ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಮತ್ತು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ನಡುವಿನ ಎಲ್ಲಾ ಮತಗಳನ್ನು (ಶೇ.100) ತಾಳೆ ಹಾಕಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ ಇಂದು (ಏ.18) ತೀರ್ಪು ಕಾಯ್ದಿರಿಸಿದೆ.
ಸುದೀರ್ಘ ವಿಚಾರಣೆಯ ಬಳಿಕ, ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ಮತ್ತು ಇತರರು ಸಲ್ಲಿಸಿದ ಅರ್ಜಿಗಳ ತೀರ್ಪನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ಕಾಯ್ದಿರಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ಪೀಠವು ಇವಿಎಂಗಳ ಭದ್ರತಾ ವೈಶಿಷ್ಟ್ಯಗಳನ್ನು ಅರ್ಥಮಾಡಿಕೊಳ್ಳಲು ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಧಿಕಾರಿಯೊಂದಿಗೆ ಚರ್ಚೆ ನಡೆಸಿದೆ.
ಇಂದು, ಎರಡನೇ ದಿನದ ವಿಚಾರಣೆಯಲ್ಲಿ, ವಕೀಲ ಪ್ರಶಾಂತ್ ಭೂಷಣ್ ಅವರು ಮತದಾನದ ಸಮಯದಲ್ಲಿ ವಿವಿಪ್ಯಾಟ್ ಮಸೂರದಲ್ಲಿ ಸಂಪೂರ್ಣ ಲೈಟ್ ಇರುವಂತೆ ಮಾಡಲು ಮನವಿ ಮಾಡಿದರು. ಪ್ರಸ್ತುತ ಏಳು ಸೆಕೆಂಡ್‌ಗಳ ಕಾಲ ಮಾತ್ರ ವಿವಿಪ್ಯಾಟ್ ಮಸೂರದಲ್ಲಿ ಲೈಟ್ ಇರುತ್ತವೆ. ಮತದಾನ ಪ್ರಕ್ರಿಯೆ ಮುಗಿಯುವವರೆ ಲೈಟ್ ಇದ್ದರೆ, ಮತದಾರರಿಗೆ ಸ್ಲಿಪ್ ಕಟ್ಟಾಗಿ ಬೀಳುವುದು ನೋಡಬಹುದು ಎಂಬುವುದು ಪ್ರಶಾಂತ್ ಭೂಷಣ್ ಅವರ ವಾದ.
ಇನ್ನೋರ್ವ ವಕೀಲ ನಿಝಾಂ ಪಾಶಾ ಅವರು, ಮತದಾರರು ಭೌತಿಕವಾಗಿ ವಿವಿಪ್ಯಾಟ್ ಚೀಟಿ ತೆಗೆದುಕೊಂಡು ಮತಪೆಟ್ಟಿಗೆಯಲ್ಲಿ ಹಾಕಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು. ಇದು ಮತದಾರರ ಗೌಪ್ಯತೆಯನ್ನು ಉಲ್ಲಂಘಿಸುವುದಿಲ್ಲವೇ? ಎಂದು ನ್ಯಾಯಮೂರ್ತಿ ಖನ್ನಾ ಕೇಳಿದಾಗ, ಮತದಾನದ ಗೌಪ್ಯತೆಯ ಹೆಸರಿನಲ್ಲಿ ಮತದಾರರನ್ನು ಅವರ ಹಕ್ಕಿನಿಂದ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ, “ನೀವು ಬಯಸುತ್ತಿರುವ ಪ್ರಾಯೋಗಿಕ ಫಲಿತಾಂಶಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ” ಎಂದು ನ್ಯಾಯಮೂರ್ತಿ ಖನ್ನಾ ಪ್ರತಿಕ್ರಿಯಿಸಿದ್ದಾರೆ.
ಹಿರಿಯ ವಕೀಲ ಸಂಜಯ್ ಹೆಗ್ಡೆ, ವಿವಿಪ್ಯಾಟ್ ‘ಆಡಿಟ್’ಗೆ ಒತ್ತು ನೀಡಿದ್ದು, ಇವಿಎಂ ಮತಗಳ ಎಣಿಕೆಯ ನಂತರವೂ ‘ಆಡಿಟ್’ಗಾಗಿ ಎಲ್ಲಾ ವಿವಿಪ್ಯಾಟ್‌ಗಳನ್ನು ಎಣಿಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. 2019ರಲ್ಲಿ ಪ್ರತೀ ಕ್ಷೇತ್ರದ ಐದು ವಿವಿಪ್ಯಾಟ್‌ಗಳ ಮತ ಎಣಿಕೆ ಮಾಡಬೇಕು ಎಂಬ ಆದೇಶವನ್ನು ಪರಿಗಣಿಸದಂತೆ ಹೆಗ್ಡೆ ಮನವಿ ಮಾಡಿದರು. ವ್ಯವಸ್ಥೆಯಲ್ಲಿ ಮತದಾರರ ವಿಶ್ವಾಸವನ್ನು ಹೆಚ್ಚಿಸುವ ಯಾವುದೇ ಕ್ರಮವನ್ನು ಸ್ವಾಗತಿಸಬೇಕು ಎಂದಿದ್ದಾರೆ.
ವಿಚಾರಣೆ ವೇಳೆ, ಕಾಸರಗೋಡಿನಲ್ಲಿ ವಿವಿಪ್ಯಾಟ್ ಪರಿಶೀಲನೆ ವೇಳೆ ಬಿಜೆಪಿ ಚಿಹ್ನೆಯ ಸ್ಲಿಪ್ ಬಂದಿರುವ ಕುರಿತ ‘ಮನೋರಮಾ ಆನ್‌ಲೈನ್’ ಸುದ್ದಿಯನ್ನು ವಕೀಲ ಪ್ರಶಾಂತ್ ಭೂಷಣ್ ಉಲ್ಲೇಖಿಸಿದರು. ಈ ವೇಳೆ ನ್ಯಾಯಪೀಠ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಈ ಕುರಿತು ಪರಿಶೀಲಿಸುವಂತೆ ಸೂಚಿಸಿದೆ. ಮಧ್ಯಾಹ್ನ 2 ಗಂಟೆಗೆ ಪೀಠದ ಮುಂದೆ ಉತ್ತರಿಸಿದ ಚುನಾವಣಾ ಆಯೋಗದ ಅಧಿಕಾರಿಗಳು ಮನೋರಮಾ ವರದಿ ಸಂಪೂರ್ಣ ಸುಳ್ಳು ಎಂದು ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ.
ಇದನ್ನೂ ಓದಿ : ‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ


