Homeಮುಖಪುಟಅಶ್ವಮೇಧ ಯಜ್ಞ ಹಿಂದೂಗಳೂ ಹೆಮ್ಮೆಗೆ ಅರ್ಹವೇ?

ಅಶ್ವಮೇಧ ಯಜ್ಞ ಹಿಂದೂಗಳೂ ಹೆಮ್ಮೆಗೆ ಅರ್ಹವೇ?

- Advertisement -
- Advertisement -

ಕೆಲವು ವರ್ಷಗಳಿಂದ ಹಿಂದುತ್ವವಾದಿಗಳು ಹಿಂದೂಗಳನ್ನೆಲ್ಲ ಒಟ್ಟುಗೂಡಿಸಲು ’ಗರ್ವದಿಂದ ಹೇಳಿ ನಾವು ಹಿಂದೂ ಎಂದು’ ಎಂಬ ವರಸೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಹಿಂದೂ ಧರ್ಮದಲ್ಲಿ ಗರ್ವ ಪಡುವಂತಹ ಎಷ್ಟು ವಿಷಯಗಳಿವೆಯೋ ಗೊತ್ತಿಲ್ಲ. ಆದರೆ ಪ್ರಾಚೀನ ಕಾಲದಿಂದ ನಡೆದು ಬರುತ್ತಿರುವ ಅಶ್ವಮೇಧ ಯಜ್ಞದ ಬಗ್ಗೆ ಹಿಂದೂಗಳು ಗರ್ವ ಪಡಬೇಕೋ ಅಥವಾ ಅಸಹ್ಯ ಪಡಬೇಕೋ ಎನ್ನುವುದು ಹಿಂದೂ ಧರ್ಮ ಗ್ರಂಥಗಳನ್ನು ನೋಡಿದರೆ ಗೊತ್ತಾಗಬಹುದು.

ಪ್ರಾಚೀನ ಕಾಲದಲ್ಲಿ ಪ್ರಚಲನೆಯಲ್ಲಿದ್ದ ಯಜ್ಞಗಳಲ್ಲಿ ಅಶ್ವಮೇಧ ಯಜ್ಞ ಅತ್ಯಂತ ಶ್ರೇಷ್ಠವಾದದ್ದು ಎಂದು ಪರಿಗಣಿಸಲಾಗಿದೆ. ಅಶ್ವಮೇಧ ಯಜ್ಞ ಎಂದರೆ ಅದನ್ನು ಮಾಡುವ ರಾಜ ಒಂದು ಕುದುರೆಯನ್ನು ಅಲೆಯಲು ಬಿಡುತ್ತಿದ್ದ; ಅದು ಯಾವಯಾವ ಪ್ರದೇಶಗಳಲ್ಲಿ ನಿರ್ವಿರೋಧವಾಗಿ ಅಲೆದಾಡುತ್ತದೆಯೋ, ಆ ಭೂಭಾಗವೆಲ್ಲ ಯಜ್ಞ ಮಾಡುವ ರಾಜನ ಅಧೀನವಾಗುತ್ತಿತ್ತು. ಹೀಗೆ ಇದೊಂದು ರಾಜ್ಯ ವಿಸ್ತರಣೆಯ ವಿಧಾನವಾಗಿತ್ತು. ಅಲ್ಲದೇ ಪುಣ್ಯಗಳಿಸುವ ಒಂದು ವಿಧಾನವೂ ಆಗಿತ್ತು; ಹೀಗೆಂದು ಬಹಳ ಜನ ಅಂದುಕೊಳ್ಳುತ್ತಾರೆ. ಆದರೆ ಈ ಯಜ್ಞದಲ್ಲಿ ಯಜ್ಞ ಮಾಡುವ ಚಕ್ರವರ್ತಿಯ ಪಟ್ಟರಾಣಿಯಾದವಳು ಆ ಕುದುರೆಯೊಂದಿಗೆ ಒಂದು ರಾತ್ರಿ ಕಳೆಯಬೇಕಾಗುತ್ತಿತ್ತು ಹಾಗೂ ಆ ಕುದುರೆಯನ್ನು ಹಾಗೂ ಅದರೊಂದಿಗೆ ನೂರಾರು ಇತರೆ ಪ್ರಾಣಿಗಳನ್ನು, ಪಕ್ಷಿಗಳನ್ನು ಕೊಂದು ಬೇಯಿಸಿ ತಿನ್ನಲಾಗುತ್ತಿತ್ತು ಎಂದು ಹೇಳಿದರೆ ಬಹಳ ಜನರಿಗೆ ಆಶ್ಚರ್ಯವಾಗಬಹುದು.

ರಾಮಾಯಣದ ದಶರಥ ಈ ಯಜ್ಞವನ್ನು ಮಾಡಿದ್ದ. ವಾಲ್ಮೀಕಿ ರಾಮಾಯಣದ ಬಾಲಕಾಂಡದ 14ನೆಯ ಸರ್ಗದಲ್ಲಿ “ಪತತ್ರಿಣಾ ತದಾ ಸಾರ್ಧಂ ಸುಸ್ಥಿತೇನ ಚ ಚೆತಸಾ, ಅವಸದ್ರಜನೀಮೆಕಾಂ ಕೌಸಲ್ಯಾ ಧರ್ಮಕಾಮ್ಯಯಾ” ಅಂದರೆ “ಯಜ್ಞದ ಆಚರಣೆಯ ಫಲಿತಾಂಶಗಳನ್ನು ಅಪೇಕ್ಷಿಸುವ ರಾಣಿ ಕೌಸಲ್ಯಾ ಕುದುರೆಯೊಂದಿಗೆ ಒಂದು ರಾತ್ರಿ ಅನಾನುಕೂಲವಾಗಿ ವಾಸಿಸಿದಳು” ಎಂದು ಹೇಳಲಾಗಿದೆ. ಹಾಗೆಯೇ ಮಹಾಭಾರತದ ಯುಧಿಷ್ಠಿರ ಈ ಯಜ್ಞವನ್ನು ಮಾಡಿದ್ದ. ಮಹಾಭಾರತದ ಆದಿಪರ್ವದ ಅಧ್ಯಾಯ 14ರಲ್ಲಿ “ತತಃ ಸಜ್ಞಾಪ್ಯ ತುರಗಂ ವಿಧಿವದ್ಧ್ಯಾಜಕರ್ಷಭಾಃ ಉಪಸಂವೆಶಯನ್ನಾಜಂಸ್ತತಸ್ತಾಂ ದ್ರುಪದಾತ್ಮಜಾಮ್” ಅಂದರೆ “ದ್ರೌಪದಿ ಆ ಉಸಿರು ಕಟ್ಟಿದ ಕುದುರೆಯ ಪಕ್ಕದಲ್ಲಿ ಮಲಗಿಕೊಂಡಳು” ಎಂದು ಹೇಳಲಾಗಿದೆ.

