ಕೇಂದ್ರ ಸರ್ಕಾರದ ನೀತಿಗಳ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ದಲಿತ ವಿದ್ಯಾರ್ಥಿಯನ್ನು ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್‌ಎಸ್) ಎರಡು ವರ್ಷಗಳ ಅವಧಿಗೆ ಅಮಾನತು ಮಾಡಿದೆ ಎಂದು ತಿಳಿದು ಬಂದಿದೆ.
ಪಿಹೆಚ್‌ಡಿ ಸಂಶೋಧನಾ ವಿದ್ಯಾರ್ಥಿ ರಾಮದಾಸ್ ಪ್ರಿನಿ ಶಿವಾನಂದ ಅಮಾನತುಗೊಂಡವರು. ಇವರ ವಿರುದ್ದ ‘ಪುನರಾವರ್ತಿತ ದುರ್ನಡತೆ ಮತ್ತು ದೇಶವಿರೋಧಿ ಚಟುವಟಿಕೆ’ಗಳ ಆರೋಪ ಹೊರಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಶಿವಾನಂದ ಅವರು ಕಳೆದ ಜನವರಿಯಲ್ಲಿ ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿರುದ್ದ ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅವರು ಪ್ರೊಗ್ರೇಸಿವ್ ಸ್ಟೂಡೆಂಟ್ಸ್ ಪೋರಂ (ಪಿಎಸ್‌ಎಫ್) ಸಂಘಟನೆಯನ್ನು ಪ್ರತಿನಿಧಿಸಿದ್ದರು ಎಂದು ವರದಿಗಳು ಹೇಳಿವೆ.
ಟಿಐಎಸ್‌ಎಸ್-ಪಿಎಸ್‌ಎಫ್ ಎಂಬ ಬ್ಯಾನರ್ ಅಡಿಯಲ್ಲಿ ಶಿವಾನಂದ ಅವರು ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಿಎಸ್‌ಎಫ್ ಸಂಘಟನೆ ಟಿಐಎಸ್‌ಎಸ್‌ನ ಅಧಿಕೃತ ಸಂಘಟನೆಯಲ್ಲ. ಶಿವಾನಂದ ಅವರು ಸಂಘಟನೆಯ ಹೆಸರಿನ ಜೊತೆ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಶಿಸ್ತು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಟಿಐಎಸ್‌ಎಸ್ ಆರೋಪಿಸಿದೆ.
ಏಪ್ರಿಲ್ 18ರಂದು ಶಿವಾನಂದ ಅವರನ್ನು ಅಮಾನತುಗೊಳಿಸಿ ಆದೇಶಿಸಿರುವುದಾಗಿ ಹೇಳಿರುವ ಟಿಐಎಸ್‌ಎಸ್, ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಬಂಧ ಉತ್ತರ ಕೇಳಿ ಮಾರ್ಚ್ 7ರಂದು ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು ಎಂದಿದೆ. ಅಮಾನತು ಮಾಡುವ ಮೂಲಕ ಟಿಐಎಸ್‌ಎಸ್‌ನ ಎಲ್ಲಾ ಕ್ಯಾಂಪಸ್‌ಗಳಿಗೆ ಶಿವಾನಂದ ಅವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ವಿರುದ್ಧ 16 ವಿದ್ಯಾರ್ಥಿ ಸಂಘಟನೆಗಳ ಜಂಟಿ ವೇದಿಕೆಯಾದ ಯುನೈಟೆಡ್ ಸ್ಟೂಡೆಂಟ್ಸ್ ಆಫ್ ಇಂಡಿಯಾದ ಬ್ಯಾನರ್ ಅಡಿಯಲ್ಲಿ “ಶಿಕ್ಷಣವನ್ನು ಉಳಿಸಿ, ಎನ್‌ಇಪಿ ತಿರಸ್ಕರಿಸಿ, ಭಾರತವನ್ನು ಉಳಿಸಿ, ಬಿಜೆಪಿಯನ್ನು ತಿರಸ್ಕರಿಸಿ” ಎಂಬ ಘೋಷಣೆಯೊಂದಿಗೆ ಜನವರಿಯಲ್ಲಿ ಸಂಸತ್ತಿಗೆ ಮೆರವಣಿಗೆ ಆಯೋಜಿಸಲಾಗಿತ್ತು.
ಶಿವಾನಂದ ಅವರ ಅಮಾನತು ಆದೇಶದ ಕುರಿತು ಪ್ರತಿಕ್ರಿಯಿಸಿರುವ ಪಿಎಸ್‌ಎಫ್ ಸಂಘಟನೆ, “ಮೆರವಣಿಗೆ ಆಯೋಜಿಸಿರುವ ಮೂಲಕ ಆಡಳಿತಾರೂಢ ಬಿಜೆಪಿ ಮತ್ತು ಅದರ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದರು. ಆದರೆ, ವಿದ್ಯಾರ್ಥಿಯನ್ನು ಅಮಾನತುಗೊಳಿಸಿ, ಎರಡು ವರ್ಷಗಳ ಕಾಲ ಟಿಐಎಸ್‌ಎಸ್‌ನ ಯಾವುದೇ ಕ್ಯಾಂಪಸ್‌ಗೆ ಪ್ರವೇಶಿಸದಂತೆ ತಡೆದಿರುವುದು ಟಿಐಎಸ್‌ಎಸ್ ಆಡಳಿತ ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧದ ಎಲ್ಲಾ ಭಿನ್ನಾಭಿಪ್ರಾಯಗಳನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂಬುವುದನ್ನು ತೋರಿಸುತ್ತದೆ” ಎಂದಿದೆ.
ಟಿಐಎಸ್‌ಎಸ್ ಮಾರ್ಚ್ 7 ರಂದು ಶಿವಾನಂದ ಅವರಿಗೆ ನೀಡಿರುವ ಶೋಕಾಸ್ ನೋಟಿಸ್‌ನಲ್ಲಿ, ಜನವರಿಯಿಂದ ಶಿವಾನಂದ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ಪೋಸ್ಟ್‌ಗಳಿಗೆ ಆಕ್ಷೇಪಣೆಗಳನ್ನು ಎತ್ತಿದೆ. ಜನವರಿ 26 ರಂದು ‘ರಾಮ್ ಕೆ ನಾಮ್’ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಸೇರಲು ವಿದ್ಯಾರ್ಥಿಗಳಿಗೆ ಕರೆ ನೀಡಿದನ್ನು ‘ಅಗೌರವದ ಗುರುತು’ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ವಿರುದ್ಧದ ಪ್ರತಿಭಟನೆ ಎಂದು ಕರೆದಿದೆ. ‘ರಾಮ್ ಕೆ ನಾಮ್’ ಆನಂದ್ ಪಟವರ್ಧನ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರವಾಗಿದೆ.
ದಲಿತ ಸಮುದಾಯದ ಪಿಎಚ್‌ಡಿ ವಿದ್ಯಾರ್ಥಿಯಾದ ಶಿವಾನಂದ ಅವರು ಪಿಎಸ್‌ಎಫ್‌ನ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರು ಪ್ರಸ್ತುತ ಪಿಎಸ್‌ಎಫ್‌ನ ಮಾತೃ ಸಂಸ್ಥೆಯಾದ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಎಸ್‌ಎಫ್‌ಐ ಮಹಾರಾಷ್ಟ್ರ ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ.
ಇದನ್ನೂ ಓದಿ : ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ



Idiot central team actual values of studies all gone no quality of education just going back to God and civilization. Bjp also dont want to improve scientifically they want to slavery system and they are creating value less(respect less) jobs modi have to change this 2024