ಕೇಂದ್ರ ಸರ್ಕಾರವು ‘ಅಗ್ನಿಪಥ್’ ಎಂಬ ಸೈನಿಕ ನೇಮಕಾತಿಗೆ ಸಂಬಂಧಿಸಿದ ಹೊಸ ಯೋಜನೆಯೊಂದನ್ನು ಮಂಗಳವಾರ ಘೋಷಿಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮೂವರು ಸೇನಾ ಮುಖ್ಯಸ್ಥರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಅಲ್ಪಾವಧಿಯ ರಕ್ಷಣಾ ನೇಮಕಾತಿ ಕುರಿತು ಮಾಹಿತಿ ನೀಡಿದ್ದಾರೆ. ಇದು ಸರ್ಕಾರದ ವತಿಯಿಂದ ಕೈಗೊಂಡ ಐತಿಹಾಸಿಕ ಕ್ರಮ ಎಂದು ಮಾಧ್ಯಮಗಳು ಬಣ್ಣಿಸುವ ವೇಳೆಗಾಗಲೇ ಈ ಯೋಜನೆಯನ್ನು ವಿರೋಧಿಸಿ ಲಕ್ಷಾಂತರ ಯುವಜನರು ಬೀದಿಗಿಳಿದಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ಇತರೆ ರಾಜ್ಯಗಳಲ್ಲಿ ಪ್ರತಿಭಟನೆಗಳನ್ನು ಹಿಂಸಾಚಾರಕ್ಕೆ ತಿರುಗಿವೆ. ಅಷ್ಟರಮಟ್ಟಿಗೆ ಯುವಜನರು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಹಾಗಿದ್ದರೆ ಏನಿದು ಅಗ್ನಿಪಥ್ ಯೋಜನೆ? ಯಾಕಿಷ್ಟು ವಿರೋಧ ಎಂಬುದನ್ನು ವಿವರವಾಗಿ ತಿಳಿಯೋಣ.
ಭಾರತೀಯ ಯುವಕರು ಮತ್ತು ಯುವತಿಯರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡಲು ನೂತನ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ನೂತನ ಅಗ್ನಿಪಥ್ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳ ಅವಧಿಗೆ ಸೈನಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಿದ್ದು, ಅವರನ್ನು ‘ಅಗ್ನಿವೀರ್ ಎಂದು ಕರೆಯಲಾಗಿದೆ.
“ಹೊಸ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಲು ಮತ್ತು ಯುವಜನರ ಆರೋಗ್ಯ ಮಟ್ಟವನ್ನು ಸುಧಾರಿಸಲು ಈ ಯೋಜನೆಯು ಸಹಾಯ ಮಾಡುತ್ತದೆ. ಇದು ವಿವಿಧ ಕ್ಷೇತ್ರಗಳಲ್ಲಿ ಹೊಸ ಕೌಶಲ್ಯಗಳೊಂದಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಸಶಸ್ತ್ರ ಪಡೆ ನೇಮಕಾತಿ ಪ್ರಕಾರ 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ನೇಮಕಾತಿಗೆ ಅರ್ಹರು ಎಂದು ಪರಿಗಣಿಸಲಾಗುತ್ತದೆ. 17 ವರ್ಷ ಐದು ತಿಂಗಳಿಂದ ಹಿಡಿದು 21 ವರ್ಷದ ವಯೋಮಾನದ ಮಿತಿಯಲ್ಲಿರುವ 45,000 ಯುವಕ ಮತ್ತು ಯುವತಿಯರನ್ನು ಮೂರು ತಿಂಗಳ ಒಳಗೆ ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಆಯ್ಕೆಯಾದ ಅಗ್ನಿವೀರರಿಗೆ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ಸುಮಾರು 30 ಸಾವಿರದಿಂದ 40 ಸಾವಿರದವರೆಗೆ ವೇತನ ಮತ್ತು ಭತ್ಯೆಗಳನ್ನು ನೀಡಲಾಗುವುದರ ಜತೆಗೆ ವಿಮೆ ಮತ್ತು ವೈದ್ಯಕೀಯ ಸೇವೆಗಳಿಗೆ ಅರ್ಹರಾಗಿತ್ತಾರೆ. ಮುಂದಿನ 90 ದಿನಗಳಲ್ಲಿ ನೇಮಕಾತಿ ಆರಂಭಗೊಳ್ಳಲಿದ್ದು ಜುಲೈ 2023ಕ್ಕೆ ಮೊದಲ ಅಗ್ನಿವೀರರ ತಂಡ ಕಾರ್ಯನಿರ್ವಹಿಸಲಿದೆ ಎಂದು ಸರ್ಕಾರ ಹೇಳಿದೆ.