ಮೈಸೂರಿನ ಆಸ್ಥಾನ ವಿದ್ವಾನರಾಗಿದ್ದ ಎಚ್.ಪಿ.ವೆಂಕಟರಾಯರು ಋಗ್ವೇದವನ್ನು ಕನ್ನಡಕ್ಕೆ ಅನುವಾದಿಸಿ ಅದರ ಮೇಲೆ ವಿವರವಾದ ಟಿಪ್ಪಣಿಗಳನ್ನು ಬರೆದಿದ್ದಾರೆ. ಇದನ್ನು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಪ್ರಕಟಿಸಿದ್ದಾರೆ. ಅಶ್ವಮೇಧ ಯಜ್ಞದ ಮಹತ್ವವನ್ನು ವೆಂಕಟರಾಯರು ಹೀಗೆ ವಿವರಿಸುತ್ತಾರೆ: “ಅಶ್ವಮೇಧವು ಅತ್ಯಂತ ಪ್ರಾಚೀನವೂ ಪ್ರಸಿದ್ಧವೂ ಆದ ಯಜ್ಞವು. ರಾಜ್ಯ ವಿಸ್ತರಣೆಗಾಗಿ ಸಾರ್ವಭೌಮ ಪದವಿಗೆ ಅರ್ಹನಾಗಿರುವ ರಾಜನು ಮಾತ್ರ ನೆರವೇರಿಸತಕ್ಕ ಈ ಯಜ್ಞವು… ಅನೇಕ ರಾಜಾಧಿರಾಜರುಗಳಿಗೆ.. ಸಾರ್ವಭೌಮನಾಗಿರುವವನೂ, ಯಾವ ರಾಜನಿಂದಲೂ ಪರಾಭವವನ್ನು ಹೊಂದಿರದವನೂ ಆದ ಚಕ್ರವರ್ತಿಯಿಂದ ಮಾತ್ರ ನಿರ್ವಹಿಸಲ್ಪಡುವ ಈ ಮಹಾ ಯಜ್ಞವು ಬಹಳ ಶ್ರಮಸಾಧ್ಯವಾದ ಕರ್ಮವಾಗಿದೆ”.

ಋಗ್ವೇದದ ಮೊದಲನೆಯ ಮಂಡಲದ ಸೂಕ್ತ ಸಂಖ್ಯೆ 162 ಹಾಗೂ 163ರಲ್ಲಿ ಈ ಯಜ್ಞದ ಉಲ್ಲೇಖವಿದೆ. ತೈತ್ತರೀಯ ಸಂಹಿತೆ ಮತ್ತು ಬ್ರಾಹ್ಮಣ, ವಾಜಸನೇಯ ಸಂಹಿತೆ, ಶತಪಥಬ್ರಾಹ್ಮಣ ಮತ್ತು ಆಪಸ್ತಂಬ ಶ್ರೌತಸೂತ್ರ ಮೊದಲಾದ ಹಲವಾರು ಗ್ರಂಥಗಳಲ್ಲಿ ಹಲವು ವ್ಯತ್ಯಾಸಗಳೊಂದಿಗೆ ಅಶ್ವಮೇಧ ಯಜ್ಞದ ವಿವರಗಳು ಇವೆ.

