ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ. ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಪೋರ್ಟಲ್‌ಗೆ ಸೇರಿದ ಹಲವಾರು ಪತ್ರಕರ್ತರ ಮನೆಗಳಿಗೆ ದಿಲ್ಲಿ ಪೊಲೀಸರು ಮಂಗಳವಾರದಂದು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು.
ಚೀನಾದ ಅಜೆಂಡಾವನ್ನು ಪ್ರಚಾರ ಮಾಡುವ ನೆಟ್‌ವರ್ಕ್‌ನಿಂದ ನ್ಯೂಸ್ ಕ್ಲಿಕ್ ಪೋರ್ಟಲ್ ಹಣವನ್ನು ಪಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಆಧರಿಸಿ ದಿಲ್ಲಿ ಪೊಲೀಸರು ಆಗಸ್ಟ್ 17 ರಂದು ಪ್ರಕರಣ ದಾಖಲಿಸಿದ್ದರು.
ಸಧ್ಯ 46ಜನರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಡಿಜಿಟಲ್ ಸಾಧನಗಳು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೆಹಲಿ, ನೋಯ್ಡಾ ಮತ್ತು ಘಾಜಿಯಾಬಾದ್‌ನಲ್ಲಿ ನ್ಯೂಸ್‌ಕ್ಲಿಕ್ ಸುದ್ದಿ ವೆಬ್‌ಸೈಟ್‌ಗೆ ಲಿಂಕ್ ಮಾಡಲಾದ 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ದೆಹಲಿ ಪೊಲೀಸ್ ವಿಶೇಷ ಕೋಶವು ದಾಳಿ ನಡೆಸಿದ ಗಂಟೆಗಳ ನಂತರ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ.
ವೆಬ್‌ಸೈಟ್‌ಗೆ ಸಂಬಂಧಿಸಿದ ಪತ್ರಕರ್ತರು ಮತ್ತು ಉದ್ಯೋಗಿಗಳ ನಿವಾಸಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ದಾಳಿಯ ಸಮಯದಲ್ಲಿ, ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಹಾರ್ಡ್ ಡಿಸ್ಕ್‌ಗಳಿಂದ ಡೇಟಾ ಡಂಪ್‌ಗಳು ಸೇರಿದಂತೆ ಗಣನೀಯ ಪ್ರಮಾಣದ ಎಲೆಕ್ಟ್ರಾನಿಕ್ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡರು.
ಪತ್ರಕರ್ತರಾದ ಊರ್ಮಿಲೇಶ್, ಔನಿಂದ್ಯೋ ಚಕ್ರವರ್ತಿ, ಅಭಿಸಾರ್ ಶರ್ಮಾ, ಪರಂಜೋಯ್ ಗುಹಾ ಠಾಕುರ್ತಾ ಹಾಗೂ ಇತಿಹಾಸಕಾರ ಸೊಹೈಲ್ ಹಶ್ಮಿ ಮತ್ತು ಸೆಂಟರ್ ಫಾರ್ ಟೆಕ್ನಾಲಜಿ & ಡೆವಲಪ್‌ಮೆಂಟ್‌ನ ಡಿ ರಘುನಂದನ್ ಅವರ ಮೇಲೆ ಪೊಲೀಸರು ದಾಳಿ ನಡೆಸಿ, ಮೊಬೈಲ್ ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅವರ ವಿದೇಶಿ ಪ್ರವಾಸಗಳು, ಶಾಹೀನ್ ಬಾಗ್‌ನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆಗಳು ಮತ್ತು ರೈತರ ಆಂದೋಲನ ಸೇರಿದಂತೆ ವಿವಿಧ ವಿಷಯಗಳ ಕುರಿತು ಪೊಲೀಸರು 25 ಪ್ರಶ್ನೆಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನಿಖಾ ಸಂಸ್ಥೆಗಳು ಸ್ವತಂತ್ರವಾಗಿರುತ್ತವೆ ಮತ್ತು ಕಾನೂನಿನ ಪ್ರಕಾರ ಕೆಲಸ ಮಾಡುತ್ತವೆ ಎಂದು ಸರ್ಕಾರ ಪ್ರತಿಪಾದಿಸಿದರೂ ಸಹ, ಅಧಿಕಾರಕ್ಕೆ ಸತ್ಯವನ್ನು ಮಾತನಾಡುವವರ ವಿರುದ್ಧ ಮಾತ್ರ “ದಬ್ಬಾಳಿಕೆಯ” ಕ್ರಮಗಳನ್ನು ನಿರ್ದೇಶಿಸಲಾಗಿದೆ ಎಂದು ಆರೋಪಿಸಿ, ಪತ್ರಕರ್ತರ ಮೇಲಿನ ದಾಳಿಗಳ ಕುರಿತು ವಿರೋಧ ಪಕ್ಷಗಳು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿವೆ.
ಇದನ್ನೂ ಓದಿ: ನ್ಯೂಸ್ ಕ್ಲಿಕ್ ಪ್ರಕರಣ: ಸೀತಾರಾಂ ಯೆಚೂರಿ ನಿವಾಸದಲ್ಲಿ ಶೋಧ


