ಮಂಗಳವಾರ ಮಹಾರಾಷ್ಟ್ರ ಸರ್ಕಾರದಲ್ಲಿ ಆಪರೇಷನ್ ಕಮಲದ ಮುನ್ಸೂಚನೆ ಸಿಕ್ಕಿತ್ತು. ಸಚಿವ ಏಕನಾಥ್ ಶಿಂಧೆ 21 ಶಾಸಕರೊಂದಿಗೆ ಗುಜರಾತ್‌ಗೆ ತೆರಳಿ ಈ ಊಹಪೋಹಗಳಿಗೆ ಮತ್ತಷ್ಟು ತುಪ್ಪ ಸುರಿದಿದ್ದರು. ಆದರೆ, ಈಗ ಟ್ವೀಟ್ ಮಾಡಿರುವ ಸಚಿವ ನಾನು ಅಧಿಕಾರಕ್ಕಾಗಿ ಎಂದಿಗೂ ಮೋಸ ಮಾಡುವುದಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಶಂಕೆ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ನಿನ್ನೆ ರಾತ್ರಿ ಸಚಿವ ಏಕನಾಥ್ ಶಿಂಧೆ, 21 ಶಾಸಕರೊಂದಿಗೆ ಗುಜರಾತ್‌ನ ಸೂರತ್‌ನಲ್ಲಿರುವ ಹೋಟೆಲ್‌ಗೆ ತೆರಳಿದ್ದಾರೆ ಎಂದು ವರದಿಯಾಗಿತ್ತು. ಪಕ್ಷದ ಯಾರೊಬ್ಬರಿಗೂ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.
ಇದರ ನಡುವೆಯೇ ಶಿವಸೇನೆ ಪಕ್ಷ ಸಚಿವ ಏಕನಾಥ್ ಶಿಂಧೆ ಅವರನ್ನು ಮಂಗಳವಾರ ಪಕ್ಷದ ಮುಖ್ಯ ಸಚೇತಕ ಸ್ಥಾನದಿಂದ ವಜಾಗೊಳಿಸಿದೆ. ವಜಾಗೊಳಿಸಿದ ತಕ್ಷಣವೇ ಏಕನಾಥ್ ಶಿಂಧೆ ಅವರು ಅಧಿಕಾರಕ್ಕಾಗಿ ಎಂದಿಗೂ ಮೋಸ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರಕ್ಕೆ ಸಂಕಷ್ಟ: ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ಸಂಸದ ಸಂಜಯ್ ರಾವತ್
आम्ही बाळासाहेबांचे कट्टर शिवसैनिक आहोत… बाळासाहेबांनी आम्हाला हिंदुत्वाची शिकवण दिली आहे.. बाळासाहेबांचे विचार आणि धर्मवीर आनंद दिघे साहेबांची शिकवण यांच्याबाबत आम्ही सत्तेसाठी कधीही प्रतारणा केली नाही आणि करणार नाही
— Eknath Shinde – एकनाथ शिंदे (@mieknathshinde) June 21, 2022
“ನಾವು ಬಾಳಾಸಾಹೇಬರ ಕಟ್ಟಾ ಶಿವಸೈನಿಕರು… ಬಾಳಾಸಾಹೇಬರು ನಮಗೆ ಹಿಂದುತ್ವವನ್ನು ಕಲಿಸಿದ್ದಾರೆ.. ಬಾಳಾಸಾಹೇಬರ ಚಿಂತನೆಗಳು ಮತ್ತು ಧರ್ಮವೀರ್ ಆನಂದ್ ದಿಘೆ ಸಾಹೇಬರ ಬೋಧನೆಗಳಿಗೆ ಸಂಬಂಧಿಸಿದಂತೆ ನಾವು ಎಂದಿಗೂ ಅಧಿಕಾರಕ್ಕಾಗಿ ಮೋಸ ಮಾಡಿಲ್ಲ ಮತ್ತು ಮೋಸ ಮಾಡುವುದಿಲ್ಲ” ಎಂದು ಮರಾಠಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಶಿವಸೇನೆಯ ಸೆವ್ರಿ ಶಾಸಕ ಅಜಯ್ ಚೌಧರಿ ಅವರನ್ನು ಏಕನಾಥ್ ಶಿಂಧೆ ಅವರ ಜಾಗಕ್ಕೆ ನೂತನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ಗಳನ್ನು ಒಳಗೊಂಡಿರುವ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವು ಹಿನ್ನಡೆ ಅನುಭವಿಸಿದ ನಂತರ ರಾಜ್ಯದಲ್ಲಿ ಬಿಕ್ಕಟ್ಟು ಉಂಟಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಪರಿಷತ್ ಚುನಾವಣೆಯಲ್ಲಿ BJP ಪರ ಅಡ್ಡ ಮತದಾನ: ಆಪರೇಷನ್ ಕಮಲ ಸಾಧ್ಯತೆ!