ಯಜ್ಞಾಶ್ವ ಹಾಗೂ ಅದರ ಜೊತೆಗೆ ಬಲಿಯಾಗಬೇಕಿರುವ ಕುರಿಯ ಪ್ರಸ್ತಾಪದ ನಂತರ 162ನೆಯ ಸೂಕ್ತ ಹೀಗೆ ಹೇಳುತ್ತದೆ: ಯಜ್ಞಾಶ್ವವಾದ ನಿನ್ನ ಮಾಂಸಪೂರಿತವಾದ ಯಾವ ಅಂಗವನ್ನು ನೊಣವು ಇಲ್ಲಿ ತಿನ್ನುತ್ತಿತ್ತೋ, ವಧಸ್ತಂಭದಲ್ಲಾಗಲೀ ಅಥವಾ ವಧ ಸಾಧನವಾದ ಕತ್ತಿಯಲ್ಲಾಗಲೀ ಯಾವ ಅಂಶವು ಅಂಟಿಕೊಂಡಿದ್ದಿತೋ ಮತ್ತು ಛೇದನ ಕೈಗಳಲ್ಲೂ ಉಗುರುಗಳಲ್ಲೂ ಯಾವ ಅಂಶವು ಸೇರಿರುವುದೋ ಅವೆಲ್ಲವೂ ದೇವತೆಗಳಿಗೆ ಅರ್ಪಿತವಾಗಲಿ. ಈ ಯಜ್ಞಾಶ್ವದ ಉದರದಿಂದ ಪೂರ್ಣವಾಗಿ ಜೀರ್ಣವಾಗದಿರತಕ್ಕ ಯಾವ ಆಹಾರವು ಹನನಕಾಲದಲ್ಲಿ ಹೊರಕ್ಕೆ ಬರುತ್ತದೆಯೋ ಮತ್ತು ಯಾವ ಹಸಿಯಾಗಿರತಕ್ಕ ಮಾಂಸದ ದುರ್ಗಂಧವಿದೆಯೋ, ಅದೆಲ್ಲವನ್ನೂ ವಧಕಾರರು ದೋಷರಹಿತವೂ ಶುದ್ಧವೂ ಆದುದನ್ನಾಗಿ ಮಾಡಲಿ ಮತ್ತು ಯಜ್ಞಾರ್ಹವಾದ ಇದರ ಅವಯಗಳನ್ನು ದೇವತೆಗಳಿಗೆ ಯೋಗ್ಯವಾಗುವಂತೆ ಮಾಡಲಿ. ನಿನ್ನ ಮೃತ ಶರೀರವು ಅಗ್ನಿಯಲ್ಲಿ ಬೇಯಿಸಲ್ಪಡುತ್ತಿರುವಾಗ ಬೇಯಿಸುವ ಪಾತ್ರೆಯಿಂದ ಕೆಳಕ್ಕೆ ಬಿದ್ದು ಚೆಲ್ಲಿಹೋಗುವ ರಸಾದಿ ಭಾಗವೂ, ಸಲಾಕಿಯಿಂದ ಚುಚ್ಚಿ ಮಾಂಸವನ್ನು ಸುಡುತ್ತಿರುವಾಗ ಆ ಸಲಾಕಿಯಿಂದ ಜಾರಿ ಬಿದ್ದುಹೋಗಿರುವ ಭಾಗವೂ ನೆಲದ ಅಥವಾ ಹರಡಿರುವ ದರ್ಭೆಯ ಮೇಲೆ ಬಿದ್ದರೂ ಅವು ವ್ಯರ್ಥವಾಗದೇ ಹವಿಃಪ್ರಿಯರಾದ ದೇವತೆಗಳಿಗೆ ಅರ್ಪಿತವಾಗಲಿ. ಅಶ್ವದ ಮಾಂಸವನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಬೇಯಿಸುವಾಗ ಅದು ಚೆನ್ನಾಗಿ ಬೆಂದಿರುವುದೆ ಎಂದು ನೋಡಲು ಉಪಯೋಗಿಸುವ ಮರದ ಕೋಲು, ಬೆಂದ ಮಾಂಸವನ್ನು ಹಾಕಿಡುವ ಪಾತ್ರೆಗಳು; ಬೆಂದ ಮಾಂಸವು ಆರಿ ಹೋಗದಂತೆ ಪಾತ್ರೆಗಳ ಮೇಲೆ ಮುಚ್ಚುವ ತಟ್ಟೆಗಳು, ಅಶ್ವದ ಹೃದಯಾದಿ ವಿವಿಧ ಅವಯವಗಳನ್ನು ಬೆಂದಮೇಲೆ ಗುರ್ತಿಸುವುದಕ್ಕಾಗಿ ಮಾಂಸದ ತುಂಡುಗಳಿಗೆ ಚುಚ್ಚುವ ವೇತಸವೃಕ್ಷದ ಕಡ್ಡಿಗಳು, ಮಾಂಸವನ್ನು ಕತ್ತರಿಸುವ ಚಾಕು, ಕತ್ತಿ, ಇತ್ಯಾದಿ ಆಯುಧಗಳು ಎಲ್ಲವೂ ಯಜ್ಞಭೂಮಿಯಲ್ಲಿ ಅಶ್ವದ ಸುತ್ತ ಇಟ್ಟಿರುವುದು ಅಶ್ವವನ್ನು ಅಲಂಕರಿಸಿದಂತೆ ಕಾಣುತ್ತಿದೆ” ಇತ್ಯಾದಿ.

ಕೊನೆಗೆ ಯಜ್ಞವನ್ನು ನೆರವೇರಿಸುವ ಅಧ್ವರ್ಯು ಆ ಕುದುರೆಗೆ, “ಎಲೈ ಅಶ್ವವೇ, ಈ ಯಜ್ಞಕಾಲದಲ್ಲಿ ಇತರ ಅಶ್ವಗಳು ಮೃತ್ಯುವನ್ನು ಹೊಂದುವ ರೀತಿಯಲ್ಲಿ ನೀಚವಾದ ಮೃತ್ಯುವನ್ನು ನೀನು ಹೊಂದುವುದೇ ಇಲ್ಲ ಮತ್ತು ಛೇದನದಿಂದ ನಿನಗೆ ಯಾವ ಹಿಂಸೆಯೂ ಆಗುವುದಿಲ್ಲ” ಎಂದು ಹೇಳುತ್ತಾನೆ. “ಯಜ್ಞಗಳಲ್ಲಿ ಆಹುತಿ ಕೊಡಲೆಂದೇ ಪ್ರಜಾಪತಿ ಹಲವು ಪ್ರಾಣಿಗಳನ್ನು ಸೃಷ್ಟಿಸಿದ್ದಾನೆ. ಆದುದರಿಂದ ಯಜ್ಞದಲ್ಲಿ ಪ್ರಾಣಿಗಳನ್ನು ಕೊಲ್ಲುವುದು ಕೊಲೆಯೇ ಅಲ್ಲ, ಯಜ್ಞಗಳಲ್ಲಿ ನಷ್ಟವಾಗುವ ಗಿಡಮೂಲಿಕೆಗಳು, ಮರಗಳು, ದನಗಳು, ಪಕ್ಷಿಗಳು ಮತ್ತು ಇತರ ಪ್ರಾಣಿಗಳು ನಷ್ಟವಾದ ನಂತರ ಇನ್ನೂ ಶ್ರೇಷ್ಠವಾದ ಪುನರ್ಜನ್ಮವನ್ನು ಪಡೆಯುತ್ತವೆ, ಯಜ್ಞಗಳಲ್ಲಿ ಪ್ರಾಣಿಗಳನ್ನು ಕೊಲ್ಲುವ ಮೂಲಕ ದ್ವಿಜನು ತನ್ನನ್ನು ಹಾಗೂ ಆ ಪ್ರಾಣಿಗಳನ್ನು ಇನ್ನೂ ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತಾನೆ” ಎನ್ನುತ್ತಾನೆ ಮನು. (ಮನುಸ್ಮೃತಿ 5.39,40,42)

