ಸಿಸಿಬಿ ಪೊಲೀಸರ ದಾಳಿ ವೇಳೆ ನಾಪತ್ತೆಯಾಗಿದ್ದ ರೌಡಿ ಶೀಟರ್ ಸೈಲೆಂಟ್ ಸುನೀಲ್ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಮುಖಂಡರಿಂದ ವಿವರಣೆ ಪಡೆಯಲಾಗುವುದು, ಸೈಲೆಂಟ್ ಸುನೀಲ್‌ರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಭಾನುವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸೈಲೆಂಟ್ ಸುನೀಲ್ ಆರ್‌ಎಸ್‌ಎಸ್ ಹಿನ್ನೆಲೆಯ ರಾಷ್ಟ್ರೋತ್ಥಾನ ಪರಿಷತ್ ಜೊತೆಗೂಡಿ ರಕ್ತದಾನ ಶಿಬಿರ ಏರ್ಪಡಿಸಿದ್ದರು. ಆ ಕಾರ್ಯಕ್ರಮಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯರಾದ ಪಿ.ಸಿ ಮೋಹನ್, ಶಾಸಕರುಗಳಾದ ಉದಯ್ ಗರುಡಾಚಾರ್, ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ರಮೇಶ್ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ್ದರು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿತ್ತು.
ನವೆಂಬರ್ 23ರಂದು ನಡೆದ ರೌಡಿಗಳ ಮನೆ ಮೇಲಿನ ಸಿಸಿಬಿ ದಾಳಿಯಲ್ಲಿ ಸೈಲೆಂಟ್ ಸುನೀಲ್ ತಪ್ಪಿಸಿಕೊಂಡಿದ್ದರು ಎಂದು ಪೊಲೀಸರು ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ ಮೂರೇ ದಿನದಲ್ಲಿ ಅವರ ನೇತೃತ್ವದಲ್ಲಿಯೇ ರಕ್ತದಾನ ಕಾರ್ಯಕ್ರಮ ನಡೆಸಲಾಗಿದ್ದು ಬಂಧಿಸಬೇಕಿದ್ದ ಪೊಲೀಸರೆ ಆತನಿಗೆ ರಕ್ಷಣೆ ನೀಡಿದ್ಯಾಕೆ ಎಂಬ ಪ್ರಶ್ನೆಗಳು ಕೇಳಿಬಂದಿದ್ದವು.

“ಬಿಜೆಪಿಯಲ್ಲಿ ಈ ಮೊದಲು ವೈಟ್ ಕಾಲರ್ ರೌಡಿಗಳಿದ್ದರು, ಈಗ ರಿಯಲ್ ರೌಡಿಗಳು ಸೇರಿದ್ದಾರೆ. ಮುಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೂಡ ಬಿಜೆಪಿ ಸೇರಿ ಪಾವನನಾಗಬಹುದು! ಪಾತಕಿಗಳು, ದರೋಡೆಕೋರರು, ಡ್ರಗ್ ಪೆಡ್ಲರ್‌ಗಳು, ಕ್ರೀಮಿನಲ್‌ಗಳು, ಭ್ರಷ್ಟರು, ರೇಪಿಸ್ಟರು ಎಲ್ಲರಿಗೂ ಬಿಜೆಪಿ
ಪಕ್ಷ ತವರು ಮನೆ ಇದ್ದಂತೆ” ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯವಾಡಿತ್ತು.
ಬಿಜೆಪಿಯ ಕೃಪಾಕಟಾಕ್ಷದಿಂದ ಸೈಲೆಂಟ್ ಸುನಿಲ್ ಎಂಬ ರೌಡಿಯ ಮುಂದೆ ಈಗ ಪೊಲೀಸರೇ ಸೈಲೆಂಟ್! ಆರಗ ಜ್ಞಾನೇದ್ರರವರೇ, ಸೈಲೆಂಟ್ ಸುನಿಲನಿಗೆ ಪೊಲೀಸರು ಹುಡುಕುತ್ತಿರಲಿಲ್ಲವೇ? ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿದ್ದಾಗ ಅಲ್ಲಿ ಪೊಲೀಸರೀರಲಿಲ್ಲವೇ? ಬಂಧಿಸದಂತೆ ಪೊಲೀಸರಿಗೆ ತಡೆದವರು ಯಾರು? ಪೊಲೀಸರಿಗಿಂತ ರೌಡಿಗಳೇ ಪ್ರಭಾವಿಗಳಾದರೆ? ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.
