ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಹೆಚ್ಚುವರಿ ವೆಚ್ಚಗಳನ್ನು ಮರುಪಡೆಯಲು ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಮ್ಸ್) ಅನುಮತಿ ನೀಡಿರುವುದರಿಂದ ಪ್ರತಿ ಯೂನಿಟ್ ವಿದ್ಯುತ್‌ಗೆ 43 ಪೈಸೆಗಳಷ್ಟು ದುಬಾರಿಯಾಗಲಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ವಾರ್ಷಿಕ ಸುಂಕವನ್ನು ಪ್ರತಿ ಯೂನಿಟ್‌ಗೆ 35 ಪೈಸೆ ಹೆಚ್ಚಿಸಲಾಯಿತು. ಆ ಮೂಲಕ ದರ ಏರಿಕೆಗಳ ಸರಣಿ ಪ್ರಾರಂಭವಾಯಿತು. ಎರಡನೇ ಬಾರಿಗೆ ದರ ಹೆಚ್ಚಳವನ್ನು ಜೂನ್ ತಿಂಗಳಲ್ಲಿ ಮಾಡಲಾಯಿತು. ಇಂಧನ ದರ ಹೊಂದಾಣಿಕೆಗೆ ಶುಲ್ಕ ಹೆಚ್ಚಿಸಲಾಗಿತ್ತು.
ಜುಲೈ 1 ರಿಂದ ಡಿಸೆಂಬರ್ 31ರವರೆಗೆ ಇಂಧನ ಹೊಂದಾಣಿಕೆ ವೆಚ್ಚವನ್ನು ಸಂಗ್ರಹಿಸಲು ಕೆಇಆರ್‌ಸಿ ಎಸ್ಕಾಮ್‌ಗಳಿಗೆ ಅನುಮತಿ ನೀಡಿತು. 31 ಪೈಸೆ (ಬೆಸ್ಕಾಂ), 27 ಪೈಸೆ (ಹೆಸ್ಕಾಂ), 26 ಪೈಸೆ (ಗೆಸ್ಕಾಂ), 21 (ಮೆಸ್ಕಾಂ) ಮತ್ತು 19 ಪೈಸೆ (ಸೆಸ್ಕ್) ಸಂಗ್ರಹಿಸಲಾಗುತ್ತಿದೆ.
ಇದನ್ನೂ ಓದಿರಿ: ಉತ್ತರಖಂಡ: 19 ವರ್ಷದ ಯುವತಿ ಕೊಲೆಗೈದ ಬಿಜೆಪಿ ಮುಖಂಡನ ಮಗನ ಬಂಧನ, ಬುಲ್ಡೋಜರ್ ಪ್ರಯೋಗ
ಸೆಪ್ಟೆಂಬರ್ 19ರಂದು ಕೆಇಆರ್‌ಸಿಯ ಮೂರನೇ ಆದೇಶವು ಹೊರಬಿದ್ದಿದೆ. ಅಕ್ಟೋಬರ್ 1 ರಿಂದ ಮಾರ್ಚ್ 31, 2023ರವರೆಗೆ ವಿದ್ಯುತ್ ಶುಲ್ಕವನ್ನು ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳ ಪ್ರಕಾರ ಬೆಸ್ಕಾಂ ಗ್ರಾಹಕರು ಪ್ರತಿ ಯೂನಿಟ್‌ಗೆ ಹೆಚ್ಚುವರಿಯಾಗಿ 43 ಪೈಸೆಗಳನ್ನು ಪಾವತಿಸಬೇಕು, ಹೆಸ್ಕಾಂ- 35, ಗೆಸ್ಕಾಂ- 35, ಸೆಸ್ಕ್ – 34 ಮತ್ತು ಮೆಸ್ಕಾಂ- 24 ಪೈಸೆಯನ್ನು ಹೆಚ್ಚುವರಿಯಾಗಿ ಸಂಗ್ರಹಿಸಬೇಕು.
ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್ 31ರವರೆಗೆ, ಗ್ರಾಹಕರು ಜೂನ್ ಆದೇಶ ಮತ್ತು ಸೆಪ್ಟೆಂಬರ್ ಆದೇಶದ ಅನ್ವಯ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ. ಡಿಸೆಂಬರ್‌ನಿಂದ ಮಾರ್ಚ್‌ವರೆಗೆ, ಮೂರನೇ ಕ್ರಮದಲ್ಲಿ ಜಾರಿಗೊಳಿಸಲಾದ ಹೆಚ್ಚಳ ಮಾತ್ರ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಆಕ್ರೋಶ
ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ. “ಇಂಧನ ಹೊಂದಾಣಿಕೆ ಶುಲ್ಕದ ನೆಪದಲ್ಲಿ ರಾಜ್ಯ ಬಿಜೆಪಿ ಸರಕಾರ ವಿದ್ಯುತ್ ದರ ಏರಿಸಿದೆ. ಕಳೆದ ಜುಲೈನಲ್ಲಿ ಬರೆ ಎಳೆದಿತ್ತು. ಈಗ ಮತ್ತೆ ದರ ಹೆಚ್ಚಿಸಿದೆ. ಕಲ್ಲಿದ್ದಲು ಬೆಲೆ ಹೆಚ್ಚಳದಿಂದ ವಿದ್ಯುತ್ ದರವನ್ನೂ ಏರಿಸಲಾಗುತ್ತಿದೆ ಎಂದು ಇಂಧನ ಸಚಿವರು ಹೇಳುವ ಮಾತು ಒಪ್ಪುವ ರೀತಿ ಇಲ್ಲ” ಎಂದಿದ್ದಾರೆ.
“ವಿಧಾನಮಂಡಲ ಅಧಿವೇಶನ ಮುಂದೂಡಿಕೆಯಾದ ಕೂಡಲೇ ವಿದ್ಯುತ್ ದರ ಏರಿಕೆ ಆಗಿದೆ! ಏನೀ ಹುನ್ನಾರ?ನವರಾತ್ರಿಗೆ ಹಬ್ಬದ ಶುಭಾಶಯ ಹೇಳಬೇಕಿದ್ದ ಸರಕಾರ, ಕರೆಂಟ್ ಶಾಕ್ ಕೊಟ್ಟು ಜನರು ಕಂಗೆಡುವಂತೆ ಮಾಡಿದೆ. ಪ್ರತಿ ಯೂನಿಟ್ʼಗೆ 24ರಿಂದ 43 ಪೈಸೆ ಹೆಚ್ಚಿಸಿರುವುದು ಅವೈಜ್ಞಾನಿಕ, ಅನಪೇಕ್ಷಿತ & ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಧನ ಹೊಂದಾಣಿಕೆ ಶುಲ್ಕದ ನೆಪದಲ್ಲಿ ರಾಜ್ಯ @BJP4Karnataka ಸರಕಾರ ವಿದ್ಯುತ್ ದರ ಏರಿಸಿದೆ. ಕಳೆದ ಜುಲೈನಲ್ಲಿ ಬರೆ ಎಳೆದಿತ್ತು. ಈಗ ಮತ್ತೆ ದರ ಹೆಚ್ಚಿಸಿದೆ. ಕಲ್ಲಿದ್ದಲು ಬೆಲೆ ಹೆಚ್ಚಳದಿಂದ ವಿದ್ಯುತ್ ದರವನ್ನೂ ಏರಿಸಲಾಗುತ್ತಿದೆ ಎಂದು ಇಂಧನ ಸಚಿವರು ಹೇಳುವ ಮಾತು ಒಪ್ಪುವ ರೀತಿ ಇಲ್ಲ.1/4#ನವರಾತ್ರಿಗೆ_ಕರೆಂಟ್_ಶಾಕ್
— H D Kumaraswamy (@hd_kumaraswamy) September 24, 2022
“ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿವೆ. ವಿದ್ಯುತ್ ಉತ್ಪಾದನೆ ಉತ್ತಮವಾಗಿದೆ. ಆದರೂ ಖರೀದಿ ವೆಚ್ಚದಲ್ಲಿ 1,244 ಕೋಟಿ ರೂ. ಹೆಚ್ಚಳ ಆಗಿದೆ ಎನ್ನುವ ಲೆಕ್ಕವನ್ನು ನಂಬುವ ರೀತಿಯಲ್ಲಿ ಇಲ್ಲ. ಇಂಧನ ವಲಯದ ಕೆಲ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಎಸ್ಕಾಂಗಳ ಭುಜದ ಮೇಲೆ ಗುಂಡಿಟ್ಟು, ಜನರಿಗೆ ಹೊಡೆಯುವ ಕೆಲಸ ಆಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ರಾಜ್ಯ ಬಿಜೆಪಿ ಸರಕಾರ ಜನರ ಪರ ಇಲ್ಲ ಎನ್ನುವುದು ಸತ್ಯ. ಜಾಗತಿಕ ಪೇಟೆಯಲ್ಲಿ ಕಚ್ಛಾತೈಲದ ಬೆಲೆ ನಿರಂತರ ಇಳಿದರೂ ದೇಶದಲ್ಲಿ ತೈಲಬೆಲೆ ಇಳಿಸದ ಕೇಂದ್ರದ ಬಿಜೆಪಿ ಸರಕಾರದ ಹಾದಿಯಲ್ಲೇ ರಾಜ್ಯ ಬಿಜೆಪಿ ಸರಕಾರವೂ ಸಾಗಿದೆ. ವಿದ್ಯುತ್ ದರದ ನಿರಂತರ ಏರಿಕೆ ಬಗ್ಗೆ ಗಂಭೀರ ಅನುಮಾನಗಳಿವೆ” ಎಂದು ತಿಳಿಸಿದ್ದಾರೆ.
“ವಿದ್ಯುತ್ ಸೋರಿಕೆ, ಕಳವು ತಡೆಲಾಗದ, ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳದ ಸರಕಾರ ಅದಕ್ಷತೆಯ ಆಡಂಬೋಲ. ʼಬಡವರನ್ನು ಸುಲಿದು ಬಿಸ್ನೆಸ್ ಕ್ಲಾಸಿನ ಜನರ ಜೇಬು ತುಂಬುʼ ಎನ್ನುವುದು ಬಿಜೆಪಿ ತತ್ತ್ವ. ಅದನ್ನೇ ಕರ್ನಾಟಕದಲ್ಲೂ ಎಗ್ಗಿಲ್ಲದೆ ಮಾಡುತ್ತಿದೆ” ಎಂದು ಟೀಕಿಸಿದ್ದಾರೆ.


