Homeಪುಸ್ತಕ ವಿಮರ್ಶೆ1924ರ ’ಸರ್ಫರೋಶಿ ಕೀ ತಮನ್ನಾ’; ಸತ್ವಿಂದರ್ ಜಸ್ ಅವರ ’ಭಗತ್ ಸಿಂಗ್- ಎ ಲೈಫ್ ಇನ್...

1924ರ ’ಸರ್ಫರೋಶಿ ಕೀ ತಮನ್ನಾ’; ಸತ್ವಿಂದರ್ ಜಸ್ ಅವರ ’ಭಗತ್ ಸಿಂಗ್- ಎ ಲೈಫ್ ಇನ್ ರೆವೊಲ್ಯೂಶನ್’ ಪುಸ್ತಕದಿಂದ ಆಯ್ದ ಅಧ್ಯಾಯ

- Advertisement -
- Advertisement -

1924ರಲ್ಲಿ ಪೂರ್ವ ಬಂಗಾಳದ ಹಳ್ಳಿಯೊಂದರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್‌ಆರ್‌ಎ) ಸ್ಥಾಪನೆಯಾದದ್ದು ಒಂದು ಸುಳಿಗಾಳಿಯಂತೆ ರಭಸವಾಗಿತ್ತು. ಅದರ ಗುರಿಯೆಂದರೆ, ಬ್ರಿಟಿಷ್ ಆಡಳಿತಕ್ಕೆ ಸಶಸ್ತ್ರ ಪ್ರತಿರೋಧ ಒಡ್ಡುವುದು. ಅದರ ಸ್ಥಾಪಕ ಸದಸ್ಯರಲ್ಲಿ ಒಬ್ಬರೆಂದರೆ, “ಸರ್ಫರೋಶಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ/ ದೇಖ್ ನಾ ಹೈ ಜೋರ್ ಕಿತ್‌ನಾ ಬಾಜು-ಎ-ಖಾತಿಲ್ ಮೇ ಹೈ” (ಕ್ರಾಂತಿಯ ಹಂಬಲ ಈಗ ನಮ್ಮ ಎದೆಯಲ್ಲಿದೆ/ ದಂಡಿದುವವನ ತೋಳುಗಳಲ್ಲಿ ಬಲವೆಷ್ಟಿದೆ ನೋಡೇಬಿಡೋಣ) ಎಂಬ ಪ್ರಸಿದ್ಧ ಕ್ರಾಂತಿಕಾರಿ ಗೀತೆ ಬರೆದ ರಾಮಪ್ರಸಾದ್ ಬಿಸ್ಮಿಲ್. ಕ್ರಾಂತಿಯ ಮುನ್ನೋಟದಲ್ಲಿ ಬದುಕುವ ಈ ಕ್ರಾಂತಿಕಾರಕ ಸ್ವಯಂಕಲ್ಪನೆ, ಆಗಿನ ಕಾಲದ ಅವರ ಸ್ವಾರಸ್ಯಕರ ಮಾತುಕತೆ, ಚರ್ಚೆಗಳನ್ನು ಡಾ. ಅರ್ಪಣಾ ವೈದಿಕ್ ಅವರ ’ವೈಟಿಂಗ್ ಫಾರ್ ಸ್ವರಾಜ್’ನಲ್ಲಿ ಚೊಕ್ಕವಾಗಿ ಹಿಡಿದಿಡಲಾಗಿದ್ದು, ಕ್ರಾಂತಿಕಾರಿಗಳ ಚಿಂತನೆಗಳ ಕುರಿತು ಅಮೂಲ್ಯವಾದ ಒಳನೋಟಗಳನ್ನು ನೀಡಲಾಗಿದೆ. ಇನ್ನೊಬ್ಬ ಸ್ಥಾಪಕ ಸದಸ್ಯ ಎಂದರೆ, ಸಚೀಂದ್ರನಾಥ್ ಸನ್ಯಾಲ್. 1924ರಲ್ಲಿ ಲಾಹೋರ್ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕ್ರಾಂತಿಕಾರಿ ಭಗತ್ ಸಿಂಗ್, ಸನ್ಯಾಲ್ ಅವರ ಪ್ರಭಾವದಿಂದಲೇ ಅವರ ಅನುಯಾಯಿಯಾಗಿದ್ದು. ಸನ್ಯಾಲ್ ಅವರು ಆಗಲೇ, ಮುಂದೆ ಕ್ರಾಂತಿಕಾರಿಗಳ ಮಾರ್ಗದರ್ಶಕ ಗ್ರಂಥವಾಗಲಿದ್ದ ’ಬಂಡಿ ಜೀವನಿ’ಯನ್ನು (ಬಂಡಾಯ ಜೀವನ) ಬರೆದಿದ್ದರು. ಎಚ್‌ಆರ್‌ಎಯ ಸ್ಪಷ್ಟ ಉದ್ದೇಶ ಸಾರ್ವತ್ರಿಕ ವಯಸ್ಕ ಚುನಾವಣೆಯ ತಳಹದಿಯ ಮೂಲಕ ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಎಂಬ ಒಕ್ಕೂಟ ಗಣರಾಜ್ಯದ ಸ್ಥಾಪನೆಯಾಗಿತ್ತು. ಇದು ಕಾರ್ಯರೂಪಕ್ಕೆ ಬಂದಿದ್ದರೆ, ಮುಂದೆ 1947ರಲ್ಲಿ ಭಾರತದ ವಿಭಜನೆಯು ತಪ್ಪುತ್ತಿತ್ತು.

