ಬಿಜೆಪಿ ಸಂಸದನ ವಿರುದ್ಧದ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಮಾತನಾಡದೆ, ಪಶ್ಚಿಮ ಬಂಗಾಳದ ಸಂದೇಶಖಾಲಿ ವಿಚಾರವನ್ನು ಮುಂದಿಟ್ಟುಕೊಂಡು ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಮುಖಂಡರು, ಪ್ರಧಾನಿ ಮೋದಿ ನಡೆಯನ್ನು ‘ಇಬ್ಬಗೆ’ ಎಂದು ಕರೆದಿದ್ದಾರೆ. ‘ನಿಮ್ಮ ವಾಕ್ಚಾತುರ್ಯದ ಭಾಷಣಗಳು ತಮಾಷೆಯಷ್ಟೇ ಅಲ್ಲ. ನಿಮ್ಮ ನಿಜವಾದ ಮುಖವು ಮಹಿಳಾ ವಿರೋಧಿಯಾಗಿದೆ ಮತ್ತು ಅದು ಇಡೀ ಭಾರತಕ್ಕೆ ತಿಳಿದಿದೆ’ ಎಂದು ಕಿಡಿಕಾರಿದ್ದಾರೆ.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ನಾಯಕರ ವಿರುದ್ಧ ಮಹಿಳಾ ಭದ್ರತೆಯ ಕುರಿತು ಉಪನ್ಯಾಸ ನೀಡುವ ಹಕ್ಕು ಪ್ರಧಾನಿ ನರೇಂದ್ರ ಮೋದಿಯವರಿಗೆ ಇಲ್ಲ ಎಂದು ತೃಣಮೂಲ ಪಕ್ಷವು ವಾಗ್ದಾಳಿ ನಡೆಸಿದೆ.
‘ದೇಶದಲ್ಲಿ ಪ್ರತಿ ಗಂಟೆಗೆ ಮಹಿಳೆಯರ ವಿರುದ್ಧ 51 ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ; ಪರಿಸ್ಥಿತಿಯನ್ನು ಸುಧಾರಿಸಲು ನೀವು ಏನು ಮಾಡಿದ್ದೀರಿ’ ಎಂದು ಪ್ರಧಾನಿ ಮೋದಿಯವರನ್ನು ಟಿಎಂಸಿಯ ಹಿರಿಯ ನಾಯಕ ಮತ್ತು ಪಕ್ಷದ ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರೇನ್ ಅವರು ಪ್ರಶ್ನಿಸಿದ್ದಾರೆ.
ಇಂದು ಪಶ್ಚಿಮ ಬಂಗಾಳದ ಬರಾಸತ್‌ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಸಂದೇಶಖಾಲಿ ಚಂಡಮಾರುತ ಪಶ್ಚಿಮ ಬಂಗಾಳದ ಪ್ರತಿಯೊಂದು ಭಾಗಕ್ಕೂ ತಲುಪಲಿದೆ, ರಾಜ್ಯದಲ್ಲಿ ಆಡಳಿತಾರೂಢ ಟಿಎಂಸಿಯನ್ನು ನಾಶಮಾಡುವಲ್ಲಿ ‘ನಾರಿ ಶಕ್ತಿ’ (ಮಹಿಳಾ ಶಕ್ತಿ) ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಹೇಳಿದರು.
ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಎಂಬ ನದಿತೀರದ ದ್ವೀಪವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅಮಾನತುಗೊಂಡಿರುವ ಟಿಎಂಸಿ ನಾಯಕ ಶಾಜಹಾನ್ ಶೇಖ್, ಅವರ ಸಹವರ್ತಿಗಳಿಂದ ಭೂಕಬಳಿಕೆ ಆರೋಪದಿಂದ ದೇಶದಾದ್ಯಂತ ಸುದ್ದಿಯಲ್ಲಿದೆ.
