“ನಾನು ಜೈಲಿನಿಂದ ಜೀವಂತವಾಗಿ ಹೊರಬಂದಿರುವುದು ಆಕಸ್ಮಿಕ’ ಎಂದು ಮಾವೋವಾದಿ ಸಂಪರ್ಕದ ಆರೋಪದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಬಿಡುಗಡೆಯಾದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎಸ್.ಎನ್.ಸಾಯಿಬಾಬಾ ಅವರು ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎಸ್.ಎನ್.ಸಾಯಿಬಾಬಾ(56) ಅವರು ನಾಗ್ಪುರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ನಂತರ ಮೊದಲ ಬಾರಿಗೆ ಮಾದ್ಯಮಗಳ ಜೊತೆ ಮಾತನಾಡಿದ್ದು, ಇತರರ ಸಹಾಯವಿಲ್ಲದೆ ಒಂದು ಇಂಚು ಚಲಿಸಲು ನನಗೆ ಸಾಧ್ಯವಿಲ್ಲ. ನಾನು ಏಕಾಂಗಿಯಾಗಿ ಶೌಚಾಲಯಕ್ಕೆ ಹೋಗಲು ಸಾಧ್ಯವಿಲ್ಲ, ನಾನು ಬೇರೆಯವರ ಬೆಂಬಲವಿಲ್ಲದೆ ಸ್ನಾನ ಮಾಡಲು ಸಾಧ್ಯವಿಲ್ಲ, ಮತ್ತು ನಾನು ಇದ್ಯಾವುದೇ ವ್ಯವಸ್ಥೆ ಇಲ್ಲದೆ ಜೈಲಿನಲ್ಲಿ ಬಹಳ ಸಮಯದಿಂದ ವಾಸಿಸುತ್ತಿದ್ದೆ ಎಂದು ಹೇಳಿದ್ದಾರೆ.
2017ರಲ್ಲಿ ಗಡ್ಚಿರೋಲಿಯ ಸ್ಥಳೀಯ ನ್ಯಾಯಾಲಯವು ಎಸ್.ಎನ್.ಸಾಯಿಬಾಬಾ, ಪ್ರಶಾಂತ್ ರಾಹಿ, ಮಹೇಶ್ ಟಿಕ್ರಿ, ಹೇಮ್ ಕೇಶ್ವದತ್ತ ಮಿಶ್ರಾ ಮತ್ತು ಪಾಂಡು ನರೋಟೆ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆರನೇ ಆರೋಪಿ ವಿಜಯ್ ನಾನ್ ಟಿಕ್ರಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ. ಜೈಲಿನಲ್ಲಿದ್ದಾಗ ತೀವ್ರ ಅಸ್ವಸ್ಥರಾಗಿದ್ದ ನರೋಟೆ ಅವರು ಆಗಸ್ಟ್ 2022ರಲ್ಲಿ ಮೃತಪಟ್ಟಿದ್ದರು. ಮಾರ್ಚ್ 5ರಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು “ಭಯೋತ್ಪಾದನೆ” ಆರೋಪದ ಮೇಲೆ ಸಾಯಿಬಾಬಾ ಮತ್ತು ಇತರ ಐವರನ್ನು ಖುಲಾಸೆಗೊಳಿಸಿತ್ತು.
ಸಾಯಿಬಾಬಾ ಜೈಲಿನಲ್ಲಿದ್ದಾಗ ಬಹಳ ನೋವನ್ನು ಅನುಭವಿಸಿದ್ದಾರೆ. ಈ ಬಗ್ಗೆ ಅವರ ಪತ್ನಿ ವಸಂತ ಕುಮಾರಿ ಮತ್ತು ಅವರ ವಕೀಲರು ಹಲವು ಬಾರಿ ಬಂಧನದಲ್ಲಿದ್ದಾಗ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎಂದು ದೂರಿದ್ದರು. ಈ ಕುರಿತು ಮಾತನಾಡಿದ ಸಾಯಿಬಾಬಾ, ವಸಂತ ತನ್ನ ಬಿಡುಗಡೆಯನ್ನು ಕೋರಿ ನ್ಯಾಯಾಲಯ ಮತ್ತು ರಾಜ್ಯ ಸರ್ಕಾರಕ್ಕೆ ಹಲವು ಮನವಿಗಳನ್ನು ಸಹ ಮಾಡಿದ್ದರು. ಕೂಡಲೇ ಬಿಡುಗಡೆ ಮಾಡದಿದ್ದರೆ ನಾನು ಜೈಲಿನಲ್ಲೇ ಸಾಯುವ ಭಯ ಆಕೆಗಿತ್ತು ಎಂದು ಹೇಳಿದ್ದಾರೆ.
