ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ 11 ಮಂದಿ ಅಪರಾಧಿಗಳನ್ನು ಅವರು ನಡೆಸಿದ ಬರ್ಬರ ಅಪರಾಧವನ್ನು ಪರಿಗಣಿಸಿ ಮರಳಿ ಜೈಲಿಗೆ ಕಳುಹಿಸಬೇಕು ಎಂದು ಬಿಲ್ಕಿಸ್ ಪರ ವಕೀಲೆ ಶೋಭಾ ಗುಪ್ತಾ ಅವರು ಬುಧವಾರ ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.
ಈ 11 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಗುಜರಾತ್ ಸರ್ಕಾರವು ಅವರ ಶಿಕ್ಷೆ ಕಡಿತಗೊಳಿಸಿ ಬಿಡುಗಡೆಗೊಳಿಸಿದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮುಂದೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯನ್ ಅವರ ಪೀಠ ನಡೆಸುತ್ತಿದೆ.
2002ರ ಗುಜರಾತ್ ಗಲಭೆಗಳ ಸಂದರ್ಭ ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರಗೈದು ಆಕೆಯ ಕುಟುಂಬದ 14 ಮಂದಿಯನ್ನು ಹತ್ಯೆಗೈದ ಪ್ರಕರಣ ಇದಾಗಿದೆ. 11 ಜನ ಅಪರಾಧಿಗಳನ್ನು ಕಳೆದ ವರ್ಷದ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ದಿನದಂದು ಬಿಡುಗಡೆಗೊಳಿಸಲಾಗಿತ್ತು.
”ಅವರನ್ನು ಬಿಡುಗಡೆಗೊಳಿಸುವ ಮುನ್ನ ಅಪರಾಧದ ಸ್ವರೂಪವನ್ನು, ಅದು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಸರ್ಕಾರ ಪರಿಗಣಿಸಬೇಕಿತ್ತು” ಎಂದು ಬಿಲ್ಕಿಸ್ ಬಾನೋ ಪರ ವಕೀಲೆ ಹೇಳಿದರು.
ಶಿಕ್ಷೆ ಕಡಿತಗೊಳಿಸುವುದು ಸುಧಾರಣೆಗೆ ಅಗತ್ಯ ಎಂದು ಅಪರಾಧಿಗಳಲ್ಲೊಬ್ಬರು ವಾದಿಸಿರುವ ಬಗ್ಗೆ ಜಸ್ಟಿಸ್ ನಾಗರತ್ನ ಉಲ್ಲೇಖಿಸಿದಾಗ ಅವರ ಅಪರಾಧದ ಸ್ವರೂಪ ಯಾವುದೋ ಬಂದೂಕಿನಿಂದ ಗಾಯ ಉಂಟು ಮಾಡಿರುವುದು ಅಥವಾ ಸಾಮಾನ್ಯ ಕೊಲೆ ಪ್ರಕರಣವಲ್ಲ ಎಂದು ಗುಪ್ತಾ ತಿಳಿಹೇಳುವ ಪ್ರಯತ್ನ ಮಾಡಿದರು.
ಅಪರಾಧಿಗಳು ಎಂಟು ಅಪ್ರಾಪ್ತರನ್ನು ಕೊಂದಿದ್ದಲ್ಲದೇ ಬಿಲ್ಕಿಸ್ ಅವರ ಮೂರು ವರ್ಷದ ಪುತ್ರಿಯ ತಲೆಯನ್ನು ಬಂಡೆಗೆ ಅಪ್ಪಳಿಸಿ ಸಾಯಿಸಿದ್ದರು. ಆಗ ಬಿಲ್ಕಿಸ್ ವಯಸ್ಸು 19 ಆಗಿತ್ತು ಹಾಗೂ ಆಕೆ ಗರ್ಭಿಣಿಯಾಗಿದ್ದರು.
”ಈ ಅಪರಾಧಗಳು ಘನಘೋರ. ಒಂದು ನಿರ್ದಿಷ್ಟ ಅವಧಿಯ ತನಕ ಶಿಕ್ಷೆ ಅನುಭವಿಸಿದ ನಂತರ ಶಿಕ್ಷೆ ಕಡಿತಗೊಳಿಸಲು ಕೋರಲು ಅಪರಾಧಿಗಳಿಗೆ ಹಕ್ಕಿದೆ. ಆದರೆ ಇಲ್ಲಿ ಸರ್ಕಾರ ಕಡೆಗಣಿಸಿದ ಅಂಶಗಳು ಮುಖ್ಯವಾಗಿವೆ, ಅಪರಾಧಿಗಳು ಜೈಲಿನಲ್ಲಿರುವಾಗಲೂ ಅವರಿಗೆ ಪೆರೋಲ್ ಮೇಲೆ ಬಿಡುಗಡೆ ದೊರೆಯುತ್ತಿತ್ತು. ಇಲ್ಲಿ ಕ್ಷಮಾದಾನಕ್ಕೆ ಅರ್ಹವಾದ ಪ್ರಕರಣ ಇದಲ್ಲ, ಅವರನ್ನು ವಾಪಸ್ ಜೈಲಿಗೆ ಕಳಿಸಬೇಕು. ಅವರು ಎಲ್ಲಿಂದ ಬಂದರೋ ಅಲ್ಲಿಗೇ ವಾಪಸ್ ಕಳಿಸಬೇಕೆಂದು ಕೈಮುಗಿದು ನ್ಯಾಯಾಲಯವನ್ನು ಕೇಳಿಕೊಳ್ಳುತ್ತೇನೆ” ಎಂದು ಗುಪ್ತಾ ಆಗ್ರಹಿಸಿದರು.
ಇದನ್ನೂ ಓದಿ: ತೀರ್ಪಿನ ಶೀರ್ಷಿಕೆಯಲ್ಲಿ ಆರೋಪಿಯ ಜಾತಿ ನಮೂದಿಗೆ ಆಕ್ಷೇಪಿಸಿದ ಸುಪ್ರೀಂಕೋರ್ಟ್


