ಭ್ರಷ್ಟಾಚಾರ ವಿರೋಧಿ ಆಂದೋಲನದ ಕೂಸಾಗಿ ಹುಟ್ಟಿದ್ದು ಆಮ್ ಆದ್ಮಿ ಪಕ್ಷ. ಆದರೆ ಭ್ರಷ್ಟಾಚಾರ ನಿರ್ಮೂಲನೆಗಿಂತ ಅದು ಗಮನ ಸೆಳೆದಿದ್ದು ಉಚಿತ ಶಿಕ್ಷಣ, ಆರೋಗ್ಯ, ವಿದ್ಯುತ್, ಕುಡಿಯುವ ನೀರು ನೀಡುವ ಜನಪರ ಕಲ್ಯಾಣ ಕಾರ್ಯಕ್ರಮಗಳಿಂದ. ದೆಹಲಿಯಲ್ಲಿ ಎರಡು ಬಾರಿ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಆಪ್ ಪಕ್ಕದ ಪಂಜಾಬ್‌ಗೂ ದಾಪುಗಾಲಿಟ್ಟು ಸರ್ಕಾರ ರಚಿಸಿದೆ. ದೇಶದಲ್ಲಿ ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಹಿಡಿದ ಮೂರನೇ ಪಕ್ಷ ಅದಾಗಿದೆ. ಅಲ್ಲಿಗೆ ರಾಷ್ಟ್ರದಾದ್ಯಂತ ಪಕ್ಷ ವಿಸ್ತರಣೆಯ ಕನಸು ಕಾಣುತ್ತಿರುವ ಅದಕ್ಕೆ ಗೋವಾ ವಿಧಾನಸಭೆಯಲ್ಲಿಯೂ ಇಬ್ಬರು ಶಾಸಕರು ಸಿಕ್ಕಿದ್ದಾರೆ. ಈ ವರ್ಷದ ಅಂತ್ಯಕ್ಕೆ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿರುವ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ ರಾಜ್ಯಗಳಲ್ಲಿ ಆಪ್ ನೆಲೆಯೂರಲು ಯತ್ನಿಸುತ್ತಿದೆ. ಆ ರಾಜ್ಯಗಳಲ್ಲಿ ಆಪ್ ಸೇರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಟೀಕೆಗಳು, ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಕೇರಳದಲ್ಲಿನ ಆಪ್ ನಡೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಕೇರಳದ ಕಿಟೆಕ್ಸ್ ಗ್ರೂಪ್ ಕಂಪನಿಯ ಟ್ವೆಂಟಿ ಟ್ವೆಂಟಿ ಎಂಬ ಬಂಡವಾಳಶಾಹಿ ಪಕ್ಷದೊಂದಿಗೆ ಮೈತ್ರಿ ಘೋಷಿಸಿರುವ ಆಪ್, ಪೀಪಲ್ಸ್ ವೆಲ್‌ಫೇರ್ ಅಲಯನ್ಸ್ (PWA) ಎಂಬ ಒಕ್ಕೂಟವನ್ನು ಹುಟ್ಟುಹಾಕಿದೆ. ಮೇ 15ರಂದು ಕೊಚ್ಚಿ ಬಳಿಯ ಕಿಜಕ್ಕಂಬಳಂನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಈ ವಿಷಯ ಘೋಷಿಸಿದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇನ್ನು ಮುಂದೆ ಕೇರಳದಲ್ಲಿ ನಾಲ್ಕು ಮೈತ್ರಿಕೂಟಗಳು (LDF, UDF, NDA, PWA) ಚುನಾವಣೆ ಎದುರಿಸುತ್ತವೆ ಎಂದಿದ್ದಾರೆ. ಕಿಟೆಕ್ಸ್ ಗ್ರೂಪ್ ಎಂಡಿ ಮತ್ತು ಟ್ವೆಂಟಿ 20 ಮುಖ್ಯ ಸಂಯೋಜಕ ಸಬು ಎಂ ಜಾಕೋಬ್‌ರವರನ್ನು ಶ್ಲಾಘಿಸಿರುವ ಕೇಜ್ರಿವಾಲ್, “ಅವರು ದೊಡ್ಡ ಉದ್ಯಮಿ. ಆದರೆ
ಸಣ್ಣ ಪಂಚಾಯತ್‌ನಲ್ಲಿ ಕೆಲಸ ಮಾಡಲು ನಿರ್ಧರಿಸಿದರು. ಪಂಚಾಯತ್‌ನ ಬಜೆಟ್ 36 ಲಕ್ಷ ರೂ ಕೊರತೆ ಅನುಭವಿಸುತ್ತಿತ್ತು. ಆದರೆ ಸಬು ಅದನ್ನು 14 ಕೋಟಿ ರೂ ಉಳಿತಾಯಕ್ಕೆ ತಂದಿದ್ದಾರೆ. ಮುಂದೆ ನಾವು ಒಟ್ಟಾಗಿ ಕೇರಳವನ್ನು ಪರಿವರ್ತಿಸುತ್ತೇವೆ” ಎಂದಿದ್ದಾರೆ.

ತಾನು ಕ್ರೋನಿ ಕ್ಯಾಪಿಟಲಿಸಂಗೆ ವಿರುದ್ಧ ಎಂದು ಘೋಷಿಸಿದ್ದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಈಗ ಕ್ಯಾಪಿಟಲಿಸ್ಟ್ ಪಕ್ಷದೊಂದಿಗೆ ಮೈತ್ರಿಗೆ ಮುಂದಾಗಿದ್ದು ಸರಿಯೇ? ಆ ಟ್ವೆಂಟಿ ಟ್ವೆಂಟಿ ಪಕ್ಷದ ನಿಲುವು ಮತ್ತು ಉದ್ಯಮ ಹಿತಾಸಕ್ತಿ ವಿವಾದದಲ್ಲಿರುವಾಗ ಅದರೊಟ್ಟಿಗೆ ಕೈ ಜೋಡಿಸುವುದು ಯಾವ ಅರ್ಥ ನೀಡುತ್ತದೆ ಎಂಬ ಪ್ರಶ್ನೆಗಳು ಉದ್ಭವವಾಗಿವೆ.
ಏನಿದು ಕಿಟೆಕ್ಸ್ ಗ್ರೂಪ್? ಯಾವುದಿದು ಟ್ವೆಂಟಿ ಟ್ವೆಂಟಿ ಪಾರ್ಟಿ?
ಕಿಟೆಕ್ಸ್ ಗ್ರೂಪ್ ಎಂಬುದು ಒಂದು ಪ್ರಮುಖ ಗಾರ್ಮೆಂಟ್ ಕಂಪನಿಯಾಗಿದೆ. ಪ್ರಪಂಚದಲ್ಲೇ ಮಕ್ಕಳ ಉಡುಪುಗಳ ತಯಾರಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಸಿದ್ಧ ಉಡುಪು ರಫ್ತಿನಲ್ಲಿ ಹೆಸರುವಾಸಿಯಾಗಿರುವ ಈ ಕಂಪನಿಯು ವಾಲ್‌ಮಾರ್ಟ್ ಸೇರಿದಂತೆ ಹಲವು ದೈತ್ಯ ಕಂಪನಿಗಳನ್ನು ತನ್ನ ಗಿರಾಕಿಗಳನ್ನಾಗಿ ಹೊಂದಿದೆ. ಇದನ್ನು 1960ರ ದಶಕದಲ್ಲಿ ದಿವಂಗತ ಎಂ.ಸಿ ಜಾಕೋಬ್ ಸ್ಥಾಪಿಸಿದರು. ಇದು ಕೊಚ್ಚಿ ಬಳಿಯ ಕಿಜಕ್ಕಂಬಳಂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತನ್ನ ಗಾರ್ಮೆಂಟ್ ಕಾರ್ಖಾನೆಯನ್ನು ಆರಂಭಿಸಿದೆ. ಅಲ್ಲಿ ಸುಮಾರು 10,000 ಕಾರ್ಮಿಕರಿದ್ದು ಬಹುತೇಕರು ಇತರೆ ರಾಜ್ಯದವರು ಎನ್ನಲಾಗಿದೆ.
ಈ ಕಂಪನಿಯು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ (CSR) ಭಾಗವಾಗಿ ಟ್ವೆಂಟಿ 20 ಎಂಬ ರಾಜಕೀಯ ಪಕ್ಷವನ್ನು 2012ರಲ್ಲಿ ಸ್ಥಾಪಿಸಿತು. ತನ್ನ ಕೇಂದ್ರ ಕಚೇರಿ ಹೊಂದಿರುವ ಕಿಜಕ್ಕಂಬಳಂನಲ್ಲಿ ಗ್ರಾಮ ಪಂಚಾಯ್ತಿಯ 19 ವಾರ್ಡ್‌ಗಳಲ್ಲಿ 17ಅನ್ನು ಗೆದ್ದು ಪಂಚಾಯತ್‌ನಲ್ಲಿ ಹಿಡಿತ ಸಾಧಿಸಿತು. ಮುಂದೆ ಪಕ್ಷವು ಎರ್ನಾಕುಲಂ ಜಿಲ್ಲೆಯ ನಾಲ್ಕು ಗ್ರಾಮ ಪಂಚಾಯ್ತಿಗಳಲ್ಲಿ ಅಧಿಕಾರ ಹಿಡಿದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
2021ರಲ್ಲಿ ಪಕ್ಷವು ಕೇರಳ ವಿಧಾನಸಭಾ ಚುನಾವಣೆಗೆ ಪಾದಾರ್ಪಣೆ ಮಾಡಿತು. ಎರ್ನಾಕುಲಂನ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಿತು. ಗೆಲುವು ಕಾಣದಾದರೂ ಟ್ವೆಂಟಿ20 ಪಕ್ಷ ತಾನು ಸ್ಪರ್ಧಿಸಿದ್ದ ಎಂಟು ಕ್ಷೇತ್ರಗಳ ಪೈಕಿ ಆರರಲ್ಲಿ ಮೂರನೇ ಸ್ಥಾನ ಪಡೆದು ಬಿಜೆಪಿಯನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದೆ. ಒಟ್ಟು 1,45,664 ಮತಗಳನ್ನು ಪಡೆದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ PWA ಮೈತ್ರಿಕೂಟ ಕಣಕ್ಕಿಳಿಯುವುದಾಗಿ ಘೋಷಿಸಿದೆ.
ಕಿಟೆಕ್ಸ್ ಗ್ರೂಪ್ ವರ್ಸಸ್ ಕೇರಳ ಸರ್ಕಾರ
ಹಿಂದೆ ಸಿಪಿಐ(ಎಂ) ಪಕ್ಷದ ಬಿ ಟೀಮ್ ಎಂಬ ಆರೋಪ ಎದುರಿಸುತ್ತಿದ್ದ ಟ್ವೆಂಟಿ ಟ್ವೆಂಟಿ ಪಾರ್ಟಿ ಮತ್ತು ಕಿಟೆಕ್ಸ್ ಗ್ರೂಪ್ ಕಳೆದೊಂದು ವರ್ಷದಿಂದ ಕೇರಳ ಸರ್ಕಾರದ ಕಟು ಟೀಕಾಕಾರನಾಗಿ ಬದಲಾಗಿದೆ. “ಸರ್ಕಾರ ರಾಜಕೀಯ ಪ್ರೇರಿತವಾಗಿ ಕಂಪನಿ, ಗಾರ್ಮೆಂಟ್ಸ್ ಮೇಲೆ ತಪಾಸಣೆ ನಡೆಸುತ್ತಿದೆ. ಇದುವರೆಗೂ 11 ಬಾರಿ ದಾಳಿ ಮಾಡಿ ಕಿರುಕುಳ ನೀಡಲಾಗಿದೆ” ಎಂದು ಜಾಕೋಬ್ ಆರೋಪಿಸಿದ್ದರು. ಕಳೆದ ವರ್ಷ ಜುಲೈನಲ್ಲಿ, “ನನ್ನದೆ ತವರು ರಾಜ್ಯದಲ್ಲಿ ಒಂದು ರೂಪಾಯಿ ಹೂಡಿಕೆ ಮಾಡಲು ಸಹ ತನ್ನ ಆತ್ಮಸಾಕ್ಷಿ ಒಪ್ಪಲಿಲ್ಲ” ಎಂದು ಅವರು ಹೇಳಿಕೆ ನೀಡಿದ್ದರು. ಕಂಪನಿಯು 2020ರಲ್ಲಿ ಕೇರಳದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಮೀಸಲಿಟ್ಟಿದ್ದ ರೂ 3,500 ಕೋಟಿ ಹೂಡಿಕೆಯನ್ನು ಹಿಂತೆಗೆದುಕೊಂಡಿತು ಮತ್ತು ತೆಲಂಗಾಣದಲ್ಲಿ 1000 ರೂ ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿತು.
ಜಾಕೋಬ್ ಮೇ 15ರಂದು ಮತ್ತೊಮ್ಮೆ ಆಡಳಿತಾರೂಢ ಸಿಪಿಐ (ಎಂ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ತಿರುವನಂತಪುರಂನಿಂದ ಕಾಸರಗೋಡಿಗೆ ಸಂಪರ್ಕ ಕಲ್ಪಿಸುವ ಕೆ-ರೈಲು ಯೋಜನೆಯು ಕೇರಳವನ್ನು ಕೊಲ್ಲುತ್ತದೆ ಎಂದು ಆರೋಪಿಸಿದ್ದರು. “ರಾಜ್ಯ ಸರ್ಕಾರವು ಕೊಚ್ಚಿ ಮೆಟ್ರೊ ಮತ್ತು ಸಾರಿಗೆ ಬಸ್ ಅನ್ನು ಲಾಭದಾಯಕವಾಗಿ ನಡೆಸಲಾಗುತ್ತಿಲ್ಲ. ಇನ್ನು 62,000 ಕೋಟಿ ರೂಗಳ ಕೆ-ರೈಲು ಯೋಜನೆಯನ್ನು ಯಶಸ್ವಿಗೊಳಿಸುವುದೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಸಿಎಂ ಪಿಣರಾಯಿ ವಿಜಯನ್‌ರವರನ್ನು ಗುರಿಯಾಗಿಸಿದ ಅವರು, “ಎಲ್‌ಡಿಎಫ್‌ನ ಮೊದಲ ಅವಧಿಯ ಸರ್ಕಾರದಲ್ಲಿ 35 ರಾಜಕೀಯ ಕೊಲೆಗಳಾಗಿವೆ. ಎರಡನೇ ಅವಧಿಯಲ್ಲಿ 11 ಕೊಲೆಗಳಾಗಿವೆ. ನಮ್ಮ ಪಕ್ಷದ ದೀಪುವನ್ನು ಸಹ ಕೊಂದು ಹಾಕಿದ್ದಾರೆ. ಈ ಸರ್ಕಾರದ ಅಡಿಯಲ್ಲಿ ಬಡವರು ಬಡವರಾಗಿ, ಶ್ರೀಮಂತರು ಶ್ರೀಮಂತರಾಗಿಯೇ ಉಳಿದಿದ್ದಾರೆ. ಸರ್ಕಾರದ ಸಾಲ ಹೆಚ್ಚಾಗಿದೆ, ಪರಿಸ್ಥಿತಿ ಶ್ರೀಲಂಕಾಕ್ಕಿಂತ ಹೀನಾಯವಾಗಿದೆ ಎಂದು ಆರೋಪಿಸಿದ್ದಾರೆ.
structural corruption
ಯಾವುದೇ ಸರ್ಕಾರಿ ಕೆಲಸಗಳನ್ನು ಮಾಡಿಕೊಡಲು ಲಂಚ ಪಡೆಯುವುದು, ಕಾಮಗಾರಿಗಳಲ್ಲಿ ಹಣ ಹೊಡೆದು ಭ್ರಷ್ಟಾಚಾರ ಮಾಡುವುದು ಜನರ ಕಣ್ಣಿಗೆ ಕಾಣುತ್ತದೆ ಮತ್ತು ಹೆಚ್ಚಿನ ಟೀಕೆಗೆ ಒಳಗಾಗುತ್ತದೆ. ಆದರೆ ಬೃಹತ್ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವುದಕ್ಕಾಗಿ ಕಾನೂನುಗಳನ್ನು, ನೀತಿ ನಿಯಮಗಳನ್ನು ಬದಲಿಸುವುದು structural corruption ಆಗಿದೆ. ಇಂತಹ ಲಕ್ಷಾಂತರ ಕೋಟಿ ರೂಗಳ ಭ್ರಷ್ಟಾಚಾರ ನಮ್ಮ ದೇಶದಲ್ಲಿ ನಡೆದಿದೆ. ಇದು ನೇರ ಕಣ್ಣಿಗೆ ಕಾಣುವುದಿಲ್ಲ ಮತ್ತು ತೀವ್ರ ಟೀಕೆಗೆ ಒಳಪಡುವುದಿಲ್ಲ. ಈಗ ಕೇರಳದಲ್ಲಿ ಟ್ವೆಂಟಿ ಟ್ವೆಂಟಿ ಪಾರ್ಟಿ ಮಾಡುತ್ತಿರುವುದು structural corruption ಆಗಿದೆ. ಅಂದರೆ ಯಾವುದೇ ಕಾರ್ಖಾನೆಗಳನ್ನು ತೆರೆಯಬೇಕಾದರೆ ಮೊದಲು ಅಲ್ಲಿನ ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯ್ತಿ / ಮುನಿಸಿಪಾಲಿಟಿಗಳಲ್ಲಿ ಅನುಮತಿ ಪಡೆಯಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಒಪ್ಪಿಗೆ ಬೇಕು. ಇದೆಲ್ಲಾ ಅಷ್ಟು ಸುಲಭಕ್ಕೆ ಸಿಗುವುದಿಲ್ಲ. ಸಾಕಷ್ಟು ಲಂಚ ಕೊಡಬೇಕು. ಆದರೆ ಅಲ್ಲಿ ನಿಮ್ಮದೆ ಪಕ್ಷ ಅಧಿಕಾರದಲ್ಲಿದ್ದರೆ? ಯಾವುದೇ ತಂಟೆ ಇರುವುದಿಲ್ಲ ಅಲ್ಲವೇ? ಹಾಗಾಗಿಯೇ ಟ್ವೆಂಟಿ ಟ್ವೆಂಟಿ ಪಾರ್ಟಿ ಮೊದಲು ಗ್ರಾಮ ಪಂಚಾಯ್ತಿಯ ಅಧಿಕಾರ ಹಿಡಿದಿತ್ತು.
2000ನೇ ಇಸವಿಯಲ್ಲಿ ಕೋಕಾ ಕೋಲೊ ಕಂಪನಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪ್ಲಾಚಿಮಾಡ ಎಂಬ ಗ್ರಾಮದಲ್ಲಿ ತನ್ನ ಘಟಕ ಆರಂಭಿಸಿತು. ಅದು ದಿನವೊಂದಕ್ಕೆ 5 ಲಕ್ಷ ಲೀಟರ್ ನೀರು ಬಳಕೆ ಮಾಡುತ್ತಿತ್ತು. ಕೆಲವೇ ತಿಂಗಳುಗಳಲ್ಲಿ ಅಲ್ಲಿನ ಜನರು ಅಸ್ವಸ್ಥರಾಗತೊಡಗಿದರು. ಅವರ ಕುಡಿಯುವ ನೀರು ಕಲುಷಿತವಾಗಿತ್ತು. ಕಾರ್ಖಾನೆಯ ರಸಾಯನಿಕ ವಿಷಪೂರಿತ ನೀರು ಸುತ್ತಲಿನ ನೀರಿನ ಮೂಲಗಳನ್ನು ಸೇರುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ಅಲ್ಲದೆ ಕಾರ್ಖಾನೆಯ ವಿಷಪೂರಿತ ತ್ಯಾಜ್ಯ ರೈತರ ಜಮೀನು ಸೇರುತ್ತಿತ್ತು. ಅಲ್ಲಿನ ಸ್ಥಳೀಯರು ಮತ್ತು ಆದಿವಾಸಿಗಳು ಅದರ ವಿರುದ್ಧ ಬೃಹತ್ ಹೋರಾಟ ನಡೆಸಿದ್ದರು. ಅದು ವರ್ಷಗಳ ಕಾಲ ಮುಂದುವರೆದು ಕೊನೆಗೆ 2004ರಲ್ಲಿ ಕೋಕಾ ಕೋಲೊ ಕಂಪನಿ ಮುಚ್ಚಬೇಕಾಯ್ತಿ. ಅಲ್ಲಿನ ಸ್ಥಳೀಯ ಜನರಿಗೆ
216 ಕೋಟಿ ಪರಿಹಾರ ನೀಡಬೇಕೆಂದು ಸಮಿತಿಯೊಂದು ಶಿಫಾರಸ್ಸು ಮಾಡಿತ್ತು.
