ಕರ್ನಾಟಕದಲ್ಲಿ ಹೊಸದಾಗಿ ನೇಮಕಗೊಂಡ 32 ಸಚಿವರಲ್ಲಿ 31 ಮಂದಿ ಒಂದು ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಹೇಳಿದೆ. ಚುನಾವಣಾ ಕಾವಲು ಸಮಿತಿಯ ವಿಶ್ಲೇಷಣೆಯು 24 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇರುವುದನ್ನು ಬಹಿರಂಗಪಡಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು, ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಮೇ 20 ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಒಂಬತ್ತು ಇತರ ಸಚಿವರು ಸಂಪುಟಕ್ಕೆ ಸೇರ್ಪಡೆಗೊಂಡರು. ಮೇ 27 ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 24 ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. 34 ಸಂಖ್ಯಾಬಲದ ರಾಜ್ಯ ಸಚಿವ ಸಂಪುಟವು ಸಂಪೂರ್ಣ ವಿಸ್ತರಣೆಯಾಗಿದೆ.
ತನ್ನ ವರದಿಯಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, “34 ಮಂತ್ರಿಗಳಲ್ಲಿ 32 ಮಂದಿಯ ಚುನಾವಣಾ ಪ್ರಮಾಣ ಪತ್ರಗಳನ್ನು ವಿಶ್ಲೇಷಿಸಲಾಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಸ್ಪಷ್ಟ ಮತ್ತು ಸಂಪೂರ್ಣ ಅಫಿಡವಿಟ್‌ಗಳ ಅಲಭ್ಯತೆಯಿಂದಾಗಿ ಸಚಿವ ಕೆ.ಜೆ.ಜಾರ್ಜ್ ಅವರ ಪ್ರಮಾಣಪತ್ರವನ್ನು ಸರಿಯಾಗಿ ವಿಶ್ಲೇಷಲು ಸಾಧ್ಯವಾಗಿಲ್ಲ” ಎಂದಿದೆ. ಮತ್ತೊಬ್ಬ ಸಚಿವ ಎನ್.ಎಸ್.ಬೋಸರಾಜು ಅವರು ರಾಜ್ಯ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಸದಸ್ಯರಲ್ಲದ ಕಾರಣ ಅವರ ವಿವರಗಳನ್ನು ವಿಶ್ಲೇಷಿಸಲು ಸಾಧ್ಯವಾಗಿಲ್ಲ.
32 ಸಚಿವರ ಸರಾಸರಿ ಆಸ್ತಿ 119.06 ಕೋಟಿ ರೂಪಾಯಿ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ. ಡಿ.ಕೆ.ಶಿವಕುಮಾರ್ ಅವರು 1,413.80 ಕೋಟಿ ರೂಪಾಯಿ ಮೌಲ್ಯದ ಘೋಷಿತ ಆಸ್ತಿ ಹೊಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು 51.93 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
58.56 ಲಕ್ಷ ಆಸ್ತಿ ಹೊಂದಿರುವ, ಕೋಟ್ಯಾಧಿಪತಿಯಲ್ಲದ ಏಕೈಕ ಸಚಿವ ತಿಮ್ಮಾಪುರ್ ಆರ್.ಬಾಳಪ್ಪ.
ಇದನ್ನೂ ಓದಿರಿ: ಕುಸ್ತಿಪಟುಗಳಿಗೆ ಸವಾಲಾಗಿರುವ ‘ಬ್ರಿಜ್ ಭೂಷಣ್ ಶರಣ್ ಸಿಂಗ್’ ಯಾರು? ಆತನ ಹಿನ್ನಲೆ, ಪ್ರಭಾವವೇನು?
ಏಳು ಸಚಿವರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿಕೊಂಡಿದ್ದಾರೆ ಎಂದು ವರದಿ ತೋರಿಸಿದೆ. ಡಿ.ಕೆ.ಶಿವಕುಮಾರ್, ಡಿ ಸುಧಾಕರ್, ಜಮೀರ್ ಅಹಮದ್ ಖಾನ್, ಕೆಎಚ್ ಮುನಿಯಪ್ಪ, ಸಿದ್ದರಾಮಯ್ಯ, ಬಿ ನಾಗೇಂದ್ರ ಮತ್ತು ಈಶ್ವರ್ ಖಂಡ್ರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ.
ಸಚಿವ ನಾಗೇಂದ್ರ ವಿರುದ್ಧ 105 ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ. ಹೋರಾಟದ ಸಂದರ್ಭದಲ್ಲಿಯೂ ಅನೇಕ ಸಂದರ್ಭದಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಸಾಧ್ಯತೆಗಳು ಇರುತ್ತವೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಗಂಭೀರ ಅಪರಾಧಗಳನ್ನು ಜಾಮೀನು ರಹಿತ ಅಪರಾಧಗಳೆಂದು ವ್ಯಾಖ್ಯಾನಿಸಿದೆ. ಇಂತಹ ಅಪರಾಧಗಳಲ್ಲಿ ಗರಿಷ್ಠ ಐದು ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ನೀಡಲಾಗುತ್ತದೆ. ಹಲ್ಲೆ, ಕೊಲೆ, ಅಪಹರಣ, ಅತ್ಯಾಚಾರ, ಮಹಿಳೆಯರ ವಿರುದ್ಧದ ಅಪರಾಧಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳಿಗೆ ಇವುಗಳು ಸಂಬಂಧಿಸಿರುತ್ತವೆ.


