ಇನೋವೇಟಿವ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಿತ್ರವೆಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ರಾಜಸ್ಥಾನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಪೆಷಲ್ ಜ್ಯೂರಿ ಪ್ರಶಸ್ತಿ ಮತ್ತು ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂಬ ಎರಡು ಪ್ರಮುಖ ಪ್ರಶಸ್ತಿ ಗೆದ್ದಿದ್ದ ಕನ್ನಡದ ’ಡೊಳ್ಳು’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ಜುಲೈನಲ್ಲಿ ತೆರೆಗೆ ಬರಲಿದೆ.
ಗೋವಾದಲ್ಲಿ ನಡೆದ 52ನೇ ಭಾರತ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಕನ್ನಡದ ‘ಡೊಳ್ಳು’ ಸಿನಿಮಾಕ್ಕೆ ಪನೊರಮಾ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರೆತಿದೆ. ಭಾರತೀಯ ಅಂತಾರಾಷ್ಟ್ರೀಯ ಸಿನಿಮೋತ್ಸವ, ಢಾಕಾ ಅಂತರಾಷ್ಟ್ರೀಯ ಸಿನಿಮೋತ್ಸವ, ನೇಪಾಳ ಅಂತಾರಾಷ್ಟ್ರೀಯ ಸಿನಿಮೋತ್ಸವ, ಚೆನ್ನೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವು ಕಡೆ ಪ್ರದರ್ಶನಗೊಂಡಿದೆ.
ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿರುವ ಜನಪದ ಕಲೆ ಡೊಳ್ಳಿನ ಮಹತ್ವ ಸಾರುವ ಕಥಾಹೂರಣ ಹೊಂದಿರುವ ಡೊಳ್ಳು ಚಿತ್ರವನ್ನು ನಿರ್ದೇಶಕ ಪವನ್ ಒಡೆಯರ್ ಅವರ ನಿರ್ಮಾಣ ಸಂಸ್ಥೆ ’ಒಡೆಯರ್ ಮೂವಿಸ್’ ನಿರ್ಮಾಣ ಮಾಡಿದೆ. ಡೊಳ್ಳು ಚಿತ್ರಕ್ಕೆ ’ಮಹಾನ್ ಹುತಾತ್ಮ’ ಕಿರುಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಸಾಗರ್ ಪುರಾಣಿಕ್ ನಿರ್ದೇಶನವಿದೆ.
ಕೈಲಾಸದಲ್ಲಿ ಕುಳಿತಿರುವ ಶಿವಪ್ಪನನ್ನು ಒಲಿಸಿಕೊಳ್ಳುವ ಭಕ್ತಿ ಮಾರ್ಗ ಕೂಡ ಡೊಳ್ಳು ಅಂತಾ ನಂಬಿರುವ ಹಳ್ಳಿ ಜನರು, ಡೊಳ್ಳು ಕಲೆಯನ್ನು ಜೀವಿಸುವ ಯುವಕನ ಪ್ರೀತಿ, ಡೊಳ್ಳು ಕುಣಿತ, ಡೊಳ್ಳಿನ ಮಹತ್ವ ಪ್ರಾಮುಖ್ಯತೆಯನ್ನು ಈ ಸಿನಿಮಾದಲ್ಲಿ ಕಾಣಬಹುದು ಎನ್ನುತ್ತದೆ ಚಿತ್ರತಂಡ.
ಇದನ್ನೂ ಓದಿ: ‘ಚಾರ್ಲಿ 777’ ಭಾವುಕತೆಯಾಚೆಗೆ ತೆರೆದುಕೊಳ್ಳದ ಸರಳರೇಖೆಯ ಸಿನಿಮಾ
ಈ ಸಿನಿಮಾ ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಲ್ಲದೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದೆ. ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್, ತಮ್ಮ ’ಒಡೆಯರ್ ಮೂವಿಸ್’ ನಿರ್ಮಾಣ ಸಂಸ್ಥೆಯಡಿ ಚಿತ್ರ ನಿರ್ಮಾಣ ಮಾಡಿದ್ದಾರೆ.
ನಮ್ಮ "ಒಡೆಯರ್ ಮೂವೀಸ್" ಸಂಸ್ಥೆಯ ಮೊಟ್ಟಮೊದಲ "ಡೊಳ್ಳು" ಚಲನಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರವೆಂದು ಪರಿಗಣಿಸಿ, ಪ್ರತಿಷ್ಠಿತ "ದಾದಾ ಸಾಹೇಬ್ ಫಾಲ್ಕೆ" ಪ್ರಶಸ್ತಿ ಇನ್ನೊವೆಟಿವ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ನ ಅದ್ದೂರಿ ಕಾರ್ಯಕ್ರಮದಲ್ಲಿ ಲಭಿಸಿದೆ.@aanandaaudio @wadeeyar_movies pic.twitter.com/sQub3otWYd
— Pavan Wadeyar (@PavanWadeyar) October 26, 2021
ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್ ನಾಯಕನಾಗಿ, ನಿಧಿ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮತ್ತು ಶರಣ್ ಸುರೇಶ್ ಪ್ರಮುಖ ತಾರಂಗಣ ಚಿತ್ರಕ್ಕಿದೆ. ಶ್ರೀನಿಧಿ ಡಿಎಸ್ ಚಿತ್ರಕಥೆ ಬರೆದಿದ್ದು, ಅನಂತ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ.