‘ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾರಿ ಶಕ್ತಿ ಕುರಿತು ಉಪನ್ಯಾಸ ನೀಡಿದ್ದಾರೆ. ನಿಮಗೆ ಮೂರು ಪ್ರಶ್ನೆಗಳು ಸರ್.. ಮಹಿಳೆಯರ ವಿರುದ್ಧ ಪ್ರತಿ ಗಂಟೆಗೆ 51 ಅಪರಾಧ ಪ್ರಕರಣಗಳು ಏಕೆ ದಾಖಲಾಗುತ್ತಿವೆ? ಲೋಕಸಭೆಯಲ್ಲಿ ಬಿಜೆಪಿ 13 ಪ್ರತಿಶತ ಮಹಿಳೆಯರನ್ನು ಏಕೆ ಹೊಂದಿದೆ? ಬಿಜೆಪಿ ಬಿಡುಗಡೆ ಮಾಡಿರುವ 195 ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇವಲ 14 ಪ್ರತಿಶತ ಮಹಿಳೆಯರಿದ್ದಾರೆ ಏಕೆ?’ ಎಂದು ಒ’ಬ್ರೇನ್ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ಸಂಸದರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ’ ಎಂದು ಪ್ರಶ್ನಿಸಿದ್ದು, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಮತ್ತು ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಈ ಪ್ರಶ್ನೆ ಉಲ್ಲೇಖಿಸಿದೆ. ಆದರೆ, ಸಿಂಗ್ ಅವರು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.
ಅತ್ಯಾಚಾರಿಗಳ ವಿರುದ್ಧ ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತನಾಡಲು ಪ್ರಧಾನಿ ಮೋದಿಗೆ ನೈತಿಕ ಹಕ್ಕಿದೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಟಿಎಂಸಿ ರಾಜ್ಯಸಭಾ ಸಂಸದೆ ಸುಶ್ಮಿತಾ ದೇವ್, ‘ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬಿಲ್ಕಿಸ್ ಬಾನೋ ಅತ್ಯಾಚಾರಿಗಳನ್ನು ಅಭಿನಂದಿಸಿದ್ದಾರೆ’ ಎಂದು ಕಿಡಿಕಾರಿದರು.
2002ರ ಗುಜರಾತ್‌ನ ಬಿಲ್ಕಿಸ್ ಬಾನೋ ಪ್ರಕರಣದ 11 ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಆದೇಶದ ನಂತರ ಬಿಡುಗಡೆ ಮಾಡಲಾಯಿತು ಮತ್ತು 2023 ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಅವರನ್ನು ಬಿಜೆಪಿ ನಾಯಕರು ಹೂಮಾಲೆಯೊಂದಿಗೆ ಸ್ವಾಗತಿಸಿದರು. ಆದರೆ ಈ ವರ್ಷದ ಜನವರಿ 8 ರಂದು ಸುಪ್ರೀಂ ಕೋರ್ಟ್ ಗುಜರಾತ್ ಅನ್ನು ರದ್ದುಗೊಳಿಸಿತು.
ಈ ಬಗ್ಗೆ ಮಾತನಾಡಿದ ಸುಶ್ಮಿತಾ ದೇವ್, ‘ಹರ್ಯಾಣದ ಮಹಿಳಾ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ದೆಹಲಿ ಪೊಲೀಸರು ಅವರನ್ನು ಹೊಡೆದಾಗ ನೀವು (ಪ್ರಧಾನಿ ಮೋದಿ) ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುತ್ತಿದ್ದೀರಿ. ಆಗ ಮಹಿಳೆಯರಿಗಾಗಿ ನಿಮ್ಮ ಸಹಾಯವಾಣಿ ಎಲ್ಲಿತ್ತು’ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ನಡೆಯನ್ನು ‘ಇಬ್ಬಗೆ’ ಎಂದು ಕರೆದ ಅವರು, ‘ನಿಮ್ಮ ವಾಕ್ಚಾತುರ್ಯದ ಭಾಷಣಗಳು ತಮಾಷೆಯಷ್ಟೇ ಅಲ್ಲ. ನಿಮ್ಮ ನಿಜವಾದ ಮುಖವು ಮಹಿಳಾ ವಿರೋಧಿಯಾಗಿದೆ ಮತ್ತು ಇಡೀ ಭಾರತಕ್ಕೆ ತಿಳಿದಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ; ‘ಸನಾತನ’ ಕುರಿತು ಟೀಕೆ; ಉದಯನಿಧಿ ಸ್ಟಾಲಿನ್ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್


