ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಅತ್ಯಾಚಾರದ ದೂರುಗಳು ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ ಅಶಾಂತಿಯನ್ನು ಉಂಟುಮಾಡಿತ್ತು. ದೂರು ನೀಡಿದ್ದ ಮೂವರು ಮಹಿಳೆಯರಲ್ಲಿ ಒಬ್ಬರು ಬುಧವಾರ ತಮ್ಮ ಆರೋಪವನ್ನು ಹಿಂಪಡೆದಿದ್ದು, ತನ್ನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ. “ಬಿಜೆಪಿಯ ಸ್ಥಳೀಯ ಮುಖಂಡರು ಖಾಲಿ ಕಾಗದಕ್ಕೆ ಸಹಿ ಹಾಕುವಂತೆ ಒತ್ತಾಯಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ” ಎಂದು ರಾಷ್ಟ್ರೀಯ ಮಾಧ್ಯಮಗಳು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.
ಸುಳ್ಳು ಅತ್ಯಾಚಾರ ಆರೋಪವನ್ನು ಹಿಂತೆಗೆದುಕೊಳ್ಳುವ ನಿರ್ಧಾರದ ಪರಿಣಾಮವಾಗಿ ಬೆದರಿಕೆಗಳು ಮತ್ತು ಸಾಮಾಜಿಕ ಬಹಿಷ್ಕಾರವನ್ನು ಉಲ್ಲೇಖಿಸಿ ಮಹಿಳೆಯು ಸಂದೇಶಖಾಲಿ ಪೊಲೀಸ್ ಠಾಣೆಯಲ್ಲಿ ಹೊಸ ದೂರು ದಾಖಲಿಸಿದ್ದಾರೆ.
ಸ್ಥಳೀಯ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಮತ್ತು ಪಕ್ಷದ ಇತರ ಸದಸ್ಯರು ತನ್ನ ಮನೆಗೆ ಭೇಟಿ ನೀಡಿ ಕಾಲ್ಪನಿಕ ದೂರಿಗೆ ಸಹಿ ಹಾಕುವಂತೆ ಕೇಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
“ಪಿಎಂಎವೈಗೆ ನನ್ನ ಹೆಸರನ್ನು ಸೇರಿಸುವ ನೆಪದಲ್ಲಿ ಅವರು ನನ್ನ ಸಹಿಯನ್ನು ಕೇಳಿದರು. ನಂತರ, ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಲು ಅವರು ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ತೃಣಮೂಲ ಕಚೇರಿಯೊಳಗೆ ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ. ನನ್ನನ್ನು ಎಂದಿಗೂ ಬಲವಂತ ಮಾಡಿಲ್ಲ” ಎಂದು ಮಹಿಳೆ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಅತ್ಯಾಚಾರದ ಸುಳ್ಳು ಆರೋಪವನ್ನು ಹಿಂತೆಗೆದುಕೊಳ್ಳಲು ಹೋದ ಮಹಿಳೆಯರಿಗೆ ಸ್ಥಳೀಯ ಬಿಜೆಪಿ ನಾಯಕರು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವೆದರಿಕೆ ಹಾಕಿದ್ದಾರೆ ಎಂದ್ಉ ಬಂಗಾಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಸಚಿವ ಶಶಿ ಪಂಜಾ ಆರೋಪಿಸಿದ್ದಾರೆ.
“ಬಿಜೆಪಿ ನಾಟಕವನ್ನು ಆಯೋಜಿಸಿತ್ತು ಮತ್ತು ಈಗ ಅವರು ಸುಳ್ಳು ದೂರುಗಳನ್ನು ಹಿಂಪಡೆಯಲು ಹೋದ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ. ಟಿಎಂಸಿ ಪರಿಸ್ಥಿತಿಯ ಮೇಲೆ ನಿಗಾ ಇಡುತ್ತಿದೆ” ಎಂದು ಅವರು ಹೇಳಿದರು.
ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಮಾತನಾಡಿ, “ಸುಳ್ಳು ಅತ್ಯಾಚಾರದ ದೂರುಗಳನ್ನು ದಾಖಲಿಸಲು ಒತ್ತಾಯಿಸಿದ ರೀತಿಯ ಬಗ್ಗೆ ಸತ್ಯ ಹೇಳಿದ ಸಂದೇಶಖಾಲಿಯ ಮಹಿಳೆಯರಿಗೆ ಬಿಜೆಪಿ ಬೆದರಿಕೆ ಹಾಕುತ್ತಿರುವುದು ಅಸಹ್ಯಕರವಾಗಿದೆ. ಸಂದೇಶಖಾಲಿಯ ಪಿತೂರಿ ತೋರಿಸುವ ವೈರಲ್ ವೀಡಿಯೊ ಹೊರಬಂದ ನಂತರ, ಈಗ ಕೆಲವು ಮಹಿಳೆಯರು ಸುಳ್ಳು ಪ್ರಕರಣಗಳನ್ನು ದಾಖಲಿಸಲು ಒತ್ತಡ ಹೇರಿದ್ದಾರೆ” ಎಂದು ಹೇಳಿದ್ದಾರೆ.
ಈ ನಡುವೆ, ಸಂದೇಶಖಾಲಿ ಘಟನೆಯಲ್ಲಿನ ಅತ್ಯಾಚಾರದ ಆರೋಪಗಳನ್ನು ರಚಿಸಲಾಗಿದೆ ಎಂದು ಕೇಸರಿ ಪಕ್ಷದ ನಾಯಕರೊಬ್ಬರು ಕ್ಯಾಮೆರಾದಲ್ಲಿ “ತಪ್ಪೊಪ್ಪಿಕೊಂಡಿದ್ದಾರೆ” ಎಂದು ಆರೋಪಿಸಿ, ಬಿಜೆಪಿಯ ಸುವೇಂದು ಅಧಿಕಾರಿ ಮತ್ತು ಇತರರ ವಿರುದ್ಧ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಟಿಎಂಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದೆ ಎಂದು ಅವರು ಹೇಳಿದರು. ಪಕ್ಷದ ಮೂಲಗಳು ಅವರ ದೂರು ಹೇಳಲಾದ ವೀಡಿಯೊವನ್ನು ಆಧರಿಸಿದೆ, ಇದರಲ್ಲಿ ಸಂದೇಶಖಾಲಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗಂಗಾಧರ ಕಯಲ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಇಡೀ ಪಿತೂರಿಯ ಹಿಂದೆ ಇದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ; ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆದರೆ ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ: ಮಾಯಾವತಿ


