ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿರುವುದು ರಾಜಕೀಯ ಪ್ರೇರಿತ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ತುಮಖೂರಿನಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಪಕ್ಷದ ಕಚೇರಿ ಸಮೀಪದ ಭದ್ರಮ್ಮ ವೃತ್ತದಲ್ಲಿ ಸಮಾವೇಶಗೊಂಡ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಟೌನ್ ಹಾಲ್ ವೃತ್ತದವರೆಗೆ ಮೆರವಣಿಗೆ ನಡೆಸಿ ಪರಮೇಶ್ವರ್ ಪರ ಘೋಷಣೆ ಕೂಗಿದರು. ಟೌನ್ ಹಾಲ್ ವೃತ್ತದಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳು ಮಾತ್ರ ಇಲ್ಲ. ಬಿಜೆಪಿ ಮುಖಂಡ ಮೆಡಿಕಲ್ ಕಾಲೇಜುಗಳು ಇವೆ. ಜೆಡಿಎಸ್ ಮುಖಂಡರಿಗೆ ಸೇರಿದ ಕಾಲೇಜುಗಳು ಇವೆ. ರಾಜಕೀಯ ಪಕ್ಷಕ್ಕೆ ಸೇರದವರ ಕಾಲೇಜುಗಳು ಇವೆ. ಆದರೆ ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆಯೇ ದಾಳಿ ನಡೆಸಲು ಕಾರಣವೇನು? ಇದು ದ್ವೇಷದ ರಾಜಕೀಯವಲ್ಲವೇ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರನ್ನು ಗುರಿಯಾಗಿಟ್ಟುಕೊಂಡು ಜಾರಿ ನಿರ್ದೇಶನಾಲಯ ಮತ್ತು ಐಟಿ ದಾಳಿ ನಡೆಸಲಾಗುತ್ತಿದೆ. ಪಕ್ಷದ ಮುಖಂಡರನ್ನು ಹೆದರಿಸುವ ಕೆಲವಾಗುತ್ತಿದೆ. ಇದಕ್ಕೆ ಯಾರೂ ಅಂಜುವುದಿಲ್ಲ ಎಂದು ಪ್ರತಿಭಟನಾನಿರತರು ಹೇಳಿದರು.
ಇನ್ನೊಂದೆಡೆ ತನಿಖೆ ಮುಂದುವರಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಎಚ್.ಡಿ.ಎಫ್.ಸಿ, ಎಸ್.ಬಿ.ಐ, ಸಿಂಡಿಕೇಟ್ ಸೇರಿದಂತೆ ಎಲ್ಲಾ ಬ್ಯಾಂಕ್ ಅಕೌಂಟ್ ಗಳನ್ನು ಸೀಜ್ ಮಾಡಿದ್ದಾರೆ.


