ರಿವಾಲ್ ವಿಮುಖರಾಗಿದ್ದರು. ದೆಹಲಿ ಗಲಭೆ ನಡೆದಾಗ ಪೊಲೀಸರು ನಮ್ಮ ಕೈಯಲ್ಲಿಲ್ಲ ಎಂದು ಜಾರಿಕೊಂಡರು. ಕೊರೊನಾ ಸಾಂಕ್ರಾಮಿಕ ಹರಡಿದಾಗಲೂ ಕೇಂದ್ರ ಆಕ್ಸಿಜನ್ ಕೊಡುತ್ತಿಲ್ಲ ಎಂದು ದೂರುತ್ತಿದ್ದರು. ಅದು ಪಂಜಾಬ್‌ನಲ್ಲಿ ನಡೆಯುವುದಿಲ್ಲ. ಅದಕ್ಕಾಗಿ ಆಪ್ ಹಣ ಸಂಗ್ರಹಣೆ ಬಗ್ಗೆ ಅಧ್ಯಯನ ಮಾಡಬೇಕು. ಆ ರೀತಿ ಯೋಚಿಸುವುದು ಆಪ್‌ನ ಜವಾಬ್ದಾರಿಯಾಗಿದೆ. ಒಂದು ಸಣ್ಣ ಉದಾಹರಣೆಯೆಂದರೆ ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಗೋಧಿ ಬೆಲೆ ಜಾಗತಿಕವಾಗಿ 2-3 ಪಟ್ಟು ಹೆಚ್ಚಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಗೋಧಿ ಬೆಳೆಯುವ ಪಂಜಾಬ್‌ನಲ್ಲಿ ಇನ್ನೊಂದು ತಿಂಗಳಲ್ಲಿ ಗೋಧಿ ಕೊಯ್ಲು ಆಗಲಿದೆ. ಅದನ್ನು ನೇರವಾಗಿ ವಿದೇಶಗಳಿಗೆ ಗೋಧಿ ರಫ್ತು ಮಾಡಲು ಆಪ್ ಕೇಂದ್ರದೊಂದಿಗೆ ಕೆಲಸ ಮಾಡಬೇಕು. ಇದಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು. ಕೇಂದ್ರ ಆ ಹಣ ತಾನು ತೆಗೆದುಕೊಳ್ಳಲು ಮುಂದಾಗಬಾರದು. ಏಕೆಂದರೆ ನೋಟು ಅಮಾನ್ಯೀಕರಣ, ಜಿಎಸ್‌ಟಿ ಮತ್ತು ಕೊರೊನಾ ಸಾಂಕ್ರಾಮಿಕದಿಂದ ರಾಜ್ಯಗಳು ಹೊಡೆತ ತಿಂದಿವೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡದೇ ಸಹಕರಿಸಬೇಕು. ಇದರಿಂದ ಒಂದಷ್ಟು ದೊಡ್ಡ ಪ್ರಮಾಣದ ಹಣ ಪಂಜಾಬ್‌ಗೆ ಹರಿದು ಬರುತ್ತದೆ.

ದೆಹಲಿ ಮಾದರಿಯಲ್ಲಿ ಪಂಜಾಬ್‌ನಲ್ಲಿಯೂ ಉಚಿತ ವಿದ್ಯುತ್, ಕುಡಿಯುವ ನೀರು, ಉತ್ತಮ ಶಿಕ್ಷಣ ಮತ್ತು ಆರೋಗ್ಯ ನೀಡುತ್ತೇವೆ ಎಂದು ಆಪ್ ಹೇಳುತ್ತಿದೆ. ಇವೆಲ್ಲವೂ ದೆಹಲಿಯಂತಹ ನಗರ ಪ್ರದೇಶಗಳ ಹಕ್ಕೊತ್ತಾಯ. ಆದರೆ ಇದನ್ನು ಮಾಡಲು ಸ್ಥಳೀಯ ಸಂಸ್ಥೆಗಳಿರುತ್ತವೆ. ಮುನಿಸಿಪಾಲಿಟಿ ಮಾಡುವ ಕೆಲಸ ಇದು. ಒಂದು ಸರ್ಕಾರ, ಅಲ್ಲಿನ ಶಾಸಕರು ಮಾಡಬೇಕಾದ ಮೊದಲ ಕೆಲಸ ಜನಪರ ನೀತಿಗಳನ್ನು ರೂಪಿಸುವುದಾಗಿದೆ. ಯಾವ ವ್ಯವಹಾರ ಪಂಜಾಬ್‌ಗೆ ಒಳಿತು ಎಂದು ಫ್ರೇಮ್‌ವರ್ಕ್ ಸಿದ್ಧಪಡಿಸಬೇಕಿದೆ. ಸಾಮಾಜಿಕ ನ್ಯಾಯದತ್ತ ಗಮನ ಹರಿಸಬೇಕು. ಇನ್ನು ಬಡತನದಲ್ಲಿರುವ ಮತ್ತು ಅವಕಾಶವಂಚಿತ ಕುಟುಂಬಗಳ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಮತ್ತು ತಾರತಮ್ಯಗಳನ್ನು ನಿವಾರಿಸಲು ಯೋಜನೆ ರೂಪಿಸಬೇಕು. ಹಣ ಹೂಡುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಮೇಲೆತ್ತಲು ಶ್ರಮಿಸಬೇಕಾಗಿದೆ. ಏಕೆಂದರೆ ಪಂಜಾಬ್ ಕೃಷಿ ಪ್ರಧಾನ ರಾಜ್ಯವಾಗಿದೆ. ಜೊತೆಗೆ ರಾಜ್ಯದ 40 ಲಕ್ಷ ಯುವಜನರಿಗೆ ಸುಸ್ಥಿರ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ.
