ಅನಧಿಕೃತ ಚಲನಚಿತ್ರ ವೆಬ್‌ಸೈಟ್ ನೋಡಿದ್ದಕ್ಕೆ ದಂಡ ಪಾವತಿಸುವಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಹೆಸರಿನಲ್ಲಿ ನಕಲಿ ಸಂದೇಶ ಬಂದಿದ್ದರಿಂದ 16 ವರ್ಷದ ಬಾಲಕನೊಬ್ಬ ಉತ್ತರ ಕೇರಳ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ಶಾಲೆಯೊಂದರಲ್ಲಿ 11ನೇ ತರಗತಿ ಓದುತ್ತಿದ್ದ ಆದಿನಾಥ್ ಬುಧವಾರ ಸಂಜೆ ಇಲ್ಲಿನ ಚೇವಾಯೂರಿನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ಕೊಠಡಿಯಿಂದ ವಶಪಡಿಸಿಕೊಂಡ ಸೂಸೈಡ್ ನೋಟ್‌ನಲ್ಲಿ ಆನ್‌ಲೈನ್ ವಂಚನೆ ಕುರಿತು ಬರೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ತಾಯಿಯನ್ನು ಉದ್ದೇಶಿಸಿ ಸೂಸೈಡ್ ನೋಟ್‌ನಲ್ಲಿ, ”ತಾನು ಯಾವುದೇ ಅನಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿಲ್ಲ ಆದರೆ ಅವಳ ಲ್ಯಾಪ್‌ಟಾಪ್‌ನಲ್ಲಿ ಕಾನೂನುಬದ್ಧ ವೆಬ್‌ಸೈಟ್‌ನಲ್ಲಿ ಚಲನಚಿತ್ರವನ್ನು ವೀಕ್ಷಿಸಿದ್ದೇನೆ” ಎಂದು ಬರೆದಿರುವುದಾಗಿ ಅಧಿಕಾರಿಗಳು ಹೇಳಿದರು.
”ಅನಧಿಕೃತ ವೆಬ್‌ಸೈಟ್‌ಗೆ ಪ್ರವೇಶಿಸಿದ ಕಾರಣ, ₹30,000 ಕ್ಕಿಂತ ಹೆಚ್ಚು ಮೊತ್ತವನ್ನು ಪಾವತಿಸಬೇಕು. ಇಲ್ಲದಿದ್ದರೆ ಮುಂದೆ ದೊಡ್ಡ ಮೊತ್ತದ ದಂಡ ಮತ್ತು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ” ಎಂದು ಲ್ಯಾಪ್‌ಟಾಪ್‌ನಲ್ಲಿ ಎನ್‌ಸಿಆರ್‌ಬಿ ಹೆಸರಿನಲ್ಲಿ ನಕಲಿ ಸಂದೇಶ ಬಂದಿತ್ತು. ಇದು ಹುಡುಗನನ್ನು ಹೆದರಿಸಿದಂತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಪೊಲೀಸರು ಲ್ಯಾಪ್‌ಟಾಪ್‌ನ ಬ್ರೌಸರ್ ಇತಿಹಾಸವನ್ನು ಪರಿಶೀಲಿಸಿದ್ದಾರೆ ಆದರೆ ಮೃತ ವಿದ್ಯಾರ್ಥಿ ಯಾವುದೇ ಕಾನೂನುಬಾಹಿರ ವೆಬ್‌ಸೈಟ್ ಅನ್ನು ಪ್ರವೇಶಿಸಿರುವ ಯಾವುದೇ ಸೂಚನೆಯಿಲ್ಲ ಎಂದು ಅವರು ಹೇಳಿದರು.
”ಬ್ರೌಸ್ ಮಾಡಿ ಡಿಲೀಟ್ ಮಾಡಿರುವ ಬಗ್ಗೆ ನಮಗೆ ತಿಳಿದಿಲ್ಲ… ಆದರೆ ಹೇಗಾದರೂ ಸತ್ಯವನ್ನು ಹೊರತರಲು ವಿವರವಾದ ವೈಜ್ಞಾನಿಕ ತನಿಖೆಯ ಅಗತ್ಯವಿದೆ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಬಾಲಕನ ಸಾವಿನ ನಂತರ ಬೇರೆ ಮನೆಗೆ ಸ್ಥಳಾಂತರಗೊಂಡ ಬಾಲಕನ ಪೋಷಕರಿಂದ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಸಂಗ್ರಹಿಸಲಾಗುವುದು” ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ನಿರಾಶ್ರಿತರ ಬಯೋಮೆಟ್ರಿಕ್ ಡೇಟಾ ಸಂಗ್ರಹ: ಕೇಂದ್ರದ ಆದೇಶ ನಿರ್ಲಕ್ಷಿಸುವುದಾಗಿ ಘೋಷಿಸಿದ ಮಿಜೋರಾಂ ಸರ್ಕಾರ


