“ನಾಳೆ ಹರಿಯಾಣದಲ್ಲಿ ನಡೆಯಲಿರುವ ಸಭೆಯಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು” ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಹರಿಯಾಣದ ರೈತರು ಮತ್ತು ಖಾಪ್ ಪಂಚಾಯಿತಿಗಳ ಮುಖಂಡರು ಕುಸ್ತಿಪಟುಗಳಿಗೆ ಬೆಂಬಲವನ್ನು ನೀಡುತ್ತಿದ್ದು, ಮುಂದೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ನಿರ್ಧರಿಸುವುದು ಬಾಕಿ ಇದೆ.
ಸೋಮವಾರ ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆಯಲು ಮುಂದಾಗಿದ್ದ ಕುಸ್ತಿಪಟುಗಳ ಮನವೊಲಿಸಿದ ಟಿಕಾಯತ್ ಅವರು ಇಂದು ಮುಜಾಫರ್‌ನಗರದಲ್ಲಿ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ್ದು, “ಅಗತ್ಯವಿದ್ದರೆ ನಾವು ಭಾರತದ ರಾಷ್ಟ್ರಪತಿಗಳ ಬಳಿಗೆ ಹೋಗುತ್ತೇವೆ. ನಾವು ನಿಮ್ಮೊಂದಿಗಿದ್ದೇವೆ, ನೀವು ಚಿಂತಿಸಬೇಕಾಗಿಲ್ಲ” ಎಂದು ಗುಡುಗಿದ್ದಾರೆ.
“ಗಂಗೆಯಲ್ಲಿ ಪದಕಗಳನ್ನು ಮುಳುಗಿಸಬೇಡಿ, ಹರಾಜಿಗೆ ಇರಿಸಿ ಎಂದು ನಾನು ಅವರಿಗೆ ಹೇಳಿದ್ದೇನೆ, ಇಡೀ ವಿಶ್ವವೇ ಮುಂದೆ ಬಂದು ಹರಾಜು ನಿಲ್ಲಿಸುವಂತೆ ಕೇಳುತ್ತದೆ” ಎಂದು ಅವರು ತಿಳಿಸಿದ್ದಾರೆ.
ರೈತರು ಮತ್ತು ಖಾಪ್ ಮುಖಂಡರು ಕುಸ್ತಿಪಟುಗಳಿಗೆ ಏಕೆ ಬೆಂಬಲ ನೀಡುತ್ತಿದ್ದಾರೆ ಎಂಬುದರ ಕುರಿತು ಪ್ರತಿಕ್ರಿಯಿಸಿರುವ ಟಿಕಾಯತ್, “ನಮ್ಮ ಪರಿವಾರ ದೊಡ್ಡದಾಗಿದ್ದರೆ ಒಳ್ಳೆಯದು” ಎಂದಿದ್ದಾರೆ.
“ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅವರು ಬಿಹಾರದಲ್ಲಿ ಲಾಲು ಯಾದವ್ ಅವರ ಕುಟುಂಬವನ್ನು ಒಡೆದರು. ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದೊಂದಿಗೆ ಅವರು ಏನು ಮಾಡಿದ್ದಾರೆಂದು ನೋಡಿ. ರಾಜಸ್ಥಾನದಲ್ಲಿ ಅದೇ ರಾಜಕೀಯ ನಡೆಯುತ್ತಿದೆ” ಎಂದು ಸಭೆಯಲ್ಲಿದ್ದ ರೈತರಿಗೆ ತಿಳಿಸಿದ್ದಾರೆ.
ತಮ್ಮ ಪ್ರತಿಭಟನೆಯ ವೇಳೆ ದಿಲ್ಲಿ ಪೋಲೀಸರು ದಬ್ಬಾಳಿಕೆ ನಡೆಸಿದ ಒಂದು ದಿನದ ನಂತರ, ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾದಲ್ಲಿ ಎಸೆಯಲು ನಿರ್ಧರಿಸಿ ಹರಿದ್ವಾರಕ್ಕೆ ತೆರಳಿದ್ದರು. ಆದರೆ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥರಾದ ಟಿಕಾಯತ್ ಮತ್ತು ಹರಿಯಾಣದ ಖಾಪ್ ನಾಯಕರ ಮಧ್ಯಸ್ಥಿಕೆಯ ನಂತರ ತಮ್ಮ ನಿರ್ಧಾರದಿಂದ ಕುಸ್ತಿಪಟುಗಳು ಹಿಂದೆ ಸರಿದರು.
ಅಪ್ರಾಪ್ತ ಯುವತಿ ಸೇರಿದಂತೆ ಏಳು ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎರಡು ಪ್ರಕರಣ ದಾಖಲಾಗಿವೆ. ಆತನ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ಹೋರಾಡುತ್ತಿದ್ದಾರೆ.
ಇದನ್ನೂ ಓದಿರಿ: ಕುಸ್ತಿಪಟುಗಳಿಗೆ ಸವಾಲಾಗಿರುವ ‘ಬ್ರಿಜ್ ಭೂಷಣ್ ಶರಣ್ ಸಿಂಗ್’ ಯಾರು? ಆತನ ಹಿನ್ನಲೆ, ಪ್ರಭಾವವೇನು?
ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರತಿಕ್ರಿಯಿಸಿದ್ದು, “ನನ್ನ ವಿರುದ್ಧದ ಆರೋಪ ಸಾಬೀತಾದರೆ ಯಾವುದೇ ಶಿಕ್ಷೆಯನ್ನು ಸ್ವೀಕರಿಸುತ್ತೇನೆ. ನನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ, ನಿಮ್ಮ ಬಳಿ (ಕುಸ್ತಿಪಟುಗಳು) ಏನಾದರೂ ಸಾಕ್ಷ್ಯಾಧಾರಗಳಿದ್ದರೆ ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ” ಎಂದಿದ್ದಾರೆ.
ಈ ವಿಷಯದ ಬಗ್ಗೆ ತನ್ನ ಮೊದಲ ಪ್ರತಿಕ್ರಿಯೆ ನೀಡಿರುವ ಸರ್ಕಾರವು, ಕುಸ್ತಿಪಟುಗಳ ವಿರುದ್ಧ ಯಾವುದೇ ಕ್ಷಿಪ್ರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನಿನ್ನೆ ನೀಡಿದೆ. ಪೊಲೀಸ್ ತನಿಖೆಯ ಪೂರ್ಣಗೊಳ್ಳುವವರೆಗೂ ಕಾಯಬೇಕು ಎಂದು ತಿಳಿಸಿದೆ.
“ದೆಹಲಿ ಪೊಲೀಸರ ತನಿಖೆ ಮುಗಿಯುವವರೆಗೂ ಕಾಯಬೇಕೆಂದು ನಾನು ಕ್ರೀಡಾಪಟುಗಳಲ್ಲಿ ಕೇಳಿಕೊಳ್ಳುತ್ತೇನೆ. ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ ಮತ್ತು ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ, ಆಟಗಾರರು ಮತ್ತು ಕ್ರೀಡೆಗೆ ಹಾನಿಯಾಗುವ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು” ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮನವಿ ಮಾಡಿದ್ದಾರೆ.