ಪಂಜಾಬ್ ಹಸಿರು ಕ್ರಾಂತಿಯ ಕಾರಣಕ್ಕೆ 50 ವರ್ಷಗಳ ಹಿಂದೆಯೇ ದೇಶದ ಬೇರೆ ಯಾವ ರಾಜ್ಯವೂ ಸಾಧಿಸದಷ್ಟು ಅಭಿವೃದ್ಧಿಯನ್ನು ಸಾಧಿಸಿತ್ತು. ಎಲ್ಲಾ ರಸ್ತೆಗಳು ಚೆನ್ನಾಗಿದ್ದವು, ನಾಲೆಗಳು
ಆಧುನೀಕರಣಗೊಂಡಿದ್ದವು. ಶಾಲೆ, ಆಸ್ಪತ್ರೆಗಳು ಪಕ್ಕಾ ಇದ್ದವು. ಆದರೆ ಹಸಿರು ಕ್ರಾಂತಿಯ
ದುಷ್ಪರಿಣಾಮಗಳು, ಭ್ರಷ್ಟಾಚಾರ-ದುರಾಡಳಿತ ಮತ್ತು ಮಿಲಿಟೆನ್ಸಿ ಸಮಸ್ಯೆಗಳು ರಾಜ್ಯವನ್ನು ಹಿಂದಕ್ಕೆ ನೂಕಿದವು. ಈಗ ಹಿಂದಿನಕ್ಕಿಂತಲೂ ಪಂಜಾಬ್‌ನಲ್ಲಿ ಹೆಚ್ಚಿನ ಬೆಳೆ ಬೆಳೆಯಲಾಗುತ್ತಿದೆ. ಪಂಜಾಬ್ ಸುಭಿಕ್ಷ ರಾಜ್ಯವಾಗಿತ್ತು. ಅದನ್ನು ಮರಳಿಸಿದರೆ ಸಾಕಾಗಿದೆ.
ಪಂಜಾಬ್ ಆಪ್ ಬಳಿ ಹೋಗಿಲ್ಲ, ಬದಲಿಗೆ ಆಪ್ ಪಂಜಾಬ್ ಬಳಿ ಬಂದಿದೆ ಎಂಬುದನ್ನು ಅದು ಮರೆಯಬಾರದು. ಆಡಳಿತ ಯಂತ್ರಾಂಗ ಹಳೆಯದೆ ಇದೆ. ಅದನ್ನು ಬದಲಾಯಿಸಲು ಬರುವುದಿಲ್ಲ. ಆದರೆ ಆಪ್ ಬ್ಯುರೋಕ್ರಾಟ್‌ಗಳ ಮನವೊಲಿಸಬೇಕಿದೆ. ಏಕೆಂದರೆ ಅಕಾಲಿ ದಳ ಮಾಡಿದ ಭ್ರಷ್ಟಾಚಾರವನ್ನೆ ಕಾಂಗ್ರೆಸ್ ಮುಂದುವರೆಸಿತು. ಹಾಗಾಗಿ ಆಪ್ ಒಳ್ಳೆಯ ಜನರನ್ನು, ಭ್ರಷ್ಟಾಚಾರಕ್ಕೆ ಬಲಿಯಾಗದ ಅಧಿಕಾರಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಕೂರಿಸಬೇಕಿದೆ. ರಾಜ್ಯದಲ್ಲಿನ ಮಾಫಿಯಾಗಳನ್ನು ನಿಯಂತ್ರಣಕ್ಕೆ ತರಬೇಕು. ಬೃಹತ್ ಬಹುಮತ ಯಾವಾಗಲು ಬೃಹತ್ ಸವಾಲುಗಳನ್ನು ಮುಂದಿಡುತ್ತದೆ ಎಂಬುದನ್ನು ಅದು ಮರೆಯಬಾರದು.