ಸಶಸ್ತ್ರ ಹೋರಾಟವನ್ನು ಹಣವಿಲ್ಲದೇ ನಡೆಸಲು ಸಾಧ್ಯವಿರಲಿಲ್ಲ. ಜನರನ್ನು ನೇಮಕಾತಿ ಮಾಡಿ ಅವರಿಗೆ ತರಬೇತಿ ನೀಡುವುರು, ಶಸ್ತ್ರಾಸ್ತ್ರಗಳ ಖರೀದಿ, ರಾಷ್ಟ್ರೀಯ ಮಟ್ಟದಲ್ಲಿ ಒಂದು ಬಲವಾದ ಪ್ರಚಾರಾಭಿಯಾನದ ಸಂಘಟನೆ ಇತ್ಯಾದಿಗಳಿಗೆಲ್ಲ ಹಣಕಾಸು ಒದಗಿಸಬೇಕಾಗಿತ್ತು. ಸಂಘಟಿತರಾಗಿ ಮೂಡಿಬಂದವರಲ್ಲಿ ಉತ್ತರ ಭಾರತದ ಕ್ರಾಂತಿಕಾರಿಗಳು ಮೊದಲಿಗರಾಗಿದ್ದು, ರಾಮಪ್ರಸಾದ್ ಬಿಸ್ಮಿಲ್, ಸಚೀಂದ್ರನಾಥ ಸನ್ಯಾಲ್, ಸಚೀಂದ್ರನಾಥ ಭಕ್ಷಿ, ಮತ್ತು ಜಗದೀಶ್ ಚಂದ್ರ ಚಟರ್ಜಿ 1924ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಅಥವಾ ಆರ್ಮಿಯನ್ನು (ಎಚ್‌ಆರ್‌ಎ) ಸ್ಥಾಪಿಸಿದರು. 1924ರ ಅಕ್ಟೋಬರ್ ತಿಂಗಳಲ್ಲಿ ಕಾನ್ಪುರದಲ್ಲಿ ಭೇಟಿಯಾದ ಅವರು, ವಸಾಹತುಶಾಹಿ ಆಡಳಿತವನ್ನು ಕಿತ್ತೆಸೆದು ಒಂದು ಪ್ರಜಾಸತ್ತಾತ್ಮಕ ಒಕ್ಕೂಟ ಭಾರತವನ್ನು ಸ್ಥಾಪಿಸುವ ಪ್ರತಿಜ್ಞೆ ಮಾಡಿದರು.

1925ರ ಆಗಸ್ಟ್ 9ರಂದು ಹತ್ತು ಜನರು ಲಕ್ನೋ ಸಮೀಪದ ಕಾಕೋರಿ ಎಂಬ ಒಂದು ಅಜ್ಞಾತ ಹಳ್ಳಿಯ ಬಳಿ ನಂಬರ್ 8 ಡೌನ್ ರೈಲನ್ನು ನಿಲ್ಲಿಸಿ ರೈಲ್ವೆಯ ಅಧಿಕೃತ ಖಜಾನೆಯನ್ನು ದೋಚಿದರು. ಆದರೆ, ಅವರೆಲ್ಲರನ್ನು ಬೇಗನೇ ಬಂಧಿಸಲಾಯಿತು. ಸರಕಾರದ ಪ್ರತೀಕಾರ ತ್ವರಿತ ಮತ್ತು ಕಟುವಾಗಿತ್ತು. ಅಶ್ಫಾಕುಲ್ಲಾ ಖಾನ್, ರಾಮಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್ ಮತ್ತು ರಾಜೇಂದ್ರ ಲಾಹಿರಿ ಸೇರಿದಂತೆ ಐವರನ್ನು ಗಲ್ಲಿಗೇರಿಸಲಾಯಿತು. ನಾಲ್ವರನ್ನು ಅಂಡಮಾನಿನ ಕ್ರೂರ ಜೈಲಿನಲ್ಲಿ ಜೀವನಪರ್ಯಂತ ಶಿಕ್ಷೆ ಅನುಭವಿಸಲು ಕಳುಹಿಸಲಾಯಿತು. ಅವರಲ್ಲಿ ಒಬ್ಬರಾದ ಮಹಾವೀರ್ ಸಿಂಗ್ ಜೈಲುವಾಸದಿಂದ ಮತ್ತೆ ಹೊರಹೊಮ್ಮಿದರು. ಉಳಿದ ಹದಿನೇಳು ಮಂದಿಗೆ ದೀರ್ಘಕಾಲದ ಜೈಲುವಾಸ ಕಾದಿತ್ತು. ಅವರಲ್ಲಿ ಒಬ್ಬರಾದ ಚಂದ್ರಶೇಖರ ಅಜಾದ್ ಅಚ್ಚರಿಕಾರಕ ರೀತಿಯಲ್ಲಿ ತಪ್ಪಿಸಿಕೊಂಡರು.

ಕಾರ್ಯವ್ಯೂಹಾತ್ಮಕ ಚಾತುರ್ಯ ಇದ್ದ ಭಗತ್ ಸಿಂಗ್ ಕ್ರಾಂತಿಕಾರಿ ಚಳವಳಿಯನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶವನ್ನು ಕಂಡರು. ಹಾಗಾಗಿ 1926ರಲ್ಲಿ ನೌಜವಾನ್ ಭಾರತ್ ಸಭಾ ಪ್ರಸಿದ್ಧಿಗೆ ಬಂತು. ಅದು ಯುವಜನರನ್ನು ಸಮಾಜವಾದಿ, ಧರ್ಮಾತೀತ ವೇದಿಕೆಯಡಿ- ’ಕೋಮುವಾದಿ ರಾಜಕೀಯದ ವಿರುದ್ಧ ಜನರನ್ನು ಬದಲಾವಣೆಗೆ ಒಡಮಾಡುವ’ ಉದ್ದೇಶ ಹೊಂದಿತ್ತು.

ಭಗತ್ ಸಿಂಗ್ ಇಂತಾ ತೀವ್ರ ಕ್ರಮ ಕೈಗೊಳ್ಳಲೇಬೇಕಾಗಿತ್ತು; ಏಕೆಂದರೆ, 1925ರ ಕಾಕೋರಿ ಸಂಚು ಪ್ರಕರಣದ ಯೋಜಕರ ಸೋಲು ಭಾರತದಲ್ಲಿ ಕ್ರಾಂತಿಕಾರಿ ಹೋರಾಟದ ನಾಯಕತ್ವದ ತಲೆಯನ್ನೇ ಕಡಿದಿತ್ತು. ಆಗಿನ ಅಲ್ಪಕಾಲದ ಚಳವಳಿಯ ಉಜ್ವಲ ನಾಯಕರಾಗಿದ್ದ ರಾಮಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕುಲ್ಲಾ ಖಾನ್ ಇನ್ನಿಲ್ಲವಾಗಿದ್ದರು. ಒಂದೇ ಏಟಿನಲ್ಲಿ ಭಾರತೀಯ ಕ್ರಾಂತಿಕಾರಿ ಚಳವಳಿಯ ನಾಯಕತ್ವವನ್ನು ತೊಡೆದುಹಾಕಲಾಗಿತ್ತು ಮತ್ತು ಹೊಸ ಪೀಳಿಗೆಯ ಕ್ರಾಂತಿಕಾರಿ ನಾಯಕರ ಅಗತ್ಯವಿತ್ತು. ಕ್ರಾಂತಿಕಾರಿ ಚಳವಳಿಯ ಬೂದಿಯಿಂದ ಅದಕ್ಕೆ ಮರುಹುಟ್ಟು ನೀಡಿ ಅದನ್ನು ಮುನ್ನಡೆಸುವ ನಾಯಕರ ಅಗತ್ಯವಿತ್ತು.

ಅಶ್ಫಾಕುಲ್ಲಾ ಖಾನ್

ಆರ್ಯಸಮಾಜವಾದಿ ಮತ್ತು ಗದ್ದರ್‌ವಾದಿ ಪ್ರಬಲ ಕ್ರಾಂತಿಕಾರಿ ಹಿನ್ನೆಲೆ ಮತ್ತು ಪರಂಪರೆಯ ಕುಟುಂಬದಿಂದ ಬಂದ ಭಗತ್ ಸಿಂಗ್ ಅವರಿಗೆ ಈ ಗುಣಗಳ ಬಳುವಳಿಯಿತ್ತು. 1919ರಲ್ಲಿ ಹನ್ನೆರಡು ವರ್ಷಗಳ ಹುಡುಗನಾಗಿದ್ದಾಗಲೇ ಅವರು ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ಜನರಲ್ ಡೈಯರ್ ನೂರಾರು ಅಮಾಯಕ ಜನರನ್ನು ಕೊಲ್ಲಿಸಿದ ಹತ್ಯಾಕಾಂಡದಿಂದ ರೋಸಿಹೋಗಿದ್ದರು. ಅನೇಕರು ಇತರರಂತೆಯೇ ಅವರು ಮಹಾತ್ಮಾ ಗಾಂಧಿಯವರ ಅಸಹಕಾರ ಚಳವಳಿಯ ಜೊತೆ ಸೇರಿದ್ದರು. ಆದರೆ ಮಹಾತ್ಮರು ಬೇಗನೇ ಈ ಚಳವಳಿಯನ್ನು ಹಿಂತೆಗೆದುಕೊಂಡಿದ್ದರು. ಉಳಿದ ಅನೇಕರಂತೆ ಭಗತ್ ಸಿಂಗ್ ಕೂಡಾ ಮಹಾತ್ಮರ ವಿಷಯದಲ್ಲಿ ಭ್ರಮನಿರಸನಗೊಂಡಿದ್ದರು. 1926ರಲ್ಲಿ ಅವರು ಸ್ಥಾಪಿಸಿದ ನೌಜವಾನ್ ಭಾರತ್ ಸಭಾ ಮುಂದೆ 1928ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್‌ನ ಅಸ್ಥಿಯಿಂದ ಅಸ್ತಿತ್ವಕ್ಕೆ ಬಂದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ಗೆ ಒಂದು ಅಸ್ಪಷ್ಟ ಮುನ್ನುಡಿಯಂತಿತ್ತು. ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್‌ನ ಕ್ಷಣಿಕ ಇತಿಹಾಸವು ನಿಧಿ ಸಂಗ್ರಹ ಮತ್ತು ಕಾಕೋರಿ ಘಟನೆಯನ್ನು ಮೀರಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ನೌಜವಾನ್ ಭಾರತ್ ಸಭಾದ ಚಳವಳಿಯು ಜಾತಿ, ಧರ್ಮಗಳನ್ನು ಮೀರಿ ಒಂದು ರೀತಿಯ ಅತಿಕ್ರಮಣಕಾರಿ ಸಾಮಾಜಿಕತೆಯನ್ನು ಉತ್ತೇಜಿಸುವ ವ್ಯಕ್ತಿಗಳನ್ನು ಜೊತೆಗೆ ತರಲು ಯಶಸ್ವಿಯಾಗಿತ್ತು.