ರೌಡಿ ಶೀಟರ್ ಫೈಟರ್ ರವಿ ಬಿಜೆಪಿ ಸೇರ್ಪಡೆ
ಸೈಲೆಂಟ್ ಸುನೀಲ್ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಭಾಗಿಯಾಗಿದ್ದು ದೊಡ್ಡ ಟೀಕೆಗೆ ಒಳಗಾದ ಸಂದರ್ಭದಲ್ಲಿಯೇ ಮತ್ತೊರ್ವ ರೌಟಿ ಶೀಟರ್ ಫೈಟರ್ ರವಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಸಚಿವರಾದ ಅಶ್ವಥ ನಾರಾಯಣ್, ಗೋಪಾಲಯ್ಯ ಮತ್ತು ಸಿ.ಪಿ ಯೋಗೀಶ್ವರ್ ನೇತೃತ್ವದಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
“ವಾಂಟೆಂಡ್ ಕ್ರಿಮಿನಲ್‌ಗಳೆಲ್ಲ ಈಗ ಬಿಜೆಪಿಗೆ ವಾಂಟೆಂಡ್! ರೌಡಿ ಶೀಟರ್‌ಗಳನ್ನು ಪಕ್ಕದಲ್ಲಿಟ್ಟುಕೊಳ್ಳುವ ಹಾಗೂ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಕಚೇರಿ ಈಗ ರೌಡಿಗಳ ಅಡ್ಡೆಯಾಗಿದೆ. ಬಿಜೆಪಿ ಈಗ ಮತ್ತೊಬ್ಬ ರೌಡಿ ಫೈಟರ್ ರವಿ ಎಂಬಾತನನ್ನು ಪಕ್ಷಕ್ಕೆ ಸೇರಿಸಿಕೊಂಡ ಸಂಸ್ಕೃತಿ ಪಾಲನೆಗೆ ಮುಂದಾಗಿದೆ” ಎಂದು ಕಾಂಗ್ರೆಸ್ ಟೀಕಿಸಿತ್ತು.
ಸೈಲೆಂಟ್ ಸುನೀಲ್ ಬಿಜೆಪಿ ಸೇರಲು ಅವಕಾಶವಿಲ್ಲ: ನಳೀನ್ ಕುಮಾರ್ ಕಟೀಲ್
ಸಾಲು ಸಾಲು ರೌಟಿ ಶೀಟರ್‌ಗಳು ಬಿಜೆಪಿ ಜೊತೆ ಗುರುತಿಸಿಕೊಳ್ಳುತ್ತಿರುವುದು ಆಡಳಿತ ಪಕ್ಷಕ್ಕೆ ಮುಜುಗರ ತಂದಿದೆದ. ಅಲ್ಲದೆ ಸಾರ್ವಜನಿಕರಿಂದ ಟೀಕೆಗಳು ಕೇಳಿ ಬರುತ್ತಿವೆ. ಪೊಲೀಸರು ಸೈಲೆಂಟ್ ಸುನೀಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ಡ್ಯಾಮೇಜ್ ಕಂಟ್ರೋಲ್‌ಗೆ ಇಳಿದಿದೆ. ಸೈಲೆಂಟ್ ಸುನೀಲ್ ಬಿಜೆಪಿ ಸೇರಲು ಅವಕಾಶವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ ಈಗಾಗಲೇ ಪಕ್ಷಕ್ಕೆ ಸೇರಿರುವ ಫೈಟರ್ ರವಿ ಬಗ್ಗೆ ಅವರು ಚಕಾರವೆತ್ತಿಲ್ಲ.
ಇದನ್ನೂ ಓದಿ: ತರಗತಿಯಲ್ಲಿ ಇಸ್ಲಾಮೋಫೋಬಿಯಾ ಹರಡಲು ಯತ್ನಿಸಿದ ಪ್ರಾಧ್ಯಾಪಕನಿಗೆ ಕ್ಲಾಸ್ ತೆಗೆದುಕೊಂಡ ವಿದ್ಯಾರ್ಥಿ


