Homeಪುಸ್ತಕ ವಿಮರ್ಶೆಹೊಸ ಪುಸ್ತಕದಿಂದ; ಗಿಬ್ರಾನ್‌ಗೆ ಈ ಲೌಕಿಕ ಜಗತ್ತಿನಲ್ಲಿ ಯಾವುದೂ ಅಲ್ಪವಲ್ಲ

ಹೊಸ ಪುಸ್ತಕದಿಂದ; ಗಿಬ್ರಾನ್‌ಗೆ ಈ ಲೌಕಿಕ ಜಗತ್ತಿನಲ್ಲಿ ಯಾವುದೂ ಅಲ್ಪವಲ್ಲ

- Advertisement -
- Advertisement -

ಖಲೀಲ್ ಗಿಬ್ರಾನನ ಜೀವನ ಚರಿತ್ರೆ ಬರೆಯಬೇಕು ಎನ್ನುವ ಯಾವ ಅಸಾಧಾರಣ ಬಯಕೆಯೂ ನನಗಿಲ್ಲ.
ನನಗೆ ಬರೆಯಬೇಕೆಂದಿರುವುದು ಗೆಳೆಯರ ನಡುವೆ ಗೆಳೆಯನಾಗಿ, ತನ್ನ ಸ್ಟುಡಿಯೋದಲ್ಲಿ ಪೆನ್ಸಿಲ್ ಹಿಡಿದು ಕವಿತೆಯೊಂದಿಗೆ, ಕುಂಚ ಹಿಡಿದು ಚಿತ್ರದೊಂದಿಗೆ ಕೆಲಸದಲ್ಲಿ ತಲ್ಲೀನನಾಗಿ, ದಣಿವನ್ನು ಅರಿಯದೆ ಕಣ್ಣುಮುಚ್ಚಿ ಬಿಡುವ ಕ್ಷಣದಲ್ಲಿ ಹಾಡೊಂದನ್ನು ಪೋಣಿಸುತ್ತಾ ನಗುತ್ತಿದ್ದವನ ಬಗ್ಗೆ. ಜೊತೆಯಲ್ಲಿ ಕೆಲಸ ಮಾಡುವವರ ಬರವಣಿಗೆಯ ಸೊಗಸನ್ನು ಕ್ಷಣಾರ್ಧದಲ್ಲಿ ಗ್ರಹಿಸಿ ಅದರ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದ, ಅವರು ತಮ್ಮ ಬರವಣಿಗೆಯಲ್ಲಿ ’ಅನಿವಾರ್ಯ ಸ್ಥಳದಲ್ಲಿ ಅನಿವಾರ್ಯ ಪದ’ ಬಳಸಲು ವಿಫಲರಾದಾಗ ಹಿಂಜರಿಯದೆ ಬೊಟ್ಟು ಮಾಡಿ ತೋರಿಸುತ್ತಿದ್ದ ಗಿಬ್ರಾನ್ ಬಗ್ಗೆ. ಅವನನ್ನು ಕುರಿತು ನನಗೆ ತಿಳಿದಷ್ಟು ಸರಳವಾಗಿ ಮತ್ತು ನೇರವಾಗಿ ಬರೆಯಲು ಬಯಸುತ್ತೇನೆ.

ಅವನ ಬಗ್ಗೆ ಸರಿಯಾಗಿ ಬರೆಯುವುದೆಂದರೆ ಅವನ ಬದುಕಿನ ಘಟನೆಗಳನ್ನು, ಸನ್ನಿವೇಶಗಳನ್ನು, ಸಾಧನೆಗಳನ್ನು ಅವು ಘಟಿಸಿದ ಕಾಲಾನುಕ್ರಮದಲ್ಲಿ ಬರೆಯುವುದಲ್ಲ. ಇವ್ಯಾವುದೂ ಗಿಬ್ರಾನ್ ಎನ್ನುವ ಪರಿಪೂರ್ಣ ಗ್ರಹಿಕೆಯ ಸತ್ಯವನ್ನು ಕಟ್ಟಿಕೊಡುವುದಿಲ್ಲ. ಹೆಸರಿಸಲಾಗದ ಅಪೂರ್ವ ಶಕ್ತಿಯೊಂದರ ಅಪರೂಪದ ಸಂಕೇತ ಆತ. ಆತನ ದನಿಯಲ್ಲಿ, ಇರುವಿಕೆಯಲ್ಲಿ ಕೇವಲ ಮನುಷ್ಯಮಾತ್ರ ಕ್ರಿಯೆಗಳೆದುರಲ್ಲಿ ಬೆರಗಾಗದಂತಹ ಶಕ್ತಿಯಿತ್ತು. ನಿಜ ಹೇಳಬೇಕೆಂದರೆ ಆತ ಎಂದೂ ಪೂರ್ಣವಾಗಿ, ಇಡಿಯಾಗಿ ಈ ಲೋಕಕ್ಕೆ ಸೇರಿದವನೇ ಆಗಿರಲಿಲ್ಲ. ಸಾಧಾರಣ ಮನುಷ್ಯರನ್ನು ನಿಯಂತ್ರಿಸುವ ಕಾರಣಗಳು ಮತ್ತು ನಿಯಮಗಳು ಅಸಾಧಾರಣ ಪ್ರತಿಭೆಗಳಿಗೆ ಅನ್ವಯವಾಗುವುದಿಲ್ಲ. ಗಿಬ್ರಾನನ ತಾಯಿ ಆತನ ಯೌವನದಲ್ಲಿ ಅವನನ್ನು ಕುರಿತು, ’ನನ್ನ ಮಗ ಮನಶಾಸ್ತ್ರದ ವಿಶ್ಲೇಷಣೆಯ ಆಚೆಗಿರುವವನು’ ಎಂದು ಹೇಳಿದ್ದಳು. ಇಂಥವನನ್ನು ಕಾಲದ ಮಾಪನದಲ್ಲಿ, ಪದಗಳಲ್ಲಿ ವಿಶ್ಲೇಷಣೆ ಮಾಡುವುದು ಹೇಗೆ? ಮಿದುಳು ಎಂದೂ ಕಂಡುಹಿಡಿಯಲಾಗದ ವಿಷಯವನ್ನು ಅವಳ ರಕ್ತ ಮತ್ತು ಉಸಿರು ಅತ್ಯಂತ ಸಹಜವಾಗಿ ಗ್ರಹಿಸಿತ್ತು. ಅದು ತಿಳಿವಳಿಕೆಯಲ್ಲ, ಅರಿವು.

