ಸುಡಾನ್‌ನ ದಾರ್ಫುರ್ ಪ್ರಾಂತ್ಯದ ಅರ್ದಮಾಟಾದಲ್ಲಿ ಸಶಸ್ತ್ರ ದಂಗೆಯಿಂದಾಗಿ ಕಳೆದ 6 ತಿಂಗಳಲ್ಲಿ 800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 4.8 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂಬ ಅಚ್ಚರಿಯ ವರದಿಯನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (UNHCR) ಬಹಿರಂಗಪಡಿಸಿದೆ.
ಸುಡಾನ್ ಸೇನೆಯ ಮುಖ್ಯಸ್ಥ ಜನರಲ್ ಅಬ್ದೆಲ್ ಫತಾ ಬುರ್ಹಾನ್ ಮತ್ತು ಅರೆಸೇನಾ ಪಡೆಗಳ ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದಾನ್ ಡಗಾಲೊ ನಡುವಿನ ಬಿಕ್ಕಟ್ಟಿನಿಂದಾಗಿ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಸೇನೆ ಮತ್ತು ಅರೆಸೇನಾ ನಡುವಿನ ಆಂತರಿಕ ಕಲಹದಲ್ಲಿ 800ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದು, ಇತ್ತೀಚೆಗೆ 8000ಕ್ಕೂ ಹೆಚ್ಚು ಮಂದಿ ನೆರೆಯ ದೇಶಕ್ಕೆ ವಲಸೆ ಹೋಗಿದ್ದಾರೆ.
ವಿಶ್ವಸಂಸ್ಥೆ ಹೊರಡಿಸಿದ ಹೇಳಿಕೆಯ ಪ್ರಕಾರ, ಸುಡಾನ್‌ನ ದಾರ್ಫುರ್ ಪ್ರದೇಶದಾದ್ಯಂತ ಹೆಚ್ಚುತ್ತಿರುವ ಹಿಂಸಾಚಾರವು 2 ದಶಕಗಳ ಹಿಂದೆ ನಡೆದ ದುಷ್ಕೃತ್ಯಗಳು ಮತ್ತೆ ಪುನರಾವರ್ತನೆಯಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ ಎಂದು ಹೇಳಿದೆ. 20 ವರ್ಷಗಳ ಹಿಂದೆ ದಾರ್ಫುರ್ ಪ್ರಾಂತ್ಯದಲ್ಲಿ ಉದ್ಭವಿಸಿದ್ದ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಶೋಷಣೆಗಳು ಇಡೀ ವಿಶ್ವವನ್ನೇ ಆಘಾತಗೊಳಿಸಿದ್ದವು ಎಂದು UN ಹೈ ಕಮಿಷನರ್ ಫಿಲಿಪ್ಪೊ ಗ್ರಾಂಡಿ ಹೇಳಿದ್ದಾರೆ.
ದಾರ್ಫುರ್ ಪ್ರಾಂತ್ಯದಲ್ಲಿ ಸುಮಾರು 100 ನಿರಾಶ್ರಿತರ ಶಿಬಿರಗಳನ್ನು ನೆಲಸಮಗೊಳಿಸಲಾಗಿದ್ದು, ಯುಎನ್‌ಎಚ್‌ಸಿಆರ್ ಪರಿಹಾರ ಸಾಮಾಗ್ರಿಗಳ ವ್ಯಾಪಕ ಲೂಟಿ ಕೂಡ ನಡೆದಿದೆ. 2 ದಶಕಗಳ ಹಿಂದೆ ಡಾರ್ಫೂರ್‌ನಾದ್ಯಂತ ಸಾವಿರಾರು ಜನರು ಕೊಲ್ಲಲ್ಪಟ್ಟರು ಮತ್ತು ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದರು.
ಜನಾಂಗೀಯ ಹತ್ಯೆಯನ್ನು ತಡೆಗಟ್ಟುವಲ್ಲಿ UN ವಿಶೇಷ ಸಲಹೆಗಾರರಾದ ಆಲಿಸ್ ವೈರಿಮುನ್ಡೆರಿಟು ಅವರು ಜೂನ್‌ನಲ್ಲಿ ಈ ಬಗ್ಗೆ ಎಚ್ಚರಿಸಿದ್ದರು. ಜನಾಂಗೀಯತೆಯ ಆಧಾರದ ದಾಳಿಗಳು ಪಶ್ಚಿಮ ದಾರ್ಫುರ್‌ನಲ್ಲಿ ಮುಂದುವರಿಯುವುದು ಯುದ್ಧ ಅಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಕಾರಣವಾಗಬಹುದು. ನಿರಂತರ ಲೈಂಗಿಕ ಹಿಂಸೆ, ಚಿತ್ರಹಿಂಸೆ, ಅನಿಯಂತ್ರಿತ ಹತ್ಯೆಗಳು, ನಾಗರಿಕರ ಸುಲಿಗೆ ಮತ್ತು ನಿರ್ದಿಷ್ಟ ಜನಾಂಗೀಯ ಗುಂಪುಗಳನ್ನು ಗುರಿಯಾಗಿಸಿರುವ ಬಗ್ಗೆ UN ನಿರಾಶ್ರಿತರ ಸಂಸ್ಥೆ ಎಚ್ಚರಿಕೆಯನ್ನು ನೀಡಿದೆ.
ಸೇನೆ ಮತ್ತು ಅರೆಸೈನಿಕ ಗುಂಪಿನ ನಡುವೆ ಏಪ್ರಿಲ್ ಮಧ್ಯದಲ್ಲಿ ಉದ್ವಿಗ್ನತೆ ಪ್ರಾರಂಭವಾದಾಗಿನಿಂದ ಸುಡಾನ್‌ನಲ್ಲಿ 4.8 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. 1.2 ಮಿಲಿಯನ್ ಜನರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.
ಇದನ್ನು ಓದಿ: ಕೊಚ್ಚಿ: ಸರಣಿ ಸ್ಪೋಟ ಪ್ರಕರಣ; ಮೃತರ ಸಂಖ್ಯೆ 5ಕ್ಕೆ ಏರಿಕೆ


