ಈ ಹಿಂದೆ ಸರ್ಕಾರದ ಕಾರ್ಯವೈಖರಿ ಬಗ್ಗೆ ಟೀಕಿಸಿದ್ದ ಹಿರಿಯ ಕಾಂಗ್ರೆಸ್ ಶಾಸಕರಾದ ಬಿ.ಆರ್ ಪಾಟೀಲ್ ಮತ್ತು ಬಸವರಾಜ್ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮವಾಗಿ ತಮ್ಮ ಸಲಹೆಗಾರ ಮತ್ತು ಆರ್ಥಿಕ ಸಲಹೆಗಾರರನ್ನಾಗಿ ಶುಕ್ರವಾರ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ನೇಮಕ ಮಾಡಿದ್ದಾರೆ. ಈ ಮೂಲಕ ಆಡಳಿತ ಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸಲು ಪ್ರಯತ್ನ ಮಾಡಿದ್ದಾರೆ.
ಮತ್ತೊಬ್ಬರು ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ ಅವರನ್ನೂ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಸಿಎಂ ನೇಮಿಸಿದ್ದಾರೆ.
ಬಿ.ಆರ್ ಪಾಟೀಲ್ ಪ್ರಸ್ತುತ ಕಲಬುರಗಿ ಜಿಲ್ಲೆ ಆಳಂದ ಕ್ಷೇತ್ರದ ಶಾಸಕರಾಗಿದ್ದಾರೆ. ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ ಮತ್ತು ಆರ್.ವಿ ದೇಶಪಾಂಡೆ ಕ್ರಮವಾಗಿ ಯಲಬುರ್ಗಾ ಮತ್ತು ಹಳಿಯಾಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮೂವರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಮೂವರು ಹಿರಿಯ ಶಾಸಕರಿಗೆ ವಿವಿಧ ಹುದ್ದೆಗಳನ್ನು ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಪಕ್ಷದೊಳಗಿನ ಅಸಮಾಧಾನ ಶಮನಗೊಳಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಮೂವರು ರಾಜಕೀಯ ಅನಭವ ಉಳ್ಳವರಾಗಿರುವುದರಿಂದ ಸುಗಮ ಆಡಳಿತಕ್ಕೆ ನೆರವಾಗಲಿದ್ದಾರೆ ಎಂಬ ಉದ್ದೇಶ ಹೊಂದಲಾಗಿದೆ.
ಮೂವರು ಹಿರಿಯ ಶಾಸಕರೂ ಸಿದ್ದರಾಮಯ್ಯ ಸಂಪುಟದ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ, ಸಚಿವ ಸ್ಥಾನ ಸಿಗದ ಹಿನ್ನೆಲೆ ಅಸಮಾಧಾನಗೊಂಡಿದ್ದರು. ಪಾಟೀಲ್ ಮತ್ತು ರಾಯರೆಡ್ಡಿ ಸರ್ಕಾರ ಹಾಗೂ ಕೆಲ ಸಚಿವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸಿದ್ದರು. ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ದೂರು ನೀಡಿದ್ದರು.
ರಾಜ್ಯದ ವಿವಿಧ ಮಂಡಳಿ ಮತ್ತು ನಿಗಮಗಳಿಗೆ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರನ್ನು ಪ್ರಮುಖ ಸ್ಥಾನಗಳಿಗೆ ನೇಮಿಸಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿರುವಾಗಲೇ ಮೂವರು ಹಿರಿಯ ಶಾಸಕರಿಗೆ ವಿವಿಧ ಸ್ಥಾನಗಳನ್ನು ನೀಡಲಾಗಿದೆ.
ಇದನ್ನೂ ಓದಿ : ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲು ಸಿಎಂ ಸೂಚನೆ


