ಜಾರ್ಖಂಡ್ ರಾಜ್ಯದ ಪ್ರಭಾವಿ ಬಿಜೆಪಿ ಮುಖಂಡ ಹಾಗೂ ಸಂಸದ ನಿಶಿಕಾಂತ್ ದುಬೆ ವಿರುದ್ಧ ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿದೆ. ದಿಯೋಘರ್ ವಿಮಾನ ನಿಲ್ದಾಣಕ್ಕೆ ಅತಿಕ್ರಮ ಪ್ರವೇಶ, ದಾಂಧಲೆ, ಬಲವಂತವಾಗಿ ವಿಮಾನ ಹಾರಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.
ಗೊಡ್ಡಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ನಿಶಿಕಾಂತ್ ದುಬೆ ತನ್ನ ಪುತ್ರ ಸೇರಿದಂತೆ ಹಲವರ ಜೊತೆ ಆಗಸ್ಟ್ 31ರಂದು ದಿಯೋಘರ್ ವಿಮಾನ ನಿಲ್ದಾಣದ ಬಹು ರಕ್ಷಣೆಯ ಏರ್ ಟ್ರಾಫಿಕ್ ಕಂಟ್ರೋಲ್ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ ಸಂಜೆ ವೇಳೆ ಬಲವಂತವಾಗಿ ಚಾರ್ಟಡ್ ವಿಮಾನ ಹಾರಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದಿಯೋಘರ್ ವಿಮಾನ ನಿಲ್ದಾಣವನ್ನು ಜುಲೈ ತಿಂಗಳಿನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಆದರೆ ರಾತ್ರಿವೇಳೆ ಸಂಚಾರಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಸಂಜೆ ಸೂರ್ಯ ಮುಳುಗುವ ಅರ್ಧ ಗಂಟೆ ಮುಂಚಿತವಾಗಿ ಮಾತ್ರ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ನಿಯಮವನ್ನು ಮೀರಿ ರಾತ್ರಿ ವೇಳೆ ಸಂಸದ ತನ್ನ ಚಾರ್ಟಡ್ ವಿಮಾನವನ್ನು ಟೇಕ್ ಆಫ್ ಮಾಡಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ವಿಮಾನ ನಿಲ್ದಾಣ ರಕ್ಷಣಾ ಮುಖ್ಯಸ್ಥರಾಗಿರುವ ಸುಮನ್ ಅನನ್ ರವರ ದೂರಿನ ಮೇರೆಗೆ ನಿಶಿಕಾಂತ್ ದುಬೆ, ಮನೋಜ್ ತಿವಾರಿ ಸೇರಿದಂತೆ 9 ಜನರ ವಿರುದ್ಧ ಇತರರ ಜೀವ ಅಥವಾ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಮತ್ತು ಕ್ರಿಮಿನಲ್ ಅತಿಕ್ರಮಣದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಐಎಎಸ್ ಅಧಿಕಾರಿ ಜಾರ್ಖಂಡ್ ಕ್ಯಾಬಿನೆಟ್ ಸಮನ್ವಯ (ನಾಗರಿಕ ವಿಮಾನಯಾನ) ಪ್ರಧಾನ ಕಾರ್ಯದರ್ಶಿಗೆ ಈ ವಿಷಯದ ಬಗ್ಗೆ ಪತ್ರ ಬರೆದಿದ್ದಾರೆ. ಅಧಿಕಾರಿಗಳು ತಮ್ಮ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಸಂಸದರು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೂ ಪತ್ರ ಬರೆದಿದ್ದಾರೆ.
ನಿಶಿಕಾಂತ್ ದುಬೆ ಮತ್ತು ಇತರರು ಭದ್ರತೆಯನ್ನು ಉಲ್ಲಂಘಿಸಿ ಎಟಿಸಿ ಕೋಣೆಗೆ ಪ್ರವೇಶಿಸಿದರು. “ಪೈಲಟ್ ಮತ್ತು ಪ್ರಯಾಣಿಕರು ಟೇಕಾಫ್‌ಗೆ ಕ್ಲಿಯರೆನ್ಸ್ ನೀಡಬೇಕೆಂದು ಒತ್ತಡ ಹೇರಿದರು. ಅದರ ಪರಿಣಾಮವಾಗಿ ಎಟಿಸಿ ಕ್ಲಿಯರೆನ್ಸ್ ನೀಡಲಾಯಿತು” ಎಂದು ವಿಮಾನ ನಿಲ್ದಾಣದ ಭದ್ರತಾ ಉಸ್ತುವಾರಿ ಹೇಳಿದ್ದಾರೆ.
Hon’ble MP Sir,
Night landing matter is subjudice, wud not like to comment on it.
But, when night landing facility/IFR is not there, and so many flights getting cancelled every other day, how did your chartered plane took off at 1817hours when the sunset time was 1803hours? https://t.co/tXozRRHXs8
— Manjunath Bhajantri IAS (@mbhajantri) September 2, 2022
ಆನಂತರ ನಿಶಿಕಾಂತ್ ದುಬೆ ಟ್ವಿಟರ್‌ನಲ್ಲಿ ಐಎಎಸ್ ಅಧಿಕಾರಿಗಳನ್ನು ಜಾರ್ಖಂಡ್ ಮುಖ್ಯಮಂತ್ರಿಯ ಚಮಚಗಳು ಎಂದು ಹೀಯಾಳಿಸಿ ಬರೆದಿದ್ದಾರೆ. ಅದಕ್ಕೆ ಪ್ರತಿ ಉತ್ತರ ನೀಡಿರುವ ಅಧಿಕಾರಿಗಳು “ವಿಮಾನ ನಿಲ್ದಾಣದಲ್ಲಿ ರಾತ್ರಿ ಕಾರ್ಯಾಚರಣೆಗೆ ಅನುಮತಿ ಇಲ್ಲದಿರುವಾಗ ಸೂರ್ಯಾಸ್ತದ ನಂತರ ಚಾರ್ಟರ್ಡ್ ವಿಮಾನವನ್ನು ಹೇಗೆ ಹಾರಿಸಲಾಯಿತು? ಸಂಸದರು, ಅವರ ಪುತ್ರರು ಮತ್ತು ಇತರರು ಹೆಚ್ಚಿನ ಭದ್ರತೆಯ ಎಟಿಸಿ ಪ್ರದೇಶಕ್ಕೆ ಹೇಗೆ ಪ್ರವೇಶಿಸಿದರು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಆಪರೇಷನ್ ಕಮಲ: ಐವರು ಜೆಡಿಯು ಶಾಸಕರು ಬಿಜೆಪಿ ತೆಕ್ಕೆಗೆ


