Homeಕರ್ನಾಟಕಅಮಾಯಕ ಇದ್ರೀಶ್ ಕೊಲೆ: ಸಂಘಪರಿವಾರದ ಗೂಂಡಾಗಿರಿ ವಿರುದ್ಧ ಜನಾಕ್ರೋಶ

ಅಮಾಯಕ ಇದ್ರೀಶ್ ಕೊಲೆ: ಸಂಘಪರಿವಾರದ ಗೂಂಡಾಗಿರಿ ವಿರುದ್ಧ ಜನಾಕ್ರೋಶ

- Advertisement -
- Advertisement -

ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕಿನ ಸಾತನೂರು ಬಳಿ ಶುಕ್ರವಾರ ಮಧ್ಯರಾತ್ರಿ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದ ಇದ್ರೀಶ್‌ ಪಾಷ ಅವರ ಹತ್ಯೆಯಾಗಿರುವುದಾಗಿ ವರದಿಯಾಗಿದೆ. ಗೋರಕ್ಷಣೆ ಹೆಸರಲ್ಲಿ ಸಂಘಪರಿವಾರದ ಮುಖಂಡ ಪುನೀತ್‌ ಕೆರೆಹಳ್ಳಿ ಮತ್ತು ಆತನ ಸಹಚರರು ಕೊಲೆ ಮಾಡಿದ್ದಾರೆಂದು ಪ್ರಕರಣ ದಾಖಲಾಗಿದೆ.

ಗೋರಕ್ಷಣೆಯ ಹೆಸರಿನಲ್ಲಿ ‌ಇದ್ರೀಶ್ ಅವರನ್ನು ಕೊಲ್ಲಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಬ್ಬಿದ ಬಳಿಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ಹಿಂದುತ್ವ ಗೂಂಡಾಗಿರಿಯನ್ನು ಸಾರ್ವಜನಿಕರು ಖಂಡಿಸಿದ್ದಾರೆ.

ರಕ್ಷಾ ರಾಮಯ್ಯ ಬ್ರಿಗೇಡ್‌ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೊವೊಂದು ಹಂಚಿಕೊಳ್ಳಲಾಗಿದೆ. ಅದರಲ್ಲಿ ಪುನೀತ್‌ ಕೆರೆಹಳ್ಳಿ ಬ್ಯಾಟ್‌ವೊಂದನ್ನು ಹಿಡಿದು ರಸ್ತೆಯಲ್ಲಿ ತಿರುಗುತ್ತಿರುವುದನ್ನು ಕಾಣಬಹುದು. “ಇದೊಂದೇ ಪ್ರೈಮರಿ ಸಾಕ್ಷಿ ಸಾಕು, ಈ ರೀತಿ ರಸ್ತೆಯಲ್ಲಿ ಬ್ಯಾಟ್ ಹಿಡಿದು ನಿಲ್ಲಲು ಇವನು ಪೊಲೀಸಾ? ರಾಮನಗರ ಜಿಲ್ಲೆಯ ಸಾತನೂರಿನಲ್ಲಿ ರೌಡಿ ಪುನೀತ್ ಕೆರೆಹಳ್ಳಿ ಮತ್ತು ಸಹಚರರಿಂದ ನೈತಿಕ ಪೊಲೀಸ್ ಗಿರಿ, ಮಸ್ಲಿಮ್ ಯುವಕ ಬಲಿ” ಎಂದು ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ.

ಸಿಪಿಐಎಂ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಟಿ.ಎಲ್. ಅವರು ಪ್ರತಿಕ್ರಿಯಿಸಿ, “ಸಂಘ ಪರಿವಾರದ ಗೋರಕ್ಷಕ ಗೂಂಡಾಗಳಿಂದ ಹತ್ಯೆಯಾದ ಮಂಡ್ಯದ ಗುತ್ತಲು ನಿವಾಸಿ ಇದ್ರಿಶ್ ಪಾಶಾ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಆತನ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

“ಆರೆಸ್ಸೆಸ್ ಸಂಘ ಪರಿವಾರದ ಗೂಂಡಾ ಪಡೆ ಗೋರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ, ಬಡ ಮುಸಲ್ಮಾನರನ್ನು ಕೊಲ್ಲುವ‌ ಕ್ರಿಮಿನಲ್ ಕೃತ್ಯದಲ್ಲಿ ನಿರತವಾಗಿದೆ. ರಾಜ್ಯದ ಬಿಜೆಪಿ ಸರ್ಕಾರ ಇಂತಹ ಗೂಂಡಾಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದೆ. ಇದರಿಂದ ಅಮಾಯಕ ಜನತೆ ಪ್ರಾಣ ಕಳೆದುಕೊಂಡು ಅವರ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಇಂತಹ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ” ಎಂದಿದ್ದಾರೆ.

“ಕನಕಪುರ ತಾಲೂಕಿನ ಸಾತನೂರು ಬಳಿ ಗೋರಕ್ಷಕ ಗೂಂಡಾ ಪಡೆ ಇದ್ರಿಶ್ ಪಾಷಾ ಅವರನ್ನು ಕಾಂಪೌಂಡ್ ಒಳಗೆ ಸೇರಿಸಿಕೊಂಡು ವಿದ್ಯುತ್ ಶಾಕ್ ನೀಡುವ ಮೂಲಕ ಚಿತ್ರಹಿಂಸೆ ನೀಡಿ ಕೊಲೆ ಮಾಡಿದೆ. ಮೇಲ್ನೋಟಕ್ಕೆ ಈ ಕೊಲೆ ನಡೆಸಿರುವುದು ಆರೆಸ್ಸೆಸ್ ಸಂಘಟನೆಗೆ ಸೇರಿದ ರಾಷ್ಟ್ರ ರಕ್ಷಣಾ ಪಡೆಯ ಪುನಿತ್ ಕೆರೆಹಳ್ಳಿ ನೇತೃತ್ವದ ಗೂಂಡಾಪಡೆ ಎಂದು ಕಾಣುತ್ತಿದೆ. ಇದ್ರಿಶ್ ಪಾಷಾ ಜೊತೆ ಇದ್ದ ಇನ್ನಿಬ್ಬರು ಹೇಗೋ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಇಲ್ಲದಿದ್ದರೆ ಅವರೂ ಕೊಲೆಯಾಗುತ್ತಿದ್ದರು. ಇದಕ್ಕೆ ಕಾರಣವಾದ ಕ್ರಿಮಿನಲ್‌ಗಳ ರಕ್ಷಣೆಗೆ ಬೊಮ್ಮಾಯಿ ಸರ್ಕಾರ ಮುಂದಾಗಬಾರದು” ಎಂದು ಒತ್ತಾಯಿಸಿದ್ದಾರೆ.

“ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅದರಲ್ಲೂ ರೈತ ವಿರೋಧಿ ಕೃಷಿ ವಿರೋಧಿ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದ ನಂತರ ದನದ ವ್ಯಾಪಾರಿಗಳ ಮೇಲೆ ದಾಳಿಗಳು ವಿಪರೀತ ಹೆಚ್ಚಾಗಿವೆ. ಗೋರಕ್ಷಕರ ಹೆಸರಿನ ಗೂಂಡಾಗಳು ದಾಳಿ ಮಾಡಿ ಹಲ್ಲೆ ನಡೆಸುವಾಗ ರಾಜ್ಯ ಸರ್ಕಾರದ ಪೊಲೀಸರು ಒಂದೋ ಮೂಕ ಪ್ರೇಕ್ಷಕರಾಗುವುದು ಇಲ್ಲವೇ ದಾಳಿಕೋರರ ಜೊತೆ ಕೈಜೋಡಿಸುವುದು ನಡೆದಿದೆ. ಇದರಿಂದಾಗಿ ದಾಳಿ, ಹಲ್ಲೆ ನಡೆಸುವವರಿಗೆ ಹೆಚ್ಚಿನ ಬಲ ಬಂದಂತಾಗಿದೆ. ಇಂತಹ ವ್ಯಕ್ತಿಗಳು ಮತ್ತು ಶಕ್ತಿಗಳ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಪುನೀತ್‌ ಕೆರೆಹಳ್ಳಿ ಮತ್ತು ಆತನ ಸಹಚರರು ಕರೆಂಟ್ ಶಾಕ್ ನೀಡಿ ಕೊಂದಿದ್ದಾರೆಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅದನ್ನು ಸಾಮಾಜಿಕ ಹೋರಾಟಗಾರ ದೀಪು  ಅವರು ಹಂಚಿಕೊಂಡಿದ್ದು, “ಗೋರಕ್ಷಣೆ ಹೆಸರಿನಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಿಕೊಂಡು ಅಲ್ಪಸಂಖ್ಯಾತರನ್ನು ಕೊಂದ ಪುನೀತ್ ಕೆರೆಹಳ್ಳಿ ಎಂಬ ವಿಕೃತ ಕರೆಂಟ್ ಶಾಕ್ ಕೊಡುತ್ತಿರುವ ದೌರ್ಜನ್ಯದ ವಿಡಿಯೋವಿದು” ಎಂದು ತಿಳಿಸಿದ್ದಾರೆ.

ಲೇಖಕ, ಬರಹಗಾರ ರಾ.ಚಿಂತನ್‌ ಪ್ರತಿಕ್ರಿಯಿಸಿ, “ಈ ಧರ್ಮ ರಕ್ಷಣೆಯ ‘ತೀವ್ರ’ವಾದ ಕಡೆಗೆ ಇಲ್ಲಿಗೆ ಹೋಗಿ ಮುಟ್ಟುತ್ತದೆ. ಇವರನ್ನು ಹಿಂಬಾಲಿಸೋ, ಬೆಂಬಲಿಸೋ, ಎಲ್ಲರೂ ಕೊಲೆಗಡುಕರೇ. ಗೋಮಾಂಸ ರಫ್ತು ಮಾಡುತ್ತಿರುವ ಬಿಜೆಪಿಗೆ ಬಹುಪರಾಕ್ ಹಾಕುವ ಈ ಕಟುಕರೇ ಅದೇ ಗೋಮಾಂಸದ ವಿಚಾರದಲ್ಲಿ ಕೊಲೆಗಳನ್ನು ಮಾಡುತ್ತಿದ್ದಾರೆ. ಇದನ್ನು ತಿಳಿಹೇಳುವ ನಮ್ಮ ಮಾತು ಇವರಿಗೆ ಅಪಥ್ಯವಾಗುತ್ತದೆ. ಮುಸಲ್ಮಾನ ಸಮಾಜ ಇಂತಹ ಪುಂಡರ ಬೆನ್ನುಮೂಳೆ ಮುರಿಯದಿದ್ದರೇ ವಿನಾಕಾರಣ ಹೀಗೆ ಕೊಲೆಯಾಗಬೇಕಾದೀತು. ಅಹಿಂಸೆ ನಮ್ಮ ಮಂತ್ರವಾಗಲಿ, ಆದರೆ ಆತ್ಮರಕ್ಷಣೆಗೆ ಹೆದರಬೇಡಿ. ಇದ್ರಿಸ್ ಸಾವಿಗೆ ಸಂತಾಪಗಳನ್ನು ಸೂಚಿಸುತ್ತೇನೆ, ಪೊಲೀಸರು ತಾರತಮ್ಯ ಮಾಡದೇ ಆರೋಪಿಗಳ ಹೆಡೆಮುರಿ ಕಟ್ಟಲಿ” ಎಂದು ಆಶಿಸಿದ್ದಾರೆ.

ಡಿವೈಎಫ್‌ಐ ರಾಜ್ಯಾಧ್ಯಕ್ಷರಾದ ಮುನೀರ್‌ ಕಾಟಿಪಳ್ಳ ಅವರು ಪ್ರತಿಕ್ರಿಯಿಸಿ, “ಪುನೀತ್ ಕೆರೆಹಳ್ಳಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿ. ಸದ್ಯದ ಕರ್ನಾಟಕದ ರಾಜಕೀಯ, ಸಾಮಾಜಿಕ ಸಂದರ್ಭಕ್ಕೆ ಅದುವೇ ಸರಿಯಾದದ್ದು. ಬಿಜೆಪಿಯ ರಾಜಕಾರಣದ ಸಮರ್ಥ ಪ್ರತಿನಿಧಿ, ನೈಜ ಮುಖ ಆತ. ಇದಕ್ಕಿಂತ ಹೆಚ್ಚು ಏನು ಹೇಳಲು ಸಾಧ್ಯ? ಇಂಥವನನ್ನು ವರ್ಷಗಳಿಂದ ಸಹಿಸಿಕೊಂಡದ್ದಕ್ಕೆ ಪೊಲೀಸ್ ಇಲಾಖೆಯ ಮರ್ಯಾದಸ್ಥರು ನಿವೃತ್ತರಾಗುವುದು ಲೇಸು” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read