ಐಬಿಪಿಎಸ್ ಪರೀಕ್ಷೆಯ ನಂತರ ಇದೀಗ ಎಲ್‌ಐಸಿ ಪರೀಕ್ಷೆಯಲ್ಲಿಯೂ ಹಿಂದಿ-ಇಂಗ್ಲೀಷ್‌ಗೆ ಮಣೆ ಹಾಕುತ್ತಿದ್ದು ಕನ್ನಡಕ್ಕೆ ಬರೆ ಎಳೆಯುತ್ತಿದ್ದಾರೆ. ಇನ್ನೆಷ್ಟು ದಿನ ಕನ್ನಡಿಗರು ಪರಭಾಷೆಯ ಹೇರಿಕೆಯನ್ನು ಸಹಿಸಿಕೊಳ್ಳಬೇಕು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಭಾರತ ಬಹುತ್ವದ ನೆಲ, ಇಲ್ಲಿನ ವಿವಿಧ ಭಾಷೆ, ಸಂಸ್ಕೃತಿಯನ್ನು ಗೌರವಿಸಿದಾಗ ಮಾತ್ರ ಒಕ್ಕೂಟ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲು ಸಾಧ್ಯ. ಈ ನೆಲದಲ್ಲಿ ಯಾವುದೇ ಒಂದು ಭಾಷೆ ಅಥವಾ ಸಮುದಾಯದ ಕಡಗಣನೆ ಸಲ್ಲದು ಎಂದಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಬಣ್ಣ ಬಹಳ ಬೇಗ ಬಯಲಾಗುತ್ತಿದೆ. ತನ್ನ ನಿಜಬಣ್ಣ ದಲಿತ ವಿರೋಧಿ ಎನ್ನುವುದು ಸಾಬೀತಾಗ್ತಿದೆ. ನಮ್ಮ ಕಾಲದ ಕ್ರಾಂತಿಕಾರಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟರೆ ದಲಿತ ಸಮುದಾಯ ದಂಗೆ ಎದ್ದೀತು, ಅದರ ಮುಂಚೂಣಿಯಲ್ಲಿ ನಾನೇ ಇರುತ್ತೇನೆ ಎಂದು ಘೋಷಿಸಿದ್ದಾರೆ.
ಎಸ್‌ಸಿಪಿ/ಟಿಎಸ್‌ಪಿ ಯೋಜನೆಗೆ ತಿದ್ದುಪಡಿ ತಂದು ಅನುದಾನ ಕಡಿತಗೊಳಿಸುವ ಯಡಿಯೂರಪ್ಪ ಸರ್ಕಾರದ ದುಷ್ಟ ಆಲೋಚನೆಯ ವಿರುದ್ಧ ಬಿಜೆಪಿಯ ಶಾಸಕರು ಕೂಡಾ ದನಿ ಎತ್ತಬೇಕು ಎಂದು ವಿನಂತಿಸುತ್ತೇನೆ. ಇಂತಹ ದ್ರೋಹ ಚಿಂತನೆಯನ್ನು ಪಕ್ಷದ ದಾಸ್ಯಕ್ಕೆ ಕಟ್ಟುಬಿದ್ದು ಸಹಿಸಿಕೊಂಡರೆ ಇತಿಹಾಸ ಕ್ಷಮಿಸದು ಎಂದಿದ್ದಾರೆ.
ಭ್ರಷ್ಟಾಚಾರ, ಅಸುರಕ್ಷಿತ ಗಡಿ, ಮಹಿಳಾ ದೌರ್ಜನ್ಯ… ಹೀಗೆ ಎಲ್ಲದ್ದಕ್ಕೂ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಹೊಣೆಮಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು 1998 ರಿಂದ 2004 ರ ವರೆಗೆ ಅಧಿಕಾರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್‌ಡಿಎ ಆಡಳಿತವನ್ನು ದೂರಲು ಹೊರಟಿದ್ದಾರೆಯೇ? ಎಂದು ವ್ಯಂಗ್ಯವಾಡಿದ್ದಾರೆ.
2014ರಿಂದ ದೇಶದಲ್ಲಿರುವುದು ಏಕಚಕ್ರಾಧಿಪತ್ಯ.
ರಫೇಲ್ ಹಗರಣ, ಜಿಡಿಪಿ ಶೇ.5ಕ್ಕೆ ಇಳಿದಿದ್ದು, ನಿರುದ್ಯೋಗ 45 ವರ್ಷಗಳಲ್ಲಿಯೇ ಅತ್ಯಧಿಕವಾಗಿದ್ದು, ಬ್ಯಾಂಕ್ ಲೂಟಿ ಮಾಡಿ ದೇಶ ಬಿಟ್ಟು ಓಡಿದ್ದು, ಕಾಶ್ಮೀರದಲ್ಲಿ ಉಗ್ರರ ದಾಳಿ 42% ಹೆಚ್ಚಿದ್ದು, ಮಹಿಳಾ ಅತ್ಯಾಚಾರ 22% ಹೆಚ್ಚಿದ್ದು… ಇದೇ ಅವಧಿಯಲ್ಲಿ ಅಲ್ಲವೇ? ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ವಿರೋಧಿಸುತ್ತಿರುವ ಅಮಿತ್ ಶಾ ಅವರು ಬಿಹಾರ, ಗೋವಾ, ಮಹಾರಾಷ್ಟ್ರ ಮತ್ತು ಈಶಾನ್ಯ ರಾಜ್ಯಗಳ ಮಿತ್ರಪಕ್ಷಗಳಿಗೆ ವಿಚ್ಛೇದನದ ಸಂದೇಶ ಕಳುಹಿಸುತ್ತಿದ್ದಾರೆಯೇ? ಅಲ್ಲಿರುವುದು ಬಹುಪಕ್ಷೀಯ ಸರ್ಕಾರವಲ್ಲವೇ? ಎಂದು ಸಿದ್ದು ಪ್ರಶ್ನಿಸಿದ್ದಾರೆ.
ಗೃಹಸಚಿವ ಅಮಿತ್ ಶಾ ಏಕತ್ವದ ವ್ಯಸನಗ್ರಸ್ತರಾಗಿದ್ದಾರೆ. ಬಹುಭಾಷೆಗಳನ್ನು ಮೂಲೆಗೆ ತಳ್ಳುವ ಪ್ರಯತ್ನದ ನಂತರ ಈಗ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಎಲ್ಲ ಅನಿಷ್ಠಗಳಿಗೆ ಹೊಣೆ ಮಾಡಿದ್ದಾರೆ. ಅವರಿಗೆ ಯಾರಾದರೂ ಈ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಪಾಠ ಮಾಡಬೇಕಾಗಿದೆ ಎಂದಿದ್ದಾರೆ.
ಸಿದ್ದರಾಮಯ್ಯನವರು ತಮ್ಮೆಲ್ಲಾ ಅಭಿಪ್ರಾಯಗಳನ್ನು ಪರಿಣಾಮಕಾರಿ ಮಾಧ್ಯಮಗಳಾದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ.