ಈ ಪ್ರಕರಣದಿಂದ ದುರಾಲೋಚನೆಯ ಪಾಠ ಕಲಿತಿರುವ ಕಿಟೆಕ್ಸ್ ಕಂಪನಿಯು ತನ್ನದೇ ಆದ ಟ್ವೆಂಟಿ ಟ್ವೆಂಟಿ ಎಂಬ ಪಕ್ಷವನ್ನು ಸ್ಥಾಪಿಸಿದೆ. ಆ ಮೂಲಕ ಕೆಲ ಗ್ರಾಮ ಪಂಚಾಯ್ತಿಗಳಲ್ಲಿ ಆಡಳಿತ ಹಿಡಿದಿದ್ದು, ಅಲ್ಲಿಯೇ ತನ್ನ ಗಾರ್ಮೆಂಟ್ ಫ್ಯಾಕ್ಟರಿಗಳನ್ನು ಸ್ಥಾಪಿಸಿದೆ. ಆ ಮೂಲಕ ತನ್ನ ಕಾರ್ಖಾನೆಯ ಕಾರ್ಮಿಕರ ಹಕ್ಕುಗಳು, ಪರಿಸರ ಸಂರಕ್ಷಣೆ ಮತ್ತು ತೆರಿಗೆ ವಿನಾಯಿತಿಯಂತಹ ಹಲವು ವಿಷಯಗಳಲ್ಲಿ ತನಗೆ ಅನುಕೂಲವಾಗುವಂತಹ ನಿಯಮಗಳನ್ನು ರೂಪಿಸಿಕೊಂಡಿದೆ. ಅದರ ತಪ್ಪುಗಳನ್ನು ಪ್ರಶ್ನಿಸಿದ ಸರ್ಕಾರದ ವಿರುದ್ಧ ಕಿಡಿಕಾರಿದೆ ಮಾತ್ರವಲ್ಲ ತನ್ನ ಹೂಡಿಕೆ ಹಿಂತೆಗೆದುಕೊಳ್ಳುತ್ತೇನೆ, ಬೇರೆ ರಾಜ್ಯದಲ್ಲಿ ಹೂಡಿಕೆ ಮಾಡುತ್ತೇನೆ ಎಂಬ ಬ್ಲಾಕ್‌ಮೇಲ್ ಮಾಡುತ್ತಿದೆ. ಅದಕ್ಕೆ ಸರ್ಕಾರ ಬಗ್ಗದಿದ್ದಾಗ ಈಗ ಅದು ಒಂದು ಹೆಜ್ಜೆ ಮುಂದೆ ಹೋಗಿ ತಾನೇ ಸರ್ಕಾರ ರಚಿಸುತ್ತೇನೆ ಎಂಬ ಉಮೇದಿನಲ್ಲಿದೆ. ಇಂತಹ ಸಂದರ್ಭದಲ್ಲಿ ಅದರ ಕಣ್ಣಿಗೆ ಕಂಡ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಕಾರ್ಪೊರೆಟ್ ಆಮಿಷಕ್ಕೆ ಬಲಿಯಾದ ಅಧಿಕಾರಶಾಹಿ
1990ರ ನಂತರ ಭಾರತದಲ್ಲಿ ಈ ರೀತಿಯ ಅಧಿಕಾರಶಾಹಿಯಲ್ಲಿ (ಕಾರ್ಯಾಂಗ) ಭ್ರಷ್ಟಾಚಾರವೆಂಬುದು ಆರಂಭವಾಗಿದೆ. ಅದರಲ್ಲಿಯೂ ಪಿಪಿಪಿ (ಸರ್ಕಾರಿ ಖಾಸಗಿ ಸಹಭಾಗಿತ್ವ) ಜಾರಿಯಾದ ನಂತರ ಇದು ಹೆಚ್ಚಾಗಿದೆ. ಅದರಲ್ಲಿ ಖಾಸಗೀ ಬಂಡವಾಳದ ವಿಸ್ತರಣೆಯಾಗಿ ಅಧಿಕಾರಶಾಹಿಯನ್ನು ಬಳಸಿಕೊಳ್ಳಲಾಗುತ್ತಿದೆ. 1996ರಲ್ಲಿ ವಿದ್ಯುತ್ ಇಲಾಖೆಯಲ್ಲಿ ವಿದೇಶಿ ಬಂಡವಾಳ ನಿರ್ವಹಣಾ ಬೋರ್ಡ್ ಸೆಕ್ರೆಟರಿಯಾಗಿದ್ದ ಜಯಂತ್ ಮಾಥುರ್
ENRON ಕಂಪನಿ ಜೊತೆ ಹಲವಾರು ವ್ಯವಹಾರ ನಡೆಸಿದ್ದರು. ಆದರೆ ENRON ಕಂಪನಿ ಭಾರತಕ್ಕೆ ಬಂದ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ENRON ಕಂಪನಿಯ ಗೌರ್ನಮೆಂಟ್ ರಿಲೇಶನ್ ಆಫೀಸರ್
ಸೇರಿಕೊಂಡರು. ONGC, ಇಂಡಿಯನ್ ಆಯಿಲ್ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳಲ್ಲಿದ್ದ ಹಿರಿಯ ಅಧಿಕಾರಿಗಳು ತಾವು ಕೆಲಸ ಮಾಡುತ್ತಿದ್ದಾಗಲೇ ರಿಲೆಯನ್ಸ್‌ನಂತಹ ಕಂಪನಿಗಳಿಗೆ ಅನುಕೂಲಕರವಾದ ನೀತಿ-ನಿಯಮಗಳನ್ನು ಮಾಡಿ ನಂತರ ರಾಜೀನಾಮೆ ನೀಡಿ ರಿಲೆಯನ್ಸ್ ಕಂಪನಿ ಸೇರಿದ ನೂರಾರು ಉದಾಹರಣೆಗಳಿವೆ. ಅದೇ ರೀತಿಯಾಗಿ ಹಲವಾರು ವರ್ಷ ರಿಲಾಯನ್ಸ್ ಗ್ರೂಪ್ ಎಂಡಿಯಾಗಿದ್ದ ಪರಿಮಳ್ ನತ್ವಾನಿ ನಂತರ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಅಂದರೆ ಉದ್ಯಮಿಗಳೆ ಶಾಸನ ಮಾಡುವ ಸ್ಥಾನಗಳಿಗೆ ಬಂದು ಕುಳಿತಿದ್ದಾರೆ. ಕರ್ನಾಟಕದಲ್ಲಿ ನೈಸ್ ಕಂಪನಿಗೆ ಭೂಸ್ವಾಧೀನ ಸಂದರ್ಭದಲ್ಲಿ ಕಂದಾಯ ಇಲಾಖೆ ಸೆಕ್ರೆಟರಿಗಳಾಗಿದ್ದ ಪರಮಶಿವನ್, ಕ್ಯಾಪ್ಟನ್ ರಾಜರಾವ್ ಎಂಬುವವರು ಭೂಸ್ವಾಧೀನ ಮುಗಿದನಂತರ ಅದೇ ನೈಸ್ ಕಂಪನಿ ಸೇರಿದ್ದರು! ಈ ಎಲ್ಲಾ ಉದಾಹರಣೆಗಳು structural ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವ ಪ್ರಯತ್ನಗಳೇ ಆಗಿವೆ.
2014ರಲ್ಲಿ ಮೊದಲ ಬಾರಿಗೆ ಅರವಿಂದ್ ಕೇಜ್ರಿವಾಲ್ ದೆಹಲಿ ಸಿಎಂ ಆಗಿದ್ದಾಗ ಈ ರೀತಿಯ structural ಭ್ರಷ್ಟಾಚಾರವನ್ನು ನೇರಾನೇರ ವಿರೋಧಿಸಿದ್ದರು. ಕೆಜಿ-ಡಿ6 ಬೇಸಿನ್‌ನಲ್ಲಿ ತೈಲ ಗಣಿಗಳ ಹರಾಜಿನಲ್ಲಿ ರಿಲೆಯನ್ಸ್ ಕಂಪನಿಗೆ ಲಾಭವಾಗುವಂತೆ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿದ್ದರು. ಹಿಂದಿನ ಯುಪಿಎ ಸರ್ಕಾರದ ಮಂತ್ರಿಗಳು, ಅಧಿಕಾರಿಗಳು ಮತ್ತು ರಿಲಾಯನ್ಸ್ ಕಂಪನಿಯ ಮಾಲೀಕ ಮುಖೇಶ್ ಅಂಬಾನಿ ಮೇಲೆ ಎಫ್‌ಐಆರ್ ದಾಖಲಿಸುವಂತೆ ಎಸಿಬಿ ಅಧಿಕಾರಿಗಳಿಗೆ ಆದೇಶಿಸಿದ್ದರು. ಸರ್ಕಾರ ತೈಲ ಬೆಲೆ ಹೆಚ್ಚಿಸುವಂತೆ ಬ್ಲಾಕ್‌ಮೇಲ್ ಮಾಡಲು ಮುಖೇಶ್ ಅಂಬಾನಿ ಕೃತಕ ತೈಲ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಸಹ ಆರೋಪಿಸಿದ್ದರು. ಮುಂದುವರೆದು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಮುಖೇಶ್ ಅಂಬಾನಿಯ ಎರಡು ಮುಖಗಳು, ಅಂಬಾನಿಯೇ ದೇಶ ನಡೆಸುತ್ತಿದ್ದಾರೆ ಎಂಬ ಗಂಭೀರ ಟೀಕೆ ಮಾಡಿದ್ದರು.
