ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮುಟ್ಲು ಗ್ರಾಮದಲ್ಲಿ 15 ವರ್ಷದ ಬಾಲಕಿಯೊಬ್ಬಳನ್ನು ಹತ್ಯೆಗೈದು, ಆಕೆಯ ರುಂಡದೊಂದಿಗೆ ಹಂತಕ ಪರಾರಿಯಾಗಿರುವ ಆಘಾತಕಾರಿ ಘಟನೆ ಗುರುವಾರ (ಮೇ 9) ರಾತ್ರಿ ನಡೆದಿದೆ.
ಹಂತಕನನ್ನು 32 ವರ್ಷದ ಪ್ರಕಾಶ್ ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯಾಹ್ನ ಈತನೊಂದಿಗೆ ಹತ್ಯೆಯಾದ ಬಾಲಕಿಗೆ ಮದುವೆ ನಿಶ್ಚಿತಾರ್ಥ ನಡೆಯುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ತಡೆದಿದ್ದರು. ಬಾಲ್ಯ ವಿವಾಹ ನಡೆಸದಂತೆ ಬಾಲಕಿಯ ಪೋಷಕರ ಮನವೊಲಿಸಿದ್ದರು.
ನಂತರ ರಾತ್ರಿ ಬಾಲಕಿಯ ಮನೆಗೆ ನುಗ್ಗಿದ ಪ್ರಕಾಶ್, ಆಕೆಯನ್ನು ಅಪಹರಿಸಿದ್ದಾನೆ. ಕಾಡಂಚಿನ ಪ್ರದೇಶದಲ್ಲಿ ಬಾಲಕಿಯನ್ನು ಕೊಂದು ರುಂಡದೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಬಾಲಕಿಯ ಮುಂಡ ಮಾತ್ರ ಸಿಕ್ಕಿದ್ದು, ದೇಹದ ಉಳಿದ ಭಾಗಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಹತ್ಯೆಯಾದ ಬಾಲಕಿ ಗುರುವಾರವಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಸಮೀಪದ ಶಾಲೆಯಲ್ಲಿದ್ದ ಏಕೈಕ ವಿದ್ಯಾರ್ಥಿನಿ ಆಕೆ ಆಗಿದ್ದಳು ಎಂದು ಕೊಡಗು ಜಿಲ್ಲಾ ಎಸ್ಪಿ ಕೆ. ರಾಮರಾಜನ್ ಅವರನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ಘಟನೆಯಲ್ಲಿ ಬಾಲಕಿಯ ತಾಯಿಗೂ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಆ್ಯನಿಮೇಟೆಡ್ ವಿಡಿಯೋ ಪ್ರಕರಣ: ಪೊಲೀಸರಿಂದ ಬಿಜೆಪಿ ಐಟಿ ಸೆಲ್ ಸಂಚಾಲಕ ಪ್ರಶಾಂತ್ ಮಾಕನೂರು ವಿಚಾರಣೆ


