ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜೆ.ಪಿ. ನಗರದ ಮೂರನೇ ಹಂತದಲ್ಲಿರುವ ತಮ್ಮ ಮನೆಗೆ ದೀಪಾಲಂಕಾರ ಮಾಡಲು ವಿದ್ಯುತ್ ಕಳವು ಮಾಡಿದ ಆರೋಪದ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಸ್ಕಾಂ ವಿಧಿಸಿದ್ದ ದಂಡವನ್ನು ಪಾವತಿಸಿರುವ ಬಗ್ಗೆ ವರದಿಯಾಗಿದೆ.
ಹೆಚ್.ಡಿ. ಕುಮಾರಸ್ವಾಮಿ ಅವರು ಬೆಸ್ಕಾಂಗೆ 68,526 ರೂ. ದಂಡದ ಮೊತ್ತವನ್ನು ಪಾವತಿಸಿದ್ದಾರೆ ಎಂದು ಎಂದು ತಿಳಿದು ಬಂದಿದೆ.
ಕುಮಾರಸ್ವಾಮಿ ಅವರ ಮನೆಯನ್ನು ಪರಿಶೀಲಿಸಿದ ಬೆಸ್ಕಾಂ ಅಧಿಕಾರಿಗಳು ಏಳು ದಿನಗಳೊಳಗೆ ದಂಡ ಪಾವತಿಸುವಂತೆ ಸೂಚಿಸಿದ್ದರು.
ಕುಮಾರಸ್ವಾಮಿ ಅವರ ಮನೆಗೆ ದೀಪಾಲಂಕಾರ ಮಾಡಲು ನೇರವಾಗಿ ವಿದ್ಯುತ್ ಕಂಬದಿಂದ ಸಂಪರ್ಕ ಕಲ್ಪಿಸಿರುವುದನ್ನು ಪತ್ತೆ ಹಚ್ಚಿದ್ದ ಕೆಲವರು, ಸಾಮಾಜಿಕ ಮಾಧ್ಯಮಗಳ ಮೂಲಕ ಈ ವಿಷಯ ಬಹಿರಂಗ ಪಡಿಸಿದ್ದರು.
ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ. ಪ್ರಶಾಂತ್ ಕುಮಾರ್ ಈ ಕುರಿತು ಬೆಸ್ಕಾಂ ಜಾಗೃತ ದಳದ ಬೆಂಗಳೂರು ವೃತ್ತದ ವ್ಯಾಪ್ತಿಯ ಜಯನಗರ ಠಾಣೆಗೆ ದೂರು ಸಲ್ಲಿಸಿದ್ದರು.
”ವಿದ್ಯುಚ್ಛಕ್ತಿ ಕಾಯ್ದೆ 2003ರ ಸೆಕ್ಷನ್ 135ರ ಅಡಿಯಲ್ಲಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ” ಎಂದು ಮೂಲಗಳು ತಿಳಿಸಿವೆ.
ಬೆಸ್ಕಾಂ ಜಾಗೃತ ದಳದ ಡಿವೈಎಸ್‌ಪಿ ಅನುಷಾ ಭೇಟಿ ಪರಿಶೀಲಿಸಿದ್ದರು. ಇನ್‌ಸ್ಪೆಕ್ಟರ್ ಎಸ್. ಪ್ರದೀಪ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
”ವಿದ್ಯುತ್ ಕಳವು ಮಾಡಿರುವುದು ಸಾಬೀತಾದರೆ ಮೂರು ವರ್ಷ ಜೈಲು ಅಥವಾ ದಂಡ ವಿಧಿಸಬಹುದಾಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕುಮಾರಸ್ವಾಮಿ ವಿರುದ್ಧ ವಿದ್ಯುತ್ ಕಳ್ಳತನದ ಆರೋಪದ ಬೆನ್ನಲ್ಲೇ ”ವಿದ್ಯುತ್ ಕಳ್ಳ ಎಚ್.ಡಿ.ಕುಮಾರಸ್ವಾಮಿ” ಎಂದು ಬರೆದು ಅಂಟಿಸಿರುವ ಪೋಸ್ಟರ್ ವ್ಯಾಪಕವಾಗಿ ವೈರಲ್ ಆಗಿದೆ.
ಎಚ್‌ಡಿಕೆ ನಿವಾಸದ ಬಳಿ ‘ಕರೆಂಟ್ ಕದ್ದರು ಎಚ್‌ಡಿಕೆ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು’, ‘ವಿದ್ಯುತ್ ಕಳ್ಳ ಎಚ್.ಡಿ.ಕುಮಾರಸ್ವಾಮಿ’ ಎಂದು ಪೋಸ್ಟರ್ ಅಂಟಿಸಲಾಗಿದೆ.
ಈ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ. ಈ ಪೋಸ್ಟರ್‌ಗಳು ಸಾಮಾಜಿಕ ಮಾದ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಇದನ್ನೂ ಓದಿ: ಕುಮಾರಸ್ವಾಮಿಯ ಕಾಮಾಲೆ ಕಣ್ಣಿಗೆ ಎಲ್ಲವೂ ಲಂಚದ ವ್ಯವಹಾರಗಳಂತೆ ಕಾಣಿಸುತ್ತಿದೆ: ಸಿದ್ದರಾಮಯ್ಯ ತಿರುಗೇಟು