ಒಮ್ಮೊಮ್ಮೆ ವರ್ತಮಾನದ ಕಾಲ ಮತ್ತು ದೇಶಕ್ಕೆ ದೂರವಾಗಿ ಮತ್ಯಾವುದೋ ಯೋಚನೆಯಲ್ಲಿ ದೀರ್ಘ ಸಮಯ ಮುಳುಗೆದ್ದ ಮೇಲೆ ಗಿಬ್ರಾನ್ ’ನನ್ನನ್ನು ಕ್ಷಮಿಸು, ಇಷ್ಟು ಸಮಯ ನಾನು ಇಲ್ಲಿರಲಿಲ್ಲ’ ಎನ್ನುತ್ತಿದ್ದ. ಅವನೊಂದಿಗೆ ದಿನಗಟ್ಟಲೆ, ಗಂಟೆಗಟ್ಟಲೆ ಜೊತೆಯಾಗಿರುತ್ತಿದ್ದವರು ತನ್ನಲ್ಲಿ ತಾನು ಒಳಸೇರಿಕೊಳ್ಳುವ ಆತನ ಈ ರೀತಿಗೆ ಒಗ್ಗಿಕೊಳ್ಳುತ್ತಿದ್ದರು ಮತ್ತು ಅದನ್ನು ಗೌರವಿಸುತ್ತಿದ್ದರು. ಅವನ ಕಾಲದೇಶಗಳಿಗೆ ಸೀಮೆಗಳೇ ಇರುತ್ತಿರಲಿಲ್ಲ. ಆಗಾಗ ಅವನನ್ನು ಆವರಿಸುತ್ತಿದ್ದ ಇಂತಹ ಮೌನದ ನಡುವೆ ಆತನ ಸಾನಿಧ್ಯದಲ್ಲಿ ಕೂರುವುದು ನಮ್ಮೊಳಗಿನದೇನನ್ನೋ ಉದ್ದೀಪಿಸುತ್ತಿತ್ತು. ಆಗ ಕೋಣೆಯಲ್ಲಿ ಉಂಟಾಗುತ್ತಿದ್ದ ಸ್ಪಂದನ ನಮ್ಮ ಅನುಭವಕ್ಕೂ ಗೋಚರವಾಗುವಂತೆ ತಾರಕಕ್ಕೇರಿ ಗಾಳಿಯಲ್ಲಿ ಅಲೌಕಿಕ ಭಾವನೆಯೊಂದು ಸಂಚರಿಸುತ್ತಿತ್ತು. ಅವನ ಆ ಅಲೌಕಿಕ ನೆಲೆಯನ್ನು ಭಂಗಪಡಿಸಬಾರದು ಎನ್ನುವ ಹೆದರಿಕೆಗೆ ಜೊತೆಯಲ್ಲಿರುವವರು ಉಸಿರನ್ನು ಬಿಗಿ ಹಿಡಿದುಕೊಳ್ಳುತ್ತಿದ್ದರು. ಆಗೆಲ್ಲಾ ವಾಸ್ತವಕ್ಕೆ ಹಿಂದಿರುಗುವ ಪ್ರಕ್ರಿಯೆ ಕೇವಲ ಸಂಕಲ್ಪ ಶಕ್ತಿಯ ಪ್ರಯತ್ನ ಎಂದೇ ಅನ್ನಿಸುತ್ತಿತ್ತು.

ಅವನ ಜೀವನದ ಕಡೆಯ ಏಳು ವರ್ಷಗಳ ಕಾಲ, ಆತನ ಅಂತ್ಯದವರೆಗೂ ಗಿಬ್ರಾನನನ್ನು ಒಬ್ಬ ಕವಿಯಾಗಿ, ಕಲಾವಿದನನ್ನಾಗಿ, ಆತ್ಮೀಯ ಮತ್ತು ಪ್ರೀತಿಪಾತ್ರ ಸ್ನೇಹಿತನನ್ನಾಗಿ ಕಾಣುವ ಸಂತಸ ಮತ್ತು ಸುಯೋಗ ನನಗೆ ಲಭಿಸಿತ್ತು. ಆ ಏಳು ವರ್ಷಗಳ ಸ್ನೇಹ ಮತ್ತು ನಾವಿಬ್ಬರೂ ಸೇರಿ ಜೊತೆಯಾಗಿ ಮಾಡಿದ ಕೆಲಸದಲ್ಲಿ – ಆತನೇ ಉದಾರ ಮನಸ್ಸಿನಿಂದ ಹೇಳುತ್ತಿದ್ದಂತೆ – ನಾವಿಬ್ಬರೂ ’ಸೌಂದರ್ಯದ ಹೆಸರಿನಲ್ಲಿ ಜೊತೆಸೇರಿ ಕವನ ಕಟ್ಟುತ್ತಿದ್ದ ಕವಿಗಳು’.

