ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದ್ದು, ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು, ಜೀವನದ ಅವಿಭಾಜ್ಯ ಅಂಗ. ಎಲ್‌ಜಿಬಿಟಿ ಸಮುದಾಯಕ್ಕೆ ಮೂಲಭೂತ ಸೌಲಭ್ಯಗಳು, ಅಗತ್ಯ ಸೇವೆಗಳನ್ನು ನಿರಾಕರಿಸಬಾರದು. ಪರೋಕ್ಷವಾಗಿ ಕೂಡ ಸಮುದಾಯದ ಸ್ವಾತಂತ್ರ್ಯ ಉಲ್ಲಂಘನೆ ಮಾಡಬಾರದು, ಅದನ್ನು ಗೌರವಿಸಬೇಕು ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನದ ಪೀಠವು 10 ದಿನಗಳ ನಿರಂತರ ವಿಚಾರಣೆಯ ನಂತರ ಮೇ 11 ರಂದು ಕಾಯ್ದಿರಿಸಿದ್ದ ತೀರ್ಪನ್ನು ಇವತ್ತು ನೀಡಿದೆ. ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರು ಇದ್ದರು.
ಸ್ವಾತಂತ್ರ್ಯದ ಅರ್ಥವೆಂದರೆ ವ್ಯಕ್ತಿ ತಾನು ಬಯಸಿದ ಬದುಕನ್ನು ಬದುಕುವುದಾಗಿದೆ. ಕ್ವೀರ್((ಸಲಿಂಗಿ, ದ್ವಿಲಿಂಗಿ, ಟ್ರಾನ್ಸ್‌ಜೆಂಡರ್ ಅವರನ್ನು ಹೆಸರಿಸಲು ಬಳಸುವ ಪದ) ಎಂಬುವುದು ಯುಗಯುಗಾಂತರಗಳಿಂದ ತಿಳಿದಿರುವ ನೈಸರ್ಗಿಕ ವಿದ್ಯಮಾನವಾಗಿದೆ. ಸಲಿಂಗ ಆಸಕ್ತಿ ಎಂಬುವುದು ನಗರ ಪರಿಕಲ್ಪನೆಯಲ್ಲ ಅಥವಾ ಸಮಾಜದ ಮೇಲ್ವರ್ಗಗಳಿಗೆ ಸೀಮಿತವಾಗಿಲ್ಲ ಎಂದು ಕೋರ್ಟ್ ಹೇಳಿದೆ.
ಸಲಿಂಗ ವಿವಾಹದ ಕುರಿತು ನ್ಯಾಯಾಲಯ ಕಾನೂನು ರೂಪಿಸಲು ಸಾಧ್ಯವಿಲ್ಲ. ಆದರೆ ರೂಪಿಸಿದ ಕಾನೂನನ್ನು ವ್ಯಾಖ್ಯಾನಿಸಬಹುದು ಮತ್ತು ಪರಿಣಾಮವನ್ನು ಬೀರಬಹುದು. ವಿಶೇಷ ವಿವಾಹ ಕಾಯಿದೆಯಲ್ಲಿನ ಬದಲಾವಣೆಯನ್ನು ಸಂಸತ್ತು ನಿರ್ಧರಿಸಬೇಕು. ಈ ನ್ಯಾಯಾಲಯವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಪರಸ್ಪರ ಪ್ರೀತಿ ಮತ್ತು ಸಂಪರ್ಕವು ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತದೆ. ನಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಅಗತ್ಯವು ನಮ್ಮನ್ನು ನಾವಾಗುವಂತೆ ಮಾಡುತ್ತದೆ. ಈ ಸಂಬಂಧಗಳು ಹಲವು ರೂಪಗಳನ್ನು ತೆಗೆದುಕೊಳ್ಳಬಹುದು, ರೊಮ್ಯಾಂಟಿಕ್, ರಿಲೇಷನ್‌ಶಿಪ್‌ಗಳು ಕೂಡ ಇರಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಕೆಲವರು ಇದನ್ನು ತಮ್ಮ ಜೀವನದ ಪ್ರಮುಖ ನಿರ್ಧಾರವೆಂದು ಪರಿಗಣಿಸಬಹುದು. ಈ ಹಕ್ಕು ಆರ್ಟಿಕಲ್ 21ರ ಅಡಿಯಲ್ಲಿದೆ. ಸಲಿಂಗ ವಿವಾಹ ಕುರಿತು ಕಳವಳ ಪರಿಹರಿಸಲು ಕೇಂದ್ರವು ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಬೇಕು. ಪಡಿತರ ಚೀಟಿಗಳು, ಪಿಂಚಣಿ, ಉತ್ತರಾಧಿಕಾರ ಸೇರಿದಂತೆ ಎಲ್ಲದಕ್ಕೂ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಸಮುದಾಯದ ಕುರಿತಂತೆ ತಾರತಮ್ಯ ಮಾಡಬಾರದು. ಲಿಂಗದ ಗುರುತಿನ ಬಗ್ಗೆ ವಿಚಾರಿಸಲೆಂದು ಠಾಣೆಗೆ ಬರಲು ಹೇಳಿ ಎಲ್‌ಜಿಬಿಟಿ ಸಮುದಾಯಕ್ಕೆ ಯಾವುದೇ ಕಿರುಕುಳ ನೀಡಬಾರದು. ತಮ್ಮ ಹೆತ್ತವರ ಕುಟುಂಬಕ್ಕೆ ಮರಳುವಂತೆ ಕ್ವೀರ್ ಸಮುದಾಯದವರಿಗೆ ಪೊಲೀಸರು ಬಲವಂತಪಡಿಸುವಂತಿಲ್ಲ. ಸಾರ್ವಜನಿಕರಿಗೆ ಕ್ವೀರ್ ಸಮುದಾಯದವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಸಮುದಾಯಕಕೆ ಸುರಕ್ಷಿತ ತಾಣಗಳನ್ನು ನಿರ್ಮಿಸಬೇಕು. ತೃತೀಯ ಲಿಂಗಿ ಮಕ್ಕಳಿಗೆ ಶಸ್ತ್ರಕ್ರಿಯೆಗೆ ಬಲವಂತಪಡಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ವಿಶೇಷ ವಿವಾಹ ಕಾಯಿದೆ (SMA) ಅಡಿಯಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಕೋರಿ 18 ದಂಪತಿ ಅರ್ಜಿಯನ್ನು ಸಲ್ಲಿಸಿದ್ದರು.
ವಿಚಾರಣೆ ಸಂದರ್ಭದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಸರಿಯಾದ ಕ್ರಮವಾಗುವುದಿಲ್ಲ ಎಂದು ಕೇಂದ್ರವು ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಏಕೆಂದರೆ ನ್ಯಾಯಾಲಯವು ಅದರ ಪರಿಣಾಮಗಳನ್ನು ಊಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿತ್ತು. ಸಲಿಂಗ ವಿವಾಹದ ವಿಷಯದ ಬಗ್ಗೆ ಏಳು ರಾಜ್ಯಗಳಿಂದ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತ್ತು. ರಾಜಸ್ಥಾನ, ಆಂಧ್ರ ಪ್ರದೇಶ ಮತ್ತು ಅಸ್ಸಾಂ ಸರ್ಕಾರಗಳು ಅಂತಹ ವಿವಾಹಕ್ಕೆ ಕಾನೂನು ಅನುಮೋದನೆ ಕೋರಿದ್ದ ಅರ್ಜಿದಾರರ ವಾದವನ್ನು ವಿರೋಧಿಸಿವೆ.
ಇದನ್ನು ಓದಿ: ದೆಹಲಿ ಮದ್ಯ ನೀತಿ ಪ್ರಕರಣ: ಎಎಪಿ ಪಕ್ಷವನ್ನೇ ಆರೋಪಿಯನ್ನಾಗಿಸುವ ಸಾಧ್ಯತೆ


