ಜನತಾದಳ ಯುನೈಟೆಡ್ (ಜೆಡಿಯು) ಪಕ್ಷದ ಅಧ್ಯಕ್ಷರಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಪಕ್ಷದ ಅಧ್ಯಕ್ಷರಾಗಿದ್ದ ಲಲನ್ ಸಿಂಗ್ ನಿರ್ಗಮನ ಬೆನ್ನಲ್ಲೇ ನಿತೀಶ್ ಕುಮಾರ್ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ದೇಶ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿರುವಾಗ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಇಂದು (ಡಿಸೆಂಬರ್ 29) ದೆಹಲಿಯಲ್ಲಿ ನಡೆದ ಜೆಡಿಯು ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಲಲನ್ ಸಿಂಗ್ ಸ್ಪರ್ಧೆಯಿಂದ ದೂರ ಸರಿದ ಬೆನ್ನಲ್ಲೇ ನಿತೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಮೂಲಕ ವಾರಗಳ ಕಾಲ ಮುಂದುವರಿದಿದ್ದ ಜೆಡಿಯು ಅಧ್ಯಕ್ಷರ ಆಯ್ಕೆ ಕುತೂಹಲಕ್ಕೆ ತೆರೆ ಬಿದ್ದಿದೆ.
ಲಲನ್ ಸಿಂಗ್ ಅವರು ಬಿಹಾರದಲ್ಲಿ ಜೆಡಿಯುನ ಮಿತ್ರ ಪಕ್ಷ ರಾಷ್ಟ್ರೀಯ ಜನತಾದಳ (ಆರ್‌ಜೆಡಿ)ಕ್ಕೆ ಹತ್ತಿರವಾಗುತ್ತಿದ್ದಾರೆ ಎಂಬ ವದಂತಿಗಳ ಹಿನ್ನೆಲೆ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೈ ಬಿಡಲಾಗಿದೆ ಎಂದು ಹೇಳಲಾಗ್ತಿದೆ.
ಕೆಲವೊಂದು ವರದಿಗಳು, ಜೆಡಿಯು ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಜೊತೆ ವಿಲೀನವಾಗುವ ಸಾಧ್ಯತೆ ಇದೆ ಎಂದಿದೆ. ಆರ್‌ಜೆಡಿಯ ಮುಖ್ಯಸ್ಥ, ಲಾಲು ಯಾದವ್ ಅವರ ಮಗ ತೇಜಸ್ವಿ ಯಾದವ್ ಪ್ರಸ್ತುತ ಬಿಹಾರದ ಉಪ ಮುಖ್ಯಮಂತ್ರಿಯಾಗಿದ್ದಾರೆ.
ಜೆಡಿಯು ಕಾರ್ಯಕಾರಿ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಗಮಿತ ಅಧ್ಯಕ್ಷ ಲಲನ್ ಸಿಂಗ್ ಪಕ್ಷದ ನಾಯಕರ ಮೇಲೆ ಅವರು ಮುನಿಸಿಕೊಂಡಿದ್ದಾರೆ ಎಂಬ ವರದಿಗಳನ್ನು ಅಲ್ಲಗಳೆದಿದ್ದಾರೆ. ನಿಮಗೆ ಪಕ್ಷದ ಮೇಲೆ ಕೋಪ ಇದೆಯಾ? ಎಂದು ಪ್ರಶ್ನಿಸಿದ್ದಕ್ಕೆ, “ನನಗ್ಯಾಕೆ ಕೋಪ, ಆ ತರಹದ ಪದವನ್ನು ನಾನು ಇದೇ ಮೊದಲ ಬಾರಿ ಕೇಳುತ್ತಿರುವುದು” ಎಂದಿದ್ದಾರೆ.
ಲಲನ್ ಸಿಂಗ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿರುವ ಕುರಿತು ಬಿಹಾರ ವಿಧಾನಸಭೆಯ ಪ್ರತಿಪಕ್ಷ ನಾಯಕ, ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಪ್ರತಿಕ್ರಿಯಿಸಿದ್ದು, “ಸ್ವಾಭಿಮಾನ ಇರುವ ವ್ಯಕ್ತಿ ಈ ರೀತಿಯ ವಿದಾಯವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಪಕ್ಷ ಮತ್ತು ನಾಯಕತ್ವದಲ್ಲಿ ವಿಶ್ವಾಸವಿಲ್ಲದಿರುವಾಗ ಹುದ್ದೆಯನ್ನು ಅಲಂಕರಿಸುವುದರಲ್ಲಿ ಅರ್ಥವಿಲ್ಲ. ಮೊದಲೇ ರಾಜೀನಾಮೆ ಕೊಡಬೇಕಿತ್ತು” ಎಂದಿದ್ದಾರೆ.
ಲಲನ್ ಸಿಂಗ್ ಅವರು ಬಿಹಾರದ ಮುಂಗೇರ್‌ನಿಂದ ಸ್ಪರ್ಧಿಸಿ ಎರಡು ಬಾರಿ ಲೋಕಸಭಾ ಸಂಸದರಾಗಿದ್ದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಅವರು ತಮ್ಮ ಕ್ಷೇತ್ರದ ಮೇಲೆ ಗಮನ ಹರಿಸಬೇಕಾಗಿದೆ. ಈ ಕಾರಣಕ್ಕೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಕೆಲವೊಂದು ವರದಿಗಳು ಹೇಳಿವೆ.
ಇದನ್ನೂ ಓದಿ : ಉತ್ತರ ಪ್ರದೇಶ: ಬಿಜೆಪಿ ನಾಯಕಿ, ನಟಿ ಜಯಪ್ರದಾ ಪತ್ತೆಗೆ ವಿಶೇಷ ತಂಡ ರಚಿಸಿದ ಪೊಲೀಸರು


