ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರರ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಸುಲಿಗೆ ಪ್ರಕರಣವನ್ನು ಮರು ವಿಚಾರಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಇಂದು ಆದೇಶಿಸಿದೆ.
2020ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಅವರ ಪುತ್ರ ಬಿ.ವೈ ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ ಮರಡಿಯವರ ವಿರುದ್ಧ ಸುಲಿಗೆ ಮತ್ತು ವಸೂಲಿ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿತ್ತು.
ಬಿ.ವೈ ವಿಜಯೇಂದ್ರ ಮತ್ತು ಶಶಿಧರ ಮರಡಿಯವರು ರಾಮಲಿಂಗಂ ಕನ್ಸ್‌ಸ್ಟ್ರಕ್ಸನ್ ಎಂಬುವವರಿಂದ ಹಣ ನೀಡದಿದ್ದರೆ ನಿಮ್ಮ ಬಿಡಿಎ ಪ್ರಾಜೆಕ್ಟ್ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿ ಆರ್‌ಟಿಜಿಎಸ್ ಮೂಲಕ ಅಪಾರ ಪ್ರಮಾಣದ (17 ಕೋಟಿ ರೂಗಳು) ಹಣವನ್ನು ಸುಲಿಗೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಈ ಕುರಿತು ವಾಟ್ಸಾಪ್ ಚಾಟ್ ಒಂದು ಲೀಕ್ ಹಾಕಿ ಭಾರೀ ಕೋಲಾಹಲ ಸೃಷ್ಟಿಸಿತ್ತು. ಇದನ್ನು ನಿರಂತರವಾಗಿ ವರದಿ ಮಾಡಿದ ಪವರ್ ಟಿವಿ ಮೇಲೆ ದಾಳಿ ನಡೆಸಲಾಗಿತ್ತು.
ಈ ಪ್ರಕರಣದ ಕುರಿತು ಸಿಎಂ ಯಡಿಯೂರಪ್ಪ ಮತ್ತವರ ಕುಟುಂಬದವರ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಮತ್ತು ರಾಜ್ಯಪಾಲರಿಗೆ ದೂರು ನೀಡಿದ್ದರು. ಆನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿಯೂ ದೂರು ದಾಖಲಿಸಲಾಗಿತ್ತು. ಆದರೆ ಆ ನ್ಯಾಯಾಲಯ ರಾಜ್ಯಪಾಲರ ಒಪ್ಪಿಗೆ ಇಲ್ಲದ ಕಾರಣ ಅರ್ಜಿಯನ್ನು ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈಗ ಹೈಕೋರ್ಟ್ ಆ ಪ್ರಕರಣದ ಮರು ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದೆ. ಹಾಗಾಗಿ ಯಡಿಯೂರಪ್ಪ ಕುಟುಂಬದ ವಿರುದ್ಧ ಮತ್ತೊಮ್ಮೆ ಮರುತನಿಖೆ ನಡೆಯಲಿದೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ: ಬಿಎಸ್‌ವೈ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು


