ಕೇಂದ್ರದ ಬೆಂಬಲದೊಂದಿಗೆ, ಮ್ಯಾನ್ಮಾರ್‌ನ ನಿರಾಶ್ರಿತರಿಗೆ ಮತ್ತು ಮಣಿಪುರದಿಂದ ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗೆ ತಮ್ಮ ಸರ್ಕಾರ ನೆರವು ನೀಡುವುದನ್ನು ಮುಂದುವರಿಸಲಿದೆ ಎಂದು ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ತಿಳಿಸಿದ್ದಾರೆ.
ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಬಂದ ಬಳಿಕ, ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಈ ಮಾತನ್ನು ಹೇಳಿದ್ದಾರೆ.
ಮ್ಯಾನ್ಮಾರ್ ಪ್ರಜೆಗಳಿಗೆ ನಿರಾಶ್ರಿತರ ಸ್ಥಾನಮಾನ ನೀಡಲು ಸಾಧ್ಯವಾಗದಿದ್ದರೂ, ಅವರಿಗೆ ಸಹಾಯ ಒದಗಿಸುವಲ್ಲಿ ನಮ್ಮೊಂದಿಗೆ ಸಹಕರಿಸಲು ಕೇಂದ್ರ ಸಿದ್ಧವಾಗಿದೆ. ಅದೇ ರೀತಿ ಜನಾಂಗೀಯ ಹಿಂಸಾಚಾರದಿಂದ ತಮ್ಮ ಮನೆಗಳನ್ನು ತೊರೆದ ಮಣಿಪುರದ ಜನರಿಗೂ ಕೂಡ ಕೇಂದ್ರದ ಸಹಬಾಗಿತ್ವದಲ್ಲಿ ಸಹಾಯ ನೀಡಲಾಗುವುದು ಎಂದು ಲಾಲ್ದುಹೋಮ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ತಮ್ಮ ತಾಯ್ನಾಡಿನಲ್ಲಿ ಮಿಲಿಟರಿ ದಂಗೆಯ ನಂತರ, ಫೆಬ್ರವರಿ 2021 ರಿಂದ ಮ್ಯಾನ್ಮಾರ್‌ನ ಚಿನ್ ಸಮುದಾಯಕ್ಕೆ ಸೇರಿದ 31,000ಕ್ಕೂ ಹೆಚ್ಚು ಜನರು ಮಿಜೋರಾಂಗೆ ಬಂದು ಆಶ್ರಯ ಪಡೆದಿದ್ದಾರೆ. ಮಣಿಪುರದಲ್ಲಿ ಜನಾಂಗೀಯ ಸಂಘರ್ಷದಿಂದ ರಾಜ್ಯ ತೊರೆದಿರುವ 9,000ಕ್ಕೂ ಹೆಚ್ಚು ಜನರು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ.
ಮ್ಯಾನ್ಮಾರ್‌ನ ಚಿನ್ ಸಮುದಾಯ ಮತ್ತು ಮಣಿಪುರದ ಕುಕಿ-ಜೋ ಸಮುದಾಯಗಳ ಜೊತೆ ಮಿಜೋರಾಂನ ಮಿಜೋಗಳು ಜನಾಂಗೀಯ ಸಂಬಂಧಗಳನ್ನು ಹೊಂದಿದ್ದು, ಹಾಗಾಗಿ, ಯಾವುದೇ ಸಂಘರ್ಷವಿಲ್ಲದೆ ಈ ಎರಡೂ ಸಮುದಾಯಗಳು ಮಿಜೋರಾಂನಲ್ಲಿ ಆಶ್ರಯ ಪಡೆದಿವೆ.
ಮ್ಯಾನ್ಮಾರ್‌ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿ ಮರಳುವವರೆಗೆ ಮಿಜೋರಾಂನಲ್ಲಿ 2021ರಿಂದ ಆಶ್ರಯ ಪಡೆದಿರುವ ಮ್ಯಾನ್ಮಾರ್ ಪ್ರಜೆಗಳನ್ನು ಕೇಂದ್ರ ಸರ್ಕಾರ ಗಡಿಪಾರು ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಲಾಲ್ದುಹೋಮಕ್ಕೆ ಅವರಿಗೆ ಭರವಸೆ ಕೊಟ್ಟಿದ್ದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ.
ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಹಾಕಲು ಮುಂದಾಗಿರುವ ಕೇಂದ್ರವು ತನ್ನ ನಿರ್ಧಾರದಿಂದ ಹಿಂದೆ ಸರಿಯುವ ವಿಶ್ವಾಸವನ್ನು ಸಿಎಂ ಲಾಲ್ದುಹೋಮ ವ್ಯಕ್ತಪಡಿಸಿದ್ದಾರೆ.
ಮಿಜೋರಾಂನ ಭಾರತ ಮತ್ತು ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಅಳವಡಿಸುವುದಾಗಿ ಕೇಂದ್ರ ಸರ್ಕಾರ ಇತ್ತೇಚೆಗೆ ಹೇಳಿತ್ತು. ಸುಮಾರು 300 ಕಿಮೀ ವ್ಯಾಪ್ತಿಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಸ್ತುತ ಯಾವುದೇ ಬೇಲಿ ಇಲ್ಲ. ಇಲ್ಲಿ ಎರಡೂ ದೇಶಗಳ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಮಾರು 16 ಕಿ.ಮೀಗಳಷ್ಟು ಯಾವುದೇ ವೀಸಾ ಇಲ್ಲದೆ ಪ್ರವೇಶಿಸಬಹುದು.
ಇದನ್ನೂ ಓದಿ : ಜ.20 ರಿಂದ 25ರವರೆಗೆ ರೈಲು ಪ್ರಯಾಣ ಬೇಡ: ಮುಸ್ಲಿಂ ಸಮುದಾಯಕ್ಕೆ ಧುಬ್ರಿ ಸಂಸದರ ಮನವಿ


