ಧಾರವಾಡ ಜಿಲ್ಲೆಯ ಗರಗ ಪೊಲೀಸರು 14 ಮಂದಿಯ ವಿರುದ್ಧ ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ. ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದಲ್ಲಿ ಘಟನೆ ವರದಿಯಾಗಿದೆ.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರವಿಗೌಡ ಪಾಟೀಲ್, ಪಿಲ್ಲು ಮೋಹನಗೌಡ ಪಾಟೀಲ್ ಸೇರಿ 12 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ದಲಿತ ಸಮುದಾಯದ ಕಾರ್ತಿಕ್ ಪಟ್ಟಿಹಾಳ್, ಅವರ ತಂದೆ ನಾರಾಯಣ್ ಮತ್ತು ತಾಯಿ ಮುದುಕವ್ವ ಎಂಬುವವರ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ ಸವರ್ಣಿಯರು ಗಂಭೀರವಾಗಿ ಗಾಯಗೊಳಿಸಿದ್ದಾರೆ.
ದಲಿತ ಸಮುದಾಯದವರಾದ ಕಾರ್ತಿಕ್ ಅವರು ರವಿಗೌಡ ಪಾಟೀಲನ ಮನೆಯ ಮುಂದೆ ಬೈಕ್ ಸವಾರಿ ಮಾಡಿದ ಎಂಬ ಒಂದೇ ಒಂದು ಕಾರಣಕ್ಕೆ ಜಾತಿ ದೌರ್ಜನ್ಯ ನಡೆದಿದೆ.
“ಜನವರಿ 25 ರಂದು ನಮ್ಮ ಮಗ ಜಾತ್ರೆಗೆಂದು ಹಿಂದಿರುಗುತ್ತಿದ್ದಾಗ ಗುಂಪೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದೆ” ಎಂದು ಮುದುಕವ್ವ ದೂರಿನಲ್ಲಿ ತಿಳಿಸಿದ್ದಾರೆ. ನಂತರ ಆ ದುಷ್ಕರ್ಮಿಗಳ ಗುಂಪು ಕಾರ್ತಿಕ್ ಮನೆಗೆ ನುಗ್ಗಿ ಅವರ ತಂದೆ ನಾರಾಯಣ್ ಮತ್ತು ತಾಯಿ ಮುದುಕವ್ವ ಅವರ ಮೇಲೆಯೂ ಹಲ್ಲೆ ನಡೆಸಿದೆ.
ಜಾತ್ರೆ ನಡೆಯುತ್ತಿರುವಾಗ ಕಾರ್ತಿಕ್‌ನನ್ನು ಅಪಹರಿಸುವ ಯತ್ನ ನಡೆದಿದ್ದು, ಆ ವೇಳೆಗೆ ಪೋಷಕರು ಆತನನ್ನು ರಕ್ಷಿಸಲು ಬಂದಿದ್ದಾರೆ ಎನ್ನಲಾಗಿದೆ. ಆಗ ಪಾಟೀಲನ ಬೆಂಬಲಿಗರು ಇವರ ಮೇಲೆ ಹಲ್ಲೆ ನಡೆಸಿದ್ದಾರೆ.
ದಾಳಿಕೋರರು ಮುದುಕವ್ವನ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳು ಧಾರವಾಡದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುಟುಂಬದ ಇತರರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ತನಿಖೆ ನಡೆಯುತ್ತಿದ್ದು ಆರೋಪಗಳ ಬಂಧನವಾಗಿಲ್ಲವೆಂದು ವರದಿಯಾಗಿದೆ.
ಹಲ್ಲೆಗೊಳಗಾದ ಕುಟುಂಬಸ್ಥರು ಹೆದರಿ ಕ್ಯಾರಕೊಪ್ಪ ಗ್ರಾಮದ ಸಂಬಂಧಿಕರ ಮನೆಯಲ್ಲಿಯೇ ಆಶ್ರಯ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ನಾರಾಯಣ ಪಟ್ಟಿಹಾಳ, ‘ಈ ಗ್ರಾಮದಲ್ಲಿಯೂ ಹಲ್ಲೆ ಮಾಡಿದ ಆರೋಪಿಗಳ ಸಂಬಂಧಿಕರಿದ್ದು, ಇಲ್ಲಿಗೂ ಬಂದು ತಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಎಂಬ ಭಯ ಕಾಡುತ್ತಿದೆ’ ಎಂದಿದ್ದಾರೆ.
‘‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಧಾರವಾಡ ಭೇಟಿ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯ ಇದ್ದ ಕಾರಣ ಆರೋಪಿಗಳ ಬಂಧನ ಸಾಧ್ಯವಾಗಿಲ್ಲ. ಆದರೆ ಹಲ್ಲೆಗೊಳಗಾದ ರಕ್ಷಣೆಗೆ ಕಾನ್‌ಸ್ಟೆಬಲ್ ಕಳುಹಿಸಲಾಗಿತ್ತು. ಆದರೆ ಮಾದನಬಾವಿಯ ಅವರ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಿಬ್ಬಂದಿ ಠಾಣೆಗೆ ಮರಳಿದ್ದರು. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಠಾಣೆಯ ಅಧಿಕಾರಿ ತಿಳಿಸಿದ್ದಾರೆ.


