ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದಲ್ಲಿ ವಾಸಿಸುತ್ತಿರುವ ಒಬಿಸಿ (ಇತರ ಹಿಂದುಳಿದ ವರ್ಗ) ಜನರ ನಿಖರ ಸಂಖ್ಯೆಯನ್ನು ತಿಳಿಯಲು ಜಾತಿ ಆಧಾರಿತ ಜನಗಣತಿಯನ್ನು ನಡೆಸಲಿದೆ ಎಂದು ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
”ನಾವು ಎಲ್ಲರ ಪಾಲ್ಗೊಳ್ಳುವಿಕೆಯತನ್ನು ಬಯಸುತ್ತೇವೆ. ಇದು ಎಲ್ಲರ ಭಾರತವೇ ಹೊರತು ಕೆಲವೇ ಕೈಗಾರಿಕೋದ್ಯಮಿಗಳದ್ದಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ನಾವು ಜಾತಿ ಗಣತಿಯನ್ನು ನಡೆಸುತ್ತೇವೆ ಮತ್ತು ಒಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಸಾಮಾನ್ಯರು ಎಷ್ಟು ಎಂಬುದು ಎಲ್ಲರಿಗೂ ತಿಳಿಸುತ್ತೇವೆ. ಆದರೆ ಈಗೀನ ಸರ್ಕಾರ ಗಮನವನ್ನು ಬೇರೆಡೆಗೆ ತಿರುಗಿಸಲು ದ್ವೇಷ ಮತ್ತು ಹಿಂಸೆಯನ್ನು ಹರಡುತ್ತದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಜಾಪುರದಲ್ಲಿ ಕಾಂಗ್ರೆಸ್‌ನ ಜನ ಆಕ್ರೋಶ ಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ”ಜಾತಿ ಗಣತಿಯು ಭಾರತದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ… ಒಬಿಸಿ ಜನಸಂಖ್ಯೆ ಎಷ್ಟಿದೆ? ಅವರ ಭಾಗವಹಿಸುವಿಕೆ ಹೇಗಿರಬೇಕು? ನಾನು ಜಾತಿ ಗಣತಿ ಪ್ರಶ್ನೆ ಎತ್ತಿದಾಗ ಬಿಜೆಪಿಯವರಿಗೆ ನಡುಕ ಶುರುವಾಯಿತು. ನರೇಂದ್ರ ಮೋದಿ ಸಂಸತ್ತಿನಿಂದ ಓಡಿಹೋದರು. ಅಮಿತ್ ಶಾ (ಕೇಂದ್ರ ಗೃಹ ಸಚಿವರು) ಹಿಂದೂ-ಮುಸ್ಲಿಂ ಎಂದು ಇಬ್ಬಾಗ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವು ಜಾತಿ ಗಣತಿ ಮೊದಲು ಮಾಡುತ್ತೇವೆ” ಎಂದು ಹೇಳಿದರು.
ಒಬಿಸಿ ಅಧಿಕಾರಿಗಳನ್ನು ಉನ್ನತ ಅಧಿಕಾರಿಗಳಾಗಿ ನೇಮಿಸುವ ವಿಷಯವನ್ನು ಪ್ರಸ್ತಾಪಿಸಿದ ರಾಹುಲ್, ”ಭಾರತದಲ್ಲಿ ಒಟ್ಟು 90 ಅಧಿಕಾರಿಗಳು (ಕ್ಯಾಬಿನೆಟ್ ಕಾರ್ಯದರ್ಶಿ ಮತ್ತು ಭಾರತ ಸರ್ಕಾರದ ಕಾರ್ಯದರ್ಶಿ) ನಡೆಸುತ್ತಿದ್ದಾರೆ. ಹಣ ಎಲ್ಲಿಗೆ ಹೋಗಬೇಕೆಂದು ಅವರು ನಿರ್ಧರಿಸುತ್ತಾರೆ. ಆದರೆ, ಇವರಲ್ಲಿ ಒಬಿಸಿಗೆ ಸೇರಿದವರು ಕೇವಲ ಮೂವರು ಅಧಿಕಾರಿಗಳು ಮಾತ್ರ. ಭಾರತದ ₹45,00,000 ಕೋಟಿಯ ಸಂಪೂರ್ಣ ಬಜೆಟ್‌ನಲ್ಲಿ OBC ಅಧಿಕಾರಿಗಳು ಕೇವಲ 5% ಭಾಗವಹಿಸುವಿಕೆಯನ್ನು ಹೊಂದಿದ್ದಾರೆ. ಆದರೆ, ಭಾರತದಲ್ಲಿ OBC ಜನಸಂಖ್ಯೆಯು 50% ಆಗಿದೆ” ಎಂದು ವಿವರಿಸಿದರು.
