“ಪೋಕ್ಸೋ ಪ್ರಕರಣದ ಪ್ರಮುಖ ಆರೋಪಿ ಮುರುಘಾ ಮಠಾಧೀಶ ಶಿವಮೂರ್ತಿ ಮುರುಘಾ ಶರಣರ ಪರವಾಗಿ ಸ್ಥಳೀಯ ರಾಜಕೀಯ ವ್ಯಕ್ತಿಗಳು, ಹಿಂದುಳಿದ ಮಠಗಳ ಮಠಾಧೀಶರು ನಿಂತಿದ್ದಾರೆ. ಈ ಮೂಲಕ ಮಕ್ಕಳನ್ನು ಹೆದರಿಸುವ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ” ಎಂದು ದಲಿತ ಹೋರಾಟಗಾರ ಪ್ರೊ.ಸಿ.ಕೆ.ಮಹೇಶ್ ಆರೋಪಿಸಿದ್ದಾರೆ.
ಸೋಮವಾರ ಚಿತ್ರದುರ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರ್ಕಾರ ಕೂಡಲೇ ಸಂತ್ರಸ್ತ ಮಕ್ಕಳಿಗೆ ರಕ್ಷಣೆ ನೀಡಬೇಕು. ಅಪ್ರಾಪ್ತೆಯರನ್ನು ದತ್ತು ತೆಗೆದುಕೊಂಡು, ಅವರ ಶಿಕ್ಷಣ, ಉದ್ಯೋಗದ ಸಂಪೂರ್ಣ ಹೊರೆಯನ್ನು ಸರ್ಕಾರವೇ ಹೊರಬೇಕು” ಎಂದು ಆಗ್ರಹಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
“ಈ ಪ್ರಕರಣದ ಆರೋಪಿಗಳು ಪ್ರಭಾವಶಾಲಿ ಸ್ಥಾನಗಳಲ್ಲಿರುವ ಕಾರಣ ಪ್ರಕರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರಿಂದ, ಆರೋಪ ಮುಕ್ತರಾಗುವ ತನಕ, ಮುರುಘಾ ಶರಣರು ಪೀಠವನ್ನು ತೊರೆಯಬೇಕು” ಎಂದು ಅಭಿಪ್ರಾಯಪಟ್ಟರು.
“ಶಿವಮೂರ್ತಿ ಮುರುಘ ಶರಣರನ್ನು ಪೀಠದಿಂದ ತೆರವುಗೊಳಿಸಿ, ಪಾರದರ್ಶಕವಾದ, ಮುಕ್ತ ತನಿಖೆಗೆ ಸರ್ಕಾರ ಅವಕಾಶ ಒದಗಿಸಬೇಕು” ಎಂದು ಕೋರಿದರು.
ಸಾಮಾಜಿಕ ಸಂಘರ್ಷ ಸಮಿತಿಯ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ. ಕುಮಾರ್ ಮಾತನಾಡಿ, “ಅನ್ಯಾಯ, ದೌರ್ಜನ್ಯದ ವಿರುದ್ಧ ದ್ವನಿ ಎತ್ತಿರುವ ಮಕ್ಕಳ ಧೈರ್ಯ ಮೆಚ್ಚುವಂಥದ್ದು. ನಮ್ಮ ಸಮಾಜದಲ್ಲಿ ಅನ್ಯಾಯಕ್ಕೊಳಗಾಗುತ್ತಿರುವ ಮಹಿಳೆಯರು, ಮಕ್ಕಳು, ಇವರಿಂದ ಸ್ಫೂರ್ತಿ ಪಡೆಯಬೇಕು. ಅನ್ಯಾಯದ ವಿರುದ್ಧ ದನಿ ಎತ್ತುವಂತಾಗಲಿ” ಎಂದು ಆಶಿಸಿದರು.