ಗಿಬ್ರಾನ್‌ಗೆ ಈ ಲೌಕಿಕ ಜಗತ್ತಿನಲ್ಲಿ ಯಾವುದೂ ಅಲ್ಪವಲ್ಲ, ಯಾವುದೂ ಕಾರಣವಿಲ್ಲದೆ ಘಟಿಸುವುದಿಲ್ಲ ಎನ್ನುವ ದೃಢವಾದ ನಂಬಿಕೆ ಇತ್ತು. ಆತ ಅದನ್ನು ’ಬದುಕಿನ ನಿರಂತರತೆ’ ಎಂದು ಕರೆಯುತ್ತಿದ್ದ. ಆತನ ಪ್ರಕಾರ ನಿರಂತರತೆ ಎಂದರೆ ಈಗಿನ ವರ್ತಮಾನ ಮತ್ತು ಇರುವಿಕೆಯ ಕಾಲಘಟ್ಟ ಎನ್ನುವ ಹಡಗು ಮಾನವ ಚೈತನ್ಯವನ್ನು ನಾಳೆಗಳಿಗೆ ಹೊತ್ತುಕೊಂಡೊಯ್ಯುವ ಪ್ರಕ್ರಿಯೆ. ಇದೆಲ್ಲವೂ ಬದುಕಿನ ವಿನ್ಯಾಸದಲ್ಲಿ, ಕಾಲದ ಅನಿವಾರ್ಯ ನೇಯ್ಗೆಯಲ್ಲಿ ಹೆಣೆದುಕೊಂಡಿರುತ್ತದೆ ಎಂದು ಅವನು ಹೇಳುತ್ತಿದ್ದ. ಅದರ ಪ್ರಕಾರವಾಗಿಯೇ 1923ರ ಶರತ್ಕಾಲದ ಒಂದು ಮಧ್ಯಾಹ್ನದಲ್ಲಿ ನ್ಯೂಯಾರ್ಕಿನ ಬೌರಿ ರಸ್ತೆಯ ಸೇಂಟ್ ಮಾರ್ಕ್ಸ್ ಚರ್ಚ್‌ನಲ್ಲಿ ಮೊಟ್ಟಮೊದಲ ಬಾರಿಗೆ ಸಾರ್ವಜನಿಕರಿಗಾಗಿ ’ದ ಪ್ರಾಫೆಟ್’ನ ಓದನ್ನು ಏರ್ಪಡಿಸಿದ್ದಾಗ, ಜನ ಅಣಿನೆರೆದಿದ್ದ ಚರ್ಚಿನಲ್ಲಿ ಕೂತು, ರಂಗಭೂಮಿಯಲ್ಲಿ ಹೆಸರಾಗಿದ್ದ ಬಟ್ಲರ್ ಡ್ಯಾವೆನ್ ಪೋರ್ಟ್ ಅದನ್ನು ಓದುವುದನ್ನು ನಾನು ಕೇಳಿಸಿಕೊಂಡಿದ್ದು ಸಹ ಅಕಸ್ಮಾತ್ತಾಗಿ ಘಟಿಸಿರಲಾರದು. ಅದು ಸಹ ಕಾಲದ ಯಾವುದೋ ಹೆಣಿಗೆಯ ಭಾಗವಾಗಿರಲೇಬೇಕು. ಅಂದು ತನ್ನದೇ ಪದಗಳು ಅಸಂಖ್ಯ ಸಂಖ್ಯೆಯಲ್ಲಿ ನೆರೆದು ನೀರವ ಮೌನದಲ್ಲಿ ಕುಳಿತು ಆಲಿಸುತ್ತಿದ್ದ ಜನರ ಹೃದಯವನ್ನು ತಾಕುತ್ತಿದ್ದಾಗ, ಆ ಅದ್ಭುತ ಪುಸ್ತಕದ ಲೇಖಕ ಸಹ ಅದೇ ಚರ್ಚಿನಲ್ಲಿ ಕುಳಿತಿದ್ದ ಎನ್ನುವುದು ನಂತರದ ಸುಮಾರು ದಿನಗಳವರೆಗೂ ನನಗೆ ತಿಳಿದೇ ಇರಲಿಲ್ಲ. ಆಗ ನನಗೆ ಗೊತ್ತಾಗಿದ್ದು ಇಷ್ಟೇ: ಅಲ್ಲಿ ಆಗ ನಾನು ಕೇಳಿದ ಚಕಿತಗೊಳಿಸುವಂತಹ, ಜೀವಕ್ಕೆ ಅತ್ಯಗತ್ಯವಾದಂತಹ ಸತ್ಯದ ನುಡಿಗಳನ್ನು ಅಷ್ಟು ಗಟ್ಟಿದನಿಯಲ್ಲಿ, ಅಷ್ಟು ಸೊಗಸಾಗಿ ಆ ಕ್ಷಣದವರೆಗೆ ನಾನು ಎಂದೂ ಓದಿರಲಿಲ್ಲ, ಕೇಳಿರಲಿಲ್ಲ.