ಪರಿಹಾರ ಪ್ಯಾಕೇಜ್‌ನ್ನು ಸೇರಿಸಿ ಅಗ್ನಿವೀರರಿಗೆ ಮೊದಲ ವರ್ಷದಲ್ಲಿ ವಾರ್ಷಿಕ 4.76 ಲಕ್ಷಗಳನ್ನು ಪಾವತಿಸಲಿದ್ದು ಸೇವೆಯ ನಾಲ್ಕನೇ ವರ್ಷದ ಅವಧಿಗೆ ಮೊತ್ತವನ್ನು 6.92 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ. ಸೇವಾ ನಿಧಿ ಪ್ಯಾಕೇಜ್ ತೆರಿಗೆಯಿಂದ ವಿನಾಯಿತಿ ಪಡೆಯುತ್ತದೆ.
ನಾಲ್ಕು ವರ್ಷದ ಬಳಿಕ ಅಗ್ನಿವೀರರು ಸೇವೆ ಮುಗಿಯುತ್ತದೆ. ನಂತರ ಅವರು ಸಾಮಾನ್ಯ ಕೇಡರ್‌ಗೆ ಸ್ವಯಂ ಪ್ರೇರಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಹತೆ ಮತ್ತು ಸಂಸ್ಥೆಯ ಅವಶ್ಯಕತೆ ಆಧರಿಸಿ ಶೇಕಡ 25ರಷ್ಟು ಅಗ್ನಿವೀರರನ್ನು ಸಾಮಾನ್ಯ ಕೇಡರ್‌ಗೆ ಆಯ್ಕೆ ಮಾಡಲಾಗುತ್ತದೆ. ಕರ್ತವ್ಯದ ಸಮಯದಲ್ಲಿ ಜೀವಹಾನಿ, ಅಂಗವೈಕಲ್ಯವಾದರೆ ಪರಿಹಾರವನ್ನು ಸರ್ಕಾರ ಒದಗಿಸುತ್ತದೆ. ಸೇವೆಯ ಅವಧಿಯಲ್ಲಿ ಹುತಾತ್ಮರಾದರೆ ಅಂತಹ ಅಗ್ನಿವೀರರಿಗೆ ಒಂದು ಕೋಟಿಗೂ ಹೆಚ್ಚಿನ ಮೌಲ್ಯದ ವಿಮೆ ಮತ್ತು ಸೇವೆ ಸಲ್ಲಿಸದ ಅವಧಿಗೆ ಪೂರ್ಣ ವೇತನ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ.
ಈ ಯೋಜನೆಯಿಂದ ಸರ್ಕಾರಕ್ಕೇನು ಲಾಭ?
ಸರ್ಕಾರವು ಸದ್ಯ ತನ್ನ ವಾರ್ಷಿಕ ರಕ್ಷಣಾ ಬಜೆಟ್‌ನ ಅರ್ಧದಷ್ಟನ್ನು ಸೈನಿಕರ ವೇತನ ಮತ್ತು ಪಿಂಚಣಿಯ ಮೇಲೆ ಖರ್ಚು ಮಾಡುತ್ತಿದೆ. ಈ ಮೊತ್ತವನ್ನು ಗಣನೀಯವಾಗಿ ತಗ್ಗಿಸುವ ಗುರಿಯೊಂದಿಗೆ ಈ ಯೋಜನೆ ಘೋಷಿಸಿದೆ. ಪೂರ್ಣಕಾಲಿಕ ಸೈನಿಕರನ್ನು ನೇಮಿಸಿಕೊಂಡರೆ ಸಂಬಳ, ಭತ್ಯೆ, ಪಿಂಚಣಿಯ ಹೊರ ತಪ್ಪಿಸಿಕೊಳ್ಳಲು ಸರ್ಕಾರ ಯೋಚಿಸುತ್ತಿದೆ.
ಯುವಜನರು ವಿರೋಧಿಸುತ್ತಿರುವುದೇಕೆ?