ವಿಜಯಯಾತ್ರೆಗೆ ಅಶ್ವವು ಸಿದ್ಧವಾದ ನಂತರ ಅದರ ಕಿವಿಯ ಹತ್ತಿರ ಒಂದು ನಾಯಿಯನ್ನು ಆಹುತಿಯಾಗಿ ಬಲಿ ಕೊಡಬೇಕು. ವಿಜಯಯಾತ್ರೆಯ ನಂತರ ಅಶ್ವವನ್ನು ಯಜ್ಞಸ್ಥಾನಕ್ಕೆ ಕರೆತರಲಾಗುತ್ತದೆ. ಅದರ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗುತ್ತದೆ. ಅದರ ಉಸಿರನ್ನು ಕಟ್ಟಲಾಗುತ್ತದೆ. ನಂತರ ವಧೆ ಮಾಡಲಾಗುತ್ತದೆ. ತೈತ್ತರೀಯ ಸಂಹಿತೆಯಲ್ಲಿ ಮೇಧಾಶ್ವದ ಜೊತೆಗೆ ಬಲಿಗೆ ಸಿದ್ಧವಾಗಬೇಕಾದ ಪ್ರಾಣಿಗಳ ಉದ್ದವಾದ ಪಟ್ಟಿ ಇದೆ. ಇಂದ್ರನಿಗೆ ವರಾಹವೂ, ವರುಣನಿಗೆ ಕೃಷ್ಣಮೃಗವೂ ಇತ್ಯಾದಿಯಾಗಿ, ಆಯಾ ದೇವತೆಗಳಿಗೆ ಅವರವರ ಇಷ್ಟಗಳಿಗನುಗುಣವಾಗಿ ಬೇರೆಬೇರೆ ಪ್ರಾಣಿಗಳು ಅರ್ಪಿತವಾಗಬೇಕು. ಈ ಬಗ್ಗೆ ವಾಲ್ಮೀಕಿ ರಾಮಾಯಣದ ಬಾಲ ಕಾಂಡದ 14ನೆಯ ಸರ್ಗದಲ್ಲಿ ದಶರಥನ ಅಶ್ವಮೇಧ ಯಜ್ಞದಲ್ಲಿ ಯಜ್ಞಾಶ್ವದ ಜೊತೆಗೆ ಮೂರು ನೂರು ಬೇರೆಬೇರೆ ಪ್ರಾಣಿಗಳನ್ನು ಕಂಬಗಳಿಗೆ ಕಟ್ಟಲಾಗಿತ್ತು ಎಂದು ಹೇಳಲಾಗಿದೆ. ಹಾಗೆಯೇ ಮಹಾಭಾರತ ಕೂಡ ಅಶ್ವಮೇಧಿಕ ಪರ್ವದ ಅಧ್ಯಾಯ 90ರಲ್ಲಿ ಯುಧಿಷ್ಟಿರ ಮಾಡಿದ ಅಶ್ವಮೇಧ ಯಜ್ಞದಲ್ಲಿಯೂ ಮುನ್ನೂರು ಬೇರೆಬೇರೆ ಪ್ರಾಣಿಗಳನ್ನು ಗೂಟಗಳಿಗೆ ಕಟ್ಟಲಾಗಿತ್ತು ಎಂದು ಹೇಳುತ್ತದೆ.

ಈ ಯಜ್ಞ ಮಾಡುವಲ್ಲಿ ನಾಲ್ಕು ಜನ ಪ್ರಮುಖ ಪುರೋಹಿತರಿರುತ್ತಾರೆ – ಬ್ರಹ್ಮ, ಹೋತಾರ, ಅಧ್ವರ್ಯು ಮತ್ತು ಉದ್ಗಾತ. ಯಜ್ಞ ಮಾಡುವ ರಾಜ ತನ್ನ ಹೆಂಡತಿಯರೂ ಸೇರಿದಂತೆ, ತನ್ನ ಖಾಸಗಿ ಆಸ್ತಿಯನ್ನು ಇವರಿಗೆ ದಾನ ಮಾಡಬೇಕು. ರಾಜನಿಗೆ ನಾಲ್ಕು ರಾಣಿಯರಿರಬೇಕು. ಮಹಿಷಿ, ಪರಿವೃತ್ತಿ (ಅಂದರೆ ಉದಾಸೀನ ಮಾಡಲಾದ ರಾಣಿ), ವಾವಾತಾ (ಅಂದರೆ ರಾಜ ಕೇವಲ ’ಇಟ್ಟು’ಕೊಂಡ ರಾಣಿ), ಪಾಲಾಕಲಿ (ಅಂದರೆ ಪಾನ-ಪಾತ್ರೆ ಹಿಡಿದುಕೊಳ್ಳಲು ಇರುವ ಹೆಂಗಸು). ರಾಜ ಇವರನ್ನು ಆ ನಾಲ್ಕು ಪುರೋಹಿತರಿಗೆ ದಾನ ಮಾಡಬೇಕು. ಇದು ಬರಿ ಸಾಂಕೇತಿಕವಾಗಿರುತ್ತಿತ್ತು ಮತ್ತು ನಂತರ ರಾಜ ಆ ರಾಣಿಯರನ್ನು ಬೇರೆ ಸಂಪತ್ತನ್ನು ದಾನ ಮಾಡಿ ಬದಲಿಗೆ ಅವರನ್ನು ಮರಳಿ ಪಡೆಯುತ್ತಿದ್ದ ಎಂದು ಗೋವಿಂದರಾಜ ತನ್ನ ವಿವರಣೆಯಲ್ಲಿ ಹೇಳುತ್ತಾನೆ. ರಾಮನೂ ಅಶ್ವಮೇಧ ಯಜ್ಞವನ್ನು ಮಾಡಿದ್ದ ಎಂದು ವಾಲ್ಮೀಕಿ ರಾಮಾಯಣದ ಉತ್ತರಕಾಂಡ ಹೇಳುತ್ತದೆ. ಆದರೆ ’ಏಕಪತ್ನೀವ್ರತಸ್ಥ’ನಾದ ರಾಮ ಅಶ್ವಮೇಧ ಯಜ್ಞಕ್ಕೆ ಬೇಕಿರುವ ನಾಲ್ಕು ರಾಣಿಯರನ್ನು ಎಲ್ಲಿಂದಾದರೂ ತಂದಿದ್ದನೋ ಅಥವಾ ಶಾಸ್ತ್ರವನ್ನು ಮೀರಿ ಯಜ್ಞ ಮಾಡಿದನೋ, ಗೊತ್ತಿಲ್ಲ.

ಅಧ್ವರ್ಯುವು ಸಂಪೂರ್ಣವಾಗಿ ಅಲಂಕರಿಸಿದ ಹಿರಿಯ ರಾಣಿಯನ್ನು ಕರೆದೊಯ್ಯುತ್ತಾನೆ. ಮೂವರು ರಾಣಿಯರನ್ನು ಉದ್ದೇಶಿಸಿ ಅವಳು “ಓ ಅಂಬಾ, ಓ ಅಂಬಾಲಿ, ಓ ಅಂಬಿಕಾ ಯಾರೂ ನನ್ನನ್ನು ಕರೆದೊಯ್ಯುವುದಿಲ್ಲ. ಬಡ ಕುದುರೆ ಮಲಗಿದೆ” ಎನ್ನುತ್ತಾಳೆ. ನಂತರ ಉತ್ತರದ ಕಡೆಗೆ ಕುದುರೆಯ ಪಕ್ಕದಲ್ಲಿ ಮಲಗಿ ಅವಳು ತನ್ನ ತಲೆಯ ಮೇಲೆ ಬಟ್ಟೆಯ ತುಂಡನ್ನು ಎಳೆದುಕೊಳ್ಳುತ್ತಾಳೆ. ಅಧ್ವರ್ಯುವು ಅವರಿಬ್ಬರನ್ನೂ ಬಟ್ಟೆಯ ತುಂಡಿನಿಂದ ಮುಚ್ಚಿ ಈ ಮಂತ್ರವನ್ನು ಹೇಳುತ್ತಾನೆ: “ಓ ಸುಂದರಿಯೇ, ಸುಂದರ ಉಡುಪು ಹೊದ್ದುಕೊಂಡವರಾಗಿ ನೀವಿಬ್ಬರೂ ಸ್ವರ್ಗದಲ್ಲಿ ಒಟ್ಟಿಗೆ ಆಚ್ಛಾದಿತರಾಗಿ”. ಹಿರಿಯ ರಾಣಿ ಕುದುರೆಯ ಶಿಶ್ನವನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಈ ಮಂತ್ರ ಹೇಳುತ್ತಾಳೆ: “ನಾನು ಗರ್ಭದಾನ ಮಾಡುವ ನಿನ್ನ ವಸ್ತುವನ್ನು ಹಿಡಿದುಕೊಂಡಿದ್ದೇನೆ, ಗರ್ಭದಾನ ಮಾಡಲು ನೀನು ನನ್ನನ್ನು ಹಿಡಿಯುತ್ತೀಯಾ? ನಾವು ಒಟ್ಟಿಗೆ ನಮ್ಮ ನಾಲ್ಕು ಕಾಲುಗಳನ್ನು ಹರಡೋಣ”. ಅಧ್ವರ್ಯುವು ಅವಳನ್ನು ಈ ಮಂತ್ರಗಳೊಂದಿಗೆ ಹಿಂಬಾಲಿಸುತ್ತಾನೆ: “ಗರ್ಭದಾನಿ ನಿನ್ನಲ್ಲಿ ತನ್ನ ಬೀಜವನ್ನು ಬಿತ್ತಲಿ. ಓ ಕುದುರೆ, ನೀನು ನಿನ್ನ ಗಂಡು ಜನನಾಂಗದ ಪ್ರದೇಶವನ್ನು ರಾಣಿಯ ತೊಡೆಯ ಮೇಲೆ ಒತ್ತು, ಮತ್ತು ಮಹಿಳೆಯರ ಆನಂದದ ಸಾಧನವಾಗಿರುವ ಹಾಗೂ ಅವರ ಜನನಾಂಗದಲ್ಲಿ ಪ್ರವೇಶಿಸಿ ಅವರಿಗೆ ಸುಖ ನೀಡುವ ನಿನ್ನ ಶಿಶ್ನವು ಅವಳ, ರಾಣಿಯ ಜನನಾಂಗದಲ್ಲಿ, ಅವಳ ಗರ್ಭಾಶಯದಲ್ಲಿ ಸೇರಲಿ. ಅದು ಕಪ್ಪು ಸ್ಥಳದೊಳಗಿನ ಅವರ ಜನನಾಂಗಗಳ ಕೇಂದ್ರ ಭಾಗವನ್ನು ಆಕ್ರಮಣ ಮಾಡಲಿ.” ನಂತರ ಹಿರಿಯ ರಾಣಿ ಕುದುರೆಯನ್ನು ಖಂಡಿಸುತ್ತಾಳೆ, ಅಂದರೆ ಸಾಂಕೇತಿಕವಾಗಿ ಮೂರು ಚೂರಿಗಳಿಂದ ಅಶ್ವವನ್ನು ಕೊಲ್ಲುತ್ತಾಳೆ.

ಈ ಬಗ್ಗೆ ವಾಲ್ಮೀಕಿ ರಾಮಾಯಣ ಹೀಗೆ ಹೇಳುತ್ತದೆ: “ಕೌಸಲ್ಯಾ ತಂ ಹಯಂ ತತ್ರ ಪರಿಚರ್ಯ ಸಮಂತತಃ, ಕೃಪಾಣೈರ್ವಿಶಶಾಸೈನಂ ತ್ರಿಭಿಃ ಪರಮಯಾ ಮುದಾ” ಅಂದರೆ ರಾಣಿ ಕೌಸಲ್ಯಾ, ಇವಳು ಗೌರವಪೂರ್ವಕವಾಗಿ ಅಶ್ವಕ್ಕೆ ಪ್ರದಕ್ಷಿಣೆ ಮಾಡಿ ಸಾಂಕೇತಿಕವಾಗಿ ಮೂರು ಚೂರಿಗಳಿಂದ ಅಶ್ವವನ್ನು ಸಾಯಿಸಿದಳು. ಪ್ರಾಣಿಗಳನ್ನು ಕೊಂದ ನಂತರ “ಪ್ರಾಣಿಗಳು ತಮ್ಮನ್ನು ಕೊಲ್ಲುವಾಗ ಮಾಡುವ ಕಿರುಚಾಟದಿಂದ ಅಥವಾ ಅವು ಚಡಪಡಿಸುತ್ತಾ ಕಾಲುಗಳಿಂದ ಒದೆಯುವುದರಿಂದ ಉಂಟಾಗುವ ಪಾಪವನ್ನು ಅಗ್ನಿ ನಿವಾರಿಸಲಿ” ಎಂದು ಅಧ್ವರ್ಯು ಅಗ್ನಿ ದೇವರಲ್ಲಿ ಕೇಳಿಕೊಳ್ಳುತ್ತಾನೆ.

“ಹೇ, ಪ್ರಾಣಿಗಳನ್ನು ನಿಶ್ಚಲಪಡಿಸುವವನೇ, ನೀನು ಕುದುರೆಯ ಕೂದಲನ್ನು ಕತ್ತರಿಸಬೇಡ, ಕುದುರೆಯ ಮೂಳೆಗಳನ್ನು ಪುಡಿಮಾಡಬೇಡ, ಅದರ ಅಂಗಗಳನ್ನು ಛೇದಿಸಿ, ಅವುಗಳನ್ನು ಬೆಂಕಿಯ ಮೇಲೆ ಇರಿಸಿದ ಗಡಿಗೆಯಲ್ಲಿ, ಕೊಂಬಿಲ್ಲದ ಮೇಕೆ ಮತ್ತು ಅದೇ ರೀತಿ ಸಾಕಿದ ಎತ್ತಿನ ಅಂಗಗಳನ್ನು, ಬಲಭಾಗದ ಗೊರಸು ಮತ್ತು ಗಂಟಲುಗಳನ್ನು ಬೆಂಕಿಯ ಮೇಲೆ ಬೇಯಿಸಿ ಕುದುರೆಯ ರಕ್ತವನ್ನು ಕಬ್ಬಿಣದ ಪಾತ್ರೆಯಲ್ಲಿ ಬೇಯಿಸು” ಎಂದು ಅಧ್ವರ್ಯು ಹೇಳುತ್ತಾನೆ.

ನಂತರ ಕುದುರೆಯ ಹೃದಯವನ್ನು ತೆಗೆದು ಬೆತ್ತದ ಹಾಸಿಗೆಯ ಮೇಲೆ ಇಡುತ್ತಾನೆ. ಅದರ ಇತರೆ ಅಂಗಾಂಗಗಳನ್ನೂ ಬೆತ್ತದ ಹಾಸಿಗೆಯ ಮೇಲೆ ಜೋಡಿಸಿಡುತ್ತಾನೆ. ನಂತರ ಹಾಸಿಗೆ ಸಹಿತ ಅವುಗಳನ್ನು ಬೆಂಕಿಯಲ್ಲಿ ಹಾಕುತ್ತಾನೆ. ಕುದುರೆಯ ಮಾಂಸ ಬೇಯುತ್ತಿರುವಾಗ ದೇವತೆಗಳು ಹಾಗೂ ಯಜ್ಞಮಂಟಪದಲ್ಲಿದ್ದ ಇತರರು ಕಾತರದಿಂದ ಅದನ್ನು ತಿನ್ನಲು ಕಾಯುತ್ತಿರುತ್ತಾರೆ. ಈ ಬಗ್ಗೆ ಋಗ್ವೇದದಲ್ಲಿ ಒಂದು ರೋಚಕವಾದ ಋಕ್ಕು ಇದೆ. “ಯೇ ವಾಜಿನಂ ಪರಿಪಶ್ಯಂತಿ ಪಕ್ವಂ ಯ ಈಮಾಹುಃ ಸುರಭಿರ್ನಿರ್ಹರೇತಿ, ಯೇ ಚಾರ್ವತೋ ಮಾಂಸಭಿಕ್ಷಾಮುಪಾಸತ ಉತೋ ತೇಷಾಮಭಿಗೂರ್ತಿರ್ನ ಇನ್ವತು”. ಈ ಮಂತ್ರವನ್ನು ವೆಂಕಟರಾಯರು ಹೀಗೆ ಅನುವಾದಿಸಿದ್ದಾರೆ: “ಅಶ್ವದ ಅವಯವಗಳೂ ಮಾಂಸವೂ ಬೇಯುತ್ತಿರುವುದನ್ನು ಬಹಳ ಆಸಕ್ತಿಯಿಂದ ಯಾರು ನೋಡುತ್ತಿರುವರೋ, ಮಾಂಸವು ಚೆನ್ನಾಗಿ ಬೆಂದು ಸುವಾಸನೆಯನ್ನು ಬೀರುತ್ತಿದೆಯಾದ್ದರಿಂದ ಅದನ್ನು ಬೆಂಕಿಯಿಂದ ಕೆಳಗಿಳಿಸಿ ದೇವತೆಗಳಿಗೆ ಅರ್ಪಿಸಿ ತಮಗೂ ಕೊಡಬೇಕೆಂದು ಯಾರು ಅಪೇಕ್ಷಿಸುವರೋ ಅವರ ಕೋರಿಕೆಗಳೆಲ್ಲಾ ನೆರವೇರಲಿ”.

ಮಹಾಭಾರತದಲ್ಲಿ ಯುಧಿಷ್ಠಿರ ನಡೆಸಿದ ಅಶ್ವಮೇಧ ಯಜ್ಞದ ಬಗ್ಗೆ ಒಂದು ಪರ್ವವೇ ಇದೆ. ಆದರೆ ಅದರಲ್ಲಿ ಯಜ್ಞದ ವಿವರಗಳಿಗಿಂತ ಅದರ ಹಿನ್ನೆಲೆ ಮುನ್ನಲೆಗಳ ವಿವರಗಳೇ ಹೆಚ್ಚು. ಯಜ್ಞದ ಬಗ್ಗೆ ಮಹಾಭಾರತದಲ್ಲಿರುವ ವಿವರಗಳು ಹೀಗಿವೆ. ಒಂದೊಂದು ದೇವತೆಗೂ ಒಂದೊಂದು ಪ್ರಾಣಿ ಅಥವಾ ಪಕ್ಷಿಯ ಬಲಿ ಇಷ್ಟವಾಗುತ್ತಿತ್ತು. ಪ್ರತಿಯೊಂದು ಪ್ರಾಣಿ ಮತ್ತು ಪಕ್ಷಿಗಳನ್ನು ಅವುಗಳ ನಿರ್ದಿಷ್ಟ ದೇವತೆಗೆ ನಿಯೋಜಿಸಲಾಗುತ್ತಿತ್ತು. ಪ್ರಾಣಿ ಹಾಗೂ ಪಕ್ಷಿಗಳನ್ನು ಗೂಟಗಳಿಗೆ ಕಟ್ಟಿಹಾಕಲಾಗುತ್ತಿತ್ತು. ಯುಧಿಷ್ಟಿರ ಮಾಡಿದ ಅಶ್ವಮೇಧ ಯಜ್ಞದಲ್ಲಿ ಮುನ್ನೂರು ಪ್ರಾಣಿಗಳನ್ನು ಗೂಟಗಳಿಗೆ ಕಟ್ಟಲಾಗಿತ್ತು. ಸರಿಯಾದ ವಿಧಿಗಳ ಪ್ರಕಾರ ಇತರ ಅತ್ಯುತ್ತಮ ಪ್ರಾಣಿಗಳನ್ನು ಬೇಯಿಸಿದ ನಂತರ, ಪುರೋಹಿತರು ಕುದುರೆಯನ್ನು ಬಲಿ ಕೊಟ್ಟರು. ನಂತರ ಬ್ರಾಹ್ಮಣರು ಆ ಕುದುರೆಯ ಮಜ್ಜೆಯನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಬೇಯಿಸಿದರು. ಯುಧಿಷ್ಠಿರನು ತನ್ನ ಎಲ್ಲಾ ಕಿರಿಯ ಸಹೋದರರೊಂದಿಗೆ, ಪಾಪಗಳನ್ನೆಲ್ಲ ನಷ್ಟಪಡಿಸುವ ಹೀಗೆ ಬೇಯಿಸಿದ ಮಜ್ಜೆಯ ವಾಸನೆಯನ್ನು ಸೇವಿಸಿದನು.

ಯಜ್ಞದಲ್ಲಿ ತೊಡಗಿರುವ ಬ್ರಾಹ್ಮಣರನ್ನು ಸಂತೋಷಪಡಿಸಲು ಯಜ್ಞದ ಮಧ್ಯಂತರದಲ್ಲಿ ಸಂಗೀತ ಮತ್ತು ನೃತ್ಯಗಳು ನಡೆಯುತ್ತಿದ್ದವು. ಬ್ರಾಹ್ಮಣರನ್ನು ಸಂತೋಷಪಡಿಸಲು ಅಪರಿಮಿತ ಸಂಪತ್ತನ್ನು ವಿತರಿಸಲಾಗುತ್ತಿತ್ತು. ಬ್ರಾಹ್ಮಣರು ತಾವು ಬಯಸಿದಷ್ಟು ಸಂಪತ್ತನ್ನು ತೆಗೆದುಕೊಂಡ ನಂತರ, ಉಳಿದಿರುವ ಸಂಪತ್ತನ್ನು ಕ್ಷತ್ರಿಯರು ಮತ್ತು ವೈಶ್ಯರು ಮತ್ತು ಶೂದ್ರರು ಹಾಗೂ ಮ್ಲೇಚ್ಛರು ತೆಗೆದುಕೊಳ್ಳುತ್ತಿದ್ದರು. ಕೊಲ್ಲಲ್ಪಟ್ಟ ಪ್ರಾಣಿಗಳನ್ನು ತಿನ್ನಲು ಸಿದ್ಧಪಡಿಸುವ ಹಾಗೂ ತಿನ್ನುವ ಜನರಿಗೆ ಕೊನೆಯಿರುತ್ತಿರಲಿಲ್ಲ ಹಾಗೂ ಯಜ್ಞಮಂಡಪವು ಹೆಂಡ ಕುಡಿದು ಮತ್ತರಾಗಿರುವ ಪುರುಷರಿಂದ ಹಾಗೂ ಸಂತೋಷದಿಂದ ತುಂಬಿ ತುಳುಕುತ್ತಿರುವ ಹೆಂಗಸರಿಂದ ತುಂಬಿರುತ್ತಿತ್ತು.

ಮೂರು ವರ್ಷಗಳವರೆಗೆ ಸತತವಾಗಿ ನಡೆಯುವ ಈ ಯಜ್ಞದ ಕೊನೆಯಲ್ಲಿ ಯಜ್ಞದ ಮಂಟಪಕ್ಕೇ ಬೆಂಕಿ ಇಡಲಾಗುತ್ತಿತ್ತು ಹಾಗೂ ಇದನ್ನು ಪೂರ್ಣಾಹುತಿ ಎಂದು ಕರೆಯಲಾಗುತ್ತಿತ್ತು.