ಆ ಪುಸ್ತಕದ ಒಂದು ಪ್ರತಿಯನ್ನು ಹೊಂದುವುದು ಮತ್ತು ಅದನ್ನು ತಕ್ಷಣ ಬೇರೆಯವರೊಂದಿಗೆ, ಇನ್ನೂ ಬಹಳ ಜನರೊಂದಿಗೆ ಹಂಚಿಕೊಳ್ಳುವುದು ನನಗೆ ಆ ಕ್ಷಣದ ಅನಿವಾರ್ಯವಾಗಿಹೋಗಿತ್ತು. ನಂತರ ಅಷ್ಟೇ ಅನಿವಾರ್ಯವೆನಿಸಿದ್ದು, ಆ ಕವಿಯನ್ನು ಸಂಧಿಸಿ ಆತನ ’ದ ಪ್ರಾಫೆಟ್’ ನನ್ನ ಆತ್ಮಕ್ಕೆ ಸೇರಿಸಿದ ಆಳ, ಎತ್ತರ ಮತ್ತು ವೈಶಾಲ್ಯಗಳನ್ನು ಕುರಿತು ಹೇಳಬೇಕೆನ್ನುವುದು. ಅದಕ್ಕಾಗಿ ಸಂಪರ್ಕಿಸಿದಾಗ ಆತನ ಸ್ಟುಡಿಯೋಗೆ ಆಗಮಿಸಿ ’ಕವಿತೆಗಳನ್ನು ಕುರಿತು ಮಾತನಾಡಲು’ ಮತ್ತು ಚಿತ್ರಗಳನ್ನು ನೋಡಲು ಅವನ ಪ್ರೀತಿಯ ಆಹ್ವಾನ ಸಹ ಸಿಕ್ಕೇಬಿಟ್ಟಿತು. ಹೀಗೆ ನಾನು ಓಲ್ಡ್ ವೆಸ್ಟ್ ಟೆಂತ್ ಸ್ಟ್ರೀಟ್‌ನಲ್ಲಿದ್ದ ಆ ಕಟ್ಟಡಕ್ಕೆ ಹೋಗಿ, ನಾಲ್ಕು ಮಹಡಿಗಳನ್ನು ಹತ್ತಿ ಅಲ್ಲಿ ಅವನನ್ನು ಕಂಡೆ. ನಾವಿಬ್ಬರೂ ಹಳೆಯ ಸ್ನೇಹಿತರೇನೋ ಎನ್ನುವಂತೆ ಆತ ನಗುತ್ತಾ ನನ್ನನ್ನು ಆಹ್ವಾನಿಸಿದ್ದ. ನಾವಿಬ್ಬರೂ ನಿಜಕ್ಕೂ ಹಳೆಯ, ಪುರಾತನ ಸ್ನೇಹಿತರು ಎನ್ನುವುದು ನಮ್ಮಿಬ್ಬರಿಗೂ ಬೇಗನೆ ಅರಿವಿಗೆ ಬಂತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಯಾವುದೇ ಕಲಾವಿದನ ಕಲೆಯ ಆತ್ಮ ಮತ್ತು ಸತ್ವದ ಸರಿಯಾದ ಅಂದಾಜು ಸಿಗಬೇಕೆಂದರೆ ತೀರಾ ವೈಯಕ್ತಿಕವಲ್ಲದ ನೆಲೆಯಿಂದ ಅದನ್ನು ಸಮೀಪಿಸಬೇಕು ಎಂದು ಪದೇಪದೇ ಹೇಳುವುದನ್ನು ನಾವು ಸಾಮಾನ್ಯವಾಗಿ ಕೇಳುತ್ತೇವೆ. ಆದರೆ ಪುನರಾವರ್ತನೆ ಮಾತುಗಳನ್ನು ಸತ್ಯವಾಗಿಸುವುದಿಲ್ಲ. ಗಿಬ್ರಾನನ ಕಾವ್ಯ ಮತ್ತು ಚಿತ್ರಕಲೆಯನ್ನು ಸಂಪೂರ್ಣವಾಗಿ ಅವೈಯಕ್ತಿಕ ನೆಲೆಯಲ್ಲಿ ನಿಂತು ನೋಡುವುದು ನನಗೆ ಅಸಾಧ್ಯ ಎನ್ನುವುದು ನಿಜವೇ ಆದರೂ, ಇಷ್ಟೆಲ್ಲಾ ವರ್ಷಗಳಲ್ಲಿ ವೈಯಕ್ತಿಕ ಸಂಬಂಧದಾಚೆಗೆ ನಿಂತು ಈ ಮನುಷ್ಯನ ಅಸಾಧಾರಣ ವ್ಯಕ್ತಿತ್ವದ ಸ್ವರೂಪವನ್ನು ನಿಷ್ಪಕ್ಷಪಾತದ ನೆಲೆಯಲ್ಲಿ ಅನ್ವೇಷಿಸುವುದು ಸಾಧ್ಯ ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ. ಅಲ್ಲದೆ ಈತ ಕೆಲಸ ಮಾಡುವ ರೀತಿಯ ನಿಕಟ ಪರಿಚಯ ಸಹ ನನಗೆ ಒದಗಿ ಬಂದಿದ್ದರಿಂದ ಇದು ಖಂಡಿತವಾಗಿ ಸಾಧ್ಯ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ನಿಜ ಹೇಳಬೇಕೆಂದರೆ ಈತನ ಪರಿಚಯಕ್ಕೂ ಮೊದಲೇ ಈತನ ಕೃತಿಗಳಲ್ಲಿ ಆಳವಾಗಿ ಮುಳುಗಿದ್ದ ನಾನು, ಈತನ ಕವಿತೆಗಳ ಮೂಲಕ ಇವನೆಡೆಗೆ ಸಾಗಿ ಬಂದಿದ್ದೆನೇ ಹೊರತು ಈತನ ಮೂಲಕ ಈತನ ಕವಿತೆಗಳೆಡೆಗಲ್ಲ. ಹಾಗಾಗಿ ಅವನ ಕವಿತೆಗಳನ್ನು ಕುರಿತ ನನ್ನ ನಿಲುವು ಆತನನ್ನು ಸಂಧಿಸುವ ವೇಳೆಗಾಗಲೇ ರೂಪುಗೊಂಡಿತ್ತು ಮತ್ತು ಅದು ಎಂದಿಗೂ ಬದಲಾಗಲಿಲ್ಲ. ಆತನ ಸ್ವಂತ ಧೋರಣೆ ಸಹ ಈ ವಿಷಯದಲ್ಲಿ ಹೆಚ್ಚಿನ ನೆರವು ನೀಡಿತ್ತು. ನನಗೆ ಅವನನ್ನು ಕುರಿತು ಬರೆಯುವ ಉದ್ದೇಶ ಇದೆ ಎನ್ನುವುದು ಅವನಿಗೆ ಗೊತ್ತಿತ್ತು.

