ಏಪ್ರಿಲ್ 1ರಿಂದ ರಾಜ್ಯದ ಎಲ್ಲ ದುಡಿಯುವ ವರ್ಗದ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೆ ರಾಜ್ಯ ಸರ್ಕಾರದ ಈ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ.
ಶಾಲಾ ವಿದ್ಯಾರ್ಥಿನಿಯರು, ದುಡಿಯುವ ಮಹಿಳೆಯರಿಗೆ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಉಚಿತ ಬಸ್‌ಪಾಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ ”ಸರ್ಕಾರದಿಂದ ಯಾವುದೇ ಆದೇಶ ಬಾರದ ಕಾರಣ ಪಾಸ್ ವಿತರಣೆ ಮಾಡಿಲ್ಲ” ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸರ್ಕಾರವನ್ನು ವ್ಯಂಗ್ಯ ಮಾಡಿ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ. ”ಏಪ್ರಿಲ್ 1ರಿಂದ ಎಲ್ಲಾ ದುಡಿಯುವ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಎಂಬ ಹೂವನ್ನು ಕಿವಿ ಮೇಲಿಟ್ಟಿದ್ದರು ಬಸವರಾಜ ಬೊಮ್ಮಾಯಿ. “ಏಪ್ರಿಲ್ 1ರಿಂದ” ಎಂದಿದ್ದೇ ಮಹಿಳೆಯರನ್ನು ಮೂರ್ಖರಾಗಿಸುವ ಸಲುವಾಗಿಯೇ? ಎಂದು ಬಿಜೆಪಿಗೆ ಪ್ರಶ್ನಿಸಿದೆ. ಏಪ್ರಿಲ್ 1ರಂದೇ ಬಸ್ ಪಾಸ್ ನೀಡದೆ ಮಹಿಳೆಯರಿಗೆ ಏಪ್ರಿಲ್ ಫೂಲ್ ಮಾಡಿದೆ ಈ ರಾಜ್ಯ ಬಿಜೆಪಿ ಸರ್ಕಾರ” ಎಂದು ಕಾಂಗ್ರೆಸ್ ಗೇಲಿ ಮಾಡಿದೆ.
ಏಪ್ರಿಲ್ ಒಂದರಿಂದ ಎಲ್ಲಾ ದುಡಿಯುವ ಮಹಿಳೆಯರಿಗೆ, ವಿದ್ಯಾರ್ಥಿನೀಯರಿಗೆ ಉಚಿತ ಬಸ್ ಪಾಸ್ ಎಂಬ ಹೂವನ್ನು ಕಿವಿ ಮೇಲಿಟ್ಟಿದ್ದರು @BSBommai.
"ಏಪ್ರಿಲ್ 1ರಿಂದ" ಎಂದಿದ್ದೇ ಮಹಿಳೆಯರನ್ನು ಮೂರ್ಖರಾಗಿಸುವ ಸಲುವಾಗಿಯೇ @BJP4Karnataka?
ಏಪ್ರಿಲ್ 1ರಂದೇ ಬಸ್ ಪಾಸ್ ನೀಡದೆ ಮಹಿಳೆಯರಿಗೆ ಏಪ್ರಿಲ್ ಫೂಲ್ ಮಾಡಿದೆ ಸರ್ಕಾರ.#BJPFoolsPeople pic.twitter.com/8bdXHXUZgj
— Karnataka Congress (@INCKarnataka) April 1, 2023
ಈ ಹಿಂದೆ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
”ನಮ್ಮ ಬಾಲಕಿಯರ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ದೂರದ ಪ್ರದೇಶಗಳಿಂದ ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸಲು ಉಚಿತ ಬಸ್‌ಪಾಸ್ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಶಾಲೆ ಆರಂಭವಾಗುವ ಸಮಯ, ಬಿಡುವ ಸಮಯಕ್ಕೆ ಬಸ್‌ಗಳು ಲಭ್ಯವಿರಬೇಕು. ಅದಕ್ಕಾಗಿ ಪ್ರಸ್ತುತ ಸಂಚರಿಸುತ್ತಿರುವ ಬಸ್‌ಗಳ ಜತೆಗೆ ಪ್ರತಿ ತಾಲ್ಲೂಕಿಗೆ ಕನಿಷ್ಠ ಮೂರರಿಂದ ಐದು ಬಸ್‌ಗಳ ವ್ಯವಸ್ಥೆ ಮಾಡಬೇಕು. ಸಂಸ್ಥೆಯ ಬಸ್‌ಗಳು ಲಭ್ಯವಿಲ್ಲದಿದ ಪ್ರದೇಶಗಳಲ್ಲಿ ಗುತ್ತಿಗೆ ಆಧಾರದಲ್ಲಿ ಬಸ್‌ಗಳನ್ನು ತೆಗೆದುಕೊಳ್ಳಬೇಕು. ಮಿನಿ ಬಸ್‌ಗಳ ಬಳಕೆ ಮಾಡಬೇಕು. ಅದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು” ಎಂದು ಬೊಮ್ಮಾಯಿ ಅವರು ಹೇಳಿದ್ದರು.
”ಮಹಿಳೆಯರಿಗೆ ಗೌರವದ ಜತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ದುಡಿಯುವ ಮಹಿಳೆಯರಿಗೆ ಉತ್ತೇಜನ ನೀಡಲು ಉಚಿತ ಬಸ್‌ಪಾಸ್ ನೀಡಲಾಗುತ್ತಿದೆ. ಬಜೆಟ್‌ನಲ್ಲೂ ಘೋಷಣೆ ಮಾಡಲಾಗಿದೆ” ಎಂದು ತಿಳಿಸಿದ್ದರು.
ಇದನ್ನೂ ಓದಿ: ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ರಾಜೀನಾಮೆ; ಕಾಂಗ್ರೆಸ್ ಸೇರುವ ಸಾಧ್ಯತೆ


