ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಸ್ವಾಗತಕ್ಕಾಗಿ ಬಿಜೆಪಿ ಯುವ ಮೋರ್ಚಾ ಮಾಜಿ ರಾಜ್ಯ ಉಪಾಧ್ಯಕ್ಷ, ಆಳಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಭೀಮಾಶಂಕರ ಪಾಟೀಲ್ ಅವರು, ಪ್ರಧಾನಿ ಮೋದಿ ಭಾವಚಿತ್ರವಿರುವ ಬ್ಯಾನರ್ ಹಾಕಿಸಿದ್ದರು. ಆಳಂದ ಕ್ಷೇತ್ರದ ಹಾಲಿ ಶಾಸಕ ಸುಭಾಷ್ ಗುತ್ತೇದಾರ ಅವರ ಪುತ್ರ ಹರ್ಷಾನಂದ ಗುತ್ತೇದಾರ ಅವರು ಅದರಲ್ಲಿ ಸುಮಾರು 50ಕ್ಕೂ ಹೆಚ್ಚು ಬ್ಯಾನರ್ ಗಳನ್ನು ಹರಿಸಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಭೀಮಾಶಂಕರ ಪಾಟೀಲ್ ತಮ್ಮದೇ ಪಕ್ಷದ ಶಾಸಕರ ವಿರುದ್ಧ ಆಳಂದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯ ಸಂಕಲ್ಪ ಯಾತ್ರೆಯ ಸ್ವಾಗತಕ್ಕೆ ಹಾಕಿರುವ ಬ್ಯಾನರ್ ಹರಿದು ಹಾಕಿಸಿದ ಶಾಸಕರ ನಡೆಗೆ ತಾಲೂಕಿನಾದ್ಯಂತ ಬಿಜೆಪಿ ಕಾರ್ಯಕರ್ತರಿಂದಲೇ ಆಕ್ರೋಶ ವ್ಯಕ್ತವಾಗಿದೆ. ಭೀಮಾಶಂಕರ ಹಾಕಿಸಿರುವ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಭಾವ ಚಿತ್ರ ಇರುವ ಬ್ಯಾನರ್ ಹರಿಸಿಹಾಕುವ ಮೂಲಕ ಗುತ್ತೇದಾರ ಕೀಳು ಮಟ್ಟದ ರಾಜಕೀಯ ಪ್ರದರ್ಶಿಸಿದ್ದಾರೆ. ಅವರು ತಾಲೂಕಿನಲ್ಲಿ ಗುಂಡಾ ರಾಜಕೀಯ ಜೀವಂತ ಇಡಲು ಪ್ರಯತ್ನಿಸುತ್ತಿದ್ದಾರೆ. ಭೀಮಾಶಂಕರ ಪಾಟೀಲ್ ಅವರ ಜನ ಬೆಂಬಲ, ಪಕ್ಷ ನಿಷ್ಠೆ,ಯುವ ನಾಯಕತ್ವದ ಚಿಂತನೆಗಳನ್ನು ಸಹಿಸದೆ ಇಂತಹ ಅಡ್ಡ ದಾರಿಯ ಕೆಲಸ ಮಾಡಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಶಾಸಕ ಗುತ್ತೇದಾರ ಅವರ ಈ ನಡೆಯಿಂದ ಪಕ್ಷದ ರಾಜ್ಯ ನಾಯಕರುಗಳಿಗೆ ಮುಜುಗರ ತರಿಸಿದೆ. ಗುತ್ತೇದಾರರ ಗುಂಡಾಗಿರಿ ರಾಜಕೀಯಕ್ಕೆ ತೊಡೆ ತಟ್ಟಿ ನಿಂತ ಭೀಮಾಶಂಕರ ಪಾಟೀಲ್ ಅವರನ್ನು ಕ್ಷೇತ್ರದ ಜನರು ಅಭಿನಂದಿಸಿದ್ದಾರೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ ಶಾ, ರಾಷ್ಟ್ರೀ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಹರಿದು ಹಾಕಿರುವುದನ್ನು ಪಕ್ಷದ ರಾಜ್ಯ ನಾಯಕರುಗಳು ಗಂಭೀರವಾಗಿ ಪರಿಗಣಿಸಿ ಗುತ್ತೇದಾರ ಮೇಲೆ ಶಿಸ್ತು ಕ್ರಮ ತಗೆದುಕೊಳ್ಳಬೇಕು ಎಂದು ಆಳಂದ ತಾಲೂಕಿನ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ‘ಕುಂಕುಮ ಯಾಕಿಟ್ಟಿಲ್ಲ, ಗಂಡ ಬದುಕಿದಾನೆ ತಾನೇ’: ಮಹಿಳಾ ದಿನಾಚರಣೆಯಂದೇ ಬಿಜೆಪಿ ಸಂಸದನಿಂದ ಮಹಿಳೆಗೆ ಅವಮಾನ
ಈ ಬಗ್ಗೆ ಭೀಮಾಶಂಕರ ಪಾಟೀಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ”ಪಕ್ಷದ ಸಿದ್ದಾಂತದ ಗಂಧ-ಗಾಳಿ, ರಾಷ್ಟ್ರ ನಾಯಕರ ಮೌಲ್ಯ ಗೊತ್ತಿಲ್ಲದ ಪಕ್ಷಾಂತರಿ, ಅವಕಾಶವಾದಿ ಶಾಸಕ ಗುತ್ತೇದಾರರಿಂದ ಇದಲ್ಲದೇ ಇನ್ನೇನು ನಿರೀಕ್ಷಿಸಲು ಸಾಧ್ಯ? ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚಿತ್ರ ಸೇರಿದಂತೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರುಗಳ ಚಿತ್ರ ಹರಿದು ಬೀದಿಯಲ್ಲಿ ಬಿಸಾಕಿರುವುದು ನನಗೆ ತುಂಬಾ ನೋವು ತಂದಿದೆ. ಪಕ್ಷ ನಿಷ್ಠೆ ಇರುವ ಯಾರೂ ಇಂತಹ ಹೀನ ಕೆಲಸ ಮಾಡಲ್ಲ. ಗುತ್ತೇದಾರರ ಈ ಪುಂಡಾಟದ ಗುಂಡಾಗಿರಿಗೆ ನಾನು ಬಗ್ಗುವುದೂ ಇಲ್ಲ, ಜಗ್ಗವುದೂ ಇಲ್ಲ” ಎಂದಿದ್ಧಾರೆ.
”ಈ ಕುರಿತು ನಾನು ಈಗಾಗಲೇ ಆಳಂದ ಠಾಣೆಗೆ ದೂರು ನೀಡಿರುವೆ.ಅಧಿಕಾರಿಗಳು ಸೂಕ್ತ ತನಿಖೆ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಗಮನಕ್ಕೂ ಈ ವಿಷಯ ದೂರಿನ ರೂಪದಲ್ಲಿ ತಂದಿರುವೆ. ನಮ್ಮದು ಶಿಸ್ತಿನ ಪಕ್ಷ ತಪ್ಪು ಮಾಡಿದವರೂ ಯಾರೇ ಆಗಲಿ ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎನ್ನುವ ಭರವಸೆ ನನಗಿದೆ” ಎಂದು ಅವರು ಹೇಳಿದ್ದಾರೆ.