ಆದುದರಿಂದ, 1925ರ ಕಾಕೋರಿ ಸಂಚು ಪ್ರಕರಣವು ಸ್ವಾತಂತ್ರ್ಯ ಚಳವಳಿಗೆ ಒಂದು ನಿರ್ಣಾಯಕ ಕ್ಷಣವಾಗಿತ್ತು. ಬಹಳಷ್ಟು ಕಡೆಗಣಿಸಲಾದ ಘಟನೆಯಾಗಿದ್ದರೂ ಅದಕ್ಕೆ ಅತ್ಯಂತ ಐತಿಹಾಸಿಕ ಮಹತ್ವವಿದೆ. ಏಕೆಂದರೆ, ಅದರ ಕಾರಣದಿಂದ ಎಚ್‌ಆರ್‌ಎಯ ಎಳೆಯ ನಾಯಕರು ಮೃತರಾಗಿದ್ದುದರಿಂದ ಭಗತ್ ಸಿಂಗ್ ತಮ್ಮನ್ನು ಸ್ವಾತಂತ್ರ್ಯ ಹೋರಾಟದ ಉರಿಯುತ್ತಿರುವ ಕುಲುಮೆಯಲ್ಲಿ ಕಂಡುಕೊಂಡರು. ಈ ಸಂಘರ್ಷವು ಗಾಂಧಿಯವರ ಸಂಘರ್ಷಕ್ಕಿಂತ ಬೇರೆಯಾಗಿತ್ತು. ಅದು ಕೋಮುವಾದವನ್ನು ಎದುರಿಸಿ ನಿಂತಿತ್ತು. ಜನಾಂಗ, ವರ್ಗ, ಜಾತಿಗಳ ಹಂಗಿಲ್ಲದೆ ಒಂದು ಬಲವಾದ ರಾಷ್ಟ್ರೀಯ ಏಕತೆಯನ್ನು ರೂಪಿಸುವುದಕ್ಕಿಂತಲೂ ತುರ್ತಾದ ಕೆಲಸ ಬೇರೊಂದಿರಲಿಲ್ಲ. ವಸಾಹತುವಾದವು ಒಬ್ಬರನ್ನು ಒಬ್ಬರ ವಿರುದ್ಧ ಎತ್ತಿಕಟ್ಟುವುದರ ಮೂಲಕ ಭಾರತದಂತ ವೈವಿಧ್ಯಮಯ ದೇಶದ ಏಕತೆಗೆ ಅಪಾಯವಾಗಿತ್ತು. ಭಾರತವು ತನಗೆ ಬೇಕಿದ್ದ ಸ್ವಾತಂತ್ರ್ಯದ ಕಡೆಗೆ ಯಶಸ್ವಿಯಾಗಿ ಮುನ್ನಡೆಯಬೇಕಾದರೆ, ಈ ಏಕತೆಯು ಈಗ ಮೊದಲ ಆದ್ಯತೆಯಾಗಿತ್ತು.