ಎರಡು ವರ್ಷಗಳಲ್ಲಿ ಇದು ಎರಡನೇ ಬಾರಿಗೆ ಹೈಕೋರ್ಟ್ ಅವರನ್ನು ಮತ್ತು ಇತರರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ. ಅಕ್ಟೋಬರ್ 14, 2022ರಂದು ನ್ಯಾಯಮೂರ್ತಿ ರೋಹಿತ್ ಬಿ. ಡಿಯೋ ಮತ್ತು ಅನಿಲ್ ಪನ್ಸಾರೆ ಅವರನ್ನೊಳಗೊಂಡ ವಿಭಾಗೀಯ ಪೀಠವು ಗಡ್ಚಿರೋಲಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತ್ತು. ರಾಜ್ಯ ಸರಕಾರವು ತಕ್ಷಣವೇ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆ ಬಳಿಕ ನ್ಯಾಯಮೂರ್ತಿ ಡಿಯೋ ರಾಜೀನಾಮೆ ನೀಡಿದ್ದರು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಈ ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಲಾಯಿತು. ನ್ಯಾಯಮೂರ್ತಿ ವಿನಯ್ ಜಿ. ಜೋಶಿ ಮತ್ತು ನ್ಯಾಯಮೂರ್ತಿ ವಲಿಮಿಕಿ ಎಸ್. ಮೆನೇಜಸ್ ಅವರ ಪೀಠ ಸಾಯಿಬಾಬಾ ಮತ್ತು ಇತರರನ್ನು ಖುಲಾಸೆಗೊಳಿಸಿತ್ತು.
ನಾಗ್ಪುರ ಮೂಲದ ಮಾನವ ಹಕ್ಕುಗಳ ವಕೀಲ ಸುರೇಂದ್ರ ಗಡ್ಲಿಂಗ್ ಕೆಳ ನ್ಯಾಯಲಯದಲ್ಲಿ ತನ್ನ ಪ್ರಕರಣವನ್ನು ಪ್ರತಿನಿಧಿಸಿದ್ದರು. ಗಡ್ಚಿರೋಲಿ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡ ನಂತರ, ಎಲ್ಗರ್ ಪರಿಷತ್ ಪ್ರಕರಣದಲ್ಲಿ ಗಾಡ್ಲಿಂಗ್ ಅವರನ್ನು ಕೂಡ ಬಂಧಿಸಲಾಗಿದೆ. ತನ್ನ ಪ್ರಕರಣವನ್ನು ನಿರ್ವಹಿಸಿದ ಕಾರಣಕ್ಕೆ ಅವರ ಬಂಧನ ನಡೆದಿದೆ. ನ್ಯಾಯಕ್ಕಾಗಿ ಹೋರಾಡಿದ ವಕೀಲರು, ನೂರಾರು ಮತ್ತು ಸಾವಿರಾರು ದಲಿತರು ಮತ್ತು ಆದಿವಾಸಿಗಳನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದಾರೆ ಮತ್ತು ಅಂತಹ ವ್ಯಕ್ತಿ ಈಗ ಜೈಲಿನಲ್ಲಿದ್ದಾರೆ. ನನ್ನ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಸಿಗಬೇಕಾದರೆ ಗ್ಯಾಡ್ಲಿಂಗ್‌ನನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.
ಸಾಯಿಬಾಬಾ ಅವರು ಹೈಕೋರ್ಟ್‌ನಲ್ಲಿ ತಮ್ಮ ಪರ ವಾದಿಸಿದ ವಕೀಲರ ತಂಡಕ್ಕೆ ಧನ್ಯವಾದ ಅರ್ಪಿಸಿದರು. ಒಮ್ಮೆ ಅಲ್ಲ ಎರಡು ಬಾರಿ ವಕೀಲರು ಹೈಕೋರ್ಟ್‌ನಲ್ಲಿ ನನ್ನ ಪರವಾಗಿ ವಾದಿಸಬೇಕಾಯಿತು. ಇದು ಅವರಿಗೆ ಸುಲಭವಲ್ಲ ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಗೆ ಕೆಲವೇ ಗಂಟೆಗಳ ಮೊದಲು ಸಾಯಿಬಾಬಾ ಅವರನ್ನು ಬಿಡುಗಡೆ ಮಾಡಿದ್ದರಿಂದ, ಪ್ರಕರಣದ ತೀರ್ಪನ್ನು ಓದಲು ತನಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಕಾನೂನುಬದ್ಧವಾಗಿ ರಾಜ್ಯದಿಂದ ಪರಿಹಾರವನ್ನು ಕೋರುತ್ತೀರಾ ಎಂದು ಕೇಳಿದಾಗ, ಸಾಯಿಬಾಬಾ ನನ್ನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ನಾನು ಈ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದ್ದಾರೆ.