117 ಆಪ್ ಅಭ್ಯರ್ಥಿಗಳಲ್ಲಿ 38 ಜನ ಬೇರೆ ಪಕ್ಷಗಳಿಂದ ವಲಸೆ ಬಂದವರು. ಶೇ.51ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ರೆಕಾರ್ಡ್ ಹಿನ್ನೆಲೆಯವರು. ಇದನ್ನು ಆಪ್ ಆದಷ್ಟು ಬ್ಯಾಲೆನ್ಸ್ ಮಾಡಬೇಕಿದೆ. ಕೇಜ್ರಿವಾಲ್ ತಮ್ಮ ಪ್ರಣಾಳಿಕೆಯಲ್ಲಿ ಆತ್ಮನಿರ್ಭರ ಪದ ಬಳಸಿದ್ದಾರೆ. ಅದು ಬೇರೆ ಪಕ್ಷದ್ದು. ಅದು ಬೇಕಾಗಿಲ್ಲ. ಬದಲಿಗೆ ಪಂಜಾಬ್‌ಗೆ ಕೈಗಾರಿಕೆಗಳು ಬೇಕಾಗಿವೆ. ರೈತರ ಸಮಸ್ಯೆಗಳನ್ನ ಆಲಿಸಿ. ಅವರು ಬೇಕುಬೇಡಗಳನ್ನು ಪೂರೈಸಿ. ಜೊತೆಗೆ ಕೃಷಿಗೆ ಉತ್ತಮ ಮಾರುಕಟ್ಟೆ ಮತ್ತು ರೈತರ ಬೇಡಿಕೆಯಾದ ಎಂಎಸ್‌ಪಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ನೂತನ ಸರ್ಕಾರ ಯತ್ನಿಸಬೇಕಾಗಿದೆ.
ಕಾಂಗ್ರೆಸ್‌ಗೆ ಪಾಠಗಳು
ಕಾಂಗ್ರೆಸ್ ಈ ಚುನಾವಣೆಯಲ್ಲಿ ಕೇವಲ ಸೋತಿಲ್ಲ, ನೆಲಕಚ್ಚಿದೆ. ಅದರ ಹಳೆ ಲೆಕ್ಕಾಚಾರಗಳು ನಡೆಯುವುದಿಲ್ಲ ಎಂದು ಗೊತ್ತಾಗಿದೆ. ಪಂಜಾಬ್‌ನಲ್ಲಿ 31.9% ದಲಿತ ಮತಗಳನ್ನು ಸೆಳೆಯಲು ಚನ್ನಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ತರಲಾಯಿತು. ದಲಿತರು ಹಿಂದೆ ಕಾಂಗ್ರೆಸ್ ಮತ್ತು ಬಿಎಸ್‌ಪಿಗೆ ಮತ ಹಾಕುತ್ತಿದ್ದುದು ನಿಜ. ಆದರೆ ಈಗ ದಲಿತರು ನಿಂತಲ್ಲೆ ನಿಂತಿಲ್ಲ ಎಂಬುದನ್ನು ಈ ಫಲಿತಾಂಶ ತೋರಿಸುತ್ತದೆ.