ಈ ಬರವಣಿಗೆ ಸ್ನೇಹಿತರ ನಡುವಿನ ಕಟ್ಟಕ್ಕರೆಯ ಕಾರಣದಿಂದ ಪ್ರಭಾವಿತವಾಗಬಾರದು ಎನ್ನುವುದು ಅವನ ನಿಲುವೂ ಆಗಿತ್ತು. ಸಾಂದರ್ಭಿಕ ಭಿನ್ನಾಭಿಪ್ರಾಯದಿಂದ ಇಬ್ಬರಲ್ಲಿ ಒಬ್ಬರು, ’ಆ ಸಾಲನ್ನು ನೀನು ಮುದ್ರಿಸಬೇಕಾದರೆ ಅದು ನನ್ನ ಹೆಣ ಉರುಳಿದ ಮೇಲೆಯೇ’ ಎಂದು ಹೇಳಿದ್ದಿರಬಹುದೇ ಹೊರತು, ಲೇಖಕಿಯಾಗಿ ನನ್ನ ಪ್ರಾಮಾಣಿಕತೆ ಆತನ ಕೃತಿಗಳನ್ನು ತೂಗಿ ನೋಡುವಾಗ ಯಾವುದೇ ಮೃದು ಧೋರಣೆ ಅಥವಾ ಭಾವುಕತೆಯ ತೀರ್ಮಾನಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವುದನ್ನು ಆತ ಅರಿತಿದ್ದ. ಆತ ಬದುಕಿದ್ದಾಗ ಯಾವುದಾದರೂ ಪಟ್ಟಣಕ್ಕೆ ’ಕಪ್ಪು ಪುಸ್ತಕ’ದಿಂದ (ದ ಪ್ರಾಫೆಟ್) ಓದಲು, ಅದರ ಲೇಖಕನನ್ನು ಕುರಿತು ಮಾತನಾಡಲು ನಾನು ಪ್ರಯಾಣ ಬೆಳೆಸುವ ಮೊದಲು ಅವನು, ’ಮಾತನಾಡಲೆಂದು ಜನಗಳ ಎದುರು ನಿಂತಾಗ ನೀನು ನನ್ನ ಸ್ನೇಹಿತೆ ಎನ್ನುವುದನ್ನು ಮರೆಯಬೇಕು’ ಎಂದು ಹೇಳಿಯೇ ಕಳಿಸುತ್ತಿದ್ದ. ದಿನಗಳೆದಂತೆ ಆ ಸ್ನೇಹದ ನೆನಪನ್ನು ಮರೆಯದಿದ್ದರೂ, ಬದಿಗಿಟ್ಟು ನಮ್ಮ ಭೇಟಿಗೂ ಮುಂಚಿನ ದಿನಗಳ ಹಾಗೆ ವ್ಯಕ್ತಿಗತ ನೆಲೆಯನ್ನು ದಾಟಿ, ವಸ್ತುನಿಷ್ಠವಾಗಿ ಮಾತನಾಡುವುದು ಹೆಚ್ಚುಹೆಚ್ಚು ಸಾಧ್ಯವಾಗುತ್ತಾ ಹೋಯಿತು. ಪುಸ್ತಕದ ಹೊದಿಕೆಯ ಪುಟಗಳ ನಡುವಿನಲ್ಲಿ ಅಡಕವಾಗಿದ್ದ ಪದಗಳ ಶಕ್ತಿ ಮತ್ತು ತಾಕತ್ತು ಆ ಕ್ಷಣದ ಉಳಿದೆಲ್ಲಾ ಭಾವನೆಗಳನ್ನೂ ಮಂಕಾಗಿಸಿಬಿಡುತ್ತಿತ್ತು. ಇದೂ ಸಹ ಹಾಗೆ ಅಂತರ ಇಟ್ಟುಕೊಂಡು ಮಾತನಾಡುವುದನ್ನು ಸಾಧ್ಯವಾಗಿಸುತ್ತಿತ್ತು.