ಈ ಯಜ್ಞವನ್ನು ದೇವರಾಜ ಇಂದ್ರ ಹೇಗೆ ತನ್ನ ಕಾಮತೃಪ್ತಿಗೆ ಬಳಸಿಕೊಂಡ ಎಂಬ ಬಗ್ಗೆ ಹರಿವಂಶ ಪುರಾಣದ ಭವಿಷ್ಯ ಪರ್ವದಲ್ಲಿ ಒಂದು ರೋಚಕವಾದ ಕಥೆ ಇದೆ. ಜನಮೇಜಯ ರಾಜ ಅಶ್ವಮೇಧ ಯಜ್ಞವನ್ನು ಮಾಡಿದ ಸಂದರ್ಭದಲ್ಲಿ ಅವನ ರಾಣಿ ವಪುಸ್ಥುಮಾ ಶಾಸ್ತ್ರಗಳಲ್ಲಿ ಸೂಚಿಸಿರುವಂತೆ ಸತ್ತ ಕುದುರೆಯ ಹತ್ತಿರ ವಾಸಕ್ಕೆ ಬಂದಳು. ಆ ಅತ್ಯಂತ ಸುಂದರವಾದ ರಾಣಿಯನ್ನು ಅನುಭವಿಸುವ ಆಸೆಯಿಂದ ಇಂದ್ರನು ಆ ಸತ್ತ ಕುದುರೆಯ ಶರೀರದಲ್ಲಿ ಪ್ರವೇಶ ಮಾಡಿ ರಾಣಿಯನ್ನು ಅನುಭೋಗಿಸಿದನು. ಸತ್ತ ಕುದುರೆಯಲ್ಲಾದ ಈ ಬದಲಾವಣೆಯನ್ನು ಗಮನಿಸಿದ ಜನಮೇಜಯ ಯಜ್ಞದ ಪುರೋಹಿತನಿಗೆ ’ಈ ಕುದುರೆ ಇನ್ನೂ ಸತ್ತಿಲ್ಲ, ಬೇಗ ಅದನ್ನು ಸಾಯಿಸಿ’ ಎಂದ. ಇಂದ್ರನ ಈ ಕಿತಾಪತಿಯನ್ನು ಅರಿತ ಆ ಬುದ್ಧಿವಂತ ಪುರೋಹಿತ ಜನಮೇಜಯನಿಗೆ ವಿಷಯವನ್ನು ತಿಳಿಸಿದ. ಅದರಿಂದ ಕೋಪಗೊಂಡ ಜನಮೇಜಯ ’ನನ್ನ ತಪಸ್ಸಿನಲ್ಲಿ ಏನಾದರೂ ಶಕ್ತಿ ಇದ್ದರೆ ತನ್ನ ಮನಸ್ಸಿನ ಮೇಲೆ ನಿಯಂತ್ರಣವಿಲ್ಲದ ಈ ಚಂಚಲ ಮನಸ್ಸಿನ ಇಂದ್ರನನ್ನು ಇಂದಿನಿಂದ ಯಾವ ಕ್ಷತ್ರಿಯನೂ ಪೂಜಿಸದಿರಲಿ’ ಎಂದು ಶಾಪ ಕೊಟ್ಟನಂತೆ.

ಆದರೆ ಯುಧಿಷ್ಠಿರನ ಈ ಯಜ್ಞದ ಕೊನೆಯಲ್ಲಿ ಒಂದು ಮುಂಗುಸಿ ಬಂದು, ಮಾನವ-ಭಾಷೆಯಲ್ಲಿ ಮಾತನಾಡಿ, ಒಬ್ಬ ಬಡ ಬ್ರಾಹ್ಮಣನ ಮನೆಯಲ್ಲಿ ಎಂಜಲಿನ ಮೇಲೆ ಹೊರಳಾಡಿದ ತನ್ನ ಒಂದು ಪಾರ್ಶ್ವ ಬಂಗಾರದ್ದಾಗಿರುವುದಾಗಿಯೂ, ಇನ್ನೊಂದು ಪಾರ್ಶ್ವವನ್ನು ಬಂಗಾರದ್ದನ್ನಾಗಿ ಮಾಡಲು ಅದು ಯುಧಿಷ್ಠಿರನ ಯಜ್ಞದ ಬೂದಿಯಲ್ಲಿ ಹೊರಳಾಡಿದರೂ ಆಗದೇ ಇದ್ದುದನ್ನು ಪ್ರಸ್ತಾಪಿಸಿ, ಹೇಗೆ ಕ್ಷತ್ರಿಯರು ಮಾಡುವ ಇಷ್ಟು ದೊಡ್ಡ ಯಜ್ಞ ಕೂಡ ಒಬ್ಬ ಬಡ ಬ್ರಾಹ್ಮಣ ಮಾಡುವ ಉಂಗುಷ್ಟೆತ್ತರದ ಜವೆಗೋದಿಯ ಪುಡಿಗಿಂತ ನಿಕೃಷ್ಟವಾಗಿರುತ್ತದೆ ಎಂದು ಹೇಳುವ ಮೂಲಕ ಬ್ರಾಹ್ಮಣ-ಶ್ರೇಷ್ಠತೆಯನ್ನು ಘೋಷಿಸುತ್ತದೆ. ವಿಶ್ವವನ್ನೆಲ್ಲ ಸುತ್ತಾಡಿ ಹಲವಾರು ಬಾರಿ ಕ್ಷತ್ರಿಯ ಕುಲವನ್ನು ನಾಶ ಮಾಡಿದನೆಂದು ಹೇಳುವ ಪರಶುರಾಮನ ಅವತಾರ ಇದೇ ಜಾಡಿನಲ್ಲಿ ಬಂದಿರುವ ಕಥೆ. ನಂತರ ಕೊನೆಯ ಮೌರ್ಯ ರಾಜನನ್ನು ಕೊಂದು ತಾನೇ ರಾಜನಾದ ಪುಶ್ಯಮಿತ್ರ ಸುಂಗನೂ ಇದೇ ಜಾಡಿನಲ್ಲಿ ಬಂದವನು.

ಇಂತಹ ಅಶ್ವಮೇಧ ಯಜ್ಞದಿಂದ ಹಿಂದೂಗಳು ಗರ್ವ ಪಡಬೇಕೋ ಅಥವಾ ಅಸಹ್ಯ ಪಡಬೇಕೋ ಎನ್ನುವುದನ್ನು ಓದುಗರೇ ನಿರ್ಧರಿಸಿಕೊಳ್ಳಬೇಕು.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ-ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ’ಮಾಂಸ ಭಕ್ಷಿಸುವ ಕಾಳಿಮಾತೆ’ ವಿವಾದದ ಹಿನ್ನೆಲೆ; ಸನಾತನ ಧರ್ಮದಲ್ಲಿ ಮಾಂಸ ಭಕ್ಷಣೆಯ ಕುರುಹುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಸಹ್ಯ ಹುಟ್ಟಿಸುವ ಬರಹ

    ಪ್ರಕಟಿಸದಿದ್ದರೇ ಚೆನ್ನಾಗಿತ್ತು

    ಈ ಲೇಖನದ ಉದ್ದೇಶ ನಮ್ಮ ಇತಿಹಾಸ/ಪುರಾಣವನ್ನು ಅವಹೇಳನ ಮಾಡುವುದೇ ಆಗಿದೆ.

    ಪ್ರಕಾಶಕ ರಿಗೆ ನನ್ನ ಧಿಕ್ಕಾರಗಳು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...