ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಮಠಕ್ಕೆ ಸೇರಿದ ಬೆಂಗಳೂರಿನ ಕೆಂಗೇರಿ ಬಳಿಯಿದ್ದ ಏಳು ಏಕರೆ ಜಮೀನನ್ನು ಮಾರುಕಟ್ಟೆ ಬೆಲೆಯಿಂದ ಕಡಿಮೆ ಬೆಲೆಗೆ ಮಾರುವ ಮೂಲಕ ಮಠಕ್ಕೆ ಕೋಟ್ಯಾಂತರ ರೂ ನಷ್ಟ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬೆಂಗಳೂರಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಬೆಂಗಳೂರಿನ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಸರ್ವೆ ನಂಬರ್ 34 ರಲ್ಲಿ ಮುರುಘಾ ಮಠಕ್ಕೆ ಸೇರಿದ್ದ 7 ಎಕರೆ 18 ಕುಂಟೆ ಜಮೀನನ್ನು ಕಡಿಮೆ ಬೆಲೆಗೆ ಮಾರಿದ್ದಾರೆ ಎಂದು ಆರೋಪಿಸಿ ತುಮಕೂರು ಮೂಲಕ ಮಠದ ಭಕ್ತ ಪಿ.ಎಸ್ ಪ್ರಕಾಶ್ ಎಂಬುವವರು ದೂರು ನೀಡಿದ್ದರು. ಅಷ್ಟು ಜಮೀನಿಗೆ ಮಾರುಕಟ್ಟೆ ಬೆಲೆ 7 ಕೋಟಿ ರೂಗಳಿಗೆ ಅಧಿಕವಿದ್ದರೆ ಅದನ್ನು ಮುರುಘಾ ಶರಣರು ಕೇವಲ 49 ಲಕ್ಷ ರೂಗಳಿಗೆ ಮಾರಿದ್ದಾರೆ ಎಮದು ದೂರಿನಲ್ಲಿ ತಿಳಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ರಾಚೋಟಿ ಮಹಾಗುಂಡಪ್ಪ ಶಿರೂರ್ ರವರು ನಡೆಸುತ್ತಿದ್ದು ಮುಂದಿನ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದ್ದಾರೆ.
ಸದ್ಯ ಬಾಲಕಿಯರ ಅತ್ಯಾಚಾರ ಪ್ರಕರಣದಲ್ಲಿ ಚಿತ್ರದುರ್ಗದ ಪೊಲೀಸ್ ಕಸ್ಟಡಿಯಲ್ಲಿರುವ ಮುರುಘಾ ಶರಣರು ಎದೆನೋವಿನ ನೆಪ ಹೇಳಿ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಆಗಲು ಬಯಸಿದ್ದರು. ಆದರೆ ಅದನ್ನು ಚಿತ್ರದುರ್ಗದ ಸೆಷನ್ ನ್ಯಾಯಾಲಯ ಅನುಮತಿ ನೀಡಿಲ್ಲ. ಅವರೀಗೆ 2261 ನಂಬರ್‌ನ ವಿಚಾರಣಾಧೀನ ಖೈದಿಯಾಗಿದ್ದಾರೆ.
ನಿನ್ನೆ ನ್ಯಾಯಾಲಯ ಜೈಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ತಮ್ಮ ಅನುಮತಿಯಿಲ್ಲದೆ ಅವರನ್ನು ಜಿಲ್ಲಾಸ್ಪತ್ರೆಗೆ ಹೇಗೆ ದಾಖಲು ಮಾಡಲಾಯಿತು ಎಂಬುದಕ್ಕೆ ವಿವರಣೆ ನೀಡಬೇಕೆಂದು ಜೈಲು ಅಧಿಕಾರಿಗಳಿಗೆ ಚಿತ್ರದುರ್ಗದ 2ನೇ ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಕೆ ಕೋಮಲಾರವರು ತಾಕೀತು ಮಾಡಿದ್ದಾರೆ. ಅಲ್ಲದೇ ಮುರುಘಾ ಶರಣರನ್ನು ಯಾವ ವೈದ್ಯಕೀಯ ದಾಖಲೆಗಳ ಆಧಾರದಲ್ಲಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಆರೋಪಿಯನ್ನು ಖುದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶಿಸಿದ್ದಾರೆ.
ಕೋರ್ಟ್ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಭದ್ರತೆಯಲ್ಲಿ ಮುರುಘಾ ಶರಣರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆ ನಂತರ ಆರೋಪಿಯನ್ನು ಮೂರು ದಿನಗಳ ಕಾಲ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅತ್ಯಾಚಾರಿಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ: ಪುಷ್ಪಾ ಅಮರನಾಥ್


