ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಹುಳೇರಹಳ್ಳಿಯಲ್ಲಿ ಗ್ರಾಮದೇವತೆಯ ಮೆರವಣಿಗೆಯ ವೇಳೆ ದಲಿತ ಬಾಲಕ ದೇವರಿಗೆ ಸಂಬಂಧಿಸಿದ ಕೋಲನ್ನು ಮುಟ್ಟಿದನೆಂದು ಆರೋಪಿಸಿ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಇತ್ತೀಚೆಗೆ ನಡೆದಿದೆ.
ದೇವರಿಗೆ ಅಪವಿತ್ರವಾಗಿತೆಂದು ಆರೋಪಿಸಿ ಆ ಬಾಲಕನ ಕುಟುಂಬವನ್ನು ಊರಿನ ಸವರ್ಣೀಯರು ಬಹಿಷ್ಕಾರ ಹಾಕಿದ್ದಾರೆ. ಜೊತೆಗೆ ಈ ಬಡ ಕುಟುಂಬಕ್ಕೆ ಅರವತ್ತು ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ ಎಂಬ ಆರೋಪ ಬಂದಿದೆ.
ಗ್ರಾಮದ ದಲಿತ ಬಾಲಕ ದೇವರ ಮೆರವಣಿಗೆಯ ವೇಳೆ ದೇವರ ಕೋಲನ್ನು ಮುಟ್ಟಿ ಮೈಲಿಗೆ ಮಾಡಿದ್ದಾನೆ ಎಂದು ಆರೋಪಿಸಿ ಹೊಡೆಯಲು ಮುಂದಾಗಿದ್ದರು. ಜೊತೆಗೆ ಬಾಲಕನ ಕುಟುಂಬವನ್ನು ಕರೆಸಿ ಅರವತ್ತು ಸಾವಿರ ರೂ. ದಂಡ ವಿಧಿಸಿದ್ದರು.
“ನೀನು ಇಲ್ಲಿಗೆ ಬರಬಾರದು. ದೇವರನ್ನು ಮುಟ್ಟಿ ಮೈಲಿಗೆ ಮಾಡಿದ್ದೀಯ. ಅರವತ್ತು ಸಾವಿರ ದಂಡ ಕಟ್ಟಿದರೆ ಮಾತ್ರ ಊರಿನೊಳಗೆ ನಿಮ್ಮ ಕುಟುಂಬ ಪ್ರವೇಶಿಸಬಹುದು” ಎಂದು ತಿಳಿಸಿರುವುದಾಗಿ ಬಾಲಕ ಹೇಳಿಕೆ ನೀಡಿದ್ದಾನೆ.
ಘಟನೆಯನ್ನು ವಿವರಿಸಿರುವ ಬಾಲಕ, “ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾರಾಯಣಸ್ವಾಮಿ ಅವರು ಹೊಡೆಯಲು ಬಂದರು” ಎಂದು ತಿಳಿಸಿದ್ದಾನೆ.
ಬಾಲಕನ ತಾಯಿ ಶೋಭಾ ಮಾತನಾಡಿ, “ಅಂದು ನಾನು ಊರಿನಲ್ಲಿ ಇರಲಿಲ್ಲ. ಎಂದಿನಂತೆ ಬೆಳಿಗ್ಗೆ ಎದ್ದು ರೈಲು ಹತ್ತಿ ಬೆಂಗಳೂರಿಗೆ ಹೌಸ್‌ಕೀಪಿಂಗ್ ಕೆಲಸಕ್ಕೆ ಹೋಗಿದ್ದೆ. ಮನೆಗೆ ಬಂದಾಗ ವಿಷಯ ತಿಳಿಯಿತು. ನಾವು ದೇವರಿಗಾಗಿ ಅರವತ್ತು ಸಾವಿರ ರೂ. ಖರ್ಚು ಮಾಡಿದ್ದೇವೆ. ದೇವರು ಬಿಂದಿ (ಅಪವಿತ್ರ) ಆಗಿದೆ. ನಾವು ಶಾಂತಿ (ಪವಿತ್ರ) ಮಾಡಿಸಲೇಬೇಕು. ನೀವು ದುಡ್ಡು ಕಟ್ಟಲೇಬೇಕು ಅಂದರು. ನಮ್ಮ ಕೈಲಿ ಕಟ್ಟಲು ಆಗಲ್ಲ ಎಂದೆ. ಇಲ್ಲವಾದರೆ ಊರು ಖಾಲಿ ಮಾಡಿರಿ” ಎಂದು ಬೆದರಿಕೆ ಹಾಕಿರುವುದಾಗಿ ವಿವರಿಸಿದ್ದಾರೆ.