1931ರಲ್ಲಿ ಗಿಬ್ರಾನ್ ತನ್ನ ಬದುಕಿನ ಅವಧಿಯನ್ನು ಮುಗಿಸಿದ. ಕೆಲವು ತಿಂಗಳುಗಳ ನಂತರ ಈ ಲೆಬನಾನಿಗನನ್ನು ಕುರಿತು ನಾನು ಒಂದು ಕಿರುಹೊತ್ತಿಗೆಯನ್ನು ರಚಿಸಿದ್ದೆ. ’ಈತನನ್ನು ಕುರಿತಾಗಿ ನಾವು ಎಲ್ಲಿ ಮತ್ತು ಹೇಗೆ ತಿಳಿದುಕೊಳ್ಳಬಹುದು?’ ಎನ್ನುವ ನೂರಾರು ಪ್ರಶ್ನೆಗಳಿಗೆ ಉತ್ತರ ನೀಡಲೆಂದೇ ಇದನ್ನು ಬರೆದಿದ್ದೆ. ಅಂತಹ ಅತ್ಯಂತ ಸಂಕ್ಷಿಪ್ತ ಬರಹಗಳ ಹೊರತಾಗಿ, ಈತನ ಬಗ್ಗೆ ಇಂಗ್ಲಿಷಿನಲ್ಲಿ ಬೇರೆ ಏನನ್ನೂ ಬರೆಯಲಾಗಿಲ್ಲ. ಈ ಕಿರುಹೊತ್ತಿಗೆ ರಚನೆಯಾಗಿದ್ದು ನನ್ನ ಆಳವಾದ ವೈಯಕ್ತಿಕ ದುಃಖದ ನಡುವೆ. ಅಲ್ಲದೆ ಆಗ ಸುಮಾರು ಹದಿನೆಂಟು ವರ್ಷಗಳ ಕಾಲ ಖಲೀಲ್ ಗಿಬ್ರಾನ್ ಜೀವಿಸಿದ್ದ ಸ್ಟುಡಿಯೋದಲ್ಲಿ ಉಳಿದ ಅಮೂಲ್ಯ ಸರಕುಗಳನ್ನು ಸಂರಕ್ಷಣೆ ಮಾಡುವಂತಹ ಕೆಲಸ ಸಹ ನಡೆಯುತ್ತಿತ್ತು. ಆತನ ಕೋರಿಕೆಯಂತೆ, ಆತನ ಹೃದಯಕ್ಕೆ ಮತ್ತು ಅಪಾರ ಸಂಖ್ಯೆಯ ಆತನ ಸ್ನೇಹಿತರ ಹೃದಯಗಳಿಗೆ ಮತ್ತು ಈ ವರ್ಷಗಳಲ್ಲಿ ಅಪರಿಚಿತರಾಗಿ ಆತನನ್ನು ಸಂಧಿಸಿ, ಭೇಟಿ ಮಾಡುತ್ತಲೇ ಅಪರಿಚಿತರಾಗಿ ಉಳಿಯದ ಅನೇಕ ಹೃದಯಗಳಿಗೂ ಪ್ರೀತಿಪಾತ್ರವಾಗಿದ್ದ ಆ ವಸ್ತುಗಳನ್ನು ಮೂಟೆಗಟ್ಟಿ ಲೆಬನಾನಿನಲ್ಲಿದ್ದ ಆತನ ತಾಯ್ನೆಲ ಬಿಶಾರಿಗೆ ಕಳುಹಿಸಬೇಕಿತ್ತು. ಅಲ್ಲಿ ಅಕ್ಷರಶಃ ನೂರಾರು ರೇಖಾಚಿತ್ರ ಮತ್ತು ವರ್ಣಚಿತ್ರಗಳಿದ್ದವು. ಅವುಗಳಲ್ಲಿ ಸುಮಾರು ಅರ್ಧದಷ್ಟು ಚಿತ್ರಗಳನ್ನು ಬಹುಶಃ ನಾನೂ ಸಹ ಎಂದೂ ನೋಡಿರಲಿಲ್ಲ. ಮೇಲಿನ ಬಾಲ್ಕನಿಯಲ್ಲಿ ಒಂದರ ಮೇಲೊಂದು ಸಾಲಿನಂತೆ ಅವುಗಳನ್ನು ದಾಸ್ತಾನು ಮಾಡಲಾಗಿದ್ದು, ಉಪೇಕ್ಷೆಗೊಳಗಾಗಿದ್ದ ಅವು ಧೂಳಿನಿಂದ ತುಂಬಿ ಕೆಟ್ಟ ಸ್ಥಿತಿಯಲ್ಲಿದ್ದವು. ಆದರೆ ಆಗ ಹಲವಾರು ತರುಣ ಮತ್ತು ನೆರವಿಗೆ ಸಜ್ಜಾದ ಹಸ್ತಗಳು ಸಹಾಯಕ್ಕೆ ಬಂದವು.ಈ ಶ್ರಮ ಒಂದೇ ಸಮಯಕ್ಕೆ ಸಂತಸ ಮತ್ತು ನೋವನ್ನು ಕೊಟ್ಟರೂ, ಅದನ್ನೊಂದು ಸುಯೋಗ ಎಂದೇ ಭಾವಿಸಿದ್ದ ಹಲವು ನಿಷ್ಠಾವಂತ ಮತ್ತು ಸಮರ್ಪಣಾ ಮನೋಭಾವದ ಲೆಬನೀಸ್ ಮತ್ತು ಅಮೆರಿಕನ್ ತರುಣ ತರುಣಿಯರು ಎಲ್ಲಾ ಕೆಲಸ ಮುಗಿಯುವವರೆಗೂ ಸದಾಕಾಲ ನನ್ನೊಂದಿಗಿದ್ದರು.

ಎನ್. ಸಂಧ್ಯಾರಾಣಿ

ಅಂತಹ ಪರಿಸ್ಥಿತಿಯಲ್ಲಿ ನಾನು ಆ ಕಿರುಹೊತ್ತಿಗೆಯನ್ನು ಬರೆದಿದ್ದೆ. ಆಗ ನಾನು ಹೀಗೆ ಬರೆದಿದ್ದೆ, ’ಗಿಬ್ರಾನ್‌ನ ಬದುಕಿನ ನಾಟಕೀಯತೆಯನ್ನು ಹಾಗೇ ಪುಟಗಳಿಗೆ ಇಳಿಸಲು ನಾವಿನ್ನೂ ಆತನ ಸಮಯ ಮತ್ತು ಇರುವಿಕೆಗೆ ತುಂಬಾ ಹತ್ತಿರದಲ್ಲಿದ್ದೇವೆ. ಪ್ರತಿ ಮುಂಜಾನೆ ಭೂಮಿ ತನ್ನ ಕದ ತೆರೆದಾಗ ಇನ್ನೂ ಆತನ ಮಾಂತ್ರಿಕ ಇರುವಿಕೆಗಾಗಿ ಹುಡುಕಾಡುತ್ತಲೇ ಇದ್ದಾಳೆ, ಆತನ ದನಿಯ ಸದ್ದು ಇನ್ನೂ ಅವಳ ಕಿವಿಗಳಲ್ಲಿ ಅನುರಣಿಸುತ್ತಿದೆ.’

