ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಅವರು ಬುಧವಾರ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಿದ್ದಾರೆ. ಹೀಗಾಗಿ ಬಿಜೆಪಿಯ ಮಾಜಿ ವಕ್ತಾರೆ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಉಭಯ ದೇಶಗಳ ನಾಯಕರ ನಡುವೆ ನಡೆದ ಚರ್ಚೆಗಳ ಬಗ್ಗೆ ಮತ್ತೆ ಎಲ್ಲ ಚಿತ್ತ ಹೊರಳಿದೆ.
ನೂಪುರ್ ಶರ್ಮಾ ವಿರುದ್ಧ ತೀವ್ರವಾಗಿ ಟೀಕಿಸಿದ ಅರಬ್ ರಾಷ್ಟ್ರಗಳಲ್ಲಿ ಇರಾನ್ ಕೂಡ ಸೇರಿದ್ದರೂ, ದ್ವಿಪಕ್ಷೀಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿಲ್ಲ ಎಂದು ಭಾರತದ ಉನ್ನತ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರವಾದಿ ವಿರುದ್ಧ ಮಾಡಲಾಗಿದ್ದ ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿ, ಟ್ವೀಟ್‌ಗಳು ಮತ್ತು ಕಾಮೆಂಟ್‌ಗಳು ಭಾರತ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು.
ಇದನ್ನೂ ಓದಿ: ಪ್ರವಾದಿ ನಿಂದಕರಿಗೆ ತಕ್ಕ ಪಾಠ ಕಲಿಸಲಾಗುವುದು: ಇರಾನ್‌ಗೆ ಎನ್‌ಎಸ್‌ಎ ಅಜಿತ್ ದೋವಲ್
ಆದಾಗ್ಯೂ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಹೊಸೈನ್ ಅಮೀರ್ ಅಬ್ದೊಲ್ಲಾಹಿಯಾನ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿಗಳು ಹೇಳಿವೆ. “ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಮಾಡಲಾಗಿರುವ ವಿವಾದಾತ್ಮಕ ಹೇಳಿಕೆಗಳಿಂದ ಉಂಟಾಗಿರುವ ‘ನಕಾರಾತ್ಮಕ ವಾತಾವರಣ’ ವನ್ನು ಅಬ್ದುಲ್ಲಾಹಿಯನ್ ಸೂಚಿಸಿದ್ದಾರೆ” ಎಂದು ಇಂಡಿಯಾ ಟುಡೇ ಇರಾನಿನ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
“ಪ್ರವಾದಿ ನಿಂದಕರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಭಾರತ ಭರವಸೆ ನೀಡಿದೆ” ಎಂದು ಇರಾನ್ ತಿಳಸಿದೆ. ಎನ್‌ಎಸ್‌ಎ ಅಜಿತ್ ದೋವಲ್ ಅವರು, “ಅಪರಾಧಿಗಳ ವಿರುದ್ಧ ಗಂಭೀರವಾಗಿ ವ್ಯವಹರಿಸಲಾಗುವುದು ಎಂದು ಹೇಳಿದ್ದಾರೆ” ಎಂದು ಅದು ಉಲ್ಲೇಖಿಸಿದೆ.
ಬುಧವಾರ ರಾತ್ರಿ ದ್ವಿಪಕ್ಷೀಯ ಕಾರ್ಯತಂತ್ರದ ಮಾತುಕತೆ ನಡೆಸಲು ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ಇತರ ಭಾರತೀಯ ಅಧಿಕಾರಿಗಳನ್ನು ಭೇಟಿಯಾದ ಬಗ್ಗೆ ಅಮಿರ್ ಅಬ್ದೊಲ್ಲಾಹಿಯಾನ್ ಟ್ವೀಟ್‌ನಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ
ಇರಾನ್ ಮತ್ತು ಭಾರತ ಎರಡೂ ದೇಶಗಳು ದೈವಿಕ ಧರ್ಮಗಳು ಮತ್ತು ಇಸ್ಲಾಮಿಕ್ ಪವಿತ್ರತೆಗಳನ್ನು ಗೌರವಿಸುವ ಅಗತ್ಯವನ್ನು ಒಪ್ಪಿಕೊಂಡಿವೆ ಮತ್ತು ವಿಭಜಕ ಹೇಳಿಕೆಗಳನ್ನು ವಿರೋಧಿಸಿವೆ ಎಂದು ಅವರು ಹೇಳಿದ್ದು, “ಭಾರತವು ಸಹಾನುಭೂತಿ ಮತ್ತು ಸಹಿಷ್ಣುತೆಯ ನಾಡು” ಎಂದು ಹೊಗಳಿದ್ದಾರೆ.
ಇದಲ್ಲದೆ, ಗದ್ದಲ ಮತ್ತು ಗಲಾಟೆಗಳು ಭಾರತಕ್ಕೆ ಹೊಂದಿಕೆಯಾಗುವುದಿಲ್ಲ ಅಥವಾ ಭಾರತದಲ್ಲಿ ಇದು ಬೇರೂರಿರಿಲ್ಲ ಎಂದು ಅವರು ಹೇಳಿದ್ದಾರೆ. ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ಭಾರತದ ಎಲ್ಲಾ ಧರ್ಮಗಳ ಅನುಯಾಯಿಗಳು ವಿರೋಧಿಸುತ್ತಾರೆ ಎಂದು ಅವರು ಹೇಳಿದ್ದಾರೆ.