“ನಾವು ದಿನಕ್ಕೆ ಮುನ್ನೂರು ರೂಪಾಯಿ ಕೂಲಿ ಮಾಡೋರು. ಅರವತ್ತು ಸಾವಿರ ರೂ.ಗಳನ್ನು ಎಲ್ಲಿಂದ ತಂದುಕೊಡಲಿ? ನಮ್ಮ ಪರವಾಗಿ ಯಾರೂ ನಿಲ್ಲಲಿಲ್ಲ. ಊರಿಂದ ಆಚೆ ಬಂದು ಮಾಧ್ಯಮದೊಂದಿಗೆ ವಿಷಯ ಹಂಚಿಕೊಂಡಿದ್ದೇವೆ” ಎಂದಿದ್ದಾರೆ.
ಇದನ್ನೂ ಓದಿರಿ: ಇಸ್ಲಾಂ, ಕ್ರಿಶ್ಚಿಯನ್‌ಗೆ ಮತಾಂತರವಾದ ದಲಿತರ ಸ್ಥಿತಿಗತಿ ತಿಳಿಯಲು ರಾಷ್ಟ್ರೀಯ ಆಯೋಗ ರಚಿಸಲು ಸಿದ್ಧತೆ!?
‘ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ’ಯ ಸಂದೇಶ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. “ನೀವೇನು ಹೆದರಬೇಕಿಲ್ಲ. ನೀವು ಭಾರತ ದೇಶದಲ್ಲಿದ್ದೀರಿ. ಇದು ಯಾರಪ್ಪನ ದೇಶವೂ ಅಲ್ಲ. ಸಂವಿಧಾನದ ಅಡಿಯಲ್ಲಿ ನೀವಿದ್ದೀರಿ” ಎಂದು ಹೇಳಿದ್ದಾರೆ.
“ಮನುಷ್ಯರಾಗಿ ಹೀಗೆ ಯಾರೂ ನಡೆದುಕೊಳ್ಳಬಾರದು. ದಲಿತರಾಗಿ ಹುಟ್ಟಿರುವುದೇ ನಮ್ಮದು ತಪ್ಪಾಯಿತಾ?” ಎಂದು ಪ್ರಶ್ನಿಸಿರುವ ಅವರು, “ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತೇವೆ. ಅಧಿಕಾರಿಗಳು ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು” ಎಂದು ಪ್ರತಿಕ್ರಿಯಿಸಿದ್ದಾರೆ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಸಂದೇಶ್, “ಗ್ರಾಮದಲ್ಲಿ ಹದಿನೈದು ದಲಿತರ ಮನೆಗಳಿದ್ದರೆ, ಎಂಟು ನೂರು ಸವರ್ಣೀಯರ ಮನೆಗಳಿವೆ. ಈ ಗ್ರಾಮದಲ್ಲಿ ಪದೇಪದೇ ಇದೇ ರೀತಿಯ ದೌರ್ಜನ್ಯಗಳಾಗುತ್ತಿವೆ. ಆದರೆ ದಲಿತರು ಧೈರ್ಯ ಮಾಡಿ ಮುಂದೆ ಬರುತ್ತಿಲ್ಲ” ಎಂದರು.



ಮೊದಲು ಪೊಲೀಸ್ ಟಾಣೆಯಲ್ಲಿ ದೂರು ದಾಕಲಿಸಬೇಕು. ಇಲ್ಲದಿದ್ದರೆ ಇಂತಹ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ.