ಪೇ ಸಿಎಂ ಅಭಿಯಾನದ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಮುಜುಗರ ತಂದಿಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತರ ಬಂಧನವನ್ನು ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರು, ನಮ್ಮ ಶಾಸಕರೆಲ್ಲರೂ ಸೇರಿ ಪೇ ಸಿಎಂ ಪೋಸ್ಟರ್ ಅನ್ನು ಸರ್ಕಾರಿ ಕಚೇರಿಗಳಲ್ಲಿ ಅಂಟಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿಗಳು ಪೋಸ್ಟರ್ ವಿಚಾರಕ್ಕೆ ಇಷ್ಟು ತಲೆ ಕೆಡಿಸಿಕೊಂಡು ಗಾಬರಿಯಾಗಿರುವುದು ಏಕೆ? ಈ ಪೋಸ್ಟರ್ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದು ಏಕೆ? ಬಿಜೆಪಿ ಅವರು ನಮ್ಮ ಬಗ್ಗೆಯೂ ಕ್ಯೂಆರ್ ಕೋಡ್ ಹಾಕಿದ್ದಾರೆ. ನಾನು ವಿಚಾರಣೆಗೆ ಹೋದ ಸಮಯದಲ್ಲಿ ನಾನು ಕಂಬಿ ಹಿಂದೆ ಇರುವಂತೆ ಮಾಧ್ಯಮಗಳು ಫೋಟೋ ಹಾಕಿದ್ದರು. ಹಾಗೆಂದು ನಾನು ಅವರ ವಿರುದ್ಧ ದೂರು ನೀಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.
ರಾಜಕೀಯದಲ್ಲಿ ಇರುವವರನ್ನು ಜನ ಪ್ರಶ್ನಿಸುವುದು, ಟೀಕಿಸುವುದು ಸಹಜ. ಅಧಿಕಾರದಲ್ಲಿ ಇರುವವರು ಇದನ್ನು ಜೀರ್ಣಿಸಿಕೊಳ್ಳಬೇಕು. ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ನಮ್ಮ ಅಭಿಯಾನದಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ, ನಾವು ಭ್ರಷ್ಟಾಚಾರಕ್ಕೆ ಬಲಿಯಾಗಿದ್ದೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ಪಕ್ಷದ ವತಿಯಿಂದ ನಾವೇ ಟೋಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಲು ಹೇಳಿದ್ದೆವು ಎಂದು ತಿಳಿಸಿದ್ದಾರೆ.
ನಮ್ಮ ವಿರುದ್ಧ ಟ್ವೀಟ್ ಮಾಡಿದವರನ್ನೂ ಬಂಧಿಸಿ: ಸಿದ್ದರಾಮಯ್ಯ ಆಗ್ರಹ
“ನ್ಯಾಯ ಎಲ್ಲರಿಗೂ ಒಂದೇ ಇರಬೇಕು. ಅವರ ಬಗ್ಗೆ ಪೋಸ್ಟರ್ ಅಂಟಿಸಿದ್ದಾರೆ ಅನ್ನೋ ಕಾರಣಕ್ಕೆ ನಮ್ಮವರ ಬಂಧನವಾದರೆ, ನಮ್ಮವಿರುದ್ಧ ಟ್ವಿಟ್ ಮಾಡಿರುವವರನ್ನೂ ಅರೆಸ್ಟ್ ಮಾಡಿಸಿ’ ಎಂದು ವಿರೋಧ ಪಕ್ಷದ ಮುಖಂಡರಾದ ಸಿದ್ದರಾಮಯ್ಯನವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಕಾಂಗ್ರೆಸ್ ಪಕ್ಷದಿಂದ 40% ಕಮಿಷನ್ ಆಂದೋಲನ ನಡೆಯುತ್ತಿದೆ. ನಾನು, ಡಿಕೆಶಿ, ಹರಿಪ್ರಸಾದ್ ಎಲ್ಲರೂ ಆಂದೋಲನ ಮಾಡಿದ್ದೇವೆ. ಅದರ ಅಂಗವಾಗಿ ನಿನ್ನೆ ನಮ್ಮ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ. ಇವೆಲ್ಲಾ ತಪ್ಪು ಕೆಲಸವೇ? ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೋದು ತಪ್ಪಾ? ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತೋದು ತಪ್ಪಾ?’ ಎಂದು ಪ್ರಶ್ನಿಸಿದ್ದಾರೆ.
“ಬಿಜೆಪಿಯವರು ಸುಳ್ಳು ಆರೋಪ ಮಾಡಿದ್ದಾರೆ. ನಮ್ಮ ಬಗ್ಗೆಯೂ ‘ಯಾರಿಗೂ ಬೇಡವಾದವರು’ ಅಂತ ಪೋಸ್ಟ ಅಂಟಿಸಿದ್ದಾರೆ ಅಲ್ವಾ, ಹೀಗಿದ್ದ ಮೇಲೆ ಅವರನ್ನು ಯಾಕೆ ಅರೆಸ್ಟ್ ಮಾಡಿಲ್ಲ?” ಎಂದು ಸಿದ್ದರಾಮಯ್ಯ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷ ನಾಯ್ಡು ಅವರನ್ನು ರಾತ್ರಿ ಬಂಧನ ಮಾಡಿದ್ದಾರೆ. ಅರ್ಧ ರಾತ್ರಿ ಕಾರ್ಯಾಚರಣೆ ಮಾಡಲು ಅವರೇನು ಕೊಲೆ ಅಥವಾ ಕಳ್ಳತನ ಮಾಡಿದ್ರಾ? ಇವರ ಮೇಲೆ ಕ್ರಮ ತೆಗೆದುಕೊಳ್ಳುವ ಸರ್ಕಾರದವರು ತೆಲಂಗಾಣದಲ್ಲಿ ಪೋಸ್ಟರ್ ಅಂಟಿಸಿದ್ದವರ ವಿರುದ್ಧ ಏನು ಶಿಸ್ತುಕ್ರಮ ಜರುಗಿಸಿದ್ದಾರೆಂದು ಹೇಳಲಿ” ಎಂದು ವಿಪಕ್ಷ ನಾಯಕರು ಕಿಡಿ ಕಾರಿದರು.
‘ಭ್ರಷ್ಟಾಚಾರದ ವಿಚಾರದಲ್ಲಿ ಇಷ್ಟೊಂದು ಸೀರಿಯಸ್ ಆಗಿ ಮಾತನಾಡುವ ಇವರು, ಕೆಂಪಣ್ಣ ಪತ್ರ ಬರೆದು ಇಷ್ಟು ದಿನವಾದರೂ ಯಾಕೆ ತನಿಖೆ ಮಾಡಿಸಲಿಲ್ಲ? ಯಡಿಯೂರಪ್ಪನವರ ಆಪ್ತನ ಮೆಲೆ ದಾಳಿಯಾದಾಗ ದಾಖಲೆ ಸಿಕ್ಕಿತ್ತು, ಆವಾಗ ತನಿಖೆ ಮಾಡಿಸಬೇಕಿತ್ತಲ್ವಾ? ಇದು ಯಾವುದೂ ಜನರಿಗೆ ತಲುಪದಂತೆ ಸದ್ದಿಲ್ಲದೆ ಮುಚ್ಚಿ ಹಾಕುವ ಕೆಲಸ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಪೇ ಸಿಎಂ ಪೋಸ್ಟರ್ ಅಂಟಿಸಿದ ಆರೋಪದ ಮೇಲೆ ಪೊಲೀಸರು ಮಧ್ಯರಾತ್ರಿ ಕಾಂಗ್ರೆಸ್ ಕಾರ್ಯಕರ್ತರಾದ ಗಗನ್ ಯಾದವ್ ಮತ್ತು ಬಿ.ಆರ್ ನಾಯ್ಡು ಎಂಬುವವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ‘ಪೇಸಿಎಂ’ ಪೋಸ್ಟರ್‌ಗಳು ವೈರಲ್; ಸ್ಕ್ಯಾನ್ ಮಾಡಿದರೆ ‘40% ವೆಬ್‌ಸೈಟ್’ ಓಪನ್!



ಏನ್ರೀ ಬೆಂಕಿ ಇಲ್ಲದೆ ಹೋಗೆ ಆಡುತ್ತಾ…….