ಸಮರ್ಪಕವಾಗಿ ಕೆಲಸ ಮಾಡದ ಅಮರಿಂದರ್ ಸಿಂಗ್‌ರವರನ್ನು ಕಾಂಗ್ರೆಸ್ 2019ರಲ್ಲಿಯೇ ಕೆಳಗಿಳಿಸಬೇಕಿತ್ತು. ಅವರ ಬದಲಿಗೆ ಸುನೀಲ್ ಜಾಖರ್ ಅವರನ್ನು ಆ ಸ್ಥಾನಕ್ಕೆ ತಂದಿದ್ದರೆ ಸಿದ್ದುವಿನ ಆಟಾಟೋಪಗಳಿಗೆ ಕನಿಷ್ಟ ಕಡಿವಾಣ ಹಾಕುವ ಸಾಮರ್ಥ್ಯ ಹಾಕಬಹುದಿತ್ತು. ಆದರೆ ಆಗಲಿಲ್ಲ. ಅಮರಿಂದರ್ ಚುನಾವಣೆಗೆ ಕೇವಲ 3 ತಿಂಗಳು ಬಾಕಿ ಇರುವಾಗ ಹೊಸ ಪಕ್ಷ ಕಟ್ಟಿ ಕಾಂಗ್ರೆಸ್‌ಗೆ ಬೆದರಿಕೆಯಾದರು. ತಮ್ಮ ಅಹಂಕಾರಕ್ಕೆ ಪೆಟ್ಟು ತಿಂದ ಅವರು ತಾನು ಮುಳುಗಿ, ಕಾಂಗ್ರೆಸ್‌ಅನ್ನು ಮುಳುಗಿಸಿದರು. ಜೊತೆಗೆ ಬಿಜೆಪಿ 2 ಸೀಟು ಗೆಲ್ಲಲು ಅವಕಾಶ ನೀಡಿದರು.
ರಾಜ್ಯದಲ್ಲಿ ಮತ್ತು ದೇಶದಲ್ಲಿ ಕಾಂಗ್ರೆಸ್ ಕತೆ ಮುಗಿದಿದೆ. ಹಾಗಾಗಿ ಅದು ಒಂದು ಹೆಜ್ಜೆ ಹಿಂದೆ ಸರಿದು ಮಹಾಘಟಬಂಧನ್ ಕಟ್ಟಬೇಕು. ಬಿಜೆಪಿಯ ಭಾರೀ ಚುನಾವಣಾ ಯಂತ್ರಾಂಗದ ಮುಂದೆ ಅದೊಂದೆ ಕಾಂಗ್ರೆಸ್‌ಗೆ ಉಳಿದಿರುವ ದಾರಿ ಅದೊಂದೇ.
1980ರಲ್ಲಿ ಕಾಂಗ್ರೆಸ್ ಮೃದು ಹಿಂದುತ್ವ ತಂದಿತ್ತು. ಪಂಜಾಬ್‌ನಲ್ಲಿ ಹಿಂದೂಗಳು ಅಲ್ಪಸಂಖ್ಯಾತರರಾಗಿದ್ದಾರೆ. 60% ಸಿಖ್ ಮತ್ತು 40% ಹಿಂದುಗಳಿದ್ದರೂ ಇಲ್ಲಿ ಕೋಮು ಗಲಭೆಗಳು ನಡೆದಿಲ್ಲ. ಮುಂದೆಯೂ ನಡೆಯದಂತೆ ನೋಡಿಕೊಳ್ಳಬೇಕಿರುವ ಜವಾಬ್ದಾರಿ ಆಪ್ ಮೇಲಿದೆ.
ರೈತ ಹೋರಾಟದ ಪರಿಣಾಮ
ಇನ್ನು ದೇಶದ ಗಮನ ಸೆಳೆದ ದೆಹಲಿ ರೈತ ಹೋರಾಟವನ್ನು ಮುನ್ನಡೆಸಿದ್ದು ಪಂಜಾಬ್ ರೈತರು. ಪಂಜಾಬ್‌ನಲ್ಲಿಯೂ ಒಂದೂವರೆ ವರ್ಷ ರೈತರು ಬೀದಿಯಲ್ಲಿ ಹೋರಾಡಿದರು. ಈ ಹೋರಾಟ ರೈತರಲ್ಲಿ ಹೊಸ ರಾಜಕೀಯ ಪ್ರಜ್ಞೆಯನ್ನು ಮತ್ತು ಸ್ವಾಭಿಮಾನವನ್ನು ಮೂಡಿಸಿದೆ. ಸಂಯುಕ್ತ ಕಿಸಾನ್ ಮೋರ್ಚಾದ ಕೆಲ ರೈತ ಸಂಘಟನೆಗಳು ತಮ್ಮದೇ ಆದ ಸಂಯುಕ್ತ ಸಂಘರ್ಷ ಮೋರ್ಚಾ ಎಂಬ ರಾಜಕೀಯ ಪಕ್ಷವನ್ನು ಚುನಾವಣೆಗೆ ಎರಡು ತಿಂಗಳು ಇದೆ ಅನ್ನುವಾಗ ಸ್ಥಾಪಿಸಿದರು. ಆದರೆ ಅದನ್ನು ಎಸ್‌ಕೆಎಂ ಮಾನ್ಯ ಮಾಡಲಿಲ್ಲ ಮಾತ್ರವಲ್ಲ ಅದರಿಂದ ಅಂತರ ಕಾಯ್ದುಕೊಂಡಿತು. ಹಾಗಾಗಿ ಆ ಪಕ್ಷ ಗಮನ ಸೆಳೆಯಲು ವಿಫಲವಾಯಿತು. ಅದು ಬಿಟ್ಟಂತೆ ರೈತರು ಸಹ ಅಕಾಲಿ ದಳ ಮತ್ತು ಕಾಂಗ್ರೆಸ್‌ನಿಂದ ಬೇಸತ್ತಿದ್ದರು. ಅವರೆಲ್ಲರೂ ಆಪ್ ಕೈ ಹಿಡಿದಿರುವುದು ಎದ್ದು ಕಾಣುತ್ತಿದೆ.