ಸಾಯಿಬಾಬಾ ಅವರು ಜೈಲಿನಲ್ಲಿ ಸಾಕಷ್ಟು ವೈದ್ಯಕೀಯ ಆರೈಕೆಯ ಕೊರತೆಯಿಂದ ಸಾವನ್ನಪ್ಪಿದ ನರೋಟೆ ಬಗ್ಗೆ ಮಾತನಾಡುತ್ಥಾ, ಪ್ರಾಚೀನ ಬುಡಕಟ್ಟಿಗೆ ಸೇರಿದ ಒಬ್ಬ ಯುವಕ ನಮ್ಮೊಂದಿಗೆ ಜೈಲಿನಲ್ಲಿ ಕೊಳೆಯಬೇಕಾಯಿತು. ಅವರಿಗೆ ಚಿಕ್ಕ ಮಗಳಿದ್ದಳು, ಅವರು ತುಂಬಾ ಬಳಲುತ್ತಿದ್ದರು, ನಿಜವಾಗಿಯೂ ನ್ಯಾಯ ಸಿಕ್ಕಿದೆಯೇ? ನರೋಟೆಗೆ ಹಂದಿ ಜ್ವರ ಇರುವುದು ಪತ್ತೆಯಾಗಿತ್ತು, ಅವರಿಗೆ ಸರಿಯಾಗಿ ವ್ಯವಸ್ಥೆ ಇಲ್ಲದೆ ಮೃತಪಟ್ಟರು ಎಂದು ಹೇಳಿದ್ದಾರೆ.
2017ರಲ್ಲಿ, ಗಡ್ಚಿರೋಲಿಯ ಸೆಷನ್ಸ್ ನ್ಯಾಯಾಲಯವು ಸಾಯಿಬಾಬಾ ಮತ್ತು ಇತರರನ್ನು ಮಾವೋವಾದಿಗಳ ಜೊತೆ ನಂಟು ಮತ್ತು ದೇಶದ ವಿರುದ್ಧ ಯುದ್ಧ ಸಾರುವ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಪು ನೀಡಿತ್ತು. ಸಾಯಿಬಾಬಾ ಅವರು ಗಡ್ಚಿರೋಲಿ ಮತ್ತು ಇತರ ಪ್ರದೇಶಗಳಲ್ಲಿ ಮಾವೋವಾದಿಗಳಿಗೆ ಹಿಂಸಾಚಾರವನ್ನು ಪ್ರಚೋದಿಸುವ ಪುಸ್ತಕಗಳನ್ನು ನೀಡಲು ಉದ್ದೇಶಿಸಿದ್ದರು ಎಂದು ಆರೋಪಿಸಲಾಗಿತ್ತು.
ಸಾಯಿಬಾಬಾ ಮತ್ತು ಇತರರು ನಿಷೇಧಿತ ಸಿಪಿಐ-ಮಾವೋವಾದಿ ಮತ್ತು ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್‌ಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಮಹಾರಾಷ್ಟ್ರ ಪೊಲೀಸರು ಅವರಿಂದ ಮಾವೋವಾದಿ ಸಾಹಿತ್ಯ, ಕರಪತ್ರಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆ ಬಳಿಕ ಗಾಲಿಕುರ್ಚಿಯ ಸಹಾಯದಿಂದ ನಡೆದಾಡುತ್ತಿದ್ದ ಸಾಯಿಬಾಬಾ ಅವರನ್ನು ಬಂಧಿಸಲಾಗಿತ್ತು. ಸಾಯಿಬಾಬಾ ಜೊತೆಗೆ ಮಹೇಶ್ ಕರಿಮಾನ್ ಟಿರ್ಕಿ, ಪಾಂಡು ಪೋರಾ ನರೋಟೆ, ಹೇಮ್ ಕೇಶವದತ್ತ ಮಿಶ್ರಾ, ಪ್ರಶಾಂತ್ ಸಾಂಗ್ಲಿಕರ್, ವಿಜಯ್ ಟಿರ್ಕಿ ಅವರನ್ನು ಬಂಧಿಸಲಾಗಿತ್ತು. ಸಾಯಿಬಾಬಾ ಮತ್ತು ಇತರ ಐವರನ್ನು 2017ರಲ್ಲಿ ಸೆಷನ್ಸ್ ನ್ಯಾಯಾಲಯವು ದೋಷಿಗಳೆಂದು ಘೋಷಿಸಿತ್ತು, ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಪಾಂಡು ಪೋರಾ ನರೋಟೆ ಆಗಸ್ಟ್ 2022ರಲ್ಲಿ ನಿಧನರಾಗಿದ್ದರು.
ಇದನ್ನು ಓದಿ: ಅತಿಕ್ರಮಣ ತೆರವು, ಅಭಿವೃದ್ಧಿ ನೆಪದಲ್ಲಿ ಬುಲ್ಡೋಝರ್ ಕಾರ್ಯಾಚರಣೆ: 2022-23ರಲ್ಲಿ ಸಂತ್ರಸ್ತರೆಷ್ಟು?