ಭಾರತೀಯ ರೈಲ್ವೆಯ ನಂತರ ಅತಿ ದೊಡ್ಡ ಸರ್ಕಾರಿ ಉದ್ಯೋಗದಾತ ಸಂಸ್ಥೆಯಾಗಿದೆ ಭಾರತೀಯ ಸೇನೆ. ಸೇನಾ ನೇಮಕಾತಿಗಾಗಿಯೇ ಪ್ರತಿ ವರ್ಷ ಲಕ್ಷಾಂತರ ಆಕಾಂಕ್ಷಿಗಳು ಕಾದಿರುತ್ತಾರೆ. ಅಂತವರಿಗೆ ಈ ಯೋಜನೆ ಘೋಷಿಸಿರುವುದು ತೀವ್ರ ಆಘಾತ ತಂದಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ನೇಮಕಾತಿ ಕೂಡ ನಡೆದಿಲ್ಲ. ಇಂತಹ ಸಂದರ್ಭದಲ್ಲಿ ಪೂರ್ಣಾವಧಿ ಸೈನಿಕರಾಗಿ ಕೆಲಸ ಮಾಡಲು ಬಯಸುತ್ತಿದ್ದ ಯುವಜನರಿಗೆ ಕೇವಲ ನಾಲ್ಕು ವರ್ಷಗಳ ಕಾಲ ಗುತ್ತಿಗೆ ಉದ್ಯೋಗ ನೀಡಿದರೆ ಆನಂತರದ ಪರಿಸ್ಥಿತಿಯೇನು ಎಂಬುದು ಅವರ ಆತಂಕವಾಗಿದೆ.
“ನಾವು ಸೈನಿಕರ ನೇಮಕಾತಿ ಮಾಡಿಕೊಳ್ಳುತ್ತಾರೆ ಎಂದು ಸತತ ಎರಡು ವರ್ಷಗಳಿಂದ ಕಾದಿದ್ದೇವೆ. ಆದರೆ ಕೊರೊನಾ ನೆಪ ಹೇಳಿ ನೇಮಕಾತಿ ನಡೆದಿಲ್ಲ. ಈಗ ಸರ್ಕಾರವು ಗುತ್ತಿಗೆ ಆಧಾರದಲ್ಲಿ ಕೇವಲ 4 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಆದಾದ ನಂತರ ನಮ್ಮನ್ನು ಬೀದಿಗೆ ತಳ್ಳುತ್ತಾರೆ, ಇದುನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ಉದ್ಯೋಗ ನೀಡಿ, ಇಲ್ಲದಿದ್ದರೆ ಕೊಂದುಬಿಡಿ’ ಎಂಬ ಘೋಷಣೆಗಳೊಂದಿಗೆ ಉತ್ತರ ಪ್ರದೇಶ ಮತ್ತು ಬಿಹಾರದ ಹಲವೆಡೆ ಯುವಜನರು ಪ್ರತಿಭಟನೆ ನಡೆಸಿದ್ದಾರೆ. ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿ ರೈಲು ತಡೆ ಹೋರಾಟ ನಡೆಸಲಾಗಿದೆ. ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪೊಲೀಸರು ಲಾಠೀ ಚಾರ್ಜ್, ಟಿಯರ್ ಗ್ಯಾಸ್ ಸಿಡಿಸಿದ್ದಾರೆ.
ಹಿಂದಿನ ನೇಮಕಾತಿ ನಿಮಯಗಳ ಪ್ರಕಾರವೇ ಪೂರ್ಣಾವಧಿ ನೇಮಕಾತಿ ಮಾಡಿಕೊಳ್ಳಬೇಕು ಎಂಬುದು ಯುವಜನರ ಒತ್ತಾಯವಾಗಿದೆ.
ಪ್ರತಿಪಕ್ಷಗಳ ವಿರೋಧ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಆರ್‌ಜೆಡಿ ನಾಯಕ ತೇಜಸ್ವಿಯಾದವ್, ಬಿಎಸ್‌ಪಿ ಮುಖಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಸೇರಿದಂತೆ ಹಲವರು ಸರ್ಕಾರದ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿದ್ದಾರೆ.
ಈ ಯೋಜನೆಯಲ್ಲಿ ಶ್ರೇಣಿ ಇಲ್ಲ, ಪಿಂಚಣಿ ಇಲ್ಲ, 2 ವರ್ಷಗಳಿಂದ ನೇರ ನೇಮಕಾತಿ ಇಲ್ಲ, 4 ವರ್ಷಗಳ ನಂತರ ಸ್ಥಿರ ಭವಿಷ್ಯವಿಲ್ಲ, ಸೇನೆಗೆ ಗೌರವವಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಪ್ರಧಾನಿಗಳೆ ದೇಶದ ನಿರುದ್ಯೋಗಿ ಯುವಕರ ದನಿಯನ್ನು ಆಲಿಸಿ, ಅವರನ್ನು ಅಗ್ನಿಪಥದಲ್ಲಿ ಓಡಿಸುವ ಮೂಲಕ ಅವರ ಸಂಯಮದ ಅಗ್ನಿ ಪರೀಕ್ಷೆ ಮಾಡಬೇಡಿ ಎಂದು ಅವರು ಹೇಳಿದ್ದಾರೆ.