ಇದನ್ನು 1927ರಲ್ಲಿ ತನ್ನನ್ನು ಗಲ್ಲಿಗೇರಿಸುವುದಕ್ಕೆ ಕೇವಲ ಮೂರು ದಿನಗಳಿಗೆ ಮೊದಲು ಅಶ್ಫಾಕುಲ್ಲಾ ಖಾನ್ ಭಾರತದಲ್ಲಿ ಕೋಮುವಾದದ ಬೆಳವಣಿಗೆಯ ಕುರಿತು ಎಚ್ಚರಿಸುತ್ತಾ, ತನ್ನ ದೇಶವಾಸಿಗಳನ್ನುದ್ದೇಶಿಸಿ ಬರೆದ ಬಹಿರಂಗ ಪತ್ರಕ್ಕಿಂತ ಚೆನ್ನಾಗಿ ಬೇರೇನೂ ಇದನ್ನು ತೋರಿಸಿಕೊಡಲಾರದು. ಅವರು ತಬ್ಲೀಗ್ ಮತ್ತು ಶುದ್ಧಿ ಚಳವಳಿಗಳನ್ನು ಖಂಡಿಸಿದರು. “ಹಿಂದೂಗಳು ಮತ್ತು ಮುಸ್ಲಿಮರು ಜೊತೆಯಾಗಿ ಬದುಕಲು ಕಲಿಯಬೇಕು; ಇಲ್ಲದಿದ್ದರೆ, ಚಾಕರಿಯ ಗುಲಾಮಗಿರಿಯ ಸಂಕೋಲೆಯಿಂದ ಕಳಚಿಕೊಳ್ಳಲು ಅವರು ವಿಫಲವಾಗುವರು. ಅವರು ಇದರಲ್ಲಿ ವಿಫಲರಾದರೆ, ಪರಿಣಾಮವು ಋಣಾತ್ಮಕವಾಗಿ ಕಟುವಾಗಿರುವುದಲ್ಲದೆ ಸ್ವಾತಂತ್ರ್ಯಕ್ಕಾಗಿನ ಹೋರಾಟದ ಮೇಲೆ ಪರಿಣಾಮ ಬೀರುವುದು. ಏಳು ಕೋಟಿ ಮುಸ್ಲಿಮರನ್ನು ಶುದ್ಧೀಕರಿಸುವುದು ಅಸಾಧ್ಯ. ಅದೇ ರೀತಿಯಲ್ಲಿ ಇಪ್ಪತ್ತೈದು ಕೋಟಿ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರ ಮಾಡಬಹುದು ಎಂದು ಯೋಚಿಸುವುದೇ ಅಸಂಬದ್ಧ. ಆದರೆ ಹೌದು, ನಾವೆಲ್ಲರೂ ಗುಲಾಮಗಿರಿಯ ಸಂಕೋಲೆಯನ್ನು ನಮ್ಮ ಕೊರಳ ಸುತ್ತ ಹಾಕಿಕೊಳ್ಳುವುದು ಸುಲಭ” ಎಂಬುದವರ ಸುಸ್ಪಷ್ಟ ಮಾತುಗಳಾಗಿದ್ದವು.

ಇದೇ ಮಾತುಗಳನ್ನು ಮಹಾವೀರ್ ಸಿಂಗ್ ಅವರು ಕೂಡಾ ಅಂಡಮಾನಿನ ಜೈಲಿನಲ್ಲಿ ಜೀವನ ಪರ್ಯಂತದ ಸಜೆಯನ್ನು ಎದುರು ನೋಡುತ್ತಿದ್ದಾಗ ತನ್ನ ತಂದೆಯವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ:

ಭಗತ್‌ಸಿಂಗ್

“ಸಮಾಜ ಎಂದರೆ ಆರ್ಯ ಸಮಾಜ ಅಥವಾ ಇನ್ಯಾವುದೇ ಸಂಕುಚಿತ ಸಮಾಜವೆಂದು ನನ್ನ ಅರ್ಥವಲ್ಲ. ಸಮಾಜ ಎಂದರೆ, ಸಾಮಾನ್ಯ ಜನರ ಸಮಾಜ. ಯಾಕೆಂದರೆ, ಈ ಧಾರ್ಮಿಕ ಸಮಾಜಗಳು, ತಮ್ಮ ದೂರದೃಷ್ಟಿಯ ಕೊರತೆಯ ಕಾರಣದಿಂದಾಗಿ ನನಗೆ ಅರ್ಥಹೀನವಾಗಿ ಕಾಣುತ್ತವೆ. ಮೇಲಾಗಿ, ನಾನು ಎಲ್ಲಾ ಧರ್ಮಗಳಿಂದ ದೂರ ಉಳಿಯಲು ಬಯಸುತ್ತೇನೆ; ಏಕೆಂದರೆ, ಅವು ಸಂಕುಚಿತ, ಸ್ವಯಂಕೇಂದ್ರಿಯವಾಗಿವೆ ಮತ್ತು ಅನ್ಯಾಯದ ಮೇಲೆ ಆಧರಿಸಿವೆ ಹಾಗೂ ಇತರರೂ ಹಾಗೆಯೇ ಮಾಡಬೇಕೆಂದು ಬಯಸುತ್ತವೆ. ಮಾನವ ಮತ್ತು ಸಮಾಜಕ್ಕೆ ಆತ್ಯಂತ ಹೆಚ್ಚು ಅನುಕೂಲ ತಂದುಕೊಡುವ ತತ್ವವೆಂದು ನಾನು ನಂಬಿರುವುದು: ಮಾನವ ಸಂಬಂಧಗಳು ಯಾವುದೇ ಜಾತಿ, ಧರ್ಮ, ಬಣ್ಣ ಮತ್ತು ಹಣದ ತಾರತಮ್ಯದ ಮೇಲೆ ಆಧರಿಸಿರಬಾರದೆಂದು.”

