ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ಗುಂಪಿನ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಅಥವಾ ಜಂಟಿ ಸಂಸದೀಯ ಸಮಿತಿ (JPC) ಅವರ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ತನಿಖೆಗೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ. ಅಷ್ಟೇ ಅಲ್ಲದೇ ಫೆಬ್ರವರಿ 6 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಕಾರ್ಯಕರ್ತರಿಗೆ ಕಾಂಗ್ರೆಸ್ ಕರೆ ನೀಡಿದೆ.
ನರೇಂದ್ರ ಮೋದಿ ಸರ್ಕಾರವು, ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಲು ಈ ಸಾರ್ವಜನಿಕ ಸಂಸ್ಥೆಗಳನ್ನು ಹೇಗೆ ಒತ್ತಾಯಿಸಿದೆ ಎಂಬುದನ್ನು ಎತ್ತಿ ತೋರಿಸಲು ಪ್ರತಿ ಜಿಲ್ಲೆಯಲ್ಲೂ ಪಕ್ಷದ ಕಾರ್ಯಕರ್ತರು ಫೆಬ್ರವರಿ 6 ರಂದು ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕಚೇರಿಗಳ ಹೊರಗೆ ಪ್ರತಿಭಟನೆ ನಡೆಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ”ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯಿಂದ ಅದಾನಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ಮಾಡಬೇಕು ಎಂದು ನಾವು ಬಯಸುತ್ತೇವೆ. ಈ ತನಿಖೆಯ ದಿನನಿತ್ಯದ ವರದಿಯೂ ನೀಡಬೇಕು” ಎಂದು ಹೇಳಿದರು.
”ದೇಶದ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಪ್ರಧಾನಿಯವರ ಆಪ್ತ ಸ್ನೇಹಿತರ ಲಾಭಕ್ಕಾಗಿ ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ. ಅದಾನಿ ಸಮೂಹದಲ್ಲಿ ಎಲ್ ಐಸಿ ಒಟ್ಟು ₹36,474.78 ಕೋಟಿ ಹೂಡಿಕೆ ಮಾಡಿದೆ. ಆದರೆ ಭಾರತೀಯ ಬ್ಯಾಂಕ್‌ಗಳು ಒಟ್ಟಾಗಿ ಸುಮಾರು ₹80,000 ಕೋಟಿಗಳಷ್ಟು ಮೊತ್ತವನ್ನು ಹೂಡಿಕೆ ಮಾಡಿವೆ. ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್, ಅಕೌಂಟಿಂಗ್ ವಂಚನೆ ಮತ್ತು ಇತರ ದುರುಪಯೋಗದ ಆರೋಪಗಳಿದ್ದಾಗಲೂ ಅವರು ಅದನ್ನು ಮುಂದುವರಿಸುತ್ತಾರೆ. ಬಹಿರಂಗಪಡಿಸಿದಾಗಿನಿಂದ ಗ್ರೂಪ್ $ 100 ಬಿಲಿಯನ್ ಕಳೆದುಕೊಂಡಿದೆ” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ಮನವಿ ಮಾಡಲಾಗಿದ್ದು, ಹಿರಿಯ ನಾಯಕರ ಹೊರತಾಗಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳು, ಪಂಚಾಯತ್ ಮತ್ತು ಬೂತ್ ಮಟ್ಟದಿಂದ ಕಾರ್ಯಕರ್ತರ ಸಂಚಲನವನ್ನು ಪೂರ್ಣ ಪ್ರಮಾಣದಲ್ಲಿ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ: ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ; ತನಿಖೆಗೆ ಆಗ್ರಹಿಸಿದ ವಿರೋಧ ಪಕ್ಷಗಳು
ಪಕ್ಷದ ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ”ನಾವು ಯಾವುದೇ ನಿರ್ದಿಷ್ಟ ಭಾರತೀಯ ಕಾರ್ಪೊರೇಟ್ ಹೌಸ್ ವಿರೋಧಿಗಳಲ್ಲ, ನಾವು ಕ್ರೋನಿ ಕ್ಯಾಪಿಟಲಿಸಂ ವಿರೋಧಿಗಳು. ಆಯ್ದ ಬಿಲಿಯನೇರ್‌ಗಳಿಗೆ ಅನುಕೂಲವಾಗುವಂತೆ ನಿಯಮಗಳನ್ನು ಬದಲಾಯಿಸಿದಾಗ, ನಾವು ಅದನ್ನು ವಿರೋಧಿಸುತ್ತೇವೆ” ಎಂದರು.
