ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಮತ್ತು ಎಂಎಸ್‌ಪಿ ಖಾತ್ರಿಗೆ ಕಾನೂನು ಜಾರಿಗೊಳಿಸಲು ಆಗ್ರಹಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದು ಯಶಸ್ವಿಯಾದ ಐತಿಹಾಸಿಕ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ.
ಕನ್ನಡದ ಹೆಸರಾಂತ ನಿರ್ದೇಶಕ ಕೇಸರಿ ಹರವೂರವರು ಈ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿ ಕರ್ನಾಟಕ ಹಲವು ಕಡೆಗಳಲ್ಲಿ ಪ್ರದರ್ಶನ ಮತ್ತು ಚರ್ಚೆ ನಡೆಸಿದ್ದರು. ಇದೀಗ ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶದಿಂದ https://filmshow.co.in ಆನ್‌ಲೈನ್ ವೇದಿಕೆಯಲ್ಲಿ ಚಿತ್ರ ಬಿಡುಗಡೆ ಮಾಡಲಾಗಿದೆ.
“ಕಿಸಾನ್ ಸತ್ಯಾಗ್ರಹ ಚಿತ್ರವನ್ನು ಈಗ ನಮ್ಮದೇ ಜಾಲತಾಣದಲ್ಲೂ ನೋಡಬಹುದು. ಸಮುದಾಯ ಪ್ರದರ್ಶನಗಳು ವಿರಳವಾಗುತ್ತಿರುವ ಈ ಡಿಜಿಟಲ್ ಕಾಲಕ್ಕೆ ಹೊಂದಿಕೊಂಡು ಆಸಕ್ತರೆಲ್ಲರಿಗೂ ಈ ಚಿತ್ರವನ್ನು ಸಾಧ್ಯವಾದಷ್ಟು ತಲುಪಿಸಬೇಕು ಎನ್ನುವ ಉದ್ದೇಶದಿಂದ ಈ ಪ್ರಯತ್ನ ಮಾಡಿದ್ದೇವೆ. ನಿಮ್ಮ ನಿಮ್ಮ ಅನುಕೂಲದ ಸಮಯದಲ್ಲಿ ಒಂದು ಸಣ್ಣ ದೇಣಿಗೆ ಕೊಟ್ಟು ಈ ಚಿತ್ರವನ್ನು ನೋಡಬಹುದು. ಕನ್ನಡ ಅಥವಾ ಇಂಗ್ಲಿಷ್ ಅವತರಣಿಕೆಯನ್ನು ಆಯ್ದುಕೊಳ್ಳಬಹುದು” ಎಂದು ಕೇಸರಿ ಹರವೂರವರು ತಿಳಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಗಳ ಹಿನ್ನೆಲೆಯಲ್ಲಿ ಚಳವಳಿಗಳು ಮತ್ತು ಚುನಾವಣೆಗಳು
ಕೇಸರಿ ಹರವೂರವರ ‘ಭೂಮಿಗೀತ’ ಚಿತ್ರ ಯಶಸ್ಸು ಗಳಿಸಿ ಚರ್ಚೆ ಹುಟ್ಟುಹಾಕಿತ್ತು. ಆನಂತರ ಅಘನಾಶಿನಿ ಮತ್ತು ಮಕ್ಕಳು, ನದಿ ಮತ್ತು ನಗರ ಕಣಿವೆ ಎಂಬ ಪರಿಸರ ಕಾಳಜಿಯ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ ಹೆಸರು ಗಳಿಸಿದ್ದರು. 2019 ರಲ್ಲಿ ರೈತ ಸಂಘದ ಪುಟ್ಟಣ್ಣಯ್ಯ ಎಂ ಸಾಕ್ಷ್ಯ ಚಿತ್ರ ಸಹ ನಿರ್ಮಿಸಿದ್ದಾರೆ.
‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿಯೂ ನೋಡಬಹುದು. ಕೇವಲ 99ರೂ ಪಾವತಿಸಿದರೆ ಈ ಸಾಕ್ಷ್ಯಚಿತ್ರವನ್ನು ಕುಟುಂಬ, ಸ್ನೇಹಿತರ ಸಮೇತ ನೋಡಬಹುದಾಗಿದೆ. ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.