न कोई रैंक, न कोई पेंशन
न 2 साल से कोई direct भर्ती
न 4 साल के बाद स्थिर भविष्य
न सरकार का सेना के प्रति सम्मान
देश के बेरोज़गार युवाओं की आवाज़ सुनिए, इन्हे 'अग्निपथ' पर चला कर इनके संयम की 'अग्निपरीक्षा' मत लीजिए, प्रधानमंत्री जी।
— Rahul Gandhi (@RahulGandhi) June 16, 2022
ಭಾರತವು ಎರಡು ಕಡೆಗಳಿಂದ ಬೆದರಿಕೆಗಳನ್ನು ಎದುರಿಸುತ್ತಿರುವಾಗ, ಸುಭದ್ರ ಸೇನಾ ನೇಮಕಾತಿ ಮಾಡಿಕೊಳ್ಳದಿರುವುದು ನಮ್ಮ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಶಕ್ತಿಯನ್ನು ಕುಂದಿಸುತ್ತದೆ. ಬಿಜೆಪಿ ಸರ್ಕಾರವು ನಮ್ಮ ಪಡೆಗಳ ಘನತೆ, ಸಂಪ್ರದಾಯಗಳು, ಶೌರ್ಯ ಮತ್ತು ಶಿಸ್ತಿನ ಮೇಲೆ ರಾಜಿ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಮುಂದಿನ 18 ತಿಂಗಳಲ್ಲಿ 10 ಲಕ್ಷ ನೇಮಕಾತಿ ಮಾಡಿಕೊಳ್ಳುವುದು ಬಿಜೆಪಿಯ ಚುನಾವಣಾ ಗಿಮಿಕ್ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ.
“2022 ರ ವೇಳೆಗೆ 80 ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ಮೋದಿ ಹೇಳಿದ್ದರು. ಆದರೆ ಈಗ ಅಗ್ನಿಪಥ್ ಹೆಸರಿನಲ್ಲಿ ವಿದ್ಯಾವಂತ ಯುವಜನರಿಗಾಗಿ ಸೇನೆಯಲ್ಲಿ ‘ನರೇಗಾ’ ಯೋಜನೆ ಜಾರಿಗೊಳಿಸಲಾಗಿದೆ. ಸಂವಿಧಾನ ನೀಡಿರುವ ಮೀಸಲಾತಿಯನ್ನು ಗುತ್ತಿಗೆ ಪದ್ಧತಿಯಡಿ ರದ್ದುಪಡಿಸಲಾಗುತ್ತಿದೆ. ರೈಲ್ವೆ ಮತ್ತು ಸೇನೆಯ ಲ್ಯಾಟರಲ್ ಎಂಟ್ರಿಯಲ್ಲೂ ಅದೇ ಆಗುತ್ತಿದೆ” ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
#अग्निपथ_योजना के अंतर्गत शस्त्र चलाने का प्रशिक्षण प्राप्त कर कम अवधि की अस्थायी सेवा की हुई एक बड़ी आबादी 22 वर्ष की आयु में बेरोजगार हो जाएगी। क्या इससे देश में क़ानून व्यवस्था संबंधित समस्या उत्पन्न नहीं होगी?
