ಮೈಸೂರಿನ ಪುರಭವನದ ಆವರಣದಲ್ಲಿ ಇಂದು (ಶುಕ್ರವಾರ) ‘ಮಹಿಷ ದಸರಾ ಉತ್ಸವ’ಕ್ಕೆ ವಿಜೃಂಭಣೆಯ ಚಾಲನೆ ದೊರೆಯಿತು.
ಅಡೆತಡೆಗಳ ನಡುವೆಯೂ ಪಟ್ಟು ಬಿಡದ ಮೂಲನಿವಾಸಿಗಳು ಮಹಿಷ ದಸರಾ ಉತ್ಸವವನ್ನು ಸಡಗರ ಸಂಭ್ರಮಗಳ ನಡುವೆ ಅಚರಿಸಿ ಮಹಿಷ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಮಿಸಿದರು.
ವೇದಿಕೆ ಮುಂಭಾಗ ಮಹಿಷನ ದೊಡ್ಡ ಭಾವಚಿತ್ರ ಇರಿಸಿ ಅದರ ಮುಂದುಗಡೆ ಅಂಬೇಡ್ಕರ್, ಬುದ್ಧ ಮತ್ತು ಮಹಿಷನ ಕಂಚಿನ ಮೂರ್ತಿಗಳಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಇದೇ ವೇಳೆ ಮಹಿಷನ ರೂಪ ಧರಿಸಿದ ವ್ಯಕ್ತಿ ವೇದಿಕೆ ಮೇಲೆ ಆಗಮಿಸಿದ್ದು ವಿಶೇಷ ಎನಿಸಿತು.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಬೆಂಗಳೂರು ಜಿಲ್ಲೆಗಳಿಂದ ಬೈಕ್, ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿ ತಂಡೋಪ ತಂಡವಾಗಿ ಮೈಸೂರು ನಗರಕ್ಕೆ ಆಗಮಿಸಿದರು. ಮೈಸೂರಿನ ಅಶೋಕಪುರಂನಿಂದ ನೂರಾರು ಯುವಕರು ನೀಲಿ ಬಾವುಟ ಹಿಡಿದು ಬೈಕ್ ಗಳ ಮೂಲಕ ಪುರಭವನಕ್ಕೆ ಆಗಮಿಸಿದರು.
ಮಹಿಷ ದಸರಾ ಆಚರಣೆ, ಚಾಮುಂಡಿ ಚಲೋ ವಿವಾದದ ಹಿನ್ನೆಲೆಯಲ್ಲಿ ಪೊಲೀಸರು ಪುರಭವನದ ಒಳಗೆ ಮಾತ್ರ ಮಹಿಷ ದಸರಾ ಉತ್ಸವಕ್ಕೆ ಅನುಮತಿ ನೀಡಲಾಗಿದೆ. ಮಹಿಷ ಆಯೋಜಕರ ಬಯಕೆಯಂತೆ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಮೂರ್ತಿಗೆ ಪುಷ್ಪಾರ್ಜನೆ ಮಾಡಲು ಅವಕಾಶ ನಿರಾಕರಿಸಲಾಗಿತ್ತು. ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರು ನಗರದಾದ್ಯಂತ 144ನೇ ಸೆಕ್ಷನ್ ಜಾರಿ ಮಾಡಿ ನಿಷೇಧ ಹೇರಲಾಗಿದೆ.
ಪುರಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ. ನಂತರ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರು ನೀಲಿ ಬಾವುಟ, ಮಹಿಷನ ಭಾವಚಿತ್ರ ಹಿಡಿದು ಪ್ರದರ್ಶನ ಮಾಡಿ ಜಯಘೋಷಗಳನ್ನು ಕೂಗಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಖ್ಯಾತ ಗಾಯಕ ಅಮ್ಮಾ ರಾಮಚಂದ್ರ ಮತ್ತು ತಂಡದವರು ನಾಡ ನಡುವಿನಿಂದ ಬಂದ ನೋವಿನ ಕೂಗೆ, ಮಹಿಷನಿಗೆ ಕೋಟಿ ನಮನ, ಕರುಳಿನ ಕಥನ ಕೇಳುವ ನಾಯಕ ಎಲ್ಲಿಗೆ ಹೋದೆ, ಓ ಭೀಮರಾಯ ಇದೊ ನಿನಗೆ ವಂದನೆ ಎಂಬ ಭೀಮ ಮತ್ತು ಕ್ರಾಂತಿ ಗೀತೆಗಳನ್ನು ಹಾಡಿದರು.
ಮಹಿಷ ದಸರಾ ಆಚರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪುರಭವನದ ಆವರಣದಲ್ಲಿ ಮಾತ್ರ ಕಾರ್ಯಕ್ರಮಕ್ಕೆ ಪೊಲೀಸರು ಅವಕಾಶ ನೀಡಿದ್ದಾರೆ. ಚಾಮುಂಡಿಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಮಾಲಾರ್ಪಣೆ ಮಾಡಲು, ಮೆರವಣಿಗೆ ನಡೆಸಲು ಅವಕಾಶವನ್ನು ನೀಡಿಲ್ಲ. ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: ಮಹಿಷ ದಸರಾ ನಿಲ್ಲಿಸಬೇಕು ಎನ್ನಲು ಪ್ರತಾಪ್ ಸಿಂಹ ಯಾರು?: ಬಿಜೆಪಿ ಮುಖಂಡರಿಂದ ವಾಗ್ದಾಳಿ