ಭಾರತವು ಸ್ವಾತಂತ್ರ್ಯವನ್ನು ಪಡೆಯುವುದರ ಮೂಲಕ, ಒಂದು ಸ್ವರೂಪದ ದಮನಕಾರಿ ಆಡಳಿತದ ಬದಲು ಇನ್ನೊಂದು ಸ್ವರೂಪದ ದಮನಕಾರಿ ಆಡಳಿತವನ್ನು ತರಬಾರದು ಎಂದು ಅಶ್ಫಾಕುಲ್ಲಾ ಖಾನ್ ಸಾಕಷ್ಟು ಸ್ಪಷ್ಟಪಡಿಸಿದ್ದಾರೆ.

“ಪರಕೀಯರ ಆಡಳಿತವು ದುಷ್ಟತನ ಎಂದು ನಾನು ಪರಿಗಣಿಸುತ್ತೇನೆ. ಅದೇ ಹೊತ್ತಿಗೆ ದುರ್ಬಲರಿಗೆ ಹಕ್ಕುಗಳನ್ನು ನಿರಾಕರಿಸಲಾಗುವ ಯಾವುದೇ ಪ್ರಜಾಸತ್ತಾತ್ಮಕ ಭಾರತೀಯ ಆಡಳಿತವನ್ನು ನಾನು ದ್ವೇಷಿಸುತ್ತೇನೆ: ಅದು ಶ್ರೀಮಂತರು ಮತ್ತು ಜಮೀನುದಾರರ ರಚನೆಯಾಗಿದ್ದರೆ ಅಥವಾ ಅದರಲ್ಲಿ ರೈತರು ಮತ್ತು ಕಾರ್ಮಿಕರ ಭಾಗವಹಿಸುವಿಕೆ ಇಲ್ಲದಿದ್ದರೆ ಅಥವಾ ಸರಕಾರಿ ಕಾನೂನುಗಳು ಅಸಮಾನತೆ ಮತ್ತು ಅಸಮಾನ ವ್ಯವಹಾರದ ಮೇಲೆ ಆಧರಿಸಿದ್ದರೆ…”

(ಕ್ರಾಂತಿಕಾರಿಗಳು 1925ರ ಸುತ್ತಮುತ್ತ ಕೋಮುವಾದ ವಿರೋಧಿ ಸಂಘಟನೆಯನ್ನು ರೂಪಿಸಿಕೊಳ್ಳುತ್ತಿರುವಾಗಲೇ ಹಿಂದೂ ಕೋಮುವಾದಿಗಳು ಆರೆಸ್ಸೆಸ್ಸನ್ನು ಸ್ಥಾಪಿಸಿದರು. ಈ ಕುರಿತು ಇನ್ನಷ್ಟು ಮುಂದಿನ ಸಂಚಿಕೆಯಲ್ಲಿ)

(ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಕಾನೂನು ಪ್ರೊಫೆಸರ್ ಆಗಿರುವ ಡಾ. ಸತ್ವಿಂದರ್ ಜಸ್ ಅವರು ಬರೆದಿರುವ ಈ ಪುಸ್ತಕವನ್ನು ಪೆಂಗ್ವಿನ್ ರ್‍ಯಾಂಡಮ್ ಹೌಸ್ ಸಂಸ್ಥೆ ಪ್ರಕಟಿಸಿದೆ. ಪೆಂಗ್ವಿನ್ ರ್‍ಯಾಂಡಮ್ ಹೌಸ್ ಅನುಮತಿಯ ಮೇರೆಗೆ ಈ ಭಾಗವನ್ನು ಪ್ರಕಟಿಸಲಾಗಿದೆ)

ಕನ್ನಡಕ್ಕೆ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಪುಸ್ತಕ ಪರಿಚಯ; ಎಡಿತ್ ನೆಸ್ಬೂತರ ಕಾದಂಬರಿ: ‘ರೈಲ್ವೆಮಕ್ಕಳು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...