ಇದೇ ವೇಳೆ ರಾಹುಲ್ ಗಾಂಧಿ ಅವರು ಅದಾನಿ ಮತ್ತು ಮಹಿಳಾ ಮೀಸಲಾತಿಯ ವಿಷಯವನ್ನು ಪ್ರಸ್ತಾಪಿಸಿದರು, ”ಸರ್ಕಾರವು ಜನರಿಗಾಗಿ ಕೆಲಸ ಮಾಡಬೇಕು, ಯಾವುದೇ ಸಂಸ್ಥೆ ಮತ್ತು ಒಂದಿಬ್ಬರು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಅಲ್ಲ. ನಾನು ಸಂಸತ್ತಿನಲ್ಲಿ ಅದಾನಿ ವಿಷಯವನ್ನು ಪ್ರಸ್ತಾಪಿಸಿದೆ. ನಾನು ಭಾಷಣ ಮಾಡಿದ ಕೂಡಲೇ, ಕೇಂದ್ರ ಬಿಜೆಪಿಯು ಅದಾನಿಯನ್ನು ರಕ್ಷಿಸಲು, ನನ್ನ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿತು. ವಿಮಾನ ನಿಲ್ದಾಣಗಳು ಮತ್ತು ಮೂಲಸೌಕರ್ಯದಿಂದ ಭತ್ತದ ಸಿಲೋಸ್‌ಗಳವರೆಗೆ ಅದಾನಿ ಎಲ್ಲೆಡೆ ಕಾಣಿಸಿಕೊಳ್ಳುತ್ತದೆ. ಅವರು ಪ್ರತಿದಿನ ರೈತರು ಮತ್ತು ಜನರ ಜೇಬಿನಿಂದ ಹಣವನ್ನು ಲೂಟಿ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಮಹಿಳಾ ಮೀಸಲಾತಿ ಕುರಿತು ಮಾತನಾಡಿದ ಅವರು, ”ಭಾರತಕ್ಕೆ ಇದು ಮುಖ್ಯವಾಗಿದೆ ಮತ್ತು ಕಾಂಗ್ರೆಸ್ ಪಕ್ಷವು ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಆದರೆ ಅನುಷ್ಠಾನಕ್ಕೆ ಮುನ್ನ ಡಿನೋಟಿಫಿಕೇಶನ್ ಮತ್ತು ಸಮೀಕ್ಷೆ ನಡೆಸಲಾಗುವುದು ಎಂದು ಹೇಳುವ ಎರಡು ಸಾಲುಗಳನ್ನು ತೆಗೆದುಹಾಕಲು ನಾವು ಕೇಳಿದ್ದೇವೆ. ಇದು ಅನುಷ್ಠಾನವನ್ನು 10 ವರ್ಷಗಳ ಕಾಲ ವಿಳಂಬಗೊಳಿಸುತ್ತದೆ ಆದರೆ ಮೀಸಲಾತಿಯನ್ನು ವಿಳಂಬಗೊಳಿಸಲು ಅವರು ಇದನ್ನು ಮಾಡಿದ್ದಾರೆ” ಎಂದು ರಾಹುಲ್ ಹೇಳಿದರು.
ಭಾರತ್ ಜೋಡೋ ಯಾತ್ರೆಯ ಅನುಭವವನ್ನು ಹಂಚಿಕೊಂಡ ರಾಹುಲ್ ಗಾಂಧಿ, ”ಭಾರತದಲ್ಲಿ ಮಧ್ಯಪ್ರದೇಶ ಭ್ರಷ್ಟಾಚಾರದ ಕೇಂದ್ರಬಿಂದು ಎಂದು ಜನರು ನನಗೆ ಹೇಳಿದರು. ಮಧ್ಯಾಹ್ನದ ಊಟ, ವಿದ್ಯಾರ್ಥಿಗಳ ಸಮವಸ್ತ್ರ, ಮಹಾಕಾಲ್ ಕಾರಿಡಾರ್‌ನಲ್ಲೂ ಬಿಜೆಪಿ ಹಣ ದೋಚಿದೆ. 1 ಕೋಟಿ ಯುವಕರ ಮೇಲೆ ಪರಿಣಾಮ ಬೀರಿದ ವ್ಯಾಪಂ ಹಗರಣ. ಎಂಬಿಬಿಎಸ್ ಸೀಟುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಪರೀಕ್ಷೆ ಪತ್ರಿಕೆಗಳು ಸೋರಿಕೆಯಾಗುತ್ತಿವೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ” ಎಂದು ಕಿಡಿಕಾರಿದರು.
ಛತ್ತೀಸ್‌ಗಢ, ರಾಜಸ್ಥಾನ, ಕರ್ನಾಟಕ ಮತ್ತು ಹಿಮಾಚಲ ಸರ್ಕಾರಗಳನ್ನು ಹೊಗಳಿದ ರಾಹುಲ್, ”ನಾವು ನಾಲ್ಕು ರಾಜ್ಯಗಳ ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಕರ್ನಾಟಕದಲ್ಲಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಛತ್ತೀಸ್ ಗಢದಲ್ಲಿ ರೈತರು ಭತ್ತಕ್ಕೆ ಕ್ವಿಂಟಲ್ ಗೆ 2,500 ರೂ. ರಾಜಸ್ಥಾನದಲ್ಲಿ 15 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಸತ್ತಿನಲ್ಲಿಯೂ ಕಾಂಗ್ರೆಸ್ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸಿದೆ ಆದರೆ ಬಿಜೆಪಿಯಿಂದ ನಿಮಗೆ ಮೋಸವಾಗಿದೆ” ಎಂದು ಹೇಳಿದರು.
”ಬಿಜೆಪಿಯ ಚುನಾಯಿತ ಪ್ರತಿನಿಧಿಗಳ ಬದಲಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ದೇಶದ ಕಾನೂನುಗಳನ್ನು ರೂಪಿಸುತ್ತಿದ್ದಾರೆ” ಎಂದು ರಾಹುಲ್ ಹೇಳಿದರು.
”ಚುನಾಯಿತ ಬಿಜೆಪಿ ಸದಸ್ಯರ ಬದಲಿಗೆ ಆರ್‌ಎಸ್‌ಎಸ್ ಮತ್ತು ಅಧಿಕಾರಶಾಹಿಗಳು ಕಾನೂನುಗಳನ್ನು ರೂಪಿಸುತ್ತಿದ್ದಾರೆ… ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಆರ್‌ಎಸ್‌ಎಸ್ ಸರ್ಕಾರಕ್ಕೆ ಕೆಲಸವನ್ನು ನೀಡಿದೆ” ಎಂದು ಅವರು ಪ್ರತಿಪಾದಿಸಿದರು.
”ಇದು ಎರಡು ಸಿದ್ಧಾಂತಗಳ ನಡುವಿನ ಹೋರಾಟ, ಒಂದು ಕಡೆ ಕಾಂಗ್ರೆಸ್, ಇನ್ನೊಂದು ಕಡೆ ಆರೆಸ್ಸೆಸ್ ಮತ್ತು ಬಿಜೆಪಿ. ಒಂದು ಕಡೆ ಗಾಂಧೀಜಿ, ಇನ್ನೊಂದು ಕಡೆ ಗೋಡ್ಸೆ. ಒಂದು ಕಡೆ ದ್ವೇಷ, ಹಿಂಸೆ ಮತ್ತು ಅಹಂಕಾರವಿದೆ ಮತ್ತು ಇನ್ನೊಂದು ಬದಿಯಲ್ಲಿ ಪ್ರೀತಿ, ಗೌರವ ಮತ್ತು ಸಹೋದರತ್ವವಿದೆ” ಎಂದರು.
”ಬಿಜೆಪಿಯವರು ಎಲ್ಲಿಗೆ ಹೋದರೂ, ಅಲ್ಲಿ ಅವರು ದ್ವೇಷವನ್ನು ಹರಡುತ್ತಾರೆ. ಅದಕ್ಕಾಗಿಯೇ ಅವರ ವಿರುದ್ಧ ಜನರಲ್ಲಿ ಜನಕ್ರೋಷ್ ಇದೆ” ಎಂದು ಅವರು ಹೇಳಿದರು.


