ಬಾಬಾಬುಡನ್ ಗಿರಿಯಲ್ಲಿ ನಡೆದ ಗೋರಿ ಧ್ವಂಸ ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ ಎಂದು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿ ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕರಣದ ವಿವರ ಹಂಚಿಕೊಂಡಿರುವ ಸಿಎಂ, “2017ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2020ರ ಮಾರ್ಚ್ 19 ರಂದು ವಿಚಾರಣೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರ ಆಧಾರದಲ್ಲಿ 2023ರ ಸೆಪ್ಟೆಂಬರ್ 7ರಂದು ಸರ್ಕಾರ ಅನುಮತಿ ನೀಡಿತ್ತು. 2023ರ ಅಕ್ಟೋಬರ್ 24 ರಂದು ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಬಳಿಕ ಕಾನೂನು ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಜನವರಿ 8ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದಲೇ ಆರೋಪಿಗಳಿಗೆ ಸಮನ್ಸ್ ಜಾರಿಯಾಗಿದೆ” ಎಂದು ತಿಳಿಸಿದ್ದಾರೆ.
ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬಾಬಾಬುಡನ್ ಗಿರಿಯಲ್ಲಿ ಗೋರಿ ದ್ವಂಸ ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ ಎನ್ನುವ ಸುದ್ದಿ ಪ್ರಸಾರವಾಗುತ್ತಿದ್ದು, ಇದು ತಪ್ಪು ಮಾಹಿತಿ ಹಾಗೂ ಸಂಪೂರ್ಣ ಸುಳ್ಳು ಸುದ್ದಿಯಾಗಿದೆ.
2017 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2020 ರ ಮಾರ್ಚ್ 19 ರಂದು ವಿಚಾರಣೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ… pic.twitter.com/0b3dDtzRYT
— CM of Karnataka (@CMofKarnataka) January 4, 2024
“ಇದು ಸಹಜ ಕಾನೂನು ಪ್ರಕ್ರಿಯೆ, ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ರಾಜ್ಯ ಸರ್ಕಾರ ಪ್ರಕರಣದ ಮರು ತನಿಖೆಗೆ ಮುಂದಾಗಿದೆ ಎಂದು ಮಾಧ್ಯಮಗಳು ಸುಳ್ಳು ಸುದ್ದಿ ಬಿತ್ತರಿಸಿ, ಪ್ರಚೋದನೆ ನೀಡುವ ಕೆಲಸ ಮಾಡಬಾರದು. ಇಂತಹ ಸುಳ್ಳು ಸುದ್ದಿ ಪ್ರಸಾರದಿಂದ ಮಾಧ್ಯಮಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತವೆ ಜೊತೆಗೆ ಕಾನೂನು ಸುವ್ಯವಸ್ಥೆ ಕೂಡ ಹದಗೆಡುವ ಸಾಧ್ಯತೆ ಅಲ್ಲಗಳೆಯಲಾಗದು. ಹೀಗಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು” ಎಂದು ಸಿಎಂ ಮನವಿ ಮಾಡಿದ್ದಾರೆ.
ಡಿಸೆಂಬರ್ 4ರಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, 7 ವರ್ಷ ಹಳೆಯ ದತ್ತಪೀಠ ಪ್ರಕರಣವನ್ನು ಮರು ತನಿಖೆ ಮಾಡಿಸಿ ಕಾಂಗ್ರೆಸ್ ಸರ್ಕಾರ ದತ್ತಾತ್ರೇಯನ ಭಕ್ತರ ವಿರುದ್ಧವೂ ಷಡ್ಯಂತ್ರ ರೂಪಿಸಲು ಹೊರಟಿದೆ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ಮೇಧಾವಿಗಳೇ,
ಮೊನ್ನೆ ಕರಸೇವಕರು, ಇಂದು ದತ್ತ ಪೀಠದ ಹೋರಾಟಗಾರರನ್ನು ಬೆನ್ನು ಹತ್ತಲು ಪೋಲಿಸರಿಗೆ ಸೂಚಿಸಿದ್ದೀರಿ. ನಿವೆಷ್ಟೇ ಭಯ ಹುಟ್ಟಿಸಿದರೂ ರಾಮ ಭಕ್ತರ ಅಯೋಧ್ಯೆ ಭೇಟಿಯ ಸಂಖ್ಯೆ ಕ್ಷೀಣಿಸಲು ಸಾಧ್ಯವಾಗದು, ಬದಲಾಗಿ ಅದು ವಿಸ್ತಾರಗೊಳ್ಳತ್ತಲೇ ಇರುತ್ತದೆ.
“ನಿಮ್ಮ ಹಿಂದೂ ದ್ವೇಷದ ಬೆಟ್ಟ ನಿಮಗೆಷ್ಟು ಬೇಕೋ ಅಗೆಯಿರಿ,…
— Vijayendra Yediyurappa (@BYVijayendra) January 4, 2024
“ಮೊನ್ನೆ ಕರಸೇವಕರು, ಇಂದು ದತ್ತ ಪೀಠದ ಹೋರಾಟಗಾರರನ್ನು ಬೆನ್ನು ಹತ್ತಲು ಪೋಲಿಸರಿಗೆ ಸೂಚಿಸಿದ್ದೀರಿ. ನಿವೆಷ್ಟೇ ಭಯ ಹುಟ್ಟಿಸಿದರೂ ರಾಮ ಭಕ್ತರ ಅಯೋಧ್ಯೆ ಭೇಟಿಯ ಸಂಖ್ಯೆ ಕ್ಷೀಣಿಸಲು ಸಾಧ್ಯವಾಗದು, ಬದಲಾಗಿ ಅದು ವಿಸ್ತಾರಗೊಳ್ಳತ್ತಲೇ ಇರುತ್ತದೆ. ನಿಮ್ಮ ಹಿಂದೂ ದ್ವೇಷದ ಬೆಟ್ಟ ನಿಮಗೆಷ್ಟು ಬೇಕೋ ಅಗೆಯಿರಿ, ಇನ್ನಷ್ಟು ಆಳಕ್ಕೂ ಇಳಿದು ಬಗೆಯಿರಿ, ನಿಮಗೇನೂ ದಕ್ಕದು, ಹಿಂದೂ ಕಾರ್ಯಕರ್ತರ ಒಂದೇ ಒಂದು ರೋಮವನ್ನೂ ಕೊಂಕಿಸಲೂ ಸಾಧ್ಯವಾಗದು. ರಾಮ ಜನ್ಮಭೂಮಿ ಹೋರಾಟದ 31 ವರ್ಷ ಹಳೆಯ ಪ್ರಕರಣಗಳನ್ನು ಕೆದಕಿ ಕರ ಸೇವಕರನ್ನು ಬಂಧಿಸಿದ್ದರ ಬೆನ್ನಲ್ಲೇ, ಇದೀಗ 7 ವರ್ಷ ಹಳೆಯ ದತ್ತಪೀಠ ಪ್ರಕರಣವನ್ನು ಮರು ತನಿಖೆ ಮಾಡಿಸಿ ಕಾಂಗ್ರೆಸ್ ಸರ್ಕಾರ ದತ್ತಾತ್ರೇಯನ ಭಕ್ತರ ವಿರುದ್ಧವೂ ಷಡ್ಯಂತ್ರ ರೂಪಿಸಲು ಹೊರಟಿದೆ. ಹನುಮನ ಸುಡಲು ಹೋಗಿ ಲಂಕೆಗೆ ಬೆಂಕಿ ಹಚ್ಚಿಸಿಕೊಂಡ ರಾವಣನ ಸ್ಥಿತಿಗೆ ನಿಮ್ಮ ಸರ್ಕಾರ ತಲುಪುತ್ತಿದೆ” ಎಂದು ವಿಜಯೇಂದ್ರ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.
ವಿಜಯೇಂದ್ರ ಪೋಸ್ಟ್ ಅನುಸರಿಸಿ ಅನೇಕ ದೃಶ್ಯ ಮಾಧ್ಯಮಗಳು ಸುದ್ದಿ ಬಿತ್ತರಿಸಿತ್ತು. ಈ ಬೆನ್ನಲ್ಲೇ ಸಿಎಂ ಸ್ಪಷ್ಟನೆ ನಿಡಿದ್ದಾರೆ.
ಏನಿದು ಪ್ರಕರಣ?
2017ರಲ್ಲಿ ಚಿಕ್ಕಮಗಳೂರು ತಾಲೂಕು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಗೋರಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿತ್ತು. 2017ರ ಡಿಸೆಂಬರ್ 3 ರಂದು ದತ್ತ ಜಯಂತಿ ದಿನ ದರ್ಗಾದ ಆವರಣದಲ್ಲಿದ್ದ ಎರಡು ಗೋರಿಗಳನ್ನು ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭಜರಂಗದಳದ ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗ, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್, ಲೋಕೇಶ್, ಮಹೇಂದ್ರ, ಸಂದೀಪ್, ರಾಮು ಸೇರಿ ಒಟ್ಟು 14 ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಜನವರಿ 8ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆರೋಪಿಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ: ತಿಂಗಳಲ್ಲಿ ಎರಡನೇ ಪ್ರಕರಣ