— Tejashwi Yadav (@yadavtejashwi) June 15, 2022
ಬಿಜೆಪಿ ಮತ್ತು ಸಂಘಪರಿವಾರವು ಈಗಾಗಲೇ ಹಲವು ಯುವಜನರಿಗೆ ತಮ್ಮ ಅಂಗಸಂಸ್ಥೆಗಳ ಮೂಲಕ ದ್ವೇಷವನ್ನು ತುಂಬಿವೆ. ಅಂತಹ ಫ್ರಿಂಜ್ ಜನರಿಗೆ ಈಗ ಅಗ್ನಿಪಥ್ ಹೆಸರಿನಲ್ಲಿ ಸರ್ಕಾರಿ ವೆಚ್ಚದಲ್ಲಿ ತರಬೇತಿ ನೀಡಲು ಉತ್ಸುಕವಾಗಿದೆ. ಶಶ್ತ್ರಾಸ್ತ್ರಗಳನ್ನು ಹೊಂದಿರುವ ಅವರು ಸಮಾಜದಲ್ಲಿ ಏನು ಬೇಕಾದರೂ ಮಾಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಗ್ನಿಪಥ್ ಯೋಜನೆಯಡಿ, ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು ತರಬೇತಿ ಪಡೆದವರು ಅಲ್ಪಾವಧಿಯ ತಾತ್ಕಾಲಿಕ ಸೇವೆಯೊಂದಿಗೆ 22 ನೇ ವಯಸ್ಸಿನಲ್ಲಿ ನಿರುದ್ಯೋಗಿಗಳಾಗುತ್ತಾರೆ. ಇದರಿಂದ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಮರ್ಥನೆಗಳಿದ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದಲ್ಲಿ ಯುವಜನರ ಆಕ್ರೋಶ ಹೆಚ್ಚಾದಂತೆ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಸಮರ್ಥನೆಗೆ ಇಳಿದಿದ್ದಾರೆ. 4 ವರ್ಷಗಳ ನಂತರ ನಿವೃತ್ತಿಯಾಗುವವರಿಗೆ ಪೊಲೀಸ್ ಮತ್ತು ಇತರ ಇಲಾಖೆಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬಿಹಾರ, ಯುಪಿಯಲ್ಲಿ ‘ಅಗ್ನಿಪಥ್ ಯೋಜನೆ’ ವಿರೋಧಿಸಿ ತೀವ್ರ ಪತ್ರಿಭಟನೆ: ಗುಂಡು ಹಾರಿಸಿದ ಪೊಲೀಸರು
ಈ ಕುರಿತು ಟ್ವೀಟ್ ಮಾಡಿರುವ ಅವರು, “ತಾಯಿ ಭಾರತಿಯ ಸೇವೆ ಮಾಡಲು ನಿರ್ಧರಿಸಿರುವ ನಮ್ಮ ‘ಅಗ್ನಿವೀರರು’ ರಾಷ್ಟ್ರದ ಅಮೂಲ್ಯ ನಿಧಿಯಾಗಲಿದ್ದಾರೆ. ಪೊಲೀಸ್ ಮತ್ತು ಇತರ ಸೇವೆಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.
युवा साथियो,
'अग्निपथ योजना' आपके जीवन को नए आयाम प्रदान करने के साथ ही भविष्य को स्वर्णिम आधार देगी। आप किसी बहकावे में न आएं।
माँ भारती की सेवा हेतु संकल्पित हमारे 'अग्निवीर' राष्ट्र की अमूल्य निधि होंगे व @UPGovt अग्निवीरों को पुलिस व अन्य सेवाओं में वरीयता देगी।
जय हिंद
— Yogi Adityanath (@myogiadityanath) June 16, 2022
ಆದರೆ ಈಗಾಗಲೇ ತಾಳ್ಮೆ ಕಳೆದುಕೊಂಡಿರುವ ಯುವಜನರು ಮತ್ತೊಮ್ಮೆ ಬಿಜೆಪಿ ನಾಯಕರ ಮಾತು ಕೇಳಲಿದ್ದಾರೆಯೇ? ಮೋದಿಯವರು ತಾವು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ 1 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರ. ಒಂದಲ್ಲ, ಎರಡು ಭಾರಿ ಅಧಿಕಾರಕ್ಕೆ ಬಂದರೂ ಸಹ ಉದ್ಯೋಗ ಸೃಷ್ಟಿಯಾಗಿಲ್ಲ ಬದಲಿಗೆ ಸರ್ಕಾರದ ನೀತಿಗಳ ಪರಿಣಾಮವಾಗಿ ಉದ್ಯೋಗ ನಷ್ಟವಾಗಿದೆ ಎಂದು ವರದಿಗಳು ಹೇಳುತ್ತಿವೆ. ಇಂತಹ ಸಂದರ್ಭದಲ್ಲಿ ಯುವಜನರ ಹೋರಾಟ ಮಹತ್ವ ಪಡೆದುಕೊಂಡಿದೆ.



ಸ್ವಯಂಗೋಶಿತ ಮಹಾನ್ ದೇಶಪ್ರೇಮಿಗಳು, ಈಗ ನಮ್ಮ ದೇಶವನ್ನು ರಕ್ಶಿಸಬೇಕಾಗಿರುವ ಸೈನಿಕರನ್ನೂ ಸಹ ಗುತ್ತಿಗೆಯ ಆದಾರದ ಮೇಲೆ ನೇಮಿಸಿಕೊಳ್ಳಲು ಸಿದ್ದರಾಗಿದ್ದಾರೆ. ಇದೆಂತಹ ದೇಶಪ್ರೇಮ? ನಾಲ್ಕು ವರ್ಷಗಳ ಸೇವೆಯ ನಂತರ ಈ ಸೈನಿಕನ ಬವಿಶ್ಯದ ಗತಿ ಏನು?
Yes it’s true,, need permanent recruitment.