ಅಂದಿನಿಂದ ಇಂದಿಗೆ ಹದಿಮೂರು ವರ್ಷಗಳು ಕಳೆದಿವೆ ಮತ್ತು ಈಗಲೂ ನಾನು ಅದರಲ್ಲಿನ ಒಂದು ಪದವನ್ನೂ ಬದಲಾಯಿಸಲು ಇಚ್ಛಿಸುವುದಿಲ್ಲ. ಆತನ ಮಾಂತ್ರಿಕತೆಯ ಇರುವು ಇಂದಿಗೂ ಹಿಂದೆ ಸರಿದಿಲ್ಲ ಮತ್ತು ಕೇಳುವವರ ಕಿವಿಗಳಲ್ಲಿ ಆತನ ದನಿಯ ಸದ್ದು ಇಂದಿಗೂ ಅನುರಣಿಸುತ್ತಲೇ ಇದೆ.

ಭೂಮಿಯ ನಾಲ್ಕು ಮೂಲೆಗಳಿಂದಲೂ ಇಂದಿಗೂ ಕೇಳಿಬರುವ ಮಾತುಗಳು:

’ಗಿಬ್ರಾನ್ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನಮ್ಮ ಪಾಲಿಗೆ ಜೀವಿಸಿದ್ದಾನೆ’.

’ಈ ಕರಾಳ ದಿನಗಳಲ್ಲಿ ತಾಳಲಾರದ ದುಃಖದಿಂದ ತಡವರಿಸುವ ನನ್ನ ಹೃದಯವನ್ನು ಆತನ ಪದಗಳು ಸಂಭಾಳಿಸುತ್ತವೆ’.

’ಆ ಪುಸ್ತಕ ನನ್ನ ಪಕ್ಕದಲ್ಲಿ ಹಾಸಿಗೆಯ ಬದಿಯ ಟೇಬಲ್ ಮೇಲೇ ಇರುತ್ತದೆ. ಭೀಕರ ರಾತ್ರಿಯ ಕಗ್ಗತ್ತಲಲ್ಲಿ ನನ್ನೊಂದಿಗೆ ತೆಗೆದುಕೊಂಡು ಹೋಗಲು ಅದರಿಂದ ಏನನ್ನಾದರೂ ಓದದೆ ನಾನು ನಿದ್ರಿಸುವುದಿಲ್ಲ.’

ಅದೆಲ್ಲ ಮಾತುಗಳ ಫಲಶೃತಿಯಾಗಿ ಇದೋ ಇಲ್ಲಿದೆ ಈ ಪುಸ್ತಕ. ಇದು ಗಿಬ್ರಾನ್ ಬದುಕಿನ ಪ್ರವರವಲ್ಲ, ಇದು ಆತನ ಬದುಕಿನ ಕಾಲಾನುಕ್ರಮದ ದಾಖಲೆ ಸಹ ಅಲ್ಲ. ’ನಾನೇನು ಮಾಡಿದೆ ಎನ್ನುವುದನ್ನು ಹೇಳಿದರೆ ನಾನೇನು ಎಂದು ಹೇಳಿದಂತಾಗುವುದಿಲ್ಲ’ ಎಂದೇ ಅವನು ಸಹ ಹೇಳುತ್ತಿದ್ದ. ಇಲ್ಲಿ ಯಾವುದೇ ವಂಶಾವಳಿಯ ದಾಖಲೆ ಇಲ್ಲ. ಆತ ಕಾಲವಾಗುವ ನಿಕಟಪೂರ್ವದ ಏಳು ವರ್ಷಗಳಲ್ಲಿ, ಆತನ ಕೊಡುಗೆ ಮತ್ತು ಚೈತನ್ಯ ತುರೀಯಾವಸ್ಥೆಯಲ್ಲಿದ್ದ ಆ ಕಾಲದಲ್ಲಿ, ಭೂಮಿಯಷ್ಟೇ ಸರಳ ಅಭಿರುಚಿ ಮತ್ತು ಸಾಮಾನ್ಯ ಬಯಕೆಗಳನ್ನು ಹೊಂದಿದ್ದ ಈ ಅಸಾಮಾನ್ಯ ವ್ಯಕ್ತಿಯನ್ನು ನಾನು ಕಂಡೆ. ಮೇಲಿನ ಜಗತ್ತಿಗೆ ಸದಾ ಸಲ್ಲುತ್ತಿದ್ದು ಈ ಜಗತ್ತಿಗೆ ಸೇರದವನಂತಿದ್ದ, ಅಲೌಕಿಕ ಲೋಕದ ದೈವಿಕ ಬದುಕಿನ ಹಂಬಲ ಹೊಂದಿದ್ದು, ಅದಕ್ಕಾಗಿ ತನ್ನ ದೇಹವನ್ನೇ ಉರುವಲನ್ನಾಗಿ ಮಾಡಿಕೊಂಡು ಅವಿಶ್ರಾಂತ ಉರಿಯಲ್ಲಿ ಬೆಂದವನನ್ನು ಅದೇ ಹಂಬಲ ಕಡೆಗೂ ನುಂಗಿಹಾಕಿದ ಕಾಲಘಟ್ಟದಲ್ಲಿ ನಾನವನ ಜೊತೆಗಿದ್ದೆ.