ಕೇಜ್ರಿವಾಲ್ ದ್ವಂದ್ವಗಳು
ನರೇಂದ್ರ ಮೋದಿ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದ 3 ವಿವಾದಾತ್ಮಕ ಕೃಷಿ ಕಾಯ್ದೆಗಳಲ್ಲಿ ಒಂದು ಕೃಷಿ ಕಾಯ್ದೆಯನ್ನು ಅಂಗೀಕರಿಸಿದ ಮೊದಲ ರಾಜ್ಯ ದೆಹಲಿಯಾಗಿತ್ತು. ನಂತರ ಕೇಜ್ರಿವಾಲ್ ಅದನ್ನು ವಾಪಸ್ ಪಡೆದರು. ಇನ್ನು ಕೃಷಿ ತ್ಯಾಜ್ಯ ಸುಡುವುದರಿಂದಲೇ ದೆಹಲಿಯ ವಾಯುಮಾಲಿನ್ಯ ಹೆಚ್ಚಾಗಲು ಕಾರಣ ಎಂದು ಅರವಿಂದ್ ಕೇಜ್ರಿವಾಲ್ ಹೇಳುತ್ತಾರೆ. ಆದರೆ ಪಂಜಾಬ್‌ಗೆ ಕಾಲಿಟ್ಟಾಗ ಅದನ್ನು ಮರೆತುಬಿಡುತ್ತಾರೆ. ಪಂಜಾಬ್‌ನ ನದಿ ನೀರು ಅಲ್ಲಿನ ಜನರಿಗೆ ಮಾತ್ರ ಎಂದು ಪಂಜಾಬ್‌ನಲ್ಲಿ ಹೇಳುತ್ತಾರೆ. ಆದರೆ ದೆಹಲಿಯ ಅವರ ವಕೀಲರು ದೆಹಲಿಗೆ ಪಂಜಾಬ್ ನದಿಗಳಿಂದ ನೀರು ಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಾರೆ. ಆರ್ಟಿಕಲ್ 370 ರದ್ದತಿ ವಿಷಯವಾಗಿ ಅವರಿಗೆ ಸ್ಪಷ್ಟತೆಯಿಲ್ಲ. ಇವುಗಳನ್ನು ಸಮರ್ಪಕವಾಗಿ ತಿದ್ದುಕೊಂಡಲ್ಲಿ ಮಾತ್ರ ಪಂಜಾಬ್ ಆಪ್ ಪಾಲಿಗೆ ಉಳಿಯುತ್ತದೆ. ಇಲ್ಲದಿದ್ದಲ್ಲಿ ಜನ ಆಪ್ ಅನ್ನು ತಿರಸ್ಕರಿಸುವುದರಲ್ಲಿ ಸಂದೇಹವಿಲ್ಲ.
ನಿರೂಪಣೆ: ಮುತ್ತುರಾಜು

ಅಮನ್‌ದೀಪ್ ಸಂಧು
ಮೂಲತಃ ಪಂಜಾಬ್‌ನವರಾದ ಅಮನ್‌ದೀಪ್ ಸಂಧು ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ದೆಹಲಿ ರೈತ ಹೋರಾಟವನ್ನು ಹತ್ತಿರದಿಂದ ವರದಿ ಮಾಡಿದ ಅವರು “ಪಂಜಾಬ್: ಜರ್ನೀಸ್ ಥ್ರೂ ಫಾಲ್ಟ್ ಲೈನ್ಸ್” ಎಂಬ ಪುಸ್ತಕವನ್ನು ಬರೆದಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ನನ್ನ ವೈಯಕ್ತಿಕ ನಂಬರ್ ಆಗಿರಲಿದೆ: ಪಂಜಾಬ್ ಸಿಎಂ