”ಪ್ರಧಾನ ಮಾರ್ಗದರ್ಶಕರು ಈ ದೇಶದ ಅತಿದೊಡ್ಡ ಕಾರ್ಪೊರೇಟ್ ವಂಚನೆಯ ಆರೋಪ ಹೊತ್ತಿರುವ ಅದಾನಿ ಗುಂಪಿಗೆ ಎಲ್‌ಐಸಿ ಮತ್ತು ಎಸ್‌ಬಿಐನಲ್ಲಿ ಷೇರುಗಳನ್ನು ಹಸ್ತಾಂತರಿಸಿದರು. ಕೋಟಿಗಟ್ಟಲೆ ಭಾರತೀಯರ ಠೇವಣಿಗಳನ್ನು ಮುಳುಗಿಸುವಲ್ಲಿ ‘ಸಾಹೇಬರು’ ಯಾವುದೇ ಕಲ್ಲನ್ನು ಬಿಟ್ಟಿಲ್ಲ ಎಂದು ಪ್ರಧಾನಿ ಮೋದಿನ್ನು ಗುರಿಯಾಗಿಸಿಕೊಂಡು” ಕೆಹ್ರಾ ಹೇಳಿದರು.
ಈ ವಿಚಾರದಲ್ಲಿ ಸರ್ಕಾರದ ಮೌನವನ್ನು ಪ್ರಶ್ನಿಸಿದ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ರಣದೀಪ್ ಸುರ್ಜೇವಾಲಾ, ”ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ಈ ವಿಷಯ ಏಕೆ ಕಾಣಿಸಿಕೊಂಡಿಲ್ಲ ಎಂದು ಕೇಳಿದರು. “ಹಿಂಡೆನ್‌ಬರ್ಗ್ ಸಂಶೋಧನಾ ವರದಿಯ ಆಪಾದನೆಯಿಂದ ದೊಡ್ಡ ವಂಚನೆ ಬೆಳಕಿಗೆ ಬಂದಿದೆ. ಆದರು ಪ್ರಧಾನಿ ಮಂತ್ರಿ ಅದಾನಿ ಗುಂಪಿನ ವಿರುದ್ಧ ಗಂಭೀರ ವಂಚನೆಗಳ ತನಿಖಾ ಕಚೇರಿ/ಜಾರಿ ನಿರ್ದೇಶನಾಲಯದಿಂದ ಸ್ವತಂತ್ರ ಲೆಕ್ಕಪರಿಶೋಧನೆ ಮತ್ತು ತನಿಖೆಯನ್ನು ಏಕೆ ಘೋಷಿಸಲಿಲ್ಲ?” ಎಂದು ಸುರ್ಜೆವಾಲಾ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ಮೌಲ್ಯದ ಸವೆತದ ಹೊರತಾಗಿಯೂ #LIC, SBI ಲೈಫ್, SBI ಉದ್ಯೋಗಿಗಳ ಪಿಂಚಣಿ ನಿಧಿಯನ್ನು #AdaniFPO ನಲ್ಲಿ ₹525 ಕೋಟಿ ಹಣ ಹೂಡಿಕೆ ಮಾಡಲು ಮೋದಿ ಸರ್ಕಾರ ಏಕೆ ಅವಕಾಶ ಮಾಡಿಕೊಟ್ಟಿತು? ಜನವರಿ 24 ರಿಂದ ₹1,48,505 CR ನ LIC ಮತ್ತು SBI ನ ಮಾರುಕಟ್ಟೆ ಮೌಲ್ಯದ ಕುಸಿತಕ್ಕೆ ಯಾರು ಹೊಣೆ? ಎಂದು ಕೇಳಿದ್ದಾರೆ.