“ಮಹಿಳೆಯರು, ಅದರಲ್ಲೂ ದಲಿತ ಮಹಿಳೆಯರು, ಇಡೀ ಸಮಾಜದಲ್ಲಿ ಅತಿಹೆಚ್ಚು ಶೋಷಣೆಗೆ ಒಳಗಾಗುತ್ತಿರುವ ಸಮುದಾಯ. ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ನಾಗರಿಕರಾದ ನಮ್ಮೆಲ್ಲರ ಕರ್ತವ್ಯ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ” ಎಂದು ಎಚ್ಚರಿಸಿದರು.
ಲೇಖಕ ಆನಂದ್ ಕುಮಾರ್ ಮಾತನಾಡಿ, “ಪೋಕ್ಸೋ ಕಾನೂನಿನ ಅಡಿಯಲ್ಲಿ ದೂರು ದಾಖಲಾದರೆ, ಆ ದೂರಿನನ್ವಯ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಬೇಕು. ಆದರೆ, ಈ ಪ್ರಕರಣದಲ್ಲಿ, ಮುರುಘಾ ಮಠಾಧೀಶರನ್ನು ಬಂಧಿಸದೇ, ಸಂಧಾನವೋ ಅಥವಾ ಸಮರವೋ ಅನ್ನುವ ಜಿಜ್ಞಾಸೆಯಲ್ಲಿ ನಿರತವಾಗಿದ್ದಾರೆ. ಇದನ್ನು ನೋಡಿದರೆ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿದ್ದರೂ ಅದರ ಅನುಷ್ಠಾನವು ಭಿನ್ನವಾಗಿರುವುದನ್ನು ಎತ್ತಿ ತೋರುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಆರೋಪಿ ಮುರುಘಾ ಮಠಾಧೀಶರು ಎಷ್ಟೇ ಪ್ರಭಾವಿಗಳಾಗಿದ್ದರೂ ದೇಶದ ಕಾನೂನಿನ ದೃಷ್ಟಿಯಲ್ಲಿ ಅವರು ಎಲ್ಲರಲ್ಲಿ ಒಬ್ಬರು. ಈ ಕೂಡಲೇ ಅವರನ್ನು ಬಂಧಿಸಬೇಕು” ಎಂದು ಆಗ್ರಹಿಸಿದರು.
ಪ್ರಗತಿಪರ ಚಿಂತಕ, ಸಾಮಾಜಿಕ ಸಂಘರ್ಷ ಸಮಿತಿಯ ಟಿ.ಎ.ಚಿಕ್ಕಣ್ಣ ಮಾತನಾಡಿ, “ಈ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಮುಚ್ಚಿಹಾಕುವ ಪ್ರಯತ್ನಗಳನ್ನು ಪ್ರಭಾವಿಶಾಲಿ ಶಕ್ತಿಗಳು ನಡೆಸುತ್ತಿವೆ. ಆದರೆ, ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ದಿಕ್ಕು ತಪ್ಪಿಸಲು ಸರ್ಕಾರ ಬಿಡಬಾರದು” ಎಂದು ಎಚ್ಚರಿಸಿದರು.
“ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಈ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿರಿ: ನೆಲದ ಕಾನೂನು ಗೌರವಿಸುತ್ತೇನೆ: ಮಠಕ್ಕೆ ಮರಳಿದ ಬಳಿಕ ಮುರುಘಾ ಶರಣರ ಪ್ರತಿಕ್ರಿಯೆ
ನಿರೀಕ್ಷಣಾ ಜಾಮೀನಿಗೆ ಅರ್ಜಿ
ಬಂಧನಕ್ಕೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರು ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ವಕೀಲರ ಮೂಲಕ ಚಿತ್ರದುರ್ಗದ 2ನೇ ಸೆಷನ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ದಾಖಲಿಸಿಕೊಂಡಿರುವ ನ್ಯಾಯಾಲಯ ಸೆಪ್ಟಂಬರ್ 01ರಂದು ವಿಚಾರಣೆಗೆ ನಿಗದಿಪಡಿಸಿದೆ.