ಆದರೆ 8 ವರ್ಷಗಳ ನಂತರ ಅದೇ ಕೇಜ್ರಿವಾಲ್ ಕೇರಳದಲ್ಲಿನ ಉದ್ಯಮಿ ಪಕ್ಷದೊಂದಿಗೆ ಮೈತ್ರಿ ಬೆಳೆಸುತ್ತಿದ್ದಾರೆ. ಆ ಉದ್ಯಮಿಪತಿಗಳನ್ನು ಹೊಗಳುತ್ತಿದ್ದಾರೆ. ಏಕೆ ಹೀಗಾದರು? ರಾಷ್ಟ್ರ ರಾಜಕಾರಣದ ಅಧಿಕಾರದ ಆಸೆ ಅವರನ್ನು ಈ ರೀತಿ ಮಾಡಿದೆಯೇ? ತಮ್ಮದು ಜನರ ಸರ್ಕಾರ, ಭ್ರಷ್ಟಾಚಾರದ ವಿರುದ್ಧದ ಸರ್ಕಾರ ಎಂದು ಅಬ್ಬರಿಸಿದ ಅವರು ಈಗ ಎಲ್ಲಾ ರಾಜಕೀಯ ಪಕ್ಷಗಳಂತೆ ತಮ್ಮದು ಸಹ ಒಂದು ಎಂದಾಗುತ್ತಿದ್ದಾರೆ. ಆಪ್ ಬಳಿ ಬಿಜೆಪಿ-ಸಂಘ ಪರಿವಾರದ ಕೋಮುವಾದಕ್ಕೆ ಉತ್ತರವಿಲ್ಲ. ಅದು ಜಾತೀಯತೆ-ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯದ ವಿರುದ್ಧ ಮಾತನಾಡುತ್ತಿಲ್ಲ ಎಂಬ ಆರೋಪಗಳ ನಡುವೆಯೆ ಈಗ ಅದು ಬಂಡವಾಳಶಾಹಿಗಳೊಂದಿಗೆ ಕೈ ಜೋಡಿಸಿದೆ. ಇಂತಹ ಆಪ್‌ನಿಂದ ಪರ್ಯಾಯ ರಾಜಕಾರಣ ನಿರೀಕ್ಷಿಸುವುದು ತಪ್ಪಾದೀತು ಅಲ್ಲವೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಜಿ.ರಾಮಕೃಷ್ಣ, ಲಂಕೇಶ್‌ರವರ ಜಾತಿ ಗೊತ್ತಿಲ್ಲ: ರೋಹಿತ್ ಚಕ್ರತೀರ್ಥ ಸಂದರ್ಶನ



ಕೆಜರಿವಾಲ್ ಗೆ ತಪ್ಪು ಕಂಡರೆ ಒಡಂಬಡಿಕೆಯನ್ನು ಹಿಂತೆಗೆಯಲು ಹೇಸಲಾರರು..ಆದ್ದರಿಂದ ಈಗಲೇ ಅವರು ತಪ್ಪಾಗಿ ಹೆಜ್ಜೆ ಇಟ್ಟಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯನ್ನು ದೂರುವುದು ಕೋಮುವಾದಿಗಳಿಗೆ ಬಲತರಿಸಬಲ್ಲದು.