ಆತ ಹೇಳಬೇಕೆಂದಿದ್ದ ಮಾತುಗಳು, ಚಿತ್ರಕಲೆಯ ಜೊತೆಜೊತೆಯಲ್ಲಿಯೇ ಅರೇಬಿಕ್ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಸಾಹಿತ್ಯ ಪ್ರಪಂಚಕ್ಕೆ ಆತನ ಕೊಡುಗೆ ಇವ್ಯಾವುವೂ ಅಳತೆಗೆ ಸಿಗಲಾರದ್ದು. ಆದರೂ ಈ ಕೊಡುಗೆಗಳು ಗಿಬ್ರಾನ್ ಏರಿದ ಮಾಡಿದ ಪರ್ವತದ ಶಿಖರಶೃಂಗಗಳಲ್ಲ. ಆತನ ಅತ್ಯುನ್ನತ ಮತ್ತು ಅನವರತ ಸಲ್ಲುವ ಮೇರುಕೃತಿ ಲೇಖನಿಯ ಮೂಲಕ ಕಾಗದದ ಮೇಲಾಗಲೀ ಅಥವಾ ಕುಂಚದ ಮೂಲಕ ಕ್ಯಾನ್ವಾಸ್ ಮೇಲಾಗಲಿ ರಚಿಸಲ್ಪಟ್ಟಿಲ್ಲ, ಇಡೀ ಮಾನವ ಜನಾಂಗ ಅದಕ್ಕೆ ಕ್ಯಾನ್ವಾಸ್ ಆಗಿದೆ. ಅದು ಆತನ ಅಮೃತ ಚೇತನದ ಮೂಲಕ ಮನುಷ್ಯರ ಚೇತನದ ಮೇಲೆ ಬಿಡಿಸಲ್ಪಟ್ಟಿದೆ. ಆತ ಆಡಿದ ಮಾತುಗಳು, ಆತ ತಿಳಿಹೇಳುತ್ತಿದ್ದ ರೀತಿಯಲ್ಲಿನ ಅರಿವು, ಅತ್ಯುನ್ನತನಾದ, ಜೀವಿಗಳೆಲ್ಲರ ತಂದೆಯಾದ ದೇವರ ಮೇಲಿನ ಆತನ ನಂಬಿಕೆಯ ತಪ್ಪಿಸಿಕೊಳ್ಳಲಾಗದ ಪ್ರಭಾವ, ಆ ತಂದೆಯ ಎಲ್ಲ ಮಕ್ಕಳೆಡೆಗೆ, ಅವರ ಮಕ್ಕಳ ಮಕ್ಕಳೆಡೆಗೆ ಆತನ ಅಸೀಮವಾದ ಪ್ರೀತಿ ಮತ್ತು ವಾತ್ಸಲ್ಯ- ಇವು ಲೆಕ್ಕವೇ ಇರದಷ್ಟು ಜನಸ್ತೋಮಗಳ ಬದುಕನ್ನು ಮತ್ತು ಅವರ ಮಕ್ಕಳ ಮಕ್ಕಳ ಬದುಕನ್ನು ತಮ್ಮತಮ್ಮ ನಿರಂತರ ಸಂಪತ್ತಿನೆಡೆಗೆ ಕೊಂಡುಹೋಗಿದೆ. ಹಾಗೆ ನೋಡುವುದಾದರೆ, ಆತ ಎಂದಿಗೂ ಒಂದೂ ಕವನವನ್ನು ಬರೆಯದೇ ಇದ್ದರೂ, ಒಂದು ಚಿತ್ರವನ್ನು ರಚಿಸದೇ ಇದ್ದರೂ, ಚಿರಂತನ ದಾಖಲೆಗಳ ಪುಟದಲ್ಲಿ ಆತನ ಸಹಿ ಅಳಿಸಲಾಗದಂತೆ ಇದ್ದೇ ಇರುತ್ತಿತ್ತು. ಆತನ ವೈಯಕ್ತಿಕ ಚೇತನ, ಕಾಲದ ಜಾಗೃತ ಪ್ರಜ್ಞೆಯನ್ನು ಹಾದು ಬಂದಿದೆ ಮತ್ತು ಆತನ ಆ ಚೇತನ ಕಾಲಕ್ಕೆ ಅತೀತವಾಗಿ, ಮೃತ್ಯುವಿಗೆ ಅತೀತವಾಗಿ ಅಂತರ್ಗತವಾಗಿ ಇಂದಿಗೂ ಉಳಿದುಬಂದಿದೆ.

ಮೂಲ : ಬಾರ್ಬರಾ ಯಂಗ್
ಇತ್ತೀಚೆಗೆ ಪ್ರಕಟವಾದ ’ಇವ ಲೆಬನಾನಿನವ – ಗೆಳತಿಯ ಕಣ್ಣಲ್ಲಿ ಖಲೀಲ್ ಗಿಬ್ರಾನ್’ ಪುಸ್ತಕಕ್ಕೆ ಮೂಲ ಲೇಖಕಿ ಬಾರ್ಬರಾ ಯಂಗ್ ಬರೆದಿರುವ ಮುನ್ನುಡಿಯನ್ನು ಇಲ್ಲಿ ಪ್ರಕಟಿಸಲಾಗಿದೆ. ಈ ಪುಸ್ತಕವನ್ನು ಲೇಖಕಿ ಸಂಧ್ಯಾರಾಣಿ ಅನುವಾದಿಸಿದ್ದಾರೆ.

(ಕನ್ನಡಕ್ಕೆ): ಎನ್. ಸಂಧ್ಯಾರಾಣಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: